ಕಳೆದ ದಶಕದಲ್ಲಿ ಪಾಕಿಸ್ತಾನದ ಬಾಹ್ಯ ಸಾಲ ದುಪ್ಪಟ್ಟು: ವಿಶ್ವ ಬ್ಯಾಂಕ್
ಇಸ್ಲಾಮಾಬಾದ್: ಕಳೆದ ದಶಕದಲ್ಲಿ(2015 ರಿಂದ 2025ರವರೆಗೆ) ಪಾಕಿಸ್ತಾನದ ಒಟ್ಟು ಬಾಹ್ಯ ಸಾಲವು ಸುಮಾರು ಎರಡು ಪಟ್ಟಾಗಿದೆ. ಅದು 135.1 ಬಿಲಿಯನ್ ಅಮೆರಿಕನ್ ಡಾಲರ್ಗೆ ತಲುಪಿದೆ ಎಂದು ವಿಶ್ವ ಬ್ಯಾಂಕ್ನ 'ಅಂತರರಾಷ್ಟ್ರೀಯ ಸಾಲ ವರದಿ 2026'ರಲ್ಲಿ ಉಲ್ಲೇಖವಾಗಿದೆ.ವಿಶ್ವ ಬ್ಯಾಂಕ್ ವರದಿಯನ್ನು ಉಲ್ಲೇಖಿಸಿ 'ಡಾನ್' ಪತ್ರಿಕೆ ವರದಿ ಮಾಡಿದ್ದು, ಪಾಕಿಸ್ತಾನದ ಬಾಹ್ಯ ಸಾಲವು

ಇಸ್ಲಾಮಾಬಾದ್: ಕಳೆದ ದಶಕದಲ್ಲಿ(2015 ರಿಂದ 2025ರವರೆಗೆ) ಪಾಕಿಸ್ತಾನದ ಒಟ್ಟು ಬಾಹ್ಯ ಸಾಲವು ಸುಮಾರು ಎರಡು ಪಟ್ಟಾಗಿದೆ. ಅದು 135.1 ಬಿಲಿಯನ್ ಅಮೆರಿಕನ್ ಡಾಲರ್ಗೆ ತಲುಪಿದೆ ಎಂದು ವಿಶ್ವ ಬ್ಯಾಂಕ್ನ 'ಅಂತರರಾಷ್ಟ್ರೀಯ ಸಾಲ ವರದಿ 2026'ರಲ್ಲಿ ಉಲ್ಲೇಖವಾಗಿದೆ.ವಿಶ್ವ ಬ್ಯಾಂಕ್ ವರದಿಯನ್ನು ಉಲ್ಲೇಖಿಸಿ 'ಡಾನ್' ಪತ್ರಿಕೆ ವರದಿ ಮಾಡಿದ್ದು, ಪಾಕಿಸ್ತಾನದ ಬಾಹ್ಯ ಸಾಲವು 2015ರಲ್ಲಿ 68.673 ಬಿಲಿಯನ್ ಅಮೆರಿಕನ್ ಡಾಲರ್ನಿಂದ 2025ರಲ್ಲಿ 135.107 ಬಿಲಿಯನ್ ಅಮೆರಿಕನ್ ಡಾಲರ್ಗೆ ಏರಿಕೆಯಾಗಿದೆ. ಇದರಲ್ಲಿ 107.076 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತವು ಸಾರ್ವಜನಿಕ ಮತ್ತು ಸರ್ಕಾರಿ ಖಾತರಿ ಹೊಂದಿರುವ ಸಾಲವಾಗಿದೆ. 17.58 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತವು ಖಾಸಗಿ ಖಾತರಿರಹಿತ ಸಾಲ ಹಾಗೂ 10.45 ಬಿಲಿಯನ್ ಅಮೆರಿಕನ್ ಡಾಲರ್ ಅಲ್ಪಾವಧಿ ಸಾಲ ಸೇರಿದೆ. ಸಾರ್ವಜನಿಕ ಮತ್ತು ಸರ್ಕಾರಿ ಖಾತರಿ ಸಾಲದಲ್ಲಿ, 56.83 ಬಿಲಿಯನ್ ಅಮೆರಿಕನ್ ಡಾಲರ್ ಬಹುಪಕ್ಷೀಯ ಸಾಲದಾತರಿಗೆ, 42.43 ಬಿಲಿಯನ್ ಅಮೆರಿಕನ್ ಡಾಲರ್ ದ್ವಿಪಕ್ಷೀಯ ಸಾಲದಾತರಿಗೆ ಹಾಗೂ 7.8 ಬಿಲಿಯನ್ ಅಮೆರಿಕನ್ ಡಾಲರ್ ಖಾಸಗಿ ಸಾಲದಾತರಿಗೆ ಪಾವತಿಸಬೇಕಾಗಿದೆ.ಚೀನಾವು ಪಾಕಿಸ್ತಾನದ ಅತಿ ದೊಡ್ಡ ವೈಯಕ್ತಿಕ ಸಾಲದಾತ ದೇಶವಾಗಿದ್ದು, 22.4 ಬಿಲಿಯನ್ ಅಮೆರಿಕನ್ ಡಾಲರ್ ಬಾಕಿ ಸಾಲವನ್ನು ಹೊಂದಿದೆ. ಇದರ ನಂತರದ ಸ್ಥಾನಗಳಲ್ಲಿ ವಿಶ್ವ ಬ್ಯಾಂಕ್ ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಇವೆ. ಅಧಿಕೃತ ಸಾಲದಾತರಿಂದ ಪಡೆದ ಸಾಲಗಳ ಸರಾಸರಿ ಮರುಪಾವತಿ ಅವಧಿ 16 ವರ್ಷಗಳಾಗಿದ್ದು, 4 ವರ್ಷಗಳ ರಿಯಾಯಿತಿ ಅವಧಿ ಹಾಗೂ ಶೇ 3.6 ರಷ್ಟು ಬಡ್ಡಿದರವನ್ನು ಹೊಂದಿದೆ ಹಾಗೂ ಖಾಸಗಿ ಸಾಲಗಳು ಸರಾಸರಿ ಶೇ 8.6 ರಷ್ಟು ಬಡ್ಡಿದರವನ್ನು ಹೊಂದಿದ್ದು, 3 ವರ್ಷಗಳ ಮರುಪಾವತಿ ಅವಧಿ ಮತ್ತು 1 ವರ್ಷದ ರಿಯಾಯಿತಿ ಅವಧಿಯನ್ನು ಒಳಗೊಂಡಿವೆ ಎಂದು ವರದಿ ತಿಳಿಸಿದೆ.