ಪೆಟ್ರೋಲ್: ಅತಿ ಎಥೆನಾಲ್
ಬೆಂಗಳೂರು: ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ತೈಲ ಕಂಪನಿಗಳು ರಾಜ್ಯದಲ್ಲಿ ಇ20 ಪೆಟ್ರೋಲ್ ಹೆಸರಿನಲ್ಲಿ ಇ30 ಮತ್ತು ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದನ್ನು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಪತ್ತೆಹಚ್ಚಿದೆ.ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಈ ಕುರ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ತೈಲ ಕಂಪನಿಗಳು ರಾಜ್ಯದಲ್ಲಿ ಇ20 ಪೆಟ್ರೋಲ್ ಹೆಸರಿನಲ್ಲಿ ಇ30 ಮತ್ತು ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದನ್ನು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಪತ್ತೆಹಚ್ಚಿದೆ.ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಸಹಿತ ಮಾಹಿತಿ ಹಂಚಿಕೊಂಡರು. ‘ಸರ್ಕಾರಿ ಸ್ವಾಮ್ಯದ ಐಒಸಿಎಲ್ ಮತ್ತು ಎಚ್ಪಿಸಿಎಲ್ನ ಪೆಟ್ರೋಲ್ ಬಂಕ್ಗಳಲ್ಲಿಯೇ ಅತಿಹೆಚ್ಚಿನ ಪ್ರಮಾಣದ ವಂಚನೆ ನಡೆಯುತ್ತಿದೆ’ ಎಂದರು.‘ರಾಜ್ಯದ ಪೆಟ್ರೋಲ್ ಬಂಕ್ಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣದ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ನಮ್ಮ ಇಲಾಖೆಗೆ ದೂರುಗಳು ಬಂದಿದ್ದವು. ರಾಜ್ಯದ ಆಯ್ದ ಬಂಕ್ಗಳಲ್ಲಿ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲಿಸಿದಾಗ, ಇ20 ಹೆಸರಿನಲ್ಲಿ ಇ30 ಪೆಟ್ರೋಲ್ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ’ ಎಂದು ತಿಳಿಸಿದರು.‘ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ದಕ್ಷಿಣ ಕನ್ನಡ ಮತ್ತು ತಮಕೂರಿನ 63 ಪೆಟ್ರೋಲ್ ಬಂಕ್ಗಳಲ್ಲಿ ಮಾದರಿ ಸಂಗ್ರಹಿಸಲಾಗಿತ್ತು. ಈ ಮಾದರಿಗಳನ್ನು ಆಯಾ ತೈಲ ಕಂಪನಿಗಳಿಗೂ ಕಳುಹಿಸಿ, ಮಾದರಿಯಲ್ಲಿನ ಎಥೆನಾಲ್ ಪ್ರಮಾಣ ಎಷ್ಟು ಎಂದು ತಿಳಿಸುವಂತೆ ಕೋರಲಾಗಿತ್ತು. ಕಂಪನಿಗಳು ಮಿಶ್ರಣದ ಪ್ರಮಾಣ ಸರಿಯಾಗಿ ಇದೆ ಎಂದಷ್ಟೇ ಉತ್ತರ ನೀಡಿದ್ದು, ದತ್ತಾಂಶವನ್ನು ನೀಡದೆ ಸತ್ಯವನ್ನು ಮುಚ್ಚಿಟ್ಟವು’ ಎಂದು ವಿವರಿಸಿದರು.‘ಕಂಪನಿಗಳಿಗೆ ಕಳುಹಿಸಿದ್ದ ಮಾದರಿಗಳನ್ನು, ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ನಿಗದಿಗಿಂತ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಿರುವುದು ಪತ್ತೆಯಾಯಿತು. ಆದರೆ, ಈ ಎಲ್ಲ ಪೆಟ್ರೋಲ್ ಅನ್ನು ಇ20 ಎಂದೇ ಮಾರಾಟ ಮಾಡಲಾಗಿತ್ತು’ ಎಂದು ಮಾಹಿತಿ ನೀಡಿದರು.‘ನಾವು ಪ್ರಯೋಗಾಲಯಕ್ಕೆ ಕಳುಹಿಸಿದ ಪ್ರತಿ ಐದು ಮಾದರಿಗಳ ಪೈಕಿ ನಾಲ್ಕರಲ್ಲಿ ಎಥೆನಾಲ್ ಮಿಶ್ರಣವು ಶೇ 20ಕ್ಕಿಂತ ಹೆಚ್ಚು ಇತ್ತು. ಈಗ ಕೆಲ ಮಾದರಿಗಳ ಪ್ರಯೋಗಾಲಯ ವರದಿಗಳನ್ನು ಬಿಡುಗಡೆ ಮಾಡಿದ್ದೇನೆ. ಈ ಎಲ್ಲ ವರದಿಗಳನ್ನು ಕೇಂದ್ರದ ಪೆಟ್ರೋಲಿಯಂ ಸಚಿವಾಲಯಕ್ಕೆ ಕಳುಹಿಸುತ್ತೇವೆ ಮತ್ತು ಈ ಕಂಪನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಒತ್ತಾಯಿಸುತ್ತೇವೆ’ ಎಂದರು. ‘ಗಡ್ಕರಿಗೆ ಪೆಟ್ರೋಲ್ ಚಿಂತೆಯೇಕೆ?’ ‘ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದ ಕುರಿತು ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಬೇಕಾಗಿದೆ. ಈ ಪ್ರಶ್ನೆಗಳಿಗೆ ಅವರಿಂದ ಬಹಿರಂಗವಾದ ಉತ್ತರಕ್ಕೆ ಒತ್ತಾಯಿಸಲಾಗುವುದು’ ಎಂದು ಹೇಳಿದ ರಿಜ್ವಾನ್ ಅರ್ಷದ್ ಹರದೀಪ್ ಸಿಂಗ್ ಪುರಿ ಅವರಿಗೆ ಸವಾಲು ಎಸೆದರು. ಸವಾಲುಗಳೇನು? *ಪೆಟ್ರೋಲಿಯಂ ಸಚಿವಾಲಯವನ್ನು ನಡೆಸುತ್ತಿರುವವರು ನೀವೋ ಅಥವಾ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೋ? ಪೆಟ್ರೋಲ್–ಎಥೆನಾಲ್ ಮಿಶ್ರಣದ ಬಗ್ಗೆ ಗಡ್ಕರಿ ಅವರೇ ಮಾತನಾಡುವುದು ಏಕೆ ಎಥೆನಾಲ್ ಮಿಶ್ರಣವನ್ನು ಅವರು ಸಮರ್ಥಿಸಿಕೊಳ್ಳುವುದು ಏಕೆ? * ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದಿಂದ ಆಗುವ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ನೀತಿ ಆಯೋಗ ಹೇಳಿದೆ. ಆದರೆ ಆ ಲಾಭವನ್ನು ತೈಲ ಕಂಪನಿಗಳು ಗ್ರಾಹಕರಿಗೆ ಏಕೆ ವರ್ಗಾಯಿಸುತ್ತಿಲ್ಲ? ಎಥೆನಾಲ್ ಮಿಶ್ರಣದಿಂದ ಇಂಧನದ ಬೆಲೆ ಇಳಿಕೆಯಾಗಿದ್ದರೆ ಪೆಟ್ರೋಲ್ ಬೆಲೆಯನ್ನು ನಿಮ್ಮ ಸಚಿವಾಲಯ ಏಕೆ ಇಳಿಸುತ್ತಿಲ್ಲ? * ಪೆಟ್ರೋಲ್ನಲ್ಲಿ ಶೇ 20ರಷ್ಟು (ಇ20) ಮಾತ್ರವೇ ಎಥೆನಾಲ್ ಮಿಶ್ರಣಕ್ಕೆ ಅನುಮತಿ ಇದೆ. ಹೀಗಿದ್ದೂ ಎಲ್ಲ ತೈಲ ಕಂಪನಿಗಳು ಶೇ 25 ಶೇ 26 ಶೇ 30 ಮತ್ತು ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುತ್ತಿರುವುದು ಏಕೆ? ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ತೈಲ ಕಂಪನಿಗಳ ಮೇಲೆ ಪೆಟ್ರೋಲಿಯಂ ಸಚಿವಾಲಯಕ್ಕೆ ನಿಯಂತ್ರಣ ಇಲ್ಲವೇ ಅಥವಾ ತಮಗೆ ಬೇಕಾದಷ್ಟು ಎಥೆನಾಲ್ ಮಿಶ್ರಣ ಮಾಡಲು ಕಂಪನಿಗಳಿಗೆ ಸ್ವಾತಂತ್ರ್ಯ ನೀಡಲಾಗಿದೆಯೇ? * ಇ20 ಮತ್ತು ಅದಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣದ ಪೆಟ್ರೋಲ್ ಬಳಕೆಯಿಂದ ವಾಹನಗಳಿಗೆ ಹಾನಿಯಾದರೆ ಅದರ ಹೊಣೆ ತಮ್ಮದು ಎಂದು ವಾಹನ ತಯಾರಕ ಕಂಪನಿಗಳು ಏಕೆ ಹೇಳುತ್ತಿಲ್ಲ? ರಿಪೇರಿ ವೆಚ್ಚವನ್ನು ವಿಮೆಯಿಂದ ಭರಿಸುತ್ತೇವೆ ಎಂದು ವಾಹನ ವಿಮಾ ಕಂಪನಿಗಳು ಏಕೆ ಘೋಷಿಸಿಲ್ಲ? ಈ ಗೊಂದಲವನ್ನು ನಿಮ್ಮ ಸಚಿವಾಲಯ ಬಗೆಹರಿಸುತ್ತಿಲ್ಲವೇಕೆ? ‘ಮತಗಳ್ಳರಿಂದ ಪೆಟ್ರೋಲ್ ಕಳವು’ ‘ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಮತಗಳ್ಳತನ ಮಾತ್ರವಲ್ಲ ಪೆಟ್ರೋಲ್ ಕಳವನ್ನೂ ಮಾಡುತ್ತಿದೆ. ಇ20 ಪೆಟ್ರೋಲ್ ಕಾರಣಕ್ಕೆ ದೇಶದ ಜನ ₹62,000 ಕೋಟಿಯಷ್ಟು ಹೆಚ್ಚು ಮೊತ್ತದ ಪೆಟ್ರೋಲ್ ಖರೀದಿಸಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರವು ಜನಸಾಮಾನ್ಯರ ಕಿಸೆಗೆ ಕನ್ನ ಹಾಕಿದೆ’ ಎಂದು ರಿಜ್ವಾನ್ ಅರ್ಷದ್ ಆರೋಪಿಸಿದರು. ‘ದೇಶದಲ್ಲಿನ ಶೇ 99ರಷ್ಟು ವಾಹನಗಳು ಇ20 ಪೆಟ್ರೋಲ್ ಬಳಕೆಯ ಸಾಮರ್ಥ್ಯ ಹೊಂದಿಲ್ಲ. ಇ20 ಪೆಟ್ರೋಲ್ನಿಂದ ವಾಹನಗಳ ಇಂಧನ ಕ್ಷಮತೆಯಲ್ಲಿ ಶೇ 2–3ರಷ್ಟು ಕುಸಿತ ಆಗಬಹುದು ಎಂದು ನೀತಿ ಆಯೋಗ ಹೇಳಿದೆ. ವಾಸ್ತವದಲ್ಲಿ ವಾಹನಗಳ ಇಂಧನ ಕ್ಷಮತೆ ಶೇ 10ರಿಂದ ಶೇ 30ರಷ್ಟು ಕಡಿಮೆಯಾಗಿದೆ. ದೇಶದಲ್ಲಿನ ಪೆಟ್ರೋಲ್ ವಾಹನಗಳ ಸಂಖ್ಯೆ ಮತ್ತು 2025–26ನೇ ಆರ್ಥಿಕ ವರ್ಷದಲ್ಲಿ ಮಾರಾಟವಾದ ಪೆಟ್ರೋಲ್ಗೆ ಹೋಲಿಸಿದರೆ ಗ್ರಾಹಕರು ₹62000 ಕೋಟಿಯಷ್ಟು ಹೆಚ್ಚು ಪೆಟ್ರೋಲ್ ಖರೀದಿಸಿದಂತಾಗುತ್ತದೆ’ ಎಂದು ವಿವರಿಸಿದರು. ‘ಇ20 ಪೆಟ್ರೋಲ್ ಬಳಸಲು ಸಾಧ್ಯವಿಲ್ಲದ ವಾಹನಗಳಲ್ಲೂ ಅನಿವಾರ್ಯವಾಗಿ ಇ20 ಪೆಟ್ರೋಲ್ ಬಳಸುವುದರಿಂದ ವಾಹನಗಳ ರಿಪೇರಿಗಾಗಿ ಒಂದು ವರ್ಷದಲ್ಲಿ ₹40,000 ಕೋಟಿ ವೆಚ್ಚ ಮಾಡಲಾಗಿದೆ. ಇವೆಲ್ಲವೂ ಗ್ರಾಹಕರಿಗೆ ಹೊರೆಯೇ ಆಗಿದೆ. ಆದರೆ ನಿತಿನ್ ಗಡ್ಕರಿ ಎಥೆನಾಲ್ ಮಿಶ್ರಣವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಜನರಿಗೆ ಇದರಿಂದ ನಷ್ಟವಾಗಿದ್ದರೆ 2025–26ರಲ್ಲಿ ತೈಲ ಕಂಪನಿಗಳು ₹77,000 ಕೋಟಿಯಷ್ಟು ಲಾಭ ಮಾಡಿಕೊಂಡಿವೆ. ನಿತಿನ್ ಗಡ್ಕರಿ ಅವರ ಮಕ್ಕಳ ಎಥೆನಾಲ್ ಕಂಪನಿಗಳು ಲಾಭ ಮಾಡಿಕೊಂಡಿವೆ’ ಎಂದು ಆರೋಪಿಸಿದರು.