ಬಂಧನದ ಅವಧಿಗೆ ಕೇಸ್ ಡೈರಿ ನೋಂದಣಿ ಲೆಕ್ಕವಲ್ಲ: ಹೈಕೋರ್ಟ್
ಬೆಂಗಳೂರು: ‘ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ 24 ಗಂಟೆಗಳ ಅವಧಿಯು; ಆರೋಪಿಯನ್ನು ಬಂಧಿಸಿದ ಸಮಯದಿಂದ ಪ್ರಾರಂಭವಾಗುತ್ತದೆಯೇ ಹೊರತು ಪೊಲೀಸರು ದಾಖಲಿಸಿದ ಕೇಸ್ ಡೈರಿಯ ಸಮಯದಿಂದ ಅಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.ಜಾಮೀನು ಕೋರಿ ಸಕಲೇಶಪುರ ತಾಲ್ಲೂಕಿನ ಮಸುವಳ್ಳಿಯ ನವೀನ್ (35) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ
ಬೆಂಗಳೂರು: ‘ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ 24 ಗಂಟೆಗಳ ಅವಧಿಯು; ಆರೋಪಿಯನ್ನು ಬಂಧಿಸಿದ ಸಮಯದಿಂದ ಪ್ರಾರಂಭವಾಗುತ್ತದೆಯೇ ಹೊರತು ಪೊಲೀಸರು ದಾಖಲಿಸಿದ ಕೇಸ್ ಡೈರಿಯ ಸಮಯದಿಂದ ಅಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.ಜಾಮೀನು ಕೋರಿ ಸಕಲೇಶಪುರ ತಾಲ್ಲೂಕಿನ ಮಸುವಳ್ಳಿಯ ನವೀನ್ (35) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.ಪ್ರಕರಣ: ಅರ್ಜಿದಾರರ ಪತ್ನಿಯ ಮರಣದ ನಂತರ ಅವರ ಅತ್ತೆ ನವೀನ್ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದಡಿ ಪೊಲೀಸರು ನವೀನ್ ವಿರುದ್ಧ; ಭಾರತೀಯ ನ್ಯಾಯ ಸಂಹಿತಾ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದ್ದರು.ಈ ಹಿನ್ನೆಲೆಯಲ್ಲಿ ಅವರು 2025ರ ಅಕ್ಟೋಬರ್ 14ರಂದು ಬೆಳಿಗ್ಗೆ 11 ಗಂಟೆಗೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಪೊಲೀಸರ ಮುಂದೆ ಸ್ವಯಂ ಶರಣಾಗಿದ್ದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ವಿಚಾರಣಾ ನ್ಯಾಯಾಲಯ 2026ರ ಏಪ್ರಿಲ್ 9ರಂದು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ.ಇ.ಸುರೇಶ್, ‘ಅರ್ಜಿದಾರರರು ಠಾಣೆಗೆ ಸ್ವತಃ ಶರಣಾಗಿದ್ದಾರೆ. ಆದರೆ, ಪೊಲೀಸರು ಬಂಧನದ ಸಮಯವನ್ನು ವಿಳಂಬಿಸಿದ್ದಾರೆ ಮತ್ತು ಬಂಧನಕ್ಕೆ ಪಡೆದ 24 ಗಂಟೆಗಳ ಒಳಗೆ ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿಲ್ಲ. ಆದ್ದರಿಂದ, ಅವರ ಬಂಧನ ಕಾನೂನುಬಾಹಿರ’ ಎಂಬ ವಾದ ಮಂಡಿಸಿದ್ದರು. ಇದನ್ನು ಅಲ್ಲಗಳೆದಿದ್ದ ರಾಜ್ಯ ಪ್ರಾಸಿಕ್ಯೂಷನ್, ‘ಅರ್ಜಿದಾರರು 2025ರ ಅಕ್ಟೋಬರ್ 14ರಂದು ಬೆಳಿಗ್ಗೆ 11 ಗಂಟೆಗೆ ಪೊಲೀಸರ ಮುಂದೆ ಸ್ವಯಂಪ್ರೇರಣೆಯಿಂದ ಶರಣಾಗಿದ್ದಾರೆ. ಆ ದಿನ ರಾತ್ರಿ 9.45ಕ್ಕೆ ಅವರನ್ನು ಬಂಧಿಸಲಾಗಿದೆ. ಮರುದಿನ ಸಂಜೆ 5.45ಕ್ಕೆ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು’ ಎಂದು ಪ್ರತಿಪಾದಿಸಿತ್ತು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಅರ್ಜಿದಾರರು ಪೊಲೀಸರ ಮುಂದೆ ಶರಣಾದ ತಕ್ಷಣ ಅವರನ್ನು ಏಕೆ ವಿಚಾರಣೆ ಮಾಡಲಿಲ್ಲ ಅಥವಾ 2025ರ ಅಕ್ಟೋಬರ್ 14ರಂದು ರಾತ್ರಿ 9.45ಕ್ಕೆ ಅವರ ಬಂಧನವನ್ನು ಯಾಕಾಗಿ ದಾಖಲಿಸಲಾಯಿತು ಎಂಬುದನ್ನು ಕೇಸ್ ಡೈರಿಯಲ್ಲಿ ಉಲ್ಲೇಖ ಮಾಡಿಲ್ಲ. ಹೀಗಾಗಿ, ಈ ಪ್ರಕರಣದಲ್ಲಿ ಅರ್ಜಿದಾರರನ್ನು ಬಂಧಿಸಿದ ಸಮಯದಿಂದ 24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಆದ್ದರಿಂದ, ಬಂಧನ ಕಾನೂನುಬಾಹಿರ’ ಎಂದು ಅಭಿಪ್ರಾಯಪಟ್ಟಿದೆ. ಅರ್ಜಿದಾರರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.