ಇಂದಿನ ಭಾರತ, ಇಂದಿನ ಹೆಣ್ಣು
ಬಿಹಾರದ ಸಾರ್ವಜನಿಕ ಸ್ಥಳದಲ್ಲಿ ಹದಿನೈದು ವರ್ಷದ ಹುಡುಗ ಹುಡುಗಿಗೆ ಹಿಂಸೆ ನೀಡಿ, ಪುಂಡರು ಹುಡುಗಿಯನ್ನು ಅಸಭ್ಯವಾಗಿ ಸ್ಪರ್ಶಿಸಿದ ಘಟನೆ (ಸೆ. 19ರಂದು) ಸುದ್ದಿವಾಹಿನಿಗಳಲ್ಲಿ ಬಿತ್ತರವಾಗಿತ್ತು. ಅದಾದ ಎರಡು ದಿನಗಳಲ್ಲಿ (ಸೆ. 21),ದೆಹಲಿಯ ಆಸ್ತಾಕುಂಜ್ ಉದ್ಯಾನದಲ್ಲಿ ಘಟಿಸಿದ್ದ,ಹದಿನೇಳು ವರ್ಷದ ಹುಡುಗಿಯ ಅತ್ಯಾಚಾರದ ವಿರುದ್ಧವಾಗಿ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿ

ಬಿಹಾರದ ಸಾರ್ವಜನಿಕ ಸ್ಥಳದಲ್ಲಿ ಹದಿನೈದು ವರ್ಷದ ಹುಡುಗ ಹುಡುಗಿಗೆ ಹಿಂಸೆ ನೀಡಿ, ಪುಂಡರು ಹುಡುಗಿಯನ್ನು ಅಸಭ್ಯವಾಗಿ ಸ್ಪರ್ಶಿಸಿದ ಘಟನೆ (ಸೆ. 19ರಂದು) ಸುದ್ದಿವಾಹಿನಿಗಳಲ್ಲಿ ಬಿತ್ತರವಾಗಿತ್ತು. ಅದಾದ ಎರಡು ದಿನಗಳಲ್ಲಿ (ಸೆ. 21),ದೆಹಲಿಯ ಆಸ್ತಾಕುಂಜ್ ಉದ್ಯಾನದಲ್ಲಿ ಘಟಿಸಿದ್ದ,ಹದಿನೇಳು ವರ್ಷದ ಹುಡುಗಿಯ ಅತ್ಯಾಚಾರದ ವಿರುದ್ಧವಾಗಿ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದರು; ‘ಕ್ಷೀಣಿಸುತ್ತಿರುವ ಹೆಣ್ಣಿನ ಸುರಕ್ಷತೆ’ಯ ಬಗ್ಗೆ ಪ್ರತಿಭಟನೆ ನಡೆಸಿದ್ದರು. ದಕ್ಷಿಣ ಭಾರತದಲ್ಲಿರುವ ನಾವು ಆ ಘಟನೆಗಳ ಬಗ್ಗೆ ತಿಳಿದು, ವಾಹಿನಿಗಳಲ್ಲಿ ಘಟನಾವಳಿಗಳ ದೃಶ್ಯಗಳನ್ನು ನೋಡುತ್ತಾ ಕಸಿವಿಸಿಗೊಂಡಿದ್ದೆವು. ನಂತರ ಎಲ್ಲವೂ ತಟಸ್ಥಗೊಂಡವು. ಹೆಣ್ಣಿನ ಲೈಂಗಿಕ ಶೋಷಣೆಗಳ ಕುರಿತಾದ ಇತರ ರಾಜ್ಯಗಳ ಸುದ್ದಿಗಳು, ಕರ್ನಾಟಕದ ವಿಷಯಗಳನ್ನು ನಮ್ಮ ಅರಿವಿಗೆ ತರುವ ಕೆಲಸದಲ್ಲಿ ಸುದ್ದಿ ಮಾಧ್ಯಮದವರು ತಮ್ಮನ್ನು ತಾವು ತೊಡಗಿಸಿಕೊಂಡರು.ಬಿಹಾರ ಮತ್ತು ದೆಹಲಿಯ ಘಟನೆಗಳನ್ನು ಗಮನಿಸುತ್ತಿದ್ದಾಗ, ಧರ್ಮಸ್ಥಳದ ಸೌಜನ್ಯಳ ನೆನಪು ಮತ್ತಷ್ಟು ಕಾಡತೊಡಗಿತು. ದೆಹಲಿ, ಬಿಹಾರ ಮತ್ತು ಕರ್ನಾಟಕದಈ ಮೂವರು ಹುಡುಗಿಯರು ಹದಿನೈದರಿಂದ ಹದಿನೇಳರ ವಯಸ್ಸಿನೊಳಗೆ ಇದ್ದವರು. ಧರ್ಮಸ್ಥಳದ ಪ್ರಕರಣದಲ್ಲಿ ಮರಣ ಹೊಂದಿದ ಸೌಜನ್ಯಳಂತೆ ದೆಹಲಿಹಾಗೂ ಬಿಹಾರದ ಹುಡುಗಿಯರ ಜೀವಕ್ಕೆ ಅಪಾಯವಾಗಲಿಲ್ಲ ಎನ್ನುವುದು ಸಮಾಧಾನದ ಸಂಗತಿ. ಆದರೆ, ಮಾನಸಿಕ ಹಾಗೂ ದೈಹಿಕ ದೌರ್ಜನ್ಯದ ನಂತರಅವರು ಧೈರ್ಯವಾಗಿ ಎದೆ ಸೆಟೆದು ನಿಂತು, ತಮಗೆ ದೊರೆಯಬೇಕಾದ ನ್ಯಾಯವನ್ನು ದೊರಕಿಸಿಕೊಳ್ಳುತ್ತಾರೆಯೆ? ಅವರಿಗೆ ನೆಮ್ಮದಿ ನೀಡುವಂಥ ವಾತಾವರಣವು ನಮ್ಮ ಸಮಾಜದಲ್ಲಿದೆಯೆ? ಈ ಪ್ರಶ್ನೆಗಳ ಜೊತೆಗೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಪ್ರಕಾರ, ದಿನದಲ್ಲಿ ಎಂಬತ್ತರಿಂದ ಎಂಬತ್ತಾರುಅತ್ಯಾಚಾರ ಪ್ರಕರಣಗಳು ದೇಶದಲ್ಲಿ ವರದಿಯಾಗುತ್ತಿವೆ ಎನ್ನುವುದನ್ನು ಗಮನಿಸಬೇಕು.ಗಂಡು ಪ್ರಾಧಾನ್ಯ ಸಂಸ್ಕೃತಿಯನ್ನು ಬೆಂಬಲಿಸುವ ಭಾರತದಲ್ಲಿ ವೈವಾಹಿಕ ಅತ್ಯಾಚಾರ, ವರದಕ್ಷಿಣೆ ಸಂಬಂಧಿತ ಹಿಂಸೆಗಳು ಹಾಗೂ ಅಪ್ರಾಪ್ತ ವಯಸ್ಸಿನಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳಿಂದಾಗಿಯೇ ಬದುಕು ನಾಶವಾಗಿ ಹೋದ ಪ್ರಕರಣಗಳು ಲೆಕ್ಕವಿಲ್ಲದಷ್ಟಿವೆ. ಸಮಾಜದ ಸಂಸ್ಕೃತಿಯನ್ನು ಲಿಂಗ ತಾರತಮ್ಯದ ಮೂಲಕ ಅಧ್ಯಯನ ನಡೆಸಿದಾಗ, ಅದು ಸಮಾಜದ ಸ್ಥಿತಿಗತಿಯನ್ನು ವಿಶಾಲ ವ್ಯಾಪ್ತಿಯಲ್ಲಿ ಅರ್ಥಮಾಡಿಸುತ್ತದೆ. ಇಂತಹ ಅಧ್ಯಯನವು ಹೆಣ್ಣಿನ ಮೇಲೆ ನಡೆಯುವ ದೈಹಿಕ ಕಿರುಕುಳಗಳನ್ನು ಮನೆಯವರು (ಇತ್ತೀಚಿನ ದಿನಗಳಲ್ಲಿ ‘ಮರ್ಯಾದೆಗೇಡು ಹತ್ಯೆ’ಗಳು ಹೆಚ್ಚಾಗುತ್ತಿವೆ) ಹಾಗೂ ನ್ಯಾಯಾಲಯಗಳು ಅಲ್ಲಗಳೆಯುವ ಸಾಧ್ಯತೆಗಳನ್ನು ಸೂಚಿಸುತ್ತವೆ. ಲಿಂಗ ಅಸಮಾನತೆಯ ವಾತಾವರಣದಿಂದ ಸಮಾಜವು ಹೆಣ್ಣಿನ ಬಗ್ಗೆ ತನಗಿರುವ ಕೀಳು ಮನೋಭಾವವನ್ನು ತೋರ್ಪಡಿಸಿಕೊಳ್ಳುತ್ತದೆ.ಜೋನ್ ಫ್ರಾಂಕೋಯಿ ಲ್ಯೊಟಾರ್ಡ್ ಎನ್ನುವ ಫ್ರೆಂಚ್ ತತ್ತ್ವಜ್ಞಾನಿ ಹಾಗೂ ಸಮಾಜಶಾಸ್ತ್ರಜ್ಞ ಹೀಗೆ ಹೇಳುತ್ತಾರೆ: ‘ಮೌನವನ್ನು ಸಂಪಾದಿಸುವುದು, ನ್ಯಾಯಾಧೀಶರ ಕಿವುಡುತನ ಖರೀದಿಸುವುದು ಹಾಗೂ ಅಸಮಂಜಸ ಸಾಕ್ಷ್ಯ ಒದಗಿಸುವುದು, ಕೊಲೆಯಂಥ ಪರಿಪೂರ್ಣ ಅಪರಾಧದಷ್ಟೇ ಶಿಕ್ಷಾರ್ಹ’.ಲಿಂಗ ಆಧಾರಿತ ದೈಹಿಕ ಹಾಗೂ ಮಾನಸಿಕ ದೌರ್ಜನ್ಯವು ಒಂದು ಭಾಷೆ. ಹೆಣ್ಣುಮಕ್ಕಳ ನಿತ್ಯ ಬದುಕಿನಲ್ಲಿ ಹಬ್ಬಿಕೊಂಡಿರುವ ಭೀತಿಗೆ ‘ಭಾಷೆ’ಯೊಂದಿದೆ ಎಂಬ ಪ್ರಾಥಮಿಕ ಅರಿವು ಹಾಗೂ ಅದನ್ನು ಕಲಿಯುವ ವ್ಯವಧಾನವು ಇಂದಿನ ತುರ್ತಾಗಿದೆ. ವೃತ್ತಪತ್ರಿಕೆಗಳಲ್ಲಿ ಬಿತ್ತರಗೊಳ್ಳುವ ಸುದ್ದಿಗಳನ್ನು ಓದಿ, ನಂತರ ನಮ್ಮ ನಿತ್ಯಜೀವನಕ್ಕೆ ತೆರಳುವುದು ಎಷ್ಟು ಸಮಂಜಸವಾದೀತು? ಸಮಾಜವು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡು, ಹೆಣ್ಣುಮಕ್ಕಳಿಗೆ ‘ಸುರಕ್ಷಿತವಾಗಿರುವುದು ನಿನ್ನ ಜವಾಬ್ದಾರಿ’ ಎಂದು ಎಚ್ಚರಿಸುತ್ತದೆ. ಅದರಿಂದಾಗಿ ಲ್ಯೊಟಾರ್ಡ್ ಹೇಳಿದ ಅಪರಾಧದಂತೆ, ಹೆಣ್ಣುಮಕ್ಕಳ ಮೌನವನ್ನು ಖರೀದಿಸಿದ ಭಾವವು ಸೃಷ್ಟಿಯಾಗುತ್ತದೆ.ಬಿಹಾರದ ಘಟನೆಯಲ್ಲಿ ಮೂರು ವಿಷಯಗಳನ್ನು ಗಮನಿಸಬೇಕು: ಮೊದಲನೆಯದು, ಭಯಗೊಂಡ ಹುಡುಗಿಯು ತನ್ನ ಮನೆಯವರಿಗೆ ಘಟನೆಯ ಸುಳಿವು ನೀಡದಿರುವುದು. ಎರಡನೆಯದು, ಕಾಮುಕರು ತಾವು ಮಾಡಿದ್ದ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟದ್ದು (ಅದುವರೆಗೂ ಕುಟುಂಬದವರಿಗೆ ಮತ್ತು ಪೊಲೀಸರಿಗೆ ಆ ಪ್ರಕರಣದ ಬಗ್ಗೆ ತಿಳಿದಿರಲಿಲ್ಲ). ಮೂರನೆಯದು, ಬಿಜೆಪಿಯ ಮಹಿಳಾ ಶಾಸಕಿ ಶ್ರೇಯಸಿ ಸಿಂಗ್, ‘ನೈತಿಕ ಪೊಲೀಸ್ಗಿರಿಯನ್ನು ನಡೆಸುವುದೇ ಆಗಿದ್ದರೆ, ಅದನ್ನು ಗಂಭೀರವಾಗಿ ಮಾಡಬಹುದಿತ್ತು’ ಎಂದು ಹೇಳಿದ್ದು (ನಂತರ ಮಾತು ಬದಲಿಸಿ, ‘ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು’ ಎಂದು ಹೇಳಿದ್ದರು). ಬಿಹಾರದ ಜೆಡಿಯು ರಾಜ್ಯ ಘಟಕದ ಅಧ್ಯಕ್ಷರಾದ ಶ್ರವಣ್ ಕುಮಾರ್, ‘ಇದೊಂದು ಸಣ್ಣ ಘಟನೆ, ಇಂಥ ಪ್ರಕರಣಗಳು ದೇಶದಲ್ಲಿ ನಡೆಯುತ್ತಲೇ ಇರುತ್ತವೆ’ ಎಂದು ಹೇಳಿದ್ದನ್ನೂ ಗಮನಿಸಬೇಕು. ಇಂಥ ಪ್ರತಿಕ್ರಿಯೆಗಳು, ‘ಅವಳಿಗೆ’ ದೊರಕಬೇಕಾದ ನ್ಯಾಯದಿಂದಲೂ, ನೈತಿಕಹಕ್ಕುಗಳಿಂದ ದೂರ ಸೆಳೆಯುತ್ತವೆ. ಇದನ್ನು ಪ್ರಸ್ತುತ ಭಾರತದ ‘ಹೆಣ್ಣಿನ ಸ್ಥಿತಿ’ ಎಂದು ವ್ಯಾಖ್ಯಾನಿಸಬಹುದು.ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ‘ಭಾರತದ ನಿರ್ಮಾಣದಲ್ಲಿ ಹೆಣ್ಣುಮಕ್ಕಳ ಸಬಲೀಕರಣವು ದೇಶದ ಸಮಾನತೆಗೆ ಹಾಗೂ ಪ್ರಗತಿಗೆ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ’ ಎಂದು ಹೇಳುತ್ತಿರುವ ಈ ಹೊತ್ತಿನಲ್ಲಿ, ಹೆಂಗಸರ ಮೇಲೆ ನಡೆಯುತ್ತಿರುವ ಇಂಥ ಸಾಂಸ್ಥಿಕ ಹಾಗೂ ಸಾಮಾಜಿಕ ದೌರ್ಜನ್ಯದ ಪ್ರಕರಣಗಳು, ಹಿಂದೂ ಸಂಸ್ಕೃತಿಯನ್ನು ಎತ್ತಿಹಿಡಿಯುವ ‘ಧರ್ಮ ಹಾಗೂ ನೈತಿಕ ರಕ್ಷಣೆಗಾಗಿ ಸ್ವಯಂಘೋಷಿತ ಪೊಲೀಸರು’ ಎಂಬ ಹೊಸ ಲಾಂಛನದಡಿ ಜರುಗುತ್ತಿವೆ. ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಗೂಂಡಾಗಳಿಗೆ ರಾಜಕಾರಣಿಗಳ ಪರವಾನಗಿ ಇರುತ್ತದೆ. ಕೆನ್ಯಾ ದೇಶದ ಪ್ರಸಿದ್ಧ ಸ್ತ್ರೀಹಕ್ಕುಗಳ ಹೋರಾಟಗಾರ್ತಿ ಹಾಗೂ ರಂಗಭೂಮಿ ಕಾರ್ಯಕರ್ತೆ ಶೈಲಜಾ ಪಟೇಲ್ ಹೀಗೆ ಹೇಳುತ್ತಾರೆ: ‘ದೌರ್ಜನ್ಯದ ಅವಮಾನವನ್ನು ಅನುಭವಿಸುತ್ತಿರುವವರು ಯಾರು? ಅದನ್ನು ನಿರ್ಮಾಣ ಮಾಡುತ್ತಿರುವವರು ಯಾರು? ಈ ಪ್ರಶ್ನೆಗಳ ಮೂಲವನ್ನು ಅರಿತಾಗ ಸಮಾಜದ ಸಾಮರ್ಥ್ಯವನ್ನು, ಸ್ವಾಸ್ಥ್ಯವನ್ನು ತಿಳಿದುಕೊಳ್ಳುತ್ತೇವೆ’.ದೆಹಲಿಯ ಆಸ್ತಾಕುಂಜ್ ಉದ್ಯಾನದಲ್ಲಿ ಹದಿನೇಳು ವರ್ಷದ ಹುಡುಗಿಯು ತನ್ನ ಗೆಳೆಯನೊಂದಿಗೆ ಇದ್ದಾಗ, ಮೂವರು ಗಂಡಸರು ಪೊಲೀಸರದಿರಿಸುಗಳಲ್ಲಿ ಅವರೆದುರಿಗೆ ಧುತ್ತನೆ ಪ್ರತ್ಯಕ್ಷರಾಗಿದ್ದರು. ಹುಡುಗನಿಗೆ ಹೊಡೆದರು. ಹುಡುಗಿಯ ಮೇಲೆ ಉದ್ಯಾನದ ಮೂರು ಬೇರೆ ಬೇರೆ ಸ್ಥಳಗಳಲ್ಲಿ ಅತ್ಯಾಚಾರವೆಸಗಿದ್ದರು. ಹುಡುಗನು ತಕ್ಷಣದಲ್ಲಿಯೇ ಪೊಲೀಸರಿಗೆ ಕರೆ ಮಾಡಿದ್ದರಿಂದಾಗಿ ಮೂವರನ್ನೂ ಬಂಧಿಸಲಾಯಿತು. ಬಂಧಿತರಲ್ಲಿ ಇಬ್ಬರು, ವಕೀಲರೊಬ್ಬನ ಮಕ್ಕಳು. ಮೊದಲನೆಯವನು ಕಾನೂನು ಸಂಬಂಧಿತ ಅಭ್ಯಾಸ ನಡೆಸುತ್ತಿದ್ದರೆ, ಎರಡನೆಯವನು ಗಣಿತ ವಿಷಯದಲ್ಲಿ ಎರಡನೇ ವರ್ಷದ ಪದವಿ ವಿದ್ಯಾರ್ಥಿ. ಮೂರನೆಯವನು ಈರುಳ್ಳಿ ವ್ಯಾಪಾರಿ. ಆತ ವಿವಾಹಿತ ಹಾಗೂ ಹದಿಮೂರು ವರ್ಷದ ಹುಡುಗಿಯ ತಂದೆ. ಉದ್ಯಾನದ ರಕ್ಷಣೆಗಾಗಿ ಗಸ್ತು ತಿರುಗುವುದು ಈ ಮೂವರ ನಿತ್ಯದ ಕೆಲಸವಾಗಿತ್ತು. ಅವರಿಗೆ ಉದ್ಯಾನಕ್ಕೆ ಯಾರು ಬರುತ್ತಾರೆ, ಹೋಗುತ್ತಾರೆ ಎಂಬುದು ತಿಳಿದಿತ್ತು.ಸಂತ್ರಸ್ತೆಯು ನ್ಯಾಯಕ್ಕಾಗಿ ನಡೆಸುವ ಹೋರಾಟದಲ್ಲಿ, ಅವಳ ಅನುಭವಗಳ ಕಾನೂನಾತ್ಮಕ ವಿಶ್ಲೇಷಣೆಗೆ ಜಾತಿ, ಸಾಮಾಜಿಕ ಸವಲತ್ತುಗಳು, ದೌರ್ಬಲ್ಯಗಳು ಎಲ್ಲವೂ ಕೂಡಿಕೊಂಡ ಬಹುಮುಖ ಸ್ವರೂಪದ ಗುರುತುಗಳು ಮೊದಲ ತೊಡಕಾಗುತ್ತವೆ. ಗಂಡಿನ ದಬ್ಬಾಳಿಕೆಯನ್ನು ಎದುರಿಸುತ್ತಿರುವ ಹೆಣ್ಣಿಗೆ, ಅವಳ ವರ್ಗೀಕರಣಗೊಂಡ ‘ಗುರುತು’ ನ್ಯಾಯವನ್ನು, ಸಮಾನತೆಯನ್ನು ಸೃಷ್ಟಿಸುವುದಿಲ್ಲ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದರಿಂದ ಆರಂಭಗೊಳ್ಳುವ ತೊಡಕುಗಳು ಆಕೆಯ ಮಾನಸಿಕ ಸ್ಥೈರ್ಯವನ್ನು ಮತ್ತೆ ಮತ್ತೆ ಪರೀಕ್ಷೆಗೆ ಒಳಪಡಿಸುತ್ತವೆ. ನಮ್ಮದೇಶದಲ್ಲಷ್ಟೇ ಅಲ್ಲದೆ ಪ್ರಪಂಚದೆಲ್ಲೆಡೆ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯೊಂದಿಗಿನ ಪೊಲೀಸರ ವಿಚಾರಣೆಯಲ್ಲಿ, ನ್ಯಾಯಾಲಯದ ಕಾನೂನಾತ್ಮಕ ಪ್ರಶ್ನೆಗಳಲ್ಲಿ ಸಂವೇದನಾಶೀಲತೆ ಆಗಲೀ, ಅನುಕಂಪವಾಗಲೀ ಇರುವುದಿಲ್ಲ. ಅವು ಘಟನೆಯ ಆಘಾತವನ್ನು ಮರುಕಳಿಸುವಂತೆ ಮಾಡುತ್ತವೆ.2019ರಲ್ಲಿ ನಿರ್ಮಾಣವಾದ ಅಮೆರಿಕದ ‘ಅನ್ಬಿಲೀವಬಲ್’ ವೆಬ್ ಸರಣಿಯ ಆರಂಭದಲ್ಲಿ, ಪೊಲೀಸರು ಹದಿನಾಲ್ಕು ವರ್ಷದ ಅತ್ಯಾಚಾರ ಸಂತ್ರಸ್ತೆಯೊಂದಿಗೆ ವಿಚಾರಣೆ ನಡೆಸುವ ದೃಶ್ಯಗಳಿವೆ. ಅವಳನ್ನು ಭಾವರಹಿತ ಪ್ರಶ್ನೆಗಳಿಂದ ಹಿಂಸಿಸಲಾಗುತ್ತದೆ. ಅದರಿಂದಾಗಿ ಅವಳಿಗೆ ಘಟನೆಯ ನೆನಪುಗಳು ಕಲಸುಮೇಲೋಗರವಾಗುತ್ತವೆ. ಪ್ರಶ್ನೆಗಳಿಗೆ ಉತ್ತರಿಸುವ ಸಮಯದಲ್ಲಿ ಮಾನಸಿಕ ಆಯಾಸದಿಂದ ಬಳಲುತ್ತಾಳೆ. ನಾಲ್ಕು ಸಲ ನಡೆಯುವ ವಿಚಾರಣೆಗಳ ಅಂತ್ಯದಲ್ಲಿ ಪೊಲೀಸರು ಹುಡುಗಿಯು ಅತ್ಯಾಚಾರಕ್ಕೆ ಒಳಗಾಗಿಲ್ಲ ಎಂಬ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಈ ಸರಣಿಯು ನೈಜ ಘಟನೆಯನ್ನು ಆಧರಿಸಿದ್ದು. ಸಕಾರಾತ್ಮಕವಾಗಿ ಅಂತ್ಯಗೊಳ್ಳುವ ಸರಣಿಯು ಕಾನೂನು ಹಾಗೂ ನ್ಯಾಯ ಹೆಣ್ಣುಮಕ್ಕಳ ಪರವಾಗಿದೆ ಎನ್ನುವ ಸಂದೇಶ ಕೊಡುತ್ತದೆ. ಅಂಥ ಸಂದೇಶ ಭಾರತೀಯ ಸಂದರ್ಭದಲ್ಲಿ ಸಾಧ್ಯವೆ?‘ಸಾಂಸ್ಥಿಕ ಶೋಷಣೆ’ಯನ್ನು ಮೆಟ್ಟಿ ನಿಲ್ಲಲುಮೊಟ್ಟಮೊದಲು ಕುಟುಂಬದವರು ಅತ್ಯಾಚಾರಕ್ಕೊಳಗಾದ ಹೆಣ್ಣಿನ ಬೆಂಬಲಕ್ಕೆ ನಿಲ್ಲಬೇಕು, ಸಾಂತ್ವನನೀಡಬೇಕು. ಆರೋಗ್ಯ ಕೇಂದ್ರಗಳಲ್ಲಿ ವ್ಯೆದ್ಯರು,ದಾದಿಯರು ಸಂತ್ರಸ್ತೆಯರೊಂದಿಗೆ ಸಮಾಧಾನದಿಂದ, ಸಹಾನುಭೂತಿಯಿಂದ ಮಾತನಾಡಬೇಕು. ನ್ಯಾಯಾಧೀಶರು ಹಾಗೂ ವಕೀಲರು ವಿಚಾರಣೆಯ ಸಮಯದಲ್ಲಿ ಅವಳ ಮನಃಸ್ಥಿತಿಯನ್ನು ಅರ್ಥಮಾಡಿಕೊಂಡರೆ, ಅವಳ ಆತ್ಮವಿಶ್ವಾಸವು ಸ್ವಲ್ಪಮಟ್ಟಿಗಾದರೂ ಸುಧಾರಿಸಬಹುದು.ಸತ್ಯಮಾರ್ಗದಲ್ಲಿ, ನ್ಯಾಯಮಾರ್ಗದಲ್ಲಿ ನಡೆದ ಗಾಂಧೀಜಿಯ ಭಾರತ ನಮ್ಮದು. ವಿಶ್ವಧರ್ಮದ ಬಗ್ಗೆ ಮಾತನಾಡುವ ನಮ್ಮ ದೇಶದಲ್ಲಿ ಇಂದಿಗೂ ಹೆಣ್ಣಿಗೆ ನ್ಯಾಯವಾಗಿ ದೊರೆಯಬೇಕಾದ ಸಮಾನತೆಹಾಗೂ ಸಾಮಾಜಿಕ ಒಳಗೊಳ್ಳುವಿಕೆ ಮರೀಚಿಕೆಯೇ ಆಗಿವೆ. ಆದರೂ, ಇಂದಲ್ಲ ನಾಳೆ ಹೆಣ್ಣು ಸಮಾನತೆಗಳಿಸುತ್ತಾಳೆ, ಮಧ್ಯರಾತ್ರಿಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ನಿರ್ಭೀತಿಯಿಂದ ಓಡಾಡುತ್ತಾಳೆ ಎನ್ನುವ ಆಶಾಭಾವವನ್ನು ನಾವು ಕಳೆದುಕೊಳ್ಳಬಾರದು.ಶ್ಯಾಮಲಾ ಗುರುಪ್ರಸಾದ್