ಕೋಮುಲ್ ನೇಮಕಾತಿಯಲ್ಲಿ ಅಕ್ರಮ ಆರೋಪ: ಶಾಸಕ ನಂಜೇಗೌಡ ವಿರುದ್ಧದ ಪ್ರಕರಣ ರದ್ದು
ಬೆಂಗಳೂರು: ಅಕ್ರಮವಾಗಿ ಗೋಮಾಳ ಜಮೀನು ಮಂಜೂರು ಮಾಡಿದ ಮತ್ತು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ (ಕೋಮುಲ್) ನೇಮಕಾತಿಯಲ್ಲಿ ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.‘ಇ.

ಬೆಂಗಳೂರು: ಅಕ್ರಮವಾಗಿ ಗೋಮಾಳ ಜಮೀನು ಮಂಜೂರು ಮಾಡಿದ ಮತ್ತು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ (ಕೋಮುಲ್) ನೇಮಕಾತಿಯಲ್ಲಿ ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.‘ಇ.ಡಿ ದಾಖಲಿಸಿರುವ ಇಸಿಐಆರ್ (ಎನ್ಫೋರ್ಸ್ಮೆಂಟ್ ಕೇಸ್ ಇನ್ಫಾರ್ಮೇಶನ್ ರಿಪೋರ್ಟ್) ಮತ್ತು ಪಿಸಿಆರ್ಗಳನ್ನು ರದ್ದುಪಡಿಸಬೇಕು’ ಎಂದು ಕೋರಿ ಕೆ.ವೈ.ನಂಜೇಗೌಡ ಸಲ್ಲಿಸಿದ್ದ ನಾಲ್ಕು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿ ಆದೇಶಿಸಿದೆ.ವಿಚಾರಣೆ ವೇಳೆ ನಂಜೇಗೌಡ ಪರ ಪದಾಂಕಿತ ಹಿರಿಯ ವಕೀಲ ಕಿರಣ್ ಜವಳಿ, ‘ಗೋಮಾಳದ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಅರ್ಜಿದಾರರ ವಿರುದ್ಧ ಪೊಲೀಸರ ಪ್ರಕರಣ ದಾಖಲಿಸಿದ್ದರು ಮತ್ತು ಕೋಮುಲ್ ನಲ್ಲಿನ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿದೆ ಎಂದು ನಂಜೇಗೌಡರ ಮನೆ ಇ.ಡಿ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿತ್ತು. ಆದರೆ, ಮೂಲ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿ ರಿಪೋರ್ಟ್ ಸಲ್ಲಿಕೆಯಾಗಿರುವ ಕಾರಣ ಎಲ್ಲ ಆರೋಪಗಳೂ ಆಧಾರರಹಿತವಾಗಿವೆ. ಅಂತೆಯೇ, ಖಾಸಗಿ ದೂರು ದಾಖಲಿಸಲು ಇ.ಡಿಗೆ ಅಧಿಕಾರ ವ್ಯಾಪ್ತಿಯೂ ಇಲ್ಲ’ ಎಂದು ಪ್ರತಿಪಾದಿಸಿದ್ದರು.ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ ಎಲ್ಲ ಆರೋಪಗಳನ್ನೂ ರದ್ದುಪಡಿಸಿ ಆದೇಶಿಸಿದೆ. ನಂಜೇಗೌಡ ಪರ ಹೈಕೋರ್ಟ್ ವಕೀಲ ಸಿ.ಆರ್.ಮಹೇಂದ್ರ ಗೌಡ ವಕಾಲತ್ತು ವಹಿಸಿದ್ದರು.ಪ್ರಕರಣ: ‘ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇ.ಡಿ ನಂಜೇಗೌಡರ ನಿವಾಸ ಸೇರಿದಂತೆ ಇತರೆಡೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿತ್ತು. ‘ನಂಜೇಗೌಡ ಹಾಗೂ ಇತರರಿಗೆ ಸೇರಿದ ಒಟ್ಟು ₹1.32 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ’ ಎಂದು 2025ರಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು.