ಯೋಜನೆಗಳಿಗೆ ಆಧಾರ್ ಬದಲು ವೋಟರ್ ಐಡಿ: ಕೇಂದ್ರ ಚಿಂತನೆ
ನವದೆಹಲಿ: ಸರ್ಕಾರಿ ಕಲ್ಯಾಣ ಯೋಜನೆಗಳ(Welfare Schemes) ಸೌಲಭ್ಯಗಳನ್ನು ಪಡೆಯಲು ಮತದಾರರ ಗುರುತಿನ ಚೀಟಿ (EPIC) ಸಂಖ್ಯೆ ಹಾಗೂ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯು ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಕೇಂದ್ರ ಪಂಚಾಯತ್ರಾಜ್ ಸಚಿವ ರಾಜೀವ್ ರಂಜನ್ ಸಿಂಗ್(Rajiv Ranjan Singh) ಅವರು, ಫಲಾನುಭವಿಗಳ

ನವದೆಹಲಿ: ಸರ್ಕಾರಿ ಕಲ್ಯಾಣ ಯೋಜನೆಗಳ(Welfare Schemes) ಸೌಲಭ್ಯಗಳನ್ನು ಪಡೆಯಲು ಮತದಾರರ ಗುರುತಿನ ಚೀಟಿ (EPIC) ಸಂಖ್ಯೆ ಹಾಗೂ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯು ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಕೇಂದ್ರ ಪಂಚಾಯತ್ರಾಜ್ ಸಚಿವ ರಾಜೀವ್ ರಂಜನ್ ಸಿಂಗ್(Rajiv Ranjan Singh) ಅವರು, ಫಲಾನುಭವಿಗಳ ಗುರುತಿಸುವಿಕೆ ಮತ್ತು ಪಾವತಿಗಳಿಗಾಗಿ ಇನ್ನು ಮುಂದೆ ಮತದಾರರ ಗುರುತಿನ ಚೀಟಿ ಸಂಖ್ಯೆ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಒದಗಿಸುವುದು ಕಡ್ಡಾಯವಾಗಲಿದೆ ಎಂದು ಹೇಳಿದ್ದಾರೆ. ಎಲ್ಲೆಡೆ ಸುಲಭವಾಗಿ ಲಭ್ಯವಿರುವ ನೋಂದಣಿ ಕೇಂದ್ರಗಳ ಮೂಲಕ ಕೆಲವೇ ನಿಮಿಷಗಳಲ್ಲಿ ಆಧಾರ್ ಕಾರ್ಡ್ ಪಡೆಯಬಹುದಾಗಿರುವುದರಿಂದ, ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಕಾರ್ಡ್ ಅಷ್ಟೊಂದು ವಿಶ್ವಾಸಾರ್ಹವಲ್ಲ ಎಂದು ಸಚಿವರು ವಾದಿಸಿದ್ದಾರೆ. ಪಂಚಾಯತ್ ರಾಜ್ ಸಚಿವಾಲಯವು ವೈಯಕ್ತಿಕ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವ ಯೋಜನೆಗಳನ್ನು ನೇರವಾಗಿ ನಿರ್ವಹಿಸುವುದಿಲ್ಲ. ಜತೆಗೆ ಯಾವೆಲ್ಲಾ ಯೋಜನೆಗಳು ಈ ಹೊಸ ವ್ಯವಸ್ಥೆಯ ವ್ಯಾಪ್ತಿಗೆ ಬರಲಿವೆ ಎಂಬುದನ್ನು ಸಚಿವರು ಸ್ಪಷ್ಟಪಡಿಸಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ಅರೆಸ್ಟ್ ಅಲ್ಲ, ವಶಕ್ಕೆ ಪಡೆದ ಕ್ಷಣದಿಂದಲೇ ಡೆಡ್ಲೈನ್ – ಕೋರ್ಟ್ಗೆ 24 ಗಂಟೆ ಹಾಜರು ಬಗ್ಗೆ ಸುಪ್ರೀಂ ಸ್ಪಷ್ಟನೆ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆಯೇ ಇಂತಹ ನಿಯಮ ಜಾರಿಗೆ ತಂದರೆ, ಲಕ್ಷಾಂತರ ಅರ್ಹ ಮತ್ತು ದುರ್ಬಲ ವರ್ಗದ ಜನರು ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದು ಸಿಪಿಐ(ಎಂ) ಪಕ್ಷ ಬುಧವಾರ ಎಚ್ಚರಿಸಿದೆ. ಕೇಂದ್ರದ ಈ ಪ್ರಸ್ತಾವನೆಯನ್ನು ಸಿಪಿಐ(ಎಂ) ತೀವ್ರವಾಗಿ ಖಂಡಿಸಿದ್ದು, ಕಲ್ಯಾಣ ಯೋಜನೆಗಳ ಪಾವತಿಗೆ ಮತದಾರರ ಗುರುತಿನ ಚೀಟಿ ಕಡ್ಡಾಯಗೊಳಿಸುವುದರಿಂದ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮತ್ತಷ್ಟು ತೊಡಕುಗಳು ಉಂಟಾಗಲಿವೆ ಎಂದು ಆರೋಪಿಸಿದೆ. ಆಧಾರ್ ಆಧಾರಿತ ವ್ಯವಸ್ಥೆಯಿಂದ ಹಿಂದೆ ಸರಿಯುವುದು ಈಗಾಗಲೇ ನೆರವು ಪಡೆಯಲು ಪರದಾಡುತ್ತಿರುವ ಫಲಾನುಭವಿಗಳ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಪಕ್ಷದ ಪಾಲಿಟ್ಬ್ಯುರೊ ಪ್ರಕಟಣೆಯಲ್ಲಿ ತಿಳಿಸಿದೆ. ಬಯೋಮೆಟ್ರಿಕ್ ಯಂತ್ರಗಳಲ್ಲಿ ಕಣ್ಣಿನ ಪಾಪೆ (ಐರಿಸ್) ಸ್ಕ್ಯಾನ್ ಆಗದ ಹಿರಿಯ ಮಹಿಳಾ ಕೃಷಿ ಕಾರ್ಮಿಕರು ಹಾಗೂ ಕೈಬೆರಳಚ್ಚು ಸವೆದುಹೋಗಿರುವ ಕಾರಣ ದೃಢೀಕರಣ ವಿಫಲವಾಗುತ್ತಿರುವ ದಿನಗೂಲಿ ಕಾರ್ಮಿಕರ ಉದಾಹರಣೆಗಳನ್ನು ಪಕ್ಷ ಉಲ್ಲೇಖಿಸಿದೆ. ತಂತ್ರಜ್ಞಾನ ಆಧಾರಿತ ಪರಿಶೀಲನೆಯು ಈಗಾಗಲೇ ಅರ್ಹ ಜನರನ್ನು ಸೌಲಭ್ಯಗಳಿಂದ ದೂರವಿಡುತ್ತಿದ್ದು, ಸ್ಮಾರ್ಟ್ಫೋನ್ ಆಧರಿತ ಇ-ಕೆವೈಸಿ (e-KYC) ಪ್ರಕ್ರಿಯೆಗಳು ಗ್ರಾಮೀಣ ಜನರಿಗೆ ಹೊರೆಯಾಗುತ್ತಿವೆ ಎಂದು ಎಚ್ಚರಿಸಿದೆ. ಆಧಾರ್ ಕುರಿತಂತೆ ಸರ್ಕಾರದ ಬದಲಾಗುತ್ತಿರುವ ನಿಲುವನ್ನು ಪಕ್ಷವು ಪ್ರಶ್ನಿಸಿದೆ. ಈ ಹಿಂದೆ ಸುಪ್ರೀಂ ಕೋರ್ಟ್ಗೆ ಆಧಾರ್ ಕಡ್ಡಾಯವಲ್ಲ ಎಂದು ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ನಂತರದ ದಿನಗಳಲ್ಲಿ ಎಲ್ಲಾ ಕಲ್ಯಾಣ ಯೋಜನೆಗಳಿಗೂ ಅದನ್ನು ವಿಸ್ತರಿಸಿತ್ತು.