ರಾಜಕಾರಣ ಅಪಾಯದಲ್ಲಿಲ್ಲ!
‘ಕೃಷಿ ಮಾಡೋಣ ಅಂದ್ರೆ ಬೆಳೆದ ಬೆಳೆಗೆ ಬೆಲೆ ಸಿಗ್ತಿಲ್ಲ, ಈ ಕಂಪನಿಯಲ್ಲೇ ಕೆಲಸ ಮಾಡ್ಕೊಂಡಿರೋಣ ಅಂದ್ರೆ ಸ್ಯಾಲರಿ ಹೈಕ್ ಮಾಡ್ತಿಲ್ಲ, ಯಾವುದಾದರೂ ಬಿಸಿನೆಸ್ ಮಾಡೋಣ ಅಂದ್ರೆ ಬಂಡವಾಳ ಇಲ್ಲ. ಏನ್ ಮಾಡಬೇಕು ಅಂತಾನೇ ತಿಳೀತಿಲ್ಲ’ ಎಂದು ಒಂದೇ ಉಸಿರಿನಲ್ಲಿ ಮಾತಾಡ್ತಿದ್ದ ಮುದ್ದಣ್ಣ.‘ಸುಮ್ಮನೆ ರಾಜಕಾರಣಿ ಆಗಿಬಿಡು’ ಸಲಹೆ ನೀಡಿದ ಸ್ನೇಹಿತ ವಿಜಿ.‘ರಾಜಕಾರಣಿ ಆಗೋದು ಅಷ್ಟೊಂ

‘ಕೃಷಿ ಮಾಡೋಣ ಅಂದ್ರೆ ಬೆಳೆದ ಬೆಳೆಗೆ ಬೆಲೆ ಸಿಗ್ತಿಲ್ಲ, ಈ ಕಂಪನಿಯಲ್ಲೇ ಕೆಲಸ ಮಾಡ್ಕೊಂಡಿರೋಣ ಅಂದ್ರೆ ಸ್ಯಾಲರಿ ಹೈಕ್ ಮಾಡ್ತಿಲ್ಲ, ಯಾವುದಾದರೂ ಬಿಸಿನೆಸ್ ಮಾಡೋಣ ಅಂದ್ರೆ ಬಂಡವಾಳ ಇಲ್ಲ. ಏನ್ ಮಾಡಬೇಕು ಅಂತಾನೇ ತಿಳೀತಿಲ್ಲ’ ಎಂದು ಒಂದೇ ಉಸಿರಿನಲ್ಲಿ ಮಾತಾಡ್ತಿದ್ದ ಮುದ್ದಣ್ಣ.‘ಸುಮ್ಮನೆ ರಾಜಕಾರಣಿ ಆಗಿಬಿಡು’ ಸಲಹೆ ನೀಡಿದ ಸ್ನೇಹಿತ ವಿಜಿ.‘ರಾಜಕಾರಣಿ ಆಗೋದು ಅಷ್ಟೊಂದು ಸುಲಭವಾ? ಪೊಲಿಟಿಷಿಯನ್ ಆಗಬೇಕು ಅಂದ್ರೆ ಏನ್ ಮಾಡಬೇಕು?’‘ಏನಿಲ್ಲ, ಜನರನ್ನ ಹೆದರಿಸ್ತಿರಬೇಕು. ನಮ್ಮ ದೇಶ, ರಾಜ್ಯ, ಭಾಷೆ ಅಪಾಯದಲ್ಲಿದೆ ಅಂತಿರಬೇಕು’.‘ದೇಶಕ್ಕಿಂತ ಜನ ತಾನೇ ಹೆಚ್ಚು ಅಪಾಯದಲ್ಲಿರೋದು. ಅಕ್ಕಿ ರೇಟು ಇನ್ನೂ ಜಾಸ್ತಿ ಆಗುತ್ತಂತೆ, ಇನ್ನೆರಡು ತಿಂಗಳಲ್ಲಿ ದುಡ್ಡು ಕೊಡ್ತೀವಂದ್ರೂ ಸೊಪ್ಪು, ತರಕಾರೀನೆ ಸಿಗಲ್ವಂತೆ’.‘ಏಯ್, ಜನರ ಬದುಕಿಗೆ ಸಂಬಂಧಿಸಿರೋ ಇಂತಹ ಪ್ರಶ್ನೆಗಳನ್ನೆಲ್ಲ ಕೇಳಬಾರದು, ಭಾವನೆಗೆ ಸಂಬಂಧಿಸಿದ್ದಷ್ಟೇ ಮಾತಾಡಬೇಕು’.‘ಸರಿ, ಸರಿ. ಮತ್ತೆ ಈ ರಾಜಕೀಯ ವಿರೋಧಿಗಳನ್ನ ಮಟ್ಟ ಹಾಕೋದು ಹೇಗೆ?’‘ಏನಿಲ್ಲ, ನೀನು ಯಾರನ್ನ ದ್ವೇಷಿಸ್ತೀಯೋ ಅವರನ್ನ ಹೊಗಳೋಕೆ ಸ್ಟಾರ್ಟ್ ಮಾಡು. ಪಾಪ, ಎಷ್ಟೊಳ್ಳೆ ಮನುಷ್ಯ, ಅನ್ಯಾಯವಾಗಿ ಅವನ ಚಾರಿತ್ರ್ಯವಧೆ ಮಾಡಿದರು. ಅಂಥ ವ್ಯಕ್ತಿಯ ಹುಳುಕುಗಳೆಲ್ಲ ಹೊರ ಹಾಕಿ ಅವಮಾನ ಮಾಡಿದ್ರು ಅಂತಿರು’.‘ಓಹ್, ಹೀಗೇ ಸಪೋರ್ಟ್ ಮಾಡುವವರಂತೆ ಹೇಳಿ ಹೇಳಿ, ನಾವೇ ಅವರ ಕ್ಯಾರೆಕ್ಟರ್ ಹಾಳು ಮಾಡಿಬಿಡಬೇಕು ಅಂತೀಯಾ?’‘ಯೆಸ್. ಈಗ ಟ್ರ್ಯಾಕ್ಗೆ ಬಂದೆ ನೀನು’.‘ಮತ್ತೆ ನಾನೇನಾದರೂ ಆಡಳಿತ ಪಕ್ಷದಲ್ಲಿದ್ದು, ಅವರೆಲ್ಲ ನನ್ನನ್ನ ಪ್ರಶ್ನೆ ಮಾಡಿದ್ರೆ?’‘ಅಪೋಸಿಶನ್ ವಿರುದ್ಧ ನೀನೇ ಪ್ರೊಟೆಸ್ಟ್ ಮಾಡೋಕೆ ಶುರು ಮಾಡು’.‘ಸರ್ಕಾರದಲ್ಲಿದ್ದೂ ನೀವೇ ಹೆಂಗೆ ಪ್ರತಿಭಟನೆ ಮಾಡ್ತೀರಿ ಅಂತ ಜನ ಕೇಳಿದ್ರೆ?’‘ನಮಗೆ ಹಕ್ಕಿಲ್ವ, ನಮಗೆ ವಾಕ್ ಸ್ವಾತಂತ್ರ್ಯ ಇಲ್ಲವಾ ಅಂತ ಕೇಳು’ ಎಂದು ವಿಜಿ ಹೇಳುತ್ತಿದ್ದಂತೆ, ‘ಮತದಾರರ ಕಥೆ ಅಧೋಗತಿ’ ಎಂದು ನಕ್ಕ ಮುದ್ದಣ್ಣ.