ಕೊಳ್ಳೇಗಾಲದಲ್ಲಿ ಕೆರೆ ಏರಿ ಕಬ್ಬಿಣದ ತಡೆಗೋಡೆ ಕಳ್ಳರ ಪಾಲು
ಕೊಳ್ಳೇಗಾಲ: ತಾಲ್ಲೂಕಿನಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಬದಿಯಲ್ಲಿರುವ ಕೆರೆಗಳು, ನಾಲೆಗಳು ಹಾಗೂ ಅಪಾಯಕಾರಿ ಹಳ್ಳಗಳ ಸುತ್ತಲೂ ವಾಹನ ಸವಾರರ ಜೀವ ರಕ್ಷಣೆಯ ಉದ್ದೇಶದಿಂದ ಅಳವಡಿಸಿರುವ ಕಬ್ಬಿಣದ ತಡೆಗೋಡೆಗಳು (ಮೆಟಲ್ ಕ್ರಾಸ್ ಬ್ಯಾರಿಯರ್) ಕಳ್ಳರ ಪಾಲಾಗುತ್ತಿವೆ.ತಾಲ್ಲೂಕಿನಾದ್ಯಂತ ರಸ್ತೆಯ ಬದಿಯಲ್ಲಿರುವ ಕೆರೆಗಳ ಏರಿಯ ಸುತ್ತ, ಅಪಾಯಕಾರಿ ತಿರುವುಗಳು, ಆಳ

ಕೊಳ್ಳೇಗಾಲ: ತಾಲ್ಲೂಕಿನಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಬದಿಯಲ್ಲಿರುವ ಕೆರೆಗಳು, ನಾಲೆಗಳು ಹಾಗೂ ಅಪಾಯಕಾರಿ ಹಳ್ಳಗಳ ಸುತ್ತಲೂ ವಾಹನ ಸವಾರರ ಜೀವ ರಕ್ಷಣೆಯ ಉದ್ದೇಶದಿಂದ ಅಳವಡಿಸಿರುವ ಕಬ್ಬಿಣದ ತಡೆಗೋಡೆಗಳು (ಮೆಟಲ್ ಕ್ರಾಸ್ ಬ್ಯಾರಿಯರ್) ಕಳ್ಳರ ಪಾಲಾಗುತ್ತಿವೆ.ತಾಲ್ಲೂಕಿನಾದ್ಯಂತ ರಸ್ತೆಯ ಬದಿಯಲ್ಲಿರುವ ಕೆರೆಗಳ ಏರಿಯ ಸುತ್ತ, ಅಪಾಯಕಾರಿ ತಿರುವುಗಳು, ಆಳವಾದ ಕಂದಕ ಸೇರಿದಂತೆ ಅಗತ್ಯವಿರುವೆಡೆ ಕಬ್ಬಿಣದ ತಡೆಗೋಡೆಗಳನ್ನು ಅಳವಡಿಸಲಾಗಿದೆ. ರಸ್ತೆಯಲ್ಲಿ ಸಾಗುವಾಗ ಆಕಸ್ಮಿಕವಾಗಿ ವಾಹನಗಳು ನಿಯಂತ್ರಣ ತಪ್ಪಿ ಕೆರೆ, ನಾಲೆಗಳಿಗೆ ಬಿದ್ದು ಪ್ರಾಣ ಹಾನಿಯಾಗದಿರಲಿ, ಅಪಘಾತದ ತೀವ್ರತೆ ಗಂಭೀರವಾಗದಿರಲಿ ಎಂಬ ಉದ್ದೇಶದಿಂದ ಲಕ್ಷಾಂತರ ರೂಪಾಯಿ ವ್ಯಯಿಸಿ ಸರ್ಕಾರ ಕಬ್ಬಿಣದ ತಡೆಗೋಡೆ ಹಾಕಿಸಿದೆ.ಆದರೆ, ಇವುಗಳಿಗೆ ಸೂಕ್ತ ರಕ್ಷಣೆ ಹಾಗೂ ನಿರ್ವಹಣೆ ಇಲ್ಲದಿರುವುದರಿಂದ ರಾತ್ರೋರಾತ್ರಿ ಕಳ್ಳರು ತಡೆಗೋಡೆಗೆ ಅಳವಡಿಸಲಾಗಿರುವ ಕಬ್ಬಿಣದ ಪರಿಕರಗಳನ್ನು ಕದ್ದೊಯ್ದು ಮಾರಾಟ ಮಾಡುತ್ತಿದ್ದು, ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ಎದುರಾಗಿದೆ.ರಾತ್ರಿಯ ಹೊತ್ತು ಸಮರ್ಪಕ ಗಸ್ತು ವ್ಯವಸ್ಥೆ ಇಲ್ಲದಿರುವುದು ಹಾಗೂ ಕಳ್ಳತನವಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು, ರಾತ್ರಿಯ ಹೊತ್ತು ಈ ಭಾಗದಲ್ಲಿ ಗಸ್ತು ಸಮರ್ಪಕವಾಗಿ ನಡೆಯದಿರುವುದನ್ನು ಅರಿತಿರುವ ಕಳ್ಳರ ತಂಡ ಸಂಘಟಿತವಾಗಿ ಕೃತ್ಯ ಎಸಗುತ್ತಿದೆ. ರಾಜಾರೋಷವಾಗಿ ಕಬ್ಬಿಣದ ಪರಿಕರಗಳನ್ನು ಕದ್ದು ಸಾಗಿಸುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.ತಾಲ್ಲೂಕಿನ ಹಲವು ಕಡೆಗಳಲ್ಲಿ ಅಳವಡಿಸಲಾಗಿರುವ ಮೆಟಲ್ ಬ್ಯಾರಿಯರ್ಗಳನ್ನು ಕತ್ತಲು ಹರಿದು ಬೆಳಕು ಮೂಡುವಷ್ಟರಲ್ಲಿ ಕಣ್ಮರೆಯಾಗುತ್ತಿದ್ದು ದೊಡ್ಡ ಜಾಲವೇ ಕೃತ್ಯದ ಹಿಂದಿರುವ ಶಂಕೆ ಇದ್ದು, ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಕೆರೆ ಏರಿಗಳೇ ಗುರಿ: ತಾಲ್ಲೂಕಿನಲ್ಲಿರುವ ಕೆರೆಯ ಏರಿಗಳನ್ನು ಗುರಿಯಾಗಿಸಿಕೊಂಡಿರುವ ಕಳ್ಳರು ರಾತ್ರಿಯ ಹೊತ್ತು ಕೆರೆಗಳ ಸಮೀಪ ಅವಿತು ಜನ ಸಂಚಾರ ಇಲ್ಲದಿರುವ ಸಮಯದಲ್ಲಿ ಕಳ್ಳತನಕ್ಕಿಳಿಯುತ್ತಿದ್ದಾರೆ. ಕೃತ್ಯ ಎಸಗುವಾಗ ಯಾರಾದರೂ ಬಂದರೆ ತಕ್ಷಣ ಕೆರೆಗೆ ಹಾರಬಹುದು ಅಥವಾ ಪೊದೆಯೊಳಗೆ ಅವಿತು ತಪ್ಪಿಸಿಕೊಳ್ಳಬಹುದು ಎಂಬುದು ಎಂಬ ಕಾರಣಕ್ಕೆ ಕೆರೆಯ ಏರಿಗಳಲ್ಲೇ ಹೆಚ್ಚು ಕೃತ್ಯ ನಡೆಯುತ್ತಿದೆ.ಹಗಲಿನಲ್ಲಿ ದಾರಿಹೋಕರ ಸೋಗಿನಲ್ಲಿ ತಡೆಗೋಡೆಗಳ ಮೇಲೆ ಕುಳಿತು ನಟ್ಗಳನ್ನು ಬಿಚ್ಚಿ ಕಬ್ಬಿಣದ ತಗಡುಗಳನ್ನು ಬೀಳಿಸಿ ಹೋಗುವ ಕಳ್ಳರು ರಾತ್ರಿ ಹೊತ್ತು ವಾಹನಗಳನ್ನು ತಂದು ಅವುಗಳನ್ನು ತುಂಬಿಕೊಂಡು ಹೋಗುತ್ತಾರೆ.ತಾಲ್ಲೂಕಿನ ಹೊಸ ಅಣಗಳ್ಳಿ ಸಮೀಪದ ಪಾಪನಕೆರೆಯಲ್ಲಿ 200 ಮೀಟರ್ಗೂ ಹೆಚ್ಚು ಉದ್ದದ ಕಬ್ಬಿಣದ ತಡೆಗೋಡೆಗಳನ್ನು ಬಿಚ್ಚಲಾಗಿದೆ. ಸಿದ್ದಯ್ಯನಪುರ, ಮಧುವನಹಳ್ಳಿ, ಕುಂತೂರು, ತೇರಂಬಳ್ಳಿ ಸೇರಿದಂತೆ ಹಲವು ಕೆರೆಗಳ ಸಮೀಪ ಹಾಗೂ ಮುಖ್ಯ ರಸ್ತೆಗಳಲ್ಲಿ ಕಳವು ಯತ್ನ ನಡೆದಿದೆ.ಒಂದು ವರ್ಷದ ಹಿಂದೆಯೂ ಕಳ್ಳರ ಗುಂಪುಗಳು ಕಬ್ಬಿಣದ ತಡೆಗೋಡೆಯನ್ನು ಬಿಚ್ಚಿಕೊಂಡು ವಾಹನದಲ್ಲಿ ಸಾಗಿಸುವಾಗ ಪೊಲೀಸರ ಕೈಗೆ ಸಿಕ್ಕಿಬಿದಿದ್ದರು. ಈ ಕೃತ್ಯ ನಡೆದ ಬಳಿಕವೂ ಕಳ್ಳರು ನಿರಾಂತಕವಾಗಿ ಕೈಚಳಕವನ್ನು ತೋರಿಸುತ್ತಿದ್ದಾರೆ.ಕಬ್ಬಿಣದ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬೇಡಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು ಕಬ್ಬಿಣವನ್ನು ಗುಜರಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ಸುಲಭವಾಗಿ ಹಣ ಮಾಡುತ್ತಿದ್ದಾರೆ ಎಂದು ಹೊಸ ಹಣಗಳ್ಳಿ ಬಡಾವಣೆಯ ನಿವಾಸಿ ಹರೀಶ್ ಪ್ರಜಾವಾಣಿಗೆ ತಿಳಿಸಿದರು.ಇಲಾಖೆಯ ನಿರ್ಲಕ್ಷ್ಯ: ಲೋಕೋಪ ಯೋಗಿ ಇಲಾಖೆ ವಾಹನ ಸವಾರರ ಅನುಕೂಲಕ್ಕಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡಿ ತಡೆಗೋಡೆ ನಿರ್ಮಿಸಿದ್ದರೂ ನಿರ್ವಹಣೆಗೆ ತಲೆ ಕೆಡಿಸಿಕೊಳ್ಳದಿರುವುದು ಕಳ್ಳತನಕ್ಕೆ ಪ್ರೇರಣೆ ನೀಡಿದಂತಾಗಿದೆ. ಲಕ್ಷಾಂತರ ರೂಪಾಯಿ ಸರ್ಕಾರಕ್ಕೆ ನಷ್ಟವಾಗುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ, ಕಳವು ಕೃತ್ಯದ ಸಂಬಂಧ ದೂರು ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.ಕಳ್ಳರು ತಡೆಗೋಡೆಗಳನ್ನು ಕದ್ದೊಯ್ದರೆ ಮತ್ತೆ ಅಳವಡಿಸಲು ವರ್ಷಗಳೇ ಬೇಕಾಗುತ್ತದೆ. ಈ ಅವಧಿಯಲ್ಲಿ ವಾಹನಗಳು ನಿಯಂತ್ರಣ ತಪ್ಪಿ ಕೆರೆಗಳಿಗೆ ಬಿದ್ದು ಪ್ರಾಣ ಹಾನಿ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಾರೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶಿವಸುಂದರ್.ಪರಿಶೀಲಿಸಿ ಠಾಣೆಗೆ ದೂರುತಾಲ್ಲೂಕಿನಲ್ಲಿ ಎಲ್ಲೆಲ್ಲೆ ಕಬ್ಬಿಣದ ತಡೆಗೋಡೆಗಳನ್ನು ಅಳವಡಿಸಲಾಗಿದೆ, ಎಲ್ಲೆಲ್ಲಿ ಕಳ್ಳತನವಾಗಿದೆ ಎಂಬುದನ್ನು ಪರಿಶೀಲಿಸಿ ಕಳ್ಳರ ಪತ್ತೆಗೆ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗುಗುವುದು. ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು.–ಕುಮಾರ್, ಎಇಇ ಲೋಕೋಪಯೋಗಿ ಎಂಜಿನಿಯರ್261106-37-699029068