ಸೈಬರ್ ಕ್ರೈಂ: ₹102.67 ಕೋಟಿ ವಂಚನೆ
ಹುಬ್ಬಳ್ಳಿ: ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 2018ರಿಂದ 2026ರ ಅಕ್ಟೋಬರ್ ಅಂತ್ಯದವರೆಗೆ 1,607 ಸೈಬರ್ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹಣಕಾಸು ವಂಚನೆಗೆ ಸಂಬಂಧಿಸಿದ್ದು, ಸಾರ್ವಜನಿಕರು ₹102.67 ಕೋಟಿ ಕಳೆದುಕೊಂಡಿದ್ದಾರೆ.ದೂರುಗಳನ್ನು ಆಧರಿಸಿ ಪೊಲೀಸರು ಬ್ಯಾಂಕ್ಗಳ ಖಾತೆಗಳಲ್ಲಿ ₹38.38 ಕೋಟಿ ಹಣದ ಚಲ

ಹುಬ್ಬಳ್ಳಿ: ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 2018ರಿಂದ 2026ರ ಅಕ್ಟೋಬರ್ ಅಂತ್ಯದವರೆಗೆ 1,607 ಸೈಬರ್ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹಣಕಾಸು ವಂಚನೆಗೆ ಸಂಬಂಧಿಸಿದ್ದು, ಸಾರ್ವಜನಿಕರು ₹102.67 ಕೋಟಿ ಕಳೆದುಕೊಂಡಿದ್ದಾರೆ.ದೂರುಗಳನ್ನು ಆಧರಿಸಿ ಪೊಲೀಸರು ಬ್ಯಾಂಕ್ಗಳ ಖಾತೆಗಳಲ್ಲಿ ₹38.38 ಕೋಟಿ ಹಣದ ಚಲಾವಣೆ ಸ್ಥಗಿತಗೊಳಿಸಿದ್ದಾರೆ. ಇದರ ಮಧ್ಯೆ ತನಿಖೆ ಮಾಡಿ, ₹24.71 ಕೋಟಿಯನ್ನು ಸಂತ್ರಸ್ತರಿಗೆ ಮರಳಿಸಿದ್ದಾರೆ. ಹಣ ವರ್ಗಾವಣೆಯಾದ ತಕ್ಷಣವೇ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದು, ವಹಿವಾಟಿನ ಸರಪಳಿ ಪತ್ತೆಹಚ್ಚುವುದು ಮತ್ತು ಹಣವನ್ನು ಸಂತ್ರಸ್ತರಿಗೆ ಹಿಂದಿರುಗಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಆದರೂ 65 ಸೈಬರ್ ವಂಚಕರನ್ನು ಬಂಧಿಸಿ, ವಂಚನೆಯ ಜಾಡು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.ಡಿಜಿಟಲ್ ಅರೆಸ್ಟ್, ನಕಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ, ನಕಲಿ ಆ್ಯಪ್ ಅಳವಡಿಕೆ, ಉದ್ಯಮದ ಫ್ರಾಂಚೈಸಿ ಮತ್ತು ಉದ್ಯೋಗದ ಆಮಿಷ, ಆ್ಯಪ್ ಮೂಲಕ ಸಾಲ ವಿತರಣೆ, ಎಪಿಕೆ ಫೈಲ್ ಕಳುಹಿಸಿ ಹಣ ವರ್ಗಾವಣೆ ಸೇರಿ ಬಗೆಬಗೆಯ ಸ್ವರೂಪಗಳಲ್ಲಿ ಸಾರ್ವಜನಿಕರು ಸಾವಿರ, ಲಕ್ಷ, ಕೋಟಿಯವರೆಗೂ ಹಣ ಕಳೆದುಕೊಂಡಿದ್ದಾರೆ. ಕೆಲ ಸೈಬರ್ ವಂಚಕರು ಗ್ರಾಹಕ ಉದ್ಯಮಿಗಳ ಹೆಸರಿನಲ್ಲಿ ಬ್ಯಾಂಕ್ಗಳ ವ್ಯವಸ್ಥಾಪಕರಿಗೆ ಇ–ಮೇಲ್ ಮೂಲಕ ಸಂದೇಶ ಕಳುಹಿಸಿ ಲಕ್ಷಾಂತರ ಹಣ ವರ್ಗಾಯಿಸಿಕೊಂಡಿದ್ದಾರೆ. ವಿದ್ಯಾನಗರದ ಖಾಸಗಿ ಟೆಲಿಕಾಂ ಕಂಪನಿಯ ಸಿಮ್ ಸ್ಟೋರ್ನಲ್ಲಿ ಖರೀದಿಸಲಾದ ಐದು ಸಿಮ್ಗಳು ದೇಶದ ವಿವಿಧ ರಾಜ್ಯಗಳ ಸೈಬರ್ ಅಪರಾಧಗಳಲ್ಲಿ ಬಳಕೆ ಆಗಿರುವುದು ಪತ್ತೆಯಾಗಿದೆ. ಇನ್ನೊಂದೆಡೆ, ಹುಬ್ಬಳ್ಳಿ ಧಾರವಾಡ ಮಹಾನಗರದ ಐದು ಬ್ಯಾಂಕ್ಗಳ ಖಾತೆಗಳ ಮೂಲಕ ದೇಶದ ವಿವಿಧೆಡೆ ವಂಚಿಸಿದ ಹಣವನ್ನು 31 ಅನುಮಾನಾಸ್ಪದ ಚೆಕ್ಗಳ ಮೂಲಕ ನಗದೀಕರಿಸಿರುವ ಶಂಕೆ ಸಹ ವ್ಯಕ್ತವಾಗಿದೆ.ಕೆಲ ತಿಂಗಳ ಹಿಂದೆ ಕೇಶ್ವಾಪುರದ ಬ್ಯಾಂಕ್ವೊಂದರಲ್ಲಿ ‘ಕುಕ್ಕಿಂಗ್ ವಿತ್ ಕ್ಯಾಟರಿಂಗ್’ ಹೆಸರಿನಲ್ಲಿ ಖಾತೆ ತೆರೆದಿದ್ದ ಇರ್ಫಾನ್ ಕಾಗೆನಲಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಆ ಖಾತೆಗೆ 50ಕ್ಕೂ ಹೆಚ್ಚು ಬಾರಿ ದೇಶದ ವಿವಿಧ ಭಾಗಗಳ ಬ್ಯಾಂಕ್ಗಳಿಂದ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿದ್ದು ತನಿಖೆಯಿಂದ ಗೊತ್ತಾಗಿತ್ತು.