904 ಕೋಟಿ ರೂ. ಬ್ಯಾಂಕ್ ವಂಚನೆ ಕೇಸ್ – ಉದ್ಯಮಿ ಕಿಶೋರ್ ಬಿಯಾನಿ ವಿರುದ್ಧ CBI ಎಫ್ಐಆರ್
ನವದೆಹಲಿ: 904 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಕಿಶೋರ್ ಬಿಯಾನಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಸಿಬಿಐ (CBI) ‘ಫ್ಯೂಚರ್ ರಿಟೇಲ್ ಲಿಮಿಟೆಡ್’ (Future Retail Ltd) ಮತ್ತು ಪ್ರಮುಖ ಉದ್ಯಮಿ ಕಿಶೋರ್ ಬಿಯಾನಿ ವಿರುದ್ಧ ಪ್ರಕರಣ ದಾಖಲಿಸಿದೆ. ಅಲ್ಲದೇ, ಶುಕ್ರವಾರ ಮುಂಬೈನಲ್ಲಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ

ನವದೆಹಲಿ: 904 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಕಿಶೋರ್ ಬಿಯಾನಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಸಿಬಿಐ (CBI) ‘ಫ್ಯೂಚರ್ ರಿಟೇಲ್ ಲಿಮಿಟೆಡ್’ (Future Retail Ltd) ಮತ್ತು ಪ್ರಮುಖ ಉದ್ಯಮಿ ಕಿಶೋರ್ ಬಿಯಾನಿ ವಿರುದ್ಧ ಪ್ರಕರಣ ದಾಖಲಿಸಿದೆ. ಅಲ್ಲದೇ, ಶುಕ್ರವಾರ ಮುಂಬೈನಲ್ಲಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಂಚನೆಗಾಗಿ ನಡೆಸಿದ ಅಪರಾಧ ಪಿತೂರಿ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಬರುವ ಅಪರಾಧಗಳಿಗೆ ಸಂಬಂಧಿಸಿದಂತೆ ದಾಖಲಿಸಲಾದ ಪ್ರಕರಣದಲ್ಲಿ, ಸಿಬಿಐ ಆತನ ಸಹೋದರ ರಾಕೇಶ್ ಬಿಯಾನಿ ವಿರುದ್ಧವೂ ಪ್ರಕರಣ ದಾಖಲಿಸಿದೆ ಎಂದು ತಿಳಿಸಿದ್ದಾರೆ. ಎಫ್ಐಆರ್ ಸಂಬಂಧ ಕಂಪನಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎಸ್ಬಿಐ (SBI) ಸಲ್ಲಿಸಿದ ದೂರಿನ ಪ್ರಕಾರ, ಆರೋಪಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಒಂಬತ್ತು ಬ್ಯಾಂಕುಗಳ ಒಕ್ಕೂಟದಿಂದ ಸಾಲ ಸೌಲಭ್ಯಗಳನ್ನು ಪಡೆಯಲು ಅಪರಾಧ ಪಿತೂರಿ ನಡೆಸಿದ್ದಾರೆ ಎಂದು ಸಿಬಿಐ (CBI) ಆರೋಪಿಸಿದೆ. ಫ್ಯೂಚರ್ ರಿಟೇಲ್, ಬಿಗ್ ಬಜಾರ್, ಫ್ಯಾಷನ್@ಬಿಗ್ ಬಜಾರ್ ಮತ್ತು ಫುಡ್ಹಾಲ್ನಂತಹ ಹೈಪರ್ಮಾರ್ಕೆಟ್ಗಳು ಹಾಗೂ ಸೂಪರ್ಮಾರ್ಕೆಟ್ಗಳನ್ನು ಒಳಗೊಂಡಂತೆ ವಿವಿಧ ರೀತಿಯ ಚಿಲ್ಲರೆ ಮಾರಾಟ ಮಳಿಗೆಗಳನ್ನು ನಿರ್ವಹಿಸುತ್ತಿತ್ತು. ಅಲ್ಲದೆ, ತನ್ನ ಮಳಿಗೆಗಳ ಮೂಲಕ ಎಫ್ಎಂಸಿಜಿ ಮತ್ತು ಫ್ಯಾಷನ್ ಸರಕುಗಳ ಸಾಮಾನ್ಯ ವ್ಯಾಪಾರದಲ್ಲೂ ಅದು ತೊಡಗಿಸಿಕೊಂಡಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬ್ಯಾಂಕ್ನಿಂದ ಮಂಜೂರಾದ ಹಣವನ್ನು, ಯಾವ ಉದ್ದೇಶಕ್ಕಾಗಿ ನೀಡಲಾಗಿತ್ತೋ ಆ ಉದ್ದೇಶಕ್ಕೆ ಕಂಪನಿಯು ಬಳಸಿಲ್ಲ ಎಂದು ಸಿಬಿಐ ಆರೋಪಿಸಿದೆ.