ಹಾವೇರಿ | ರಾಷ್ಟ್ರೀಯ ಪಕ್ಷವೊಂದರ ಮುಖಂಡನಿಗೆ ಹನಿಟ್ರ್ಯಾಪ್: ₹2 ಕೋಟಿಗೆ ಬೇಡಿಕೆ
ಹಾವೇರಿ: ಸಿ.ಸಿ.ಟಿ.ವಿ ಕ್ಯಾಮೆರಾ ಮಾರಾಟದ ಉದ್ಯಮಕ್ಕೆ ₹ 25 ಲಕ್ಷ ಹೂಡಿಕೆ ಮಾಡುವುದಾಗಿ ಹೇಳಿ ರಾಷ್ಟ್ರೀಯ ಪಕ್ಷವೊಂದರ ಹಾವೇರಿಯ ಮುಖಂಡರೊಬ್ಬರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ಮಹಿಳೆಯೊಬ್ಬರು, ತಮ್ಮ ಸಹಚರರ ಜೊತೆ ಸೇರಿ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ₹ 2 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‘ಹಾವೇರಿಯ ಉದ್ಯಮಿ

ಹಾವೇರಿ: ಸಿ.ಸಿ.ಟಿ.ವಿ ಕ್ಯಾಮೆರಾ ಮಾರಾಟದ ಉದ್ಯಮಕ್ಕೆ ₹ 25 ಲಕ್ಷ ಹೂಡಿಕೆ ಮಾಡುವುದಾಗಿ ಹೇಳಿ ರಾಷ್ಟ್ರೀಯ ಪಕ್ಷವೊಂದರ ಹಾವೇರಿಯ ಮುಖಂಡರೊಬ್ಬರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ಮಹಿಳೆಯೊಬ್ಬರು, ತಮ್ಮ ಸಹಚರರ ಜೊತೆ ಸೇರಿ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ₹ 2 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‘ಹಾವೇರಿಯ ಉದ್ಯಮಿಯೂ ಆಗಿರುವ 46 ವರ್ಷ ವಯಸ್ಸಿನ ಮುಖಂಡ, ಹನಿಟ್ರ್ಯಾಪ್ ಕುರಿತು ಬೆಂಗಳೂರಿನ ರಾಜರಾಜೇಶ್ವರಿ ಠಾಣೆಗೆ ದೂರು ನೀಡಿದ್ದಾರೆ. ಶ್ರೀನಿಧಿ ಹೆಸರಿನ ಮಹಿಳೆ ಸೇರಿ ಎಂಟು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆಯೂ ನಡೆಯುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.‘ಸಾಮಾಜಿಕ ಮಾಧ್ಯಮದ ಖಾತೆ ಮೂಲಕ ಪರಿಚಯವಾಗಿದ್ದ ಮಹಿಳೆ, ಹಾವೇರಿಯಿಂದ ಉದ್ಯಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಕೃತ್ಯ ಎಸಗಿದ್ದಾರೆ. ದೂರುದಾರರನ್ನು ಅರೆಬೆತ್ತಲೆಗೊಳಿಸಿ, ಅವರಿಂದ ಎರಡು ಚಿನ್ನದ ಉಂಗುರಗಳನ್ನು ಕಿತ್ತುಕೊಂಡಿದ್ದಾರೆ. ₹ 2 ಕೋಟಿ ನೀಡುವಂತೆ ಬೆದರಿಸಿ, ಮನೆಯಿಂದ ಬಿಟ್ಟು ಕಳುಹಿಸಿದ್ದಾರೆ. ಹಣ ಹೊಂದಿಸಲು ಮುಂದಾಗಿದ್ದ ಮುಖಂಡ, ಸ್ನೇಹಿತರ ಸಲಹೆಯಂತೆ ಠಾಣೆಗೆ ದೂರು ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.ದೂರಿನಲ್ಲಿ ಏನಿದೆ? ‘ಹಾವೇರಿಯಲ್ಲಿ ಕಂಪನಿ ನಡೆಸುತ್ತಿದ್ದೇನೆ. ನನ್ನ ಕಂಪನಿಗೆ ಕೆಲಸಗಾರರು ಬೇಕಾಗಿದ್ದಾರೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡಿದ್ದೆ. ಅದೇ ಜಾಹೀರಾತು ಗಮನಿಸಿದ್ದ ಮಹಿಳೆ, ಮೂರು ತಿಂಗಳ ಹಿಂದೆ ನನಗೆ ಕರೆ ಮಾಡಿದ್ದಳು. ಕೆಲಸ ಕೊಡಿಸುವಂತೆ ಕೋರಿದ್ದಳು. ನಂತರ, ಇಬ್ಬರೂ ಮೊಬೈಲ್ನಲ್ಲಿ ಚಾಟಿಂಗ್ ಮಾಡುತ್ತಿದ್ದೆವು. ಆಕೆಯನ್ನು ಫೋಟೊಗಳಲ್ಲಿ ನೋಡಿದ್ದೆ’ ಎಂದು ಮುಖಂಡ, ದೂರಿನಲ್ಲಿ ತಿಳಿಸಿದ್ದಾರೆ.‘ನನ್ನ ಉದ್ಯಮದ ಬಗ್ಗೆ ತಿಳಿದುಕೊಂಡಿದ್ದ ಮಹಿಳೆ, ಕಂಪನಿಯಲ್ಲಿ ₹ 25 ಲಕ್ಷ ಹೂಡಿಕೆ ಮಾಡುವುದಾಗಿ ಹೇಳಿದ್ದಳು. ತನಗೆ ತಿಂಗಳಿಗೆ ₹ 50 ಸಾವಿರ ಲಾಭ ನೀಡುವಂತೆ ಬೇಡಿಕೆ ಇರಿಸಿದ್ದಳು. ಅದಕ್ಕೆ ನಾನೂ ಒಪ್ಪಿದ್ದೆ. ಈ ಬಗ್ಗೆ ಮಾತನಾಡಲೆಂದು ಮಹಿಳೆ, ಬೆಂಗಳೂರಿಗೆ ಬರುವಂತೆ ಆಹ್ವಾನಿಸಿದ್ದಳು’ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.‘ವ್ಯವಹಾರದ ಕುರಿತು ಚರ್ಚಿಸಲು ಅಕ್ಟೋಬರ್ 28ರಂದು ಬೆಂಗಳೂರಿಗೆ ಹೋಗಿದ್ದೆ. ಅಪೊಲೊ ಆಸ್ಪತ್ರೆಯಲ್ಲಿ ಪರಿಚಯಸ್ಥರೊಬ್ಬರು ಚಿಕಿತ್ಸೆ ಪಡೆಯುತ್ತಿದ್ದರಿಂದ, ಅವರನ್ನು ಮಾತನಾಡಿಸಲು ಹೋದೆ. ಮಧ್ಯಾಹ್ನ ಕರೆ ಮಾಡಿದ್ದ ಮಹಿಳೆ, ರಾಜರಾಜೇಶ್ವರಿನಗರಕ್ಕೆ ಬರುವಂತೆ ಲೋಕೇಷನ್ ಕಳುಹಿಸಿದ್ದಳು. ಅದರಂತೆ, ಸಂಜೆ 7 ಗಂಟೆಗೆ ಆಲ್ಬೆಕ್ ಹೋಟೆಲ್ ಬಳಿ ಹೋಗಿದ್ದೆ. ನನ್ನನ್ನು ಮಹಿಳೆಯೇ ಸಮೀಪದಲ್ಲಿದ್ದ ತನ್ನ ಮನೆಗೆ ಕರೆದೊಯ್ದಿಳು.’‘ಮನೆಗೆ ಹೋದಾಗ, ಮೂವರು ಮಹಿಳೆಯರು ಅಲ್ಲಿದ್ದರು. ನಾನು ಬಂದಿದ್ದನ್ನು ನೋಡಿ, ಅವರೆಲ್ಲರೂ ಹೊರಟು ಹೋದರು. ಸ್ವಲ್ಪ ಹೊತ್ತಿನ ನಂತರ ಮಹಿಳೆಯು ನನ್ನನ್ನು ಕೊಠಡಿಗೆ ಕರೆದೊಯ್ದಳು. ಬಲವಂತವಾಗಿ ಬಟ್ಟೆಗಳನ್ನು ಬಿಚ್ಚಿಸಿ ನಗ್ನಗೊಳಿಸಿದಳು. ಕೊಠಡಿ ಬಾಗಿಲು ಹಾಕಿರಲಿಲ್ಲ. ಕೆಲ ನಿಮಿಷಗಳಲ್ಲಿಯೇ ಏಳು ಮಂದಿ ಗಂಡಸರು, ಕೊಠಡಿಯೊಳಗೆ ಬಂದರು. ಮೊಬೈಲ್ನಲ್ಲಿ ನನ್ನ ವಿಡಿಯೊ ಚಿತ್ರೀಕರಿಸಿಕೊಂಡರು. ಮಹಿಳೆಯನ್ನು ಮದುವೆಯಾಗಬೇಕು. ಇಲ್ಲದಿದ್ದರೆ, ನಿನ್ನನ್ನು ಬಿಡುವುದಿಲ್ಲವೆಂದು ಬೆದರಿಸಿದರು. ನಂತರ, ₹ 2 ಕೋಟಿ ನೀಡುವಂತೆಯೂ ಬೇಡಿಕೆ ಇಟ್ಟರು. ಅಷ್ಟು ಹಣವಿಲ್ಲವೆಂದು ಹೇಳಿದೆ. ಆಗ ಕೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ಕಸಿದುಕೊಂಡರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.‘ಹಣ ಹೊಂದಿಸಿಕೊಂಡು ತಂದುಕೊಡುವಂತೆ ಆರೋಪಿಗಳು ಬೇಡಿಕೆ ಇಟ್ಟರು. ನಂತರ, ಬೆಂಗಳೂರಿನಲ್ಲಿದ್ದ ಹಾವೇರಿಯ ವ್ಯಕ್ತಿಯೊಬ್ಬರನ್ನು ಸ್ಥಳಕ್ಕೆ ಕರೆಸಿಕೊಂಡು ಅವರ ಜೊತೆಗೆ ಮನೆಯಿಂದ ಹೊರಗೆ ಬಂದೆ. ₹ 2 ಕೋಟಿ ಹಣ ಹೊಂದಿಸಲು, ಅವರಿವರ ಬಳಿ ಕೇಳಲಾರಂಭಿಸಿದೆ. ಆದರೆ, ಇದೊಂದು ಹನಿಟ್ರ್ಯಾಪ್ ಜಾಲವೆಂಬುದು ಸ್ನೇಹಿತರಿಂದ ಗೊತ್ತಾಯಿತು. ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ’ ಎಂದು ಮುಖಂಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಹಾವೇರಿ ವ್ಯಕ್ತಿ ಶಾಮೀಲು‘ಹಾವೇರಿ ಜಿಲ್ಲೆಯ ಉದ್ಯಮಿಗಳು ಹಾಗೂ ಕೆಲ ಶ್ರೀಮಂತರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡುವ ಜಾಲ ಸಕ್ರಿಯವಾಗಿದೆ. ಇದರಲ್ಲಿ ಹಾವೇರಿಯ ವ್ಯಕ್ತಿಯೊಬ್ಬರು ಶಾಮೀಲಾಗಿರುವ ಮಾಹಿತಿಯಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ದೂರುದಾರ ಮುಖಂಡ ತಿಳಿಸಿದರು.‘ಹಾವೇರಿಯ ಕೆಲವರು, ಮಹಿಳೆಯ ಹನಿಟ್ರ್ಯಾಕ್ ಜಾಲಕ್ಕೆ ಸಿಲುಕಿ ದುಡ್ಡು ಕೊಟ್ಟಿದ್ದಾರೆ. ಇನ್ನು ಹಲವರು ಸಾಕಷ್ಟು ನೊಂದಿದ್ದಾರೆ. ಮರ್ಯಾದೆಗೆ ಹೆದರಿ ದೂರು ನೀಡಿಲ್ಲ. ಈಗ, ಅವರೂ ದೂರು ನೀಡಲು ಮುಂದೆ ಬರುತ್ತಿದ್ದಾರೆ’ ಎಂದರು.