ಯುದ್ಧದ ಕುತ್ತು, ಪರಿಸರವೂ ತುತ್ತು
ಬೆಳಗಿನ ಹನ್ನೊಂದರ ಸಮಯ. ಯುದ್ಧದಲ್ಲಿ ಉರಿದು ಬೂದಿಯಾದ ಚೆರ್ನೋಬಿಲ್ ಕಾಡಿನ ಅಂಚಿನಲ್ಲಿ, ತಾನು ಕಟ್ಟಿದ್ದ ಗೂಡು ಮತ್ತು ಮರಿಗಳನ್ನು ಹುಡುಕುತ್ತಾ ದೂಳು–ಹೊಗೆಯ ನಡುವೆ ಒಂಟಿಯಾಗಿ ಅಲೆಯುತ್ತಿದ್ದ ವಲಸೆ ಹಕ್ಕಿಯ ಕಣ್ಣುಗಳಲ್ಲಿ ಅಪಾರ ವೇದನೆ ಮಡುಗಟ್ಟಿತ್ತು. ತನಗೆ ಹಾಗೂ ತನ್ನ ಮರಿಗಳಿಗೆ ಕಾಳು ನೀಡಿ ಸಲಹುತ್ತಿದ್ದ ಪುಟ್ಟ ಪೋರ ಪೋವೆಲ್ ತನ್ನ ಸಂಸಾರವನ್ನು ಗಮನಿಸಲುಬಂದಿಲ

ಬೆಳಗಿನ ಹನ್ನೊಂದರ ಸಮಯ. ಯುದ್ಧದಲ್ಲಿ ಉರಿದು ಬೂದಿಯಾದ ಚೆರ್ನೋಬಿಲ್ ಕಾಡಿನ ಅಂಚಿನಲ್ಲಿ, ತಾನು ಕಟ್ಟಿದ್ದ ಗೂಡು ಮತ್ತು ಮರಿಗಳನ್ನು ಹುಡುಕುತ್ತಾ ದೂಳು–ಹೊಗೆಯ ನಡುವೆ ಒಂಟಿಯಾಗಿ ಅಲೆಯುತ್ತಿದ್ದ ವಲಸೆ ಹಕ್ಕಿಯ ಕಣ್ಣುಗಳಲ್ಲಿ ಅಪಾರ ವೇದನೆ ಮಡುಗಟ್ಟಿತ್ತು. ತನಗೆ ಹಾಗೂ ತನ್ನ ಮರಿಗಳಿಗೆ ಕಾಳು ನೀಡಿ ಸಲಹುತ್ತಿದ್ದ ಪುಟ್ಟ ಪೋರ ಪೋವೆಲ್ ತನ್ನ ಸಂಸಾರವನ್ನು ಗಮನಿಸಲುಬಂದಿಲ್ಲವಲ್ಲ ಎಂದು ಅದು ಯೋಚಿಸುತ್ತಿದ್ದಿರಬಹುದು. ಆದರೆ, ದುರಂತ ಸಂಭವಿಸಿಹೋಗಿತ್ತು. ಪೋವೆಲ್ ವಾಸವಿದ್ದ ಗುಡಿಸಲಿನ ಮುಂದೆ ಬೆಳಗಿನ ಜಾವ ಸ್ವಯಂ ಸ್ಫೋಟಗೊಂಡಿದ್ದ ‘ಕಮಿಕಜೆ’ ಡ್ರೋನ್ ಗುಡಿಸಲು ಸಮೇತ ಪೋವೆಲ್ನನ್ನು ಬಲಿ ತೆಗೆದು ಕೊಂಡಿತ್ತು. ಸ್ಫೋಟದ ಉರಿಗೆ ಸಿಲುಕಿ ಹಕ್ಕಿಯ ಗೂಡು ಮತ್ತು ನಿದ್ರಿಸುತ್ತಿದ್ದ ಮರಿಗಳೆಲ್ಲ ಕರಕಲಾಗಿದ್ದವು. ಯಾವ ತಪ್ಪನ್ನೂ ಮಾಡದ ಮುಗ್ಧ ಜೀವಗಳು ಮಾನವನ ಅಹಂಕಾರದ ಉರಿಗೆ ಸಿಕ್ಕು ನಾಶವಾಗಿದ್ದವು! ಇಂಥದೊಂದು ಸಂದರ್ಭವನ್ನು ಗಮನಿಸಿಯೇ ಕವಿ ಕುವೆಂಪು ‘ಮಾನವರ್ ಕೊಲೆಗೆ ಕೈ ಇಡೆ ಮಾರಿಯನ್ ಮೀರ್ದಪರ್’ ಎಂದಿರಬೇಕು.ಮನುಷ್ಯರ ಗಡಿರೇಖೆಯ ಜಗಳಕ್ಕೆ ದಶಕಗಳಿಂದ ಬೆಳೆದು ನಿಂತಿದ್ದ ಅರಣ್ಯಗಳು, ಸಾವಿರಾರು ಜೀವಜಂತುಗಳ ನೆಮ್ಮದಿಯ ಆವಾಸಸ್ಥಾನಗಳು ಧ್ವಂಸಗೊಂಡು ಬೂದಿಯಾಗುತ್ತಿವೆ. ಉಕ್ರೇನ್–ರಷ್ಯಾ ಯುದ್ಧ ಒಂದೆಡೆಯಾದರೆ, ಇತ್ತ ಗಾಜಾ ಪಟ್ಟಿಯ ಆಲಿವ್ ತೋಪುಗಳು ಧ್ವಂಸಗೊಂಡು, ತಲೆತಲಾಂತರಗಳಿಂದ ಮಣ್ಣನ್ನು ಹಸಿರಾಗಿಟ್ಟಿದ್ದ ಶತಮಾನದ ಹಳೆಯ ಮರಗಳು ಧರೆಗುರುಳಿವೆ. ಯುದ್ಧದ ಭೀಕರತೆಎಂದರೆ ಮನುಷ್ಯರ ಸಾವು–ನೋವು ಅಥವಾ ಕಟ್ಟಡಗಳ ಧ್ವಂಸ ಮಾತ್ರವಲ್ಲ; ಅದು, ಈ ಭೂಮಿಯ ಜೀವಗೋಳದ ಮೇಲೆಯೂ, ಪ್ರಾಣಿ–ಪಕ್ಷಿಗಳ ಮೇಲೆಯೂ ನಡೆಯುವ ಅತಿ ಕ್ರೂರವಾದ ಮಾರಣಹೋಮ.ರಷ್ಯಾ–ಉಕ್ರೇನ್ ಸುದೀರ್ಘ ಸಂಘರ್ಷ ಅಥವಾ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷಗಳು, ಭೌಗೋಳಿಕ ಮತ್ತು ರಾಜಕೀಯ ಗಡಿಗಳ ಯುದ್ಧಗಳಾಗಿ ಪ್ರಸ್ತುತ ಉಳಿದಿಲ್ಲ. ಇವು ಈ ಭೂಮಿಯ ಪರಿಸರ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬುಡಮೇಲು ಮಾಡುತ್ತಿವೆ. ಕ್ಷಿಪಣಿಗಳು ಮತ್ತು ಬಾಂಬ್ಗಳ ಸ್ಫೋಟದಿಂದ ಪ್ರಕೃತಿಯ ಒಡಲಿಗೆ ಸೇರುತ್ತಿರುವ ಭಾರಲೋಹಗಳು, ಸ್ಫೋಟಕಗಳಿಂದ ಬಿಡುಗಡೆಯಾಗುವ ವಿಷಕಾರಿ ರಾಸಾಯನಿಕಗಳು ಮತ್ತು ಉರಿಯುವ ತೈಲ ಸಂಗ್ರಹಾಗಾರಗಳಿಂದ ಹೊರಹೊಮ್ಮುವ ಕೋಟ್ಯಂತರ ಟನ್ ಇಂಗಾಲದ ಡೈ ಆಕ್ಸೈಡ್ (ಇಂಡೈ) ವಾತಾವರಣವನ್ನು ಮಿತಿಮೀರಿ ಕಲುಷಿತಗೊಳಿಸುತ್ತಿವೆ. ಕೆಲವು ತಿಂಗಳ ಮಿಲಿಟರಿ ಕಾರ್ಯಾಚರಣೆಗಳು ಬಿಡುಗಡೆ ಮಾಡುವ ಶಾಖವರ್ಧಕ ಅನಿಲಗಳ ಪ್ರಮಾಣವು ಹಲವು ಸಣ್ಣದೇಶಗಳು ಇಡೀ ವರ್ಷದಲ್ಲಿ ಬಿಡುಗಡೆ ಮಾಡುವ ಇಂಡೈಗಿಂತಲೂ ಅಧಿಕವಾಗಿರುತ್ತದೆ. ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸಲು ಇಡೀ ಜಗತ್ತು ಹೆಣಗಾಡುತ್ತಿರುವ ಸಮಯದಲ್ಲಿ, ಯುದ್ಧದಾಹಿ ದೇಶಗಳು ಭೂಮಿಯ ತಾಪಮಾನವನ್ನು ಮತ್ತಷ್ಟು ಏರಿಸಿ, ಜಾಗತಿಕ ವಿನಾಶಕ್ಕೆ ನೇರ ಕೊಡುಗೆ ನೀಡುತ್ತಿವೆ.ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳ ಎಲ್ಲ ಬೆಳವಣಿಗೆಗಳು ಸಮಾಜದ ಕಲ್ಯಾಣಕ್ಕೆ ಬಳಕೆಯಾಗಬೇಕಿತ್ತು. ದುರಂತವೆಂದರೆ, ಆಧುನಿಕ ವಿಜ್ಞಾನದ ಕೆಲವು ಸಂಶೋಧನೆಗಳು ಬರೀ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ರೂಪಿಸುವ ತತ್ತ್ವಗಳಾಗಿ ಬದಲಾಗಿವೆ. ತಂತ್ರಜ್ಞಾನದ ತುದಿಯಲ್ಲಿ ನಿಂತು ಸೃಷ್ಟಿಯಾಗಿರುವ ‘ಕಮಿಕಜೆ ಡ್ರೋನ್’ಗಳು ಯುದ್ಧಭೂಮಿಯ ಕಲ್ಪನೆಯನ್ನೇ ಬದಲಿಸಿವೆ. ಅತ್ಯಾಧುನಿಕ ಸೆನ್ಸಾರ್ಗಳು, ಜಿಪಿಎಸ್ ಗೈಡೆನ್ಸ್ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಶತ್ರುಗಳ ಮೇಲೆ ನಿಖರವಾಗಿ ಎರಗುವ ಡ್ರೋನ್ಗಳು ಮತ್ತು ಕ್ಷಿಪಣಿಗಳು, ಭೂಮಿಯ ಮೇಲ್ಮೈಯನ್ನು ತಲಪಿದ ತಕ್ಷಣ ಸ್ವಯಂಸ್ಫೋಟಗೊಂಡು, ತೀವ್ರ ಶಾಖ ಮತ್ತು ರಾಸಾಯನಿಕ ವಿಷವನ್ನು ಹೊರಸೂಸುತ್ತವೆ; ಜನ– ಜಾನುವಾರುಗಳನ್ನು ಕೊಲ್ಲುತ್ತವೆ. ಕಾಡುಗಳನ್ನು ಹೊತ್ತಿ ಉರಿಯುವಂತೆ ಮಾಡುತ್ತವೆ, ನದಿ ಮತ್ತು ನೀರಾವರಿ ಆಸರೆಗಳನ್ನು ರಾಸಾಯನಿಕಗಳಿಂದ ಹಾಳುಮಾಡುತ್ತವೆ ಮತ್ತು ಮಣ್ಣಿನ ಸಾರವನ್ನು ಶಾಶ್ವತವಾಗಿ ನಾಶಪಡಿಸುತ್ತವೆ. ರಾಡಾರ್ಗೆ ಸಿಗದ ಸ್ಟೆಲ್ತ್ ಯುದ್ಧ ವಿಮಾನಗಳು, ಯುರೇನಿಯಂ ಬಳಸಿ ತಯಾರಿಸುವ ಸ್ಫೋಟಕ ಶೆಲ್ಗಳು, ಮೈಕ್ರೋ–ಡ್ರೋನ್ ಪದಾತಿ ಪಡೆಗಳು, ಎಲ್ಲವೂ ಮಾನವ ಬುದ್ಧಿಮತ್ತೆಯ ಪರಾಕಾಷ್ಠೆಗೆ ಹಿಡಿದ ಕನ್ನಡಿಯಾಗಬೇಕಿತ್ತೇ ಹೊರತು, ನಿಸರ್ಗದ ಜೀವತಂತುಗಳನ್ನು ಕತ್ತರಿಸುವ ಕತ್ತಿಯಾಗಬಾರದಿತ್ತು.ಯುದ್ಧಗಳ ನೈತಿಕ ಮತ್ತು ರಾಜಕೀಯ ಸರಿ–ತಪ್ಪುಗಳನ್ನು ವಿಶ್ಲೇಷಿಸುವಾಗ, ಸಾರ್ವಭೌಮತ್ವ, ರಾಷ್ಟ್ರೀಯ ಭದ್ರತೆ ಮತ್ತು ಸ್ವಯಂರಕ್ಷಣೆ ರೀತಿಯ ವಾದಗಳೇ ಎದುರಾಗುತ್ತವೆ. ತಮ್ಮ ಗಡಿಗಳನ್ನು ಮತ್ತು ಆಡಳಿತವನ್ನು ರಕ್ಷಿಸಿಕೊಳ್ಳಲು ಯುದ್ಧ ಮಾಡುವುದು ರಾಜಕೀಯವಾಗಿ ತಪ್ಪೇನಲ್ಲ. ಆದರೆ, ಇಡೀ ಪ್ರಕೃತಿ ಮತ್ತುಮುಂದಿನ ಪೀಳಿಗೆಯ ಜೀವಿಸುವ ಹಕ್ಕನ್ನು ಬಲಿಗೊಟ್ಟು ಮಾಡುವ ಯಾವುದೇ ಯುದ್ಧವು ಎಂದಿಗೂ ‘ಸರಿ’ ಎನಿಸಿಕೊಳ್ಳಲು ಸಾಧ್ಯವಿಲ್ಲ.ಉಕ್ರೇನ್ನ ಪೋಲೆಸ್ಸಿಯಾ ಮೀಸಲು ಅರಣ್ಯಗಳು ಮತ್ತು ಚೆರ್ನೋಬಿಲ್ ನೆಲೆಗಳು ರಷ್ಯಾದ ಬೃಹತ್ ಸೈನಿಕ ವಾಹನಗಳ ದಟ್ಟಣೆಯಿಂದಾಗಿ ಮಣ್ಣಿನ ರಚನೆಯನ್ನೇ ಕಳೆದುಕೊಂಡವು. ಲಕ್ಷಾಂತರ ಎಕರೆ ಅರಣ್ಯ ಕಾಳ್ಗಿಚ್ಚಿಗೆ ತುತ್ತಾಯಿತು. ಪಶ್ಚಿಮ ಏಷ್ಯಾದಲ್ಲಿ ನಡೆದ ಬಾಂಬ್ ದಾಳಿಗಳಿಂದ ಆಲಿವ್ ತೋಟಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿ, ಅಪಾರ ಪ್ರಮಾಣದ ಸಸ್ಯಾಮ್ಲ ಮತ್ತು ಶಸ್ತ್ರಾಸ್ತ್ರಗಳ ತ್ಯಾಜ್ಯದಿಂದ ಮಣ್ಣು ಬರಡಾಗಿದೆ. ಎಂಬತ್ತರ ದಶಕದ ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕ ಬಳಸಿದ ‘ಏಜೆಂಟ್ ಆರೆಂಜ್’ ರಾಸಾಯನಿಕವು ದಟ್ಟ ಕಾಡುಗಳನ್ನು ಮರುಭೂಮಿಯನ್ನಾಗಿ ಮಾಡಿದ ಪರಿಣಾಮವನ್ನು ಇಂದಿಗೂ ಅಲ್ಲಿನ ಮಣ್ಣಿನಲ್ಲಿ ಕಾಣಬಹುದು. ಇತಿಹಾಸದಿಂದ ನಾವು ಪಾಠ ಕಲಿಯದಿರುವುದೇ ಇಂದಿನ ಸಶಸ್ತ್ರ ಬಿಕ್ಕಟ್ಟುಗಳಿಗೆ ಕಾರಣ.ಯುದ್ಧ ಮುಗಿದ ನಂತರವೂ ಪರಿಸರದ ಮೇಲಾಗುವ ಕ್ರೂರ ಗಾಯಗಳು ಮಾಯುವುದಿಲ್ಲ. ಮಣ್ಣಿನಲ್ಲಿ ಹುದುಗಿರುವ ಲಕ್ಷಾಂತರ ಸಿಡಿಯದ ಬಾಂಬ್ಗಳು ಮತ್ತು ಲ್ಯಾಂಡ್ಮೈನ್ಗಳು ದಶಕಗಳ ಕಾಲ ಕೃಷಿ ಭೂಮಿಯನ್ನು ಬಳಸಲಾಗದಂತೆ ಮಾಡುತ್ತವೆ. ವನ್ಯಜೀವಿಗಳು ಅದರ ಮೇಲೆ ಕಾಲಿಟ್ಟ ತಕ್ಷಣ ಸ್ಫೋಟಗೊಂಡು ಪ್ರಾಣ ತೆರುವಂತೆ ಮಾಡುತ್ತವೆ. ಕುಡಿಯುವ ನೀರಿನ ಮೂಲಗಳು ಶಸ್ತ್ರಾಸ್ತ್ರಗಳ ಗಂಧಕಮತ್ತು ವಿಷಕಾರಿ ಭಾರಲೋಹಗಳಿಂದ ಕಲುಷಿತಗೊಂಡು, ಆ ಪ್ರದೇಶದ ಸಸ್ಯ, ಪ್ರಾಣಿ ಮತ್ತು ಜಲಚರಗಳ ವಂಶವಾಹಿಯನ್ನೇ ಬದಲಾಯಿಸಿ, ವಿಕಾರ ಗರ್ಭಧಾರಣೆಗೆ ಕಾರಣವಾಗುತ್ತವೆ. ಪ್ರಕೃತಿಯು ಲಕ್ಷಾಂತರ ವರ್ಷಗಳ ಸತತ ವಿಕಾಸದಿಂದ ನಿರ್ಮಿಸಿದ ಪರಿಸರ ಸಮತೋಲನವನ್ನು, ಮಾನವನು ತನ್ನ ಕೆಲವೇ ದಿನಗಳಯುದ್ಧದ ಹುಚ್ಚಾಟದಿಂದ ಪುಡಿಪುಡಿ ಮಾಡುತ್ತಿದ್ದಾನೆ.ಇಂದಿನ ಜಾಗತಿಕ ಪರಿಸರ ಮತ್ತು ಸಶಸ್ತ್ರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಪ್ರಾಚೀನ ಶಾಂತಿ ಪರಂಪರೆ ಮತ್ತು ‘ವಸುಧೈವ ಕುಟುಂಬಕಂ’ ಎಂಬ ಮೌಲ್ಯಗಳನ್ನು ಉಸುರುವ ನಮ್ಮ ದೇಶವು ಜಾಗತಿಕ ಮಟ್ಟದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಲು ಸಾಧ್ಯವಿದೆ. ಮೊದಲನೆಯದಾಗಿ, ಭಾರತವು ಜಾಗತಿಕ ವೇದಿಕೆಗಳಾದ ವಿಶ್ವಸಂಸ್ಥೆ , ಜಿ–20 ಮತ್ತು ಬ್ರಿಕ್ಸ್ ಶೃಂಗಸಭೆಗಳಲ್ಲಿ ‘ಪರಿಸರ ಮಾರಣಹೋಮ ಅಥವಾ ಇಕೋಸೈಡ್’ ಅನ್ನು ಅಂತರರಾಷ್ಟ್ರೀಯ ಯುದ್ಧ ಅಪರಾಧ ಎಂದು ಘೋಷಿಸಲು ದ್ವಂದ್ವರಹಿತವಾಗಿ ಧ್ವನಿ ಎತ್ತಬೇಕಿದೆ. ರಾಜಕೀಯ ಸಂಘರ್ಷಗಳಲ್ಲಿ ಪ್ರಕೃತಿಯನ್ನು ದಾಳವಾಗಿ ಬಳಸುವುದನ್ನು ತಡೆಯಲು ‘ಜಿನಿವಾ ಕನ್ವೆನ್ಷನ್’ ಮಾದರಿಯಲ್ಲಿಯೇ ಪ್ರತ್ಯೇಕ ‘ಹಸಿರು ಪರಿಸರ ಕಾನೂನು’ ರಚನೆಗೆ ಭಾರತ ನಾಯಕತ್ವ ವಹಿಸಬಹುದು. ಎರಡನೆಯದಾಗಿ, ಭಾರತತನ್ನದೇ ಆದ ರಕ್ಷಣೆ ಮತ್ತು ತಂತ್ರಜ್ಞಾನ ವಲಯದಲ್ಲಿ ‘ಹಸಿರು ರಕ್ಷಣಾ ನೀತಿ’ಯನ್ನು (ಗ್ರೀನ್ ಡಿಫೆನ್ಸ್ ಪಾಲಿಸಿ) ಅಳವಡಿಸಿಕೊಂಡು ಜಗತ್ತಿಗೆ ಮಾದರಿಯಾಗಬಹುದು. ಅಂದರೆ, ಸಶಸ್ತ್ರ ಪಡೆಗಳ ತರಬೇತಿ ಮತ್ತು ಸಮರಾಭ್ಯಾಸಗಳ ಸಮಯದಲ್ಲಿ ಪರಿಸರಕ್ಕೆ ಕನಿಷ್ಠ ಧಕ್ಕೆಯಾಗುವಂತಹ ತಂತ್ರಜ್ಞಾನ ಹಾಗೂ ಜೀವಸ್ನೇಹಿ ಆಯುಧ ವಿನ್ಯಾಸಕ್ಕೆ ಆದ್ಯತೆ ನೀಡಬಹುದಾಗಿದೆ. ಮೂರನೆಯದಾಗಿ, ಯುದ್ಧಪೀಡಿತ ಪ್ರದೇಶಗಳಲ್ಲಿಮಣ್ಣು ಮತ್ತು ಜಲಮೂಲಗಳನ್ನು ಪುನರುಜ್ಜೀವನಗೊಳಿಸಲು ಭಾರತ ತನ್ನ ಬಾಹ್ಯಾಕಾಶ ತಂತ್ರಜ್ಞಾನದ ನೆರವಿನಿಂದ ಪರಿಸರ ಪುನರ್ ನಿರ್ಮಣ ಕಾರ್ಯಾಚರಣೆಗಳಿಗೆ ಮುಂಚೂಣಿ ತಜ್ಞತೆಯನ್ನು ಒದಗಿಸಬಹುದು.ನವೆಂಬರ್ 6ರಂದು ‘ಯುದ್ಧ ಮತ್ತು ಸಶಸ್ತ್ರ ಸಂಘರ್ಷಗಳಲ್ಲಿ ಪರಿಸರ ಶೋಷಣೆ ತಡೆಗಟ್ಟುವ ಅಂತರರಾಷ್ಟ್ರೀಯ ದಿನ’ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ಮಾನವನ ತಂತ್ರಜ್ಞಾನ ಮತ್ತು ಅಹಂಕಾರವು ಪ್ರಕೃತಿಯನ್ನು ಹೇಗೆ ಧ್ವಂಸ ಮಾಡುತ್ತಿದೆ ಎನ್ನುವ ವಸ್ತುನಿಷ್ಠ ಚರ್ಚೆ ನಡೆಯಬೇಕಾಗಿದೆ. ಪರಿಸರ ಸಂರಕ್ಷಣೆಯ ಕುರಿತಾದ ಯಾವುದೇ ದಿನಾಚರಣೆಯು ವಿಶ್ವಸಂಸ್ಥೆಯೂ ಸೇರಿದಂತೆ ಜಾಗತಿಕ ನಾಯಕರಿಗೆ, ವಿಜ್ಞಾನಿಗಳಿಗೆ ಮತ್ತು ನಾಗರಿಕ ಸಮಾಜಕ್ಕೆ ಕಣ್ಣು ತೆರೆಸುವ ಎಚ್ಚರಿಕೆಯ ಗಂಟೆಯಾಗಬೇಕು. ಯುದ್ಧ ನಿಯಮಗಳಲ್ಲಿ ಮಾನವ ಹಕ್ಕುಗಳನ್ನು ಮಾತ್ರವಲ್ಲದೆ, ‘ಪ್ರಕೃತಿಯ ಹಕ್ಕುಗಳನ್ನು’ ಅತ್ಯಂತ ಕಟ್ಟುನಿಟ್ಟಾಗಿ ಸೇರಿಸಬೇಕಿದೆ. ಕಮಿಕಜೆ ಡ್ರೋನ್ಗಳು ಮತ್ತು ಮಾರಕ ಕ್ಷಿಪಣಿಗಳನ್ನು ತಯಾರಿಸಲು ವೆಚ್ಚ ಮಾಡುವ ಬಿಲಿಯನ್ಗಟ್ಟಲೆ ಡಾಲರ್ಗಳನ್ನು, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಮತ್ತು ಕಾಡುಗಳನ್ನು ಬೆಳೆಸಲು ಬಳಸಿದ್ದರೆ ಈ ಭೂಮಿ ಇನ್ನಷ್ಟು ವಾಸಯೋಗ್ಯವಾಗಿರುತ್ತಿತ್ತು.ಯುದ್ಧದ ಅಬ್ಬರದಲ್ಲಿ ಹಕ್ಕಿಗಳ ಕಲರವ, ನದಿಗಳ ನಿನಾದ ಮತ್ತು ಕಾಡಿನ ಮೌನಗಳು ಅಡಗಿ ಹೋಗಬಾರದು. ಭೂಮಿ ಮಾನವ ಪಗಡೆಯಾಟದ ದಾಳವಾಗಬಾರದು. ತಂತ್ರಜ್ಞಾನವನ್ನು ವಿನಾಶಕ್ಕೆ ಬಳಕೆಯಾಗದಂತೆ ತಡೆದು, ಜೀವ ಸಂರಕ್ಷಣೆ ಮತ್ತು ಭೂಮಿಯ ಹಸಿರನ್ನು ಉಳಿಸಲು ಶ್ರಮಿಸಿದಾಗ ಮಾತ್ರ ವಿಜ್ಞಾನ–ತಂತ್ರಜ್ಞಾನದ ಸಾಧನೆಗೆ ನೈತಿಕ ಅರ್ಥ ಲಭಿಸುತ್ತದೆ.ಗುರುರಾಜ್ ದಾವಣಗೆರೆ