ಪಶು ವೈದ್ಯರ ಹುದ್ದೆ ಖಾಲಿ: ಚಿಕಿತ್ಸೆಗೆ ಅಡ್ಡಿ
ರಟ್ಟೀಹಳ್ಳಿ: ತಾಲ್ಲೂಕಿನ ಪಶು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಜಾನುವಾರುಗಳಿಗೆ ನಿಗದಿತ ಸಮಯಕ್ಕೆ ಚಿಕಿತ್ಸೆ ನೀಡಲು ಅಡ್ಡಿಯಾಗುತ್ತಿದೆ.ಆಸ್ಪತ್ರೆಗೆ ಬರುವ ರೈತರು, ವೈದ್ಯರು ಹಾಗೂ ಸಿಬ್ಬಂದಿ ಇರದಿದ್ದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ರಟ್ಟೀಹಳ್ಳಿಯು ತಾಲ್ಲೂಕು ಕೇಂದ್ರವಾಗಿ ಎಂಟು ವರ್ಷ ಗತಿಸಿದೆ. ಇಲ್ಲಿನ ತಾಲ್ಲೂಕು ಪಶು ಆಸ್ಪತ್ರೆ

ರಟ್ಟೀಹಳ್ಳಿ: ತಾಲ್ಲೂಕಿನ ಪಶು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಜಾನುವಾರುಗಳಿಗೆ ನಿಗದಿತ ಸಮಯಕ್ಕೆ ಚಿಕಿತ್ಸೆ ನೀಡಲು ಅಡ್ಡಿಯಾಗುತ್ತಿದೆ.ಆಸ್ಪತ್ರೆಗೆ ಬರುವ ರೈತರು, ವೈದ್ಯರು ಹಾಗೂ ಸಿಬ್ಬಂದಿ ಇರದಿದ್ದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ರಟ್ಟೀಹಳ್ಳಿಯು ತಾಲ್ಲೂಕು ಕೇಂದ್ರವಾಗಿ ಎಂಟು ವರ್ಷ ಗತಿಸಿದೆ. ಇಲ್ಲಿನ ತಾಲ್ಲೂಕು ಪಶು ಆಸ್ಪತ್ರೆ ಇನ್ನೂ ಸೂಕ್ತ ಸೌಲಭ್ಯಗಳನ್ನು ಹೊಂದುವಲ್ಲಿ ವಿಫಲವಾಗಿದೆ.ತಾಲ್ಲೂಕಿನಲ್ಲಿ ಮಂಜೂರಾದ 73 ಹುದ್ದೆಗಳ ಪೈಕಿ ಕೇವಲ 12 ಮಾತ್ರ ಭರ್ತಿಯಾಗಿವೆ. ಉಳಿದ 61 ಹುದ್ದೆಗಳು ಖಾಲಿಯಿವೆ. ಶೇ. 83ರಷ್ಟು ಹುದ್ದೆಗಳು ಖಾಲಿ ಉಳಿದಿವೆ. ತಾಲ್ಲೂಕು ಕೇಂದ್ರ ರಟ್ಟೀಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳಲ್ಲಿ ರೈತರು ಹೆಚ್ಚಾಗಿದ್ದಾರೆ. ಆದರೆ ರೈತರ ದನ, ಕರು, ಎತ್ತು, ಎಮ್ಮೆ, ಕುರಿ, ಮೇಕೆ, ಆಡು, ಕೋಳಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ ಎನ್ನುವುದು ರೈತರ ಅಳಲು.ಸರ್ಕಾರಿ ಆದೇಶ ಪ್ರಕಾರ ಪ್ರತಿ ತಾಲ್ಲೂಕು ಆಸ್ಪತ್ರೆಗೆ 11 ಹುದ್ದೆಗಳು ಮಂಜೂರಾಗಿರುತ್ತವೆ. ಮುಖ್ಯ ಪಶುವೈದ್ಯ, ಜಾನುವಾರು ಅಧಿಕಾರಿ, ಹಿರಿಯ ಪಶುವೈದ್ಯಕೀಯ ಪರೀಕ್ಷಕರು, 2 ಕಿರಿಯ ಪರೀಕ್ಷಕರು, 1 ದ್ವಿತೀಯ ದರ್ಜೆ ಸಹಾಯಕ, 1 ಚಾಲಕ, 2 ಡಿ ಗ್ರೂಪ್ ಸಿಬ್ಬಂದಿ ಇರಬೇಕು.ಆದರೆ, ರಟ್ಟೀಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ಇಬ್ಬರು ಮಾತ್ರ (ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಮತ್ತು ಜಾನುವಾರು ಅಧಿಕಾರಿ) ಕೆಲಸ ಮಾಡುತ್ತಿದ್ದಾರೆ. ಪರೀಕ್ಷಕರು, ಡಿ ಗ್ರೂಪ್ ಹುದ್ದೆಗಳು ಖಾಲಿ ಇವೆ. ತಾಲ್ಲೂಕು ಕೇಂದ್ರದಲ್ಲಿ ದೊಡ್ಡಮಟ್ಟದ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದ್ದರೂ ಸಿಬ್ಬಂದಿ ಕೊರತೆಯಿಂದ ಅದು ಸಹ ಆರಂಭಗೊಂಡಿಲ್ಲ.61 ಹುದ್ದೆಗಳು ಖಾಲಿ: ತಾಲ್ಲೂಕಿನ 63 ಹಳ್ಳಿಗಳಿಗೆ ಸಂಬಂಧಿಸಿದಂತೆ ಪಶು ಆಸ್ಪತ್ರೆ, ಪ್ರಾಥಮಿಕ ಪಶು ಚಿಕಿತ್ಸಾಲಯ, ಪಶು ಚಿಕಿತ್ಸಾಲಯ ಸೇರಿದಂತೆ ಒಟ್ಟು 20 ಕೇಂದ್ರಗಳಿವೆ. ಇಲ್ಲಿ ಒಟ್ಟು 73 ಸಿಬ್ಬಂದಿ ಇರಬೇಕಾಗಿತ್ತು. ಆದರೆ, ಕೇವಲ 12 ಕಾಯಂ ಸಿಬ್ಬಂದಿ ಮಾತ್ರ ಇದ್ದಾರೆ. 61 ಹುದ್ದೆಗಳು ಖಾಲಿ ಉಳಿದಿವೆ.ಪಶು ಆಸ್ಪತ್ರೆಗಳ ಸ್ಥಿತಿ ಅಧೋಗತಿ: ರಟ್ಟೀಹಳ್ಳಿ. ಮಾಸೂರು, ಕುಡುಪಲಿ, ಕಡೂರು, ಮೇದೂರು, ಗುಂಡಗಟ್ಟಿ, ತಡಕನಹಳ್ಳಿ, ನಾಗವಂದ, ಕೊಡಮಗ್ಗಿ, ಮಕರಿ, ಹುಲ್ಲತ್ತಿ, ಹಳ್ಳೂರು, ಶಿರಗಂಬಿ, ಮಾವಿನತೋಪ, ದೊಡ್ಡಗುಬ್ಬಿ, ಹೊಸಕಟ್ಟಿ, ಚಿಕ್ಕಯಡಚಿ, ಇಂಗಳಗೊಂದಿ, ಹುಲ್ಲತ್ತಿ, ಗುಡ್ಡದಮಾದಾಪುರ ಸೇರಿದಂತೆ ಪಶು ಆಸ್ಪತ್ರೆ ಕೇಂದ್ರಗಳು ಸಿಬ್ಬಂದಿಯಿಲ್ಲದೆ ಸೊರಗುತ್ತಿವೆ. ರೈತರ ಜಾನುವಾರುಗಳಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ.‘ಪಶು ಆಸ್ಪತ್ರೆಗಳಿಗೆ ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿ ಸರಿಯಾದ ಸಮಯಕ್ಕೆ ಜಾನುವಾರುಗಳಿಗೆ ಚಿಕಿತ್ಸೆ ದೊರೆಯುವಂತಾಗಬೇಕಾಗಿದೆ’ ಎಂದು ರೈತರು ಆಗ್ರಹಿಸುತ್ತಿದ್ದಾರೆ.ರೈತ ಶಂಕರಗೌಡ ಶಿರಗಂಬಿ, ‘ರೈತರ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗಬೇಕಾದರೆ ತಾಲ್ಲೂಕಿನಲ್ಲಿರುವ ಪಶು ಆಸ್ಪತ್ರೆಗಳಿಗೆ ಅಗತ್ಯ ಪಶು ವೈದ್ಯರು ಹಾಗೂ ಸಿಬ್ಬಂದಿ ನೇಮಿಸಬೇಕು. ಔಷಧಿ ದಾಸ್ತಾನು ಸಮರ್ಪಕವಾಗಿರಬೇಕು. ಆದರೆ, ತಾಲ್ಲೂಕಿನ ಪಶು ಆಸ್ಪತ್ರೆಗಳಲ್ಲಿ ಅಗತ್ಯ ಸಿಬ್ಬಂದಿಯಿಲ್ಲ. ಜಾನುವಾರು ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಸರ್ಕಾರ ಕೂಡಲೇ ಸಿಬ್ಬಂದಿ ನೇಮಕಕ್ಕೆ ಮುಂದಾಗಬೇಕು’ ಎಂದು ಆಗ್ರಹಿಸಿದರು.‘ಹುದ್ದೆ ಖಾಲಿ; ಅಧಿಕಾರಿಗಳಿಗೆ ಮಾಹಿತಿ’‘ತಾಲ್ಲೂಕು ಕೇಂದ್ರ ರಟ್ಟೀಹಳ್ಳಿ ಸೇರಿದಂತೆ ತಾಲ್ಲೂಕಿನ ವಿವಿಧ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ. ಸದ್ಯ ಇರುವ ಸಿಬ್ಬಂದಿಯನ್ನು ಉಪಯೋಗಿಸಿಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ’ ಎಂದು ಸಹಾಯಕ ನಿರ್ದೇಶಕ ಡಾ. ಕಿರಣಕುಮಾರ ತಿಳಿಸಿದರು.261106-22-173997187