ವಿಧಾನಸೌಧ:110 ಕನ್ನಡ ನುಡಿ ಫಲಕ ಅಳವಡಿಕೆ
ಪ್ರಜಾವಾಣಿ ವಾರ್ತೆಬೆಂಗಳೂರು: ಆಡಳಿತ ಕೇಂದ್ರವಾದ ವಿಧಾನಸೌಧದಲ್ಲಿ ಕನ್ನಡ ಭಾಷೆಯ ಘನತೆ, ಕನ್ನಡ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಕನ್ನಡದ ಚಿಂತನಾ ಪರಂಪರೆಯನ್ನು ಸಾರುವ 110 ಕನ್ನಡ ನುಡಿ ಫಲಕಗಳನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿ

ಪ್ರಜಾವಾಣಿ ವಾರ್ತೆಬೆಂಗಳೂರು: ಆಡಳಿತ ಕೇಂದ್ರವಾದ ವಿಧಾನಸೌಧದಲ್ಲಿ ಕನ್ನಡ ಭಾಷೆಯ ಘನತೆ, ಕನ್ನಡ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಕನ್ನಡದ ಚಿಂತನಾ ಪರಂಪರೆಯನ್ನು ಸಾರುವ 110 ಕನ್ನಡ ನುಡಿ ಫಲಕಗಳನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿರುವ ವಿಧಾನಸೌಧವು ಕೇವಲ ಆಡಳಿತದ ಕಟ್ಟಡವಲ್ಲ, ಅದು ಕನ್ನಡ ನಾಡಿನ ಸ್ವಾಭಿಮಾನ, ಇತಿಹಾಸ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕವೂ ಹೌದು. ಕಟ್ಟಡದ ಆಯ್ದ ಸ್ಥಳಗಳಲ್ಲಿ ಕನ್ನಡದ ಮಹತ್ವದ ಚಿಂತನೆಗಳು ಮತ್ತು ಮೌಲ್ಯಗಳನ್ನು ಸಾರುವ ನುಡಿ ಫಲಕಗಳನ್ನು ಅಳವಡಿಸಲಾಗಿದೆ. ಆಡಳಿತ ಕೇಂದ್ರದಲ್ಲಿ ಕನ್ನಡದ ಧ್ವನಿ ನಿರಂತರವಾಗಿ ಮೊಳಗಬೇಕೆಂಬ ಆಶಯ ಈ ಯೋಜನೆಯ ಹಿಂದಿದೆ’ ಎಂದರು.‘ರಾಜ್ಯದ ಎರಡನೆಯ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ದೂರದೃಷ್ಟಿ ಮತ್ತು ಸಂಕಲ್ಪದ ಫಲವಾಗಿ ನಿರ್ಮಾಣಗೊಂಡಿರುವ ವಿಧಾನಸೌಧವು ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಪಂಪ, ಅಲ್ಲಮ, ಬಸವಣ್ಣ, ಕುವೆಂಪು, ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು, ಕೆಂಗಲ್ ಹನುಮಂತಯ್ಯ, ಸಿದ್ದಲಿಂಗಯ್ಯ, ಜಯದೇವಿತಾಯಿ ಲಿಗಾಡೆ, ಆರ್.ಕಲ್ಯಾಣಮ್ಮ ಸೇರಿದಂತೆ 55 ಸಾಹಿತಿಗಳು, ಚಿಂತಕರು ಹಾಗೂ ಮಹನೀಯರ ಬರಹಗಳಿಂದ ಘೋಷವಾಕ್ಯಗಳನ್ನು ಆಯ್ಕೆ ಮಾಡಿ, ಈ ಕಟ್ಟಡಕ್ಕೆ ಅಳವಡಿಸಲಾಗಿದೆ. ಇವು ಕೇವಲ ಅಲಂಕಾರಿಕ ಫಲಕಗಳಲ್ಲ, ಕನ್ನಡ ನಾಡಿನ ಚಿಂತನೆ, ಮಾನವೀಯ ಮೌಲ್ಯ, ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಸಂದೇಶಗಳಾಗಿವೆ’ ಎಂದು ಬಿಳಿಮಲೆ ತಿಳಿಸಿದರು.‘ವಿಧಾನಸೌಧಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಕನ್ನಡದ ಮಹತ್ವದ ಚಿಂತನೆಗಳು ಪರಿಚಯವಾಗಬೇಕು. ಆಡಳಿತಸೌಧಗಳ ಗೋಡೆಗಳು ಕನ್ನಡ ನುಡಿ, ನಾಡಿನ ಮೌಲ್ಯಗಳ ಕುರಿತಂತೆ ಮಾತನಾಡುವಂತಾಗಬೇಕು. ಕನ್ನಡದ ಸಾರ್ವಭೌಮತ್ವವನ್ನು ಸಾರ್ವಜನಿಕ ಬದುಕಿನ ಪ್ರತಿಯೊಂದು ವಲಯದಲ್ಲಿಯೂ ಪ್ರತಿಪಾದಿಸುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಇಂತಹ ಪ್ರಯತ್ನಗಳ ಉದ್ದೇಶವಾಗಿದೆ’ ಎಂದು ಹೇಳಿದರು.‘ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ಹಾಗೂ ತಾಲ್ಲೂಕು ಸೌಧಗಳ ಪಡಸಾಲೆಗಳಲ್ಲಿ ಕನ್ನಡದ ನುಡಿ ಫಲಕಗಳನ್ನು ಅಳವಡಿಸಲು ಸರ್ಕಾರದ ವತಿಯಿಂದ ಸೂಕ್ತ ನಿರ್ದೇಶನ ನೀಡಲಾಗುವುದು. ಈ ಬಗ್ಗೆ ಪ್ರಾಧಿಕಾರವು ಮುದ್ರಿಸುತ್ತಿರುವ ಕನ್ನಡ ನುಡಿ ಫಲಕಗಳ ಕಿರುಹೊತ್ತಿಗೆಯನ್ನು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು’ ಎಂದರು.ಈ ಸಂದರ್ಭದಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ಸತೀಶ್ ಜಾರಕಿಹೊಳಿ, ರಿಜ್ವಾನ್ ಅರ್ಷದ್, ಯು.ಟಿ.ಖಾದರ್, ಮಧು ಬಂಗಾರಪ್ಪ, ಪ್ರಿಯಾಂಕ್ ಖರ್ಗೆ, ಜಮೀರ್ ಅಹಮ್ಮದ್, ರಾಮಲಿಂಗಾರೆಡ್ಡಿ, ಎಚ್.ಸಿ. ಬಾಲಕೃಷ್ಣ, ಕೆ.ಎಚ್. ಮುನಿಯಪ್ಪ ಪಾಲ್ಗೊಂಡಿದ್ದರು.