ಆಟ ಅಖಾಡ: ಹೇಗಿದ್ದ ಹೇಗಾದ ಗೊತ್ತಾ ಕ್ರಿಸ್ಟಿಯಾನೊ ರೊನಾಲ್ಡೊ
ಸಿರಿವಂತರ ಮನೆಯಲ್ಲಿ ಪರಿಚಾರಿಕೆಯಾಗಿದ್ದವರೊಬ್ಬರ ಪುತ್ರ ಪೋರ್ಚುಗೀಸರ ನಾಡಿನ ಪುಟ್ಟ ದ್ವೀಪ ಮದೀರಾದ ಹೆಸರನ್ನು ಜಗದ್ವಿಖ್ಯಾತಗೊಳಿಸಿದ ಕತೆ ರೋಮಾಂಚನಕಾರಿ. ಬಾಲ್ಯದಲ್ಲಿ ಕಸ ಗುಡಿಸಿ ಬಿಡಿಗಾಸು ಸಂಪಾದಿಸಿದ್ದ ಆ ಹುಡುಗ ಈಗ ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಅಗ್ರಗಣ್ಯರಾಗಿರುವುದೂ ಕೂಡ ಮಹತ್ಸಾದನೆಯೇ ಸರಿ. ಹೌದು; ಪೋರ್ಚುಗಲ್ ದೇಶದ ಫುಟ್ಬಾಲ್ ತಾರೆ

ಸಿರಿವಂತರ ಮನೆಯಲ್ಲಿ ಪರಿಚಾರಿಕೆಯಾಗಿದ್ದವರೊಬ್ಬರ ಪುತ್ರ ಪೋರ್ಚುಗೀಸರ ನಾಡಿನ ಪುಟ್ಟ ದ್ವೀಪ ಮದೀರಾದ ಹೆಸರನ್ನು ಜಗದ್ವಿಖ್ಯಾತಗೊಳಿಸಿದ ಕತೆ ರೋಮಾಂಚನಕಾರಿ. ಬಾಲ್ಯದಲ್ಲಿ ಕಸ ಗುಡಿಸಿ ಬಿಡಿಗಾಸು ಸಂಪಾದಿಸಿದ್ದ ಆ ಹುಡುಗ ಈಗ ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಅಗ್ರಗಣ್ಯರಾಗಿರುವುದೂ ಕೂಡ ಮಹತ್ಸಾದನೆಯೇ ಸರಿ. ಹೌದು; ಪೋರ್ಚುಗಲ್ ದೇಶದ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ಅವರೇ ಆ ತಾರೆ. ಇದೀಗ ತಮ್ಮ 23 ವರ್ಷಗಳ ಸುದೀರ್ಘ ಅಂತರರಾಷ್ಟ್ರೀಯ ಕ್ರೀಡಾ ಜೀವನಕ್ಕೆ ತೆರೆ ಎಳೆದಿದ್ದಾರೆ. ಆದರೆ ಫುಟ್ಬಾಲ್ ಅಂಗಳದಲ್ಲಿ ಮಾತ್ರವಲ್ಲ; ಆಚೆಯೂ ಅವರ ಜೀವನದ ಹಲವು ಸಂಗತಿಗಳು ಕ್ರೀಡಾಪ್ರೇಮಿಗಳ ಮನದಲ್ಲಿ ಸದಾಕಾಲ ಅಚ್ಚಳಿಯದೇ ಉಳಿಯುತ್ತವೆ. ‘7‘ ಸಂಖ್ಯೆಯ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದ್ದ ರೊನಾಲ್ಡೊ ಅವರ ಮಿಂಚಿನ ವೇಗದ ಆಟವನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಅತ್ತ ಅರ್ಜೇಂಟಿನಾದ ಲಯೊನೆಲ್ ಮೆಸ್ಸಿ, ಬ್ರೆಜಿಲ್ನ ನೇಮರ್, ಇಂಗ್ಲೆಂಡ್ನ ಹ್ಯಾರಿ ಕೇನ್ ಸೇರಿದಂತೆ ಹಲವು ಖ್ಯಾತನಾಮರ ಪೈಪೋಟಿಯಲ್ಲಿ ಆಡುತ್ತ ಮಾಗಿದವರು ರೊನಾಲ್ಡೊ. ಅವರ ವೃತ್ತಿಜೀವನದಲ್ಲಿ ವಿವಾದಗಳಿಗೂ ಕಡಿಮೆ ಇಲ್ಲ. ತಂಡದ ತರಬೇತುದಾರರು, ಸಹ ಆಟಗಾರರು ಮತ್ತು ಆಡಳಿತ ಮಂಡಳಿಯೊಂದಿಗೆ ಹಲವು ಬಾರಿ ಭಿನ್ನಾಭಿಪ್ರಾಯ ಇಟ್ಟುಕೊಂಡು ಸುದ್ದಿಯಾದವರು. ಆದರೆ ಒಮ್ಮೆ ಬೂಟುಗಳ ಲೇಸು ಗಂಟು ಕಟ್ಟಿಕೊಂಡು ಕಣಕ್ಕಿಳಿದರೆ ಅವರಿಗೆ ಅವರೇ ಸಾಟಿಯಾಗುತ್ತಿದ್ದರು. ಏನೇ ಇದ್ದರೂ ಶಿಸ್ತು ಬಿಟ್ಟುಕೊಟ್ಟವರಲ್ಲ. ಸೂರ್ಯೋದಯಕ್ಕಿಂತ ಮುನ್ನವೇ ಶುರುವಾಗುವ ದಿನಚರಿ ಅವರದ್ದು. 234 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 146 ಗೋಲು ಗಳಿಸಿರುವ ಸಾಧನೆ ಅವರದ್ದು. ಇದು ಸಾರ್ವಕಾಲೀಕ ದಾಖಲೆಯೂ ಹೌದು. ಆದರೆ ಅವರಿಗೆ ತಮ್ಮ ವೃತ್ತಿಜೀವನದಲ್ಲಿ ಫಿಫಾ ವಿಶ್ವಕಪ್ ಒಲಿಯಲಿಲ್ಲ ಎಂಬ ಕೊರಗು ಮಾತ್ರ ಶಾಶ್ವತವಾಗಿ ಉಳಿಯಲಿದೆ. ಅವರು ಗೋಲು ಗಳಿಸಿದ ನಂತರ ಸಂಭ್ರಮಿಸುತ್ತಿದ್ದ ವಿಶಿಷ್ಟ ಶೈಲಿಯನ್ನು ಕ್ರಿಕೆಟಿಗರೂ ಅನುಕರಿಸುತ್ತಾರೆ.ಬಿಲಿಯೆನರ್ ಆಗಿ ಬೆಳೆದರೂ ತಾವು ನಡೆದು ಬಂದ ಹಾದಿಯನ್ನು ಮರೆತವರಲ್ಲ. ಅಲ್ಲದೇ ತಮ್ಮ ಬಡತನ ಮತ್ತು ಕಷ್ಟದ ದಿನಗಳಲ್ಲಿ ಕೈಹಿಡಿದು ನಡೆಸಿದವರನ್ನೂ ಮರೆತವರಲ್ಲ. ಅಂತಹ ಕೆಲವು ನೆನಪುಗಳು ಇಲ್ಲಿವೆ. ಅಮ್ಮನಿಗಾಗಿ ಜೆಟ್ರೊನಾಲ್ಡೊ ತಮ್ಮ ಕುಟುಂಬದ ಸುಖಕರ ಪ್ರಯಾಣಕ್ಕಾಗಿ ಜೆಟ್ ವಿಮಾನ ಖರೀದಿಸಲು ಯೋಜಿಸಿದ್ದರು. ಆದರೆ ಅವರ ಅಮ್ಮ ಹೇಳಿದರು. ನಮ್ಮೂರು ಮದೇರಾ (ಪೂರ್ಚುಗಲ್ನಲ್ಲಿದೆ) ದಲ್ಲಿ ನಾವೆಲ್ಲ ಶಾಲೆಗೆ 10 ಕಿ.ಮೀ ನಡೆದುಕೊಂಡೇ ಹೋಗಬೇಕಿತ್ತು. ಅಪಾಯಕಾರಿ ರಸ್ತೆಗಳಿದ್ದವು. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಬಡ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ದೂರ ದೂರ ನಡೆಯಲೇಬೇಕು. ಅವರಿಗೆ ಏನಾದರೂ ಮಾಡಲು ಸಾಧ್ಯವಿದ್ದರೆ ಮಾಡು ವಿಮಾನಕ್ಕೆಲ್ಲ ದುಡ್ಡು ಹಾಕೋದು ಬೇಡ ಅಂದರು. ರೊನಾಲ್ಡೊ ಕೂಡಲೇ ಕಾರ್ಯ ಪ್ರವೃತ್ತರಾದರು. 100 ಬಸ್ ಖರೀದಿಸಿ ಅಲ್ಲಿಯ ಶಾಲೆಗಳಿಗೆ ದೇಣಿಗೆ ನೀಡಿದರು. ಆ ಶಾಲೆಗಳಲ್ಲಿ ಫುಟ್ಬಾಲ್ ಮತ್ತು ಕ್ರೀಡಾ ಕಲಿಕೆಗೆ ನಿರಂತರ ಸಹಾಯ ಕೂಡ ಮಾಡುತ್ತಿದ್ದಾರೆ. ಆದರೂ ಅಮ್ಮನಿಗಾಗಿ ದುಬಾರಿ ಐಷಾರಾಮಿ ಕಾರೊಂದನ್ನು ಕಾಣಿಕೆ ನೀಡಿದರು. ‘ನಾವೆಲ್ಲ ಬಡತನದಲ್ಲಿ ಬೆಳೆದವರು. ತಾನು ರಾತ್ರಿ ಉಪವಾಸ ಮಲಗಿ ನಮಗೆ ಊಟ ಹಾಕಿದ ತಾಯಿ ಅವರು. ಇವತ್ತು ನಾನು ಇರುವುದೇ ಅವಳಿಂದ’ ಎಂದು ಭಾವುಕರಾಗಿ ಹೇಳುತ್ತಾರೆ ರೊನಾಲ್ಡೊ.ಬ್ರೆಡ್ ಕೊಟ್ಟವರನ್ನೂ ಮರೆಯಲಿಲ್ಲಶ್ರೀಮಂತರ ಮನೆಗಳಲ್ಲಿ ಪರಿಚಾರಿಕೆಯಾಗಿದ್ದ ಅಮ್ಮನಿಗೆ ಸಹಾಯ ಮಾಡಲು ರೊನಾಲ್ಡೊ ಕೂಡ ನೆಲ ಒರೆಸಿ, ಕಸಗುಡಿಸುವ ಕೆಲಸ ಮಾಡುತ್ತಿದ್ದರು. ಓದು, ಕೆಲಸದ ಮಧ್ಯೆ ಫುಟ್ಬಾಲ್ ಆಡುವುದನ್ನು ಮರೆಯುತ್ತಿರಲಿಲ್ಲ. ಸಂಜೆಯಾದರೆ ಮೈದಾನದಲ್ಲಿ ರೊನಾಲ್ಡೊ ಕಾಲ್ಚಳಕದ ಕರಾಮತ್ತು ಮುಗಿಲುಮುಟ್ಟುತ್ತಿತ್ತು. ಆದರೆ ಹೊತ್ತು ಮುಳುಗಿ ಆಟ ನಿಂತಾಗ ಹಸಿದ ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎಂಬ ಚಿಂತೆ. ತನ್ನ ಹಾಗೂ ಸ್ನೇಹಿತರ ಜೇಬುಗಳನ್ನು ಜಾಡಿಸಿದಾಗ ಸಿಗುತ್ತಿದ್ದ ಪುಡಿಗಾಸು ಹಿಡಿದು ಪಕ್ಕದ ಬೇಕರಿಗೆ ಓಡುತ್ತಿದ್ದರು. ಅಲ್ಲೊಬ್ಬ ಮಹಿಳೆ ಕೆಲಸ ಮಾಡುತ್ತಿದ್ದರು. ಪ್ರತಿದಿನ ಬರುತ್ತಿದ್ದ ಈ ಹುಡುಗರು ಕೊಡುತ್ತಿದ್ದ ಪುಡಿಗಾಸು ಪಡೆದು ಹೊಟ್ಟೆ ತುಂಬ ಬ್ರೆಡ್, ಬಿಸ್ಕಿಟ್ ನೀಡುತ್ತಿದ್ದಳು. ಕೆಲವೊಮ್ಮೆ ದುಡ್ಡಿಲ್ಲದಿದ್ದರೂ ತನ್ನ ವ್ಯಾಪಾರದಲ್ಲಿ ಉಳಿಸಿದ್ದ ಬ್ರೆಡ್, ಬಟರ್ ಕೊಡುತ್ತಿದ್ದಳು. ರೊನಾಲ್ಡೊ ಬಹುಕೋಟಿ ಒಡೆಯ ಆದ ನಂತರವೂ ಆ ದಿನಗಳನ್ನು ಮರೆತಿರಲಿಲ್ಲ. ಅದೆಷ್ಟೋ ಬಾರಿ ಆ ಬೇಕರಿ ಇದ್ದ ಜಾಗಕ್ಕೆ ಹೋಗಿ ಹುಡುಕಿಯೂ ಬಂದಿದ್ದರು. ಆದರೆ ಆಕೆ ಸಿಕ್ಕಿರಲಿಲ್ಲ. ತನ್ನೆಲ್ಲ ಸ್ನೇಹಿತರಿಗೂ ಆಕೆಯ ಬಗ್ಗೆ ಹೇಳಿದ್ದರು. ಅದೊಂದು ದಿನ ತಮ್ಮ ಕಾರಿನಲ್ಲಿ ಅದೆಲ್ಲಿಗೋ ಪಯಣಿಸುತ್ತಿದ್ದ ರೊನಾಲ್ಡೊಗೆ ಆ ಮಹಿಳೆಯು ಬಸ್ ನಿಲ್ದಾಣವೊಂದರಲ್ಲಿ ನಿಂತಿದ್ದು ಕಂಡಿತು. ತಟ್ಟನೆ ಕಾರು ನಿಲ್ಲಿಸಿ ಆಕೆಯ ಬಳಿ ಓಡಿದರು ರೊನಾಲ್ಡೊ. ಆಕೆಗೆ ವಯಸ್ಸಾಗಿತ್ತು. ಕಣ್ಣುಗಳು ಮಂಜಾಗಿದ್ದವು. ‘ಯಾರಪ್ಪ ನೀನು’ ಎಂದು ಕೇಳಿದರು. ‘ನಾನು ಕ್ರಿಸ್ಟಿಯಾನೊ ರೊನಾಲ್ಡೊ. ನಿಮ್ಮ ಈ ಕೈಗಳ ಬ್ರೆಡ್ ತಿಂದು ಬೆಳೆದವನು. ಇವತ್ತು ದೊಡ್ಡ ಸ್ಟಾರ್ ಆಗಿರುವೆ. ನಿಮಗೆ ಥ್ಯಾಂಕ್ಯೂ’ ಎಂದ. ಆ ಮಹಿಳೆಯ ಕಣ್ಣುಗಳು ಹನಿಗೂಡಿದವು. ನನ್ನ ಅಂಗಡಿಗೆ ಆಗ ಬಹಳಷ್ಟು ಹುಡುಗರು ಬರುತ್ತಿದ್ದರು. ಆದರೆ ನೀವು ಇಷ್ಟು ದೊಡ್ಡ ವ್ಯಕ್ತಿಯಾದ ನಂತರವೂ ನೆನಪಿಟ್ಟುಕೊಂಡಿದ್ದೀರಲ್ಲಾ ಅದೇ ವಿಶೇಷ. ಖುಷಿಯಾಯಿತು ಎಂದು ಆನಂದಭಾಷ್ಪ ಸುರಿಸಿದರು. ‘ನಾನು ನಿಮಗೆ ಕಾಣಿಕೆ ಕೊಡಬೇಕು ಏನು ಕೊಡಲಿ’ ಎಂದ ರೊನಾಲ್ಡೊಗೆ, ಆಕೆ, ‘ಇನ್ನಷ್ಟು ಯಶಸ್ಸು ಸಾಧಿಸಿ, ಚೆನ್ನಾಗಿರು, ಗಾಡ್ ಬ್ಲೆಸ್ ಯೂ..’ ಎಂದಷ್ಟೇ ಹೇಳಿದರು. ರೊನಾಲ್ಡೊ ತಮ್ಮ ಮ್ಯಾನೇಜರ್ಗೆ ಕರೆ ಮಾಡಿದರು. ತಮ್ಮ ಹೆಸರಿನಲ್ಲಿದ್ದ ಒಂದು ರೆಸ್ಟೊರೆಂಟ್ ಅನ್ನು ತತ್ಕ್ಷಣವೇ ಆ ಮಹಿಳೆಯ ಹೆಸರಿಗೆ ವರ್ಗಾಯಿಸುವಂತೆ ಸೂಚಿಸಿದರು. ಕೆಲವೇ ದಿನಗಳಲ್ಲಿ ಆಕೆ ಆ ಹೋಟೆಲ್ ಒಡತಿಯೂ ಆದರು. ರಕ್ತದಾನ ಮತ್ತು ಟ್ಯಾಟೂ1.4 ಬಿಲಿಯನ್ ಡಾಲರ್ ಒಡೆಯನಾಗಿರುವ ರೊನಾಲ್ಡೊ ರಕ್ತದಾನಿಯೂ ಹೌದು. ಕ್ರೀಡಾಪಟುಗಳು, ಸಿನಿತಾರೆಯರಿಗೆ ಈಗ ಮೈಕೈಗಳಿಗೆ ಟ್ಯಾಟೂ ಹಾಕಿಸಿಕೊಳ್ಳುವುದು ದೊಡ್ಡ ಫ್ಯಾಷನ್. ಆದರೆ ರೊನಾಲ್ಡೊ ಮೈಮೇಲೆ ಒಂದೇ ಒಂದು ಟ್ಯಾಟೂ ಇಲ್ಲ. ಅದಕ್ಕೆ ಕಾರಣವೆಂದರೆ ಅವರು ರಕ್ತದಾನಿ. ಹೌದು; ಟ್ಯಾಟೂ ಬರೆಸಿಕೊಂಡರೆ ಅದರ ಬಣ್ಣದಲ್ಲಿ ರಾಸಾಯನಿಕವು ಚರ್ಮದ ಮೂಲಕ ದೇಹದೊಳಗೆ ಸೇರುತ್ತದೆ. ಆಗ ಕನಿಷ್ಠ ಆರೇಳು ತಿಂಗಳು ರಕ್ತದಾನ ಮಾಡುವಂತಿಲ್ಲ. ಯಾರಿಗೋ ತುರ್ತು ರಕ್ತ ಬೇಕಾದರೆ ಏನು ಮಾಡುವುದು? ಅದಕ್ಕೇ ಟ್ಯಾಟೂ (ಹಚ್ಚೆ) ಹಾಕಿಸಿಕೊಂಡಿಲ್ಲ ಎಂದು ರೊನಾಲ್ಡೊ ಸ್ಪಷ್ಟವಾಗಿ ಹೇಳುತ್ತಾರೆ. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ವಿಷಯ ಬಂದಾಗ ರೊನಾಲ್ಡೊ ಎಂದಿಗೂ ರಾಜೀ ಮಾಡಿಕೊಳ್ಳಲಿಲ್ಲ. ತಮ್ಮ ಮಕ್ಕಳಿಗೂ ಅದೇ ಪಾಠ ಹೇಳಿಕೊಡುತ್ತಿದ್ದಾರೆ.ಭವಿಷ್ಯದಲ್ಲಿ ರೊನಾಲ್ಡೊ ಅವರ ಫುಟ್ಬಾಲ್ ದಾಖಲೆಗಳನ್ನು ಮುರಿಯಬಲ್ಲ ಆಟಗಾರರು ಬರಬಹುದು. ಆದರೆ ಅವರ ವ್ಯಕ್ತಿತ್ವವನ್ನು ಸರಿಗಟ್ಟುವರು ಬರುವರೇ?