ಬೆಂಗಳೂರು: ಎಲ್ಇಡಿ ಬೀದಿ ದೀಪ; ₹100 ಕೋಟಿ ಉಳಿತಾಯ
ಬೆಂಗಳೂರು: ಇಂಧನ ದಕ್ಷ ಎಲ್ಇಡಿ ತಂತ್ರಜ್ಞಾನ, ಅತ್ಯಾಧುನಿಕ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (ಸಿಸಿಎಂಎಸ್) ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಿಂದ ಸುಮಾರು ₹100 ಕೋಟಿ (ಶೇ 54ರಷ್ಟು) ಉಳಿತಾಯವಾಗುವ ನಿರೀಕ್ಷೆಯಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ದಕ್ಷಿಣ ನಗರ ಪಾಲಿಕೆಯಿಂದ ಜಯನಗರದಲ್ಲಿ ಮ

ಬೆಂಗಳೂರು: ಇಂಧನ ದಕ್ಷ ಎಲ್ಇಡಿ ತಂತ್ರಜ್ಞಾನ, ಅತ್ಯಾಧುನಿಕ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (ಸಿಸಿಎಂಎಸ್) ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಿಂದ ಸುಮಾರು ₹100 ಕೋಟಿ (ಶೇ 54ರಷ್ಟು) ಉಳಿತಾಯವಾಗುವ ನಿರೀಕ್ಷೆಯಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ದಕ್ಷಿಣ ನಗರ ಪಾಲಿಕೆಯಿಂದ ಜಯನಗರದಲ್ಲಿ ಮೊದಲ ಸಿಸಿಎಂಎಸ್ಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.ಸಾರ್ವಜನಿಕ ಬೆಳಕಿನ ವ್ಯವಸ್ಥೆ ಸುಧಾರಿಸುವ ಮತ್ತು ವಿದ್ಯುತ್ ಬಳಕೆ ಕಡಿಮೆ ಮಾಡುವ ಗುರಿಯನ್ನು ಯೋಜನೆ ಹೊಂದಿದೆ. ಈ ತಂತ್ರಜ್ಞಾನದ ಪ್ರಮುಖ ವೈಶಿಷ್ಟ್ಯವೆಂದರೆ, ದೋಷಯುಕ್ತ ಅಥವಾ ಕಾರ್ಯನಿರ್ವಹಿಸದ ಬೀದಿ ದೀಪಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚುವ ಸಾಮರ್ಥ್ಯ. ಇದರಿಂದ ಸಾರ್ವಜನಿಕರು ದೂರು ಸಲ್ಲಿಸುವವರೆಗೆ ಕಾಯದೆ, ತಾಂತ್ರಿಕ ತಂಡಗಳೇ ದೋಷಗಳನ್ನು ಗುರುತಿಸಿ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ವಿವರಿಸಿದರು.ಬೆಂಗಳೂರಿನಲ್ಲಿ ನಾಗರಿಕರಿಂದ ಅತಿ ಹೆಚ್ಚು ದೂರುಗಳು ದಾಖಲಾಗುತ್ತಿರುವ ಸಮಸ್ಯೆಗಳಲ್ಲಿ ಬೀದಿ ದೀಪಗಳ ಸಮರ್ಪಕ ಕಾರ್ಯನಿರ್ವಹಣೆಯ ಕೊರತೆಯೂ ಒಂದಾಗಿದೆ. ಬೀದಿ ದೀಪಗಳ ಕಾರ್ಯಕ್ಷಮತೆಯನ್ನು ಸುಧಾರಿಸುವುದರಿಂದ ಮೂಲಭೂತ ನಗರ ಸೇವೆಗಳ ಗುಣಮಟ್ಟ ಹೆಚ್ಚುವುದರ ಜೊತೆಗೆ, ಉತ್ತಮ ಬೆಳಕಿನ ವ್ಯವಸ್ಥೆಯು ನಗರದ ನಿವಾಸಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.ಗುರುತಿಸಲಾದ ದೋಷಗಳು ಹಾಗೂ ನಾಗರಿಕರಿಂದ ಸ್ವೀಕರಿಸಲಾದ ದೂರುಗಳನ್ನು ಪರಿಹರಿಸಲು ಪ್ರತ್ಯೇಕ ಕ್ಷೇತ್ರ ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗುತ್ತದೆ. ದೋಷ ಪತ್ತೆಯಾದ ಅಥವಾ ದೂರು ದಾಖಲಾದ 24ರಿಂದ 48 ಗಂಟೆಗಳ ಒಳಗಾಗಿ ಸಮಸ್ಯೆಯನ್ನು ಪರಿಹರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ನಿಗದಿತ ಕಾಲಮಿತಿಯೊಳಗೆ ದೋಷಗಳನ್ನು ಸರಿಪಡಿಸಲು ವಿಫಲವಾದಲ್ಲಿ, ನಿರ್ವಹಣಾ ಗುತ್ತಿಗೆದಾರರಿಗೆ ಸ್ವಯಂಚಾಲಿತವಾಗಿ ದಂಡ ವಿಧಿಸುವ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ ಎಂದರು.ಈ ಯೋಜನೆಯಡಿ ಸಾಂಪ್ರದಾಯಿಕ ಬೀದಿ ದೀಪಗಳನ್ನು ಇಂಧನ ದಕ್ಷ ಎಲ್ಇಡಿ ದೀಪಗಳಾಗಿ ಬದಲಾಯಿಸುವುದರ ಜೊತೆಗೆ, ಈಗಾಗಲೇ ಅಳವಡಿಸಲಾಗಿರುವ ಎಲ್ಇಡಿ ಬೀದಿ ದೀಪಗಳನ್ನು ಜಿಎಸ್ಎಂ ಸೌಲಭ್ಯ ಹೊಂದಿರುವ ಇಂಟರ್ನೆಟ್ ಆಫ್ ಥಿಂಗ್ಸ್ ಆಧಾರಿತ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಗೆ ಸಂಪರ್ಕಿಸಲಾಗುತ್ತಿದೆ ಎಂದು ತಿಳಿಸಿದರು.ಅತ್ಯಾಧುನಿಕ ಸಿಸಿಎಂಎಸ್ ವ್ಯವಸ್ಥೆಯ ಮೂಲಕ ಎಲ್ಲಾ ಬೀದಿ ದೀಪಗಳನ್ನು ಕೇಂದ್ರೀಕೃತವಾಗಿ ಹಾಗೂ ಪ್ರತ್ಯೇಕವಾಗಿ ಮೇಲ್ವಿಚಾರಣೆ ಮಾಡಬಹುದು. ಬೆಳಗದ ಮತ್ತು ಭಾಗಶಃ ಬೆಳಗುವ ಬೀದಿ ದೀಪಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ ಸೌಲಭ್ಯಗಳನ್ನು ಈ ವ್ಯವಸ್ಥೆ ಒಳಗೊಂಡಿದೆ ಎಂದು ಹೇಳಿದರು.ಈ ಮಹತ್ವದ ಯೋಜನೆಯ ಮೊದಲ ಹಂತದ ಮೈಲಿಗಲ್ಲಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವತಿಯಿಂದ ಜಯನಗರದಲ್ಲಿ ಮೊದಲ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಇದು ತಂತ್ರಜ್ಞಾನ ಆಧಾರಿತ ಬೀದಿ ದೀಪಗಳ ನಿರ್ವಹಣೆ ಹಾಗೂ ನಗರ ಮೂಲಸೌಕರ್ಯಗಳ ದೋಷಗಳನ್ನು ಮುಂಚಿತವಾಗಿಯೇ ಗುರುತಿಸಿ ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು.