ಕೊಪ್ಪಳ| ಜಿಲ್ಲೆಯಲ್ಲಿಯೂ ಅನ್ನಭಾಗ್ಯ ಅಕ್ಕಿಯ ವಂಚನೆ: ಲೋಕಾಯುಕ್ತ
ಕೊಪ್ಪಳ: ‘ಹಸಿವಿನಿಂದ ಯಾರೂ ಸಾಯಬಾರದೆಂದು ಸರ್ಕಾರ ಅನ್ನಭಾಗ್ಯದ ಪಡಿತರ ಅಕ್ಕಿ ನೀಡುತ್ತಿದ್ದರೆ ಅದರಲ್ಲಿ ಶೇ. 30ರಿಂದ 40ರಷ್ಟು ಜನರಿಗೆ ಅಕ್ಕಿಯೇ ತಲುಪುತ್ತಿಲ್ಲ. ಅಧಿಕಾರಿಗಳಿಗೆ ಸರ್ಕಾರ ನೌಕರಿ ಕೊಟ್ಟು, ಸಂಬಳವನ್ನೂ ಕೊಡುತ್ತಿದ್ದರೂ ಅವರೇ ಕಳ್ಳರಾಗುತ್ತಿದ್ದಾರೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.ಎರಡು ದಿನಗ

ಕೊಪ್ಪಳ: ‘ಹಸಿವಿನಿಂದ ಯಾರೂ ಸಾಯಬಾರದೆಂದು ಸರ್ಕಾರ ಅನ್ನಭಾಗ್ಯದ ಪಡಿತರ ಅಕ್ಕಿ ನೀಡುತ್ತಿದ್ದರೆ ಅದರಲ್ಲಿ ಶೇ. 30ರಿಂದ 40ರಷ್ಟು ಜನರಿಗೆ ಅಕ್ಕಿಯೇ ತಲುಪುತ್ತಿಲ್ಲ. ಅಧಿಕಾರಿಗಳಿಗೆ ಸರ್ಕಾರ ನೌಕರಿ ಕೊಟ್ಟು, ಸಂಬಳವನ್ನೂ ಕೊಡುತ್ತಿದ್ದರೂ ಅವರೇ ಕಳ್ಳರಾಗುತ್ತಿದ್ದಾರೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.ಎರಡು ದಿನಗಳಿಂದ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಲವು ಅಧಿಕಾರಿಗಳ ವಿರುದ್ಧ ದಾಖಲಾದ ಪ್ರಕರಣಗಳ ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು. ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ‘ಹಲವು ಅಧಿಕಾರಿಗಳ ನಡೆಯಿಂದ ಮನಸ್ಸಿಗೆ ತೀವ್ರ ನೋವಾಗಿದೆ. ಆದ್ದರಿಂದ ಅವರ ಬಗ್ಗೆ ಕಠೋರವಾಗಿಯೇ ಹೇಳಬೇಕಾಗಿದೆ’ ಎಂದರು.‘ರಾಜ್ಯದ ಅನೇಕ ಕಡೆ ಅನ್ನಭಾಗ್ಯದ ಅಕ್ಕಿ ವಿದೇಶಗಳಿಗೆ ಮಾರಾಟವಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿಯೂ ಇದೇ ರೀತಿ ಘಟನೆಗಳು ನಡೆಯುತ್ತಿವೆ. ಮೋಸ ಮಾಡಲು ಎಷ್ಟು ಹಾದಿಗಳಿವೆಯೊ ಅದೆಲ್ಲವನ್ನೂ ಬಳಸಿಕೊಳ್ಳುತ್ತಿದ್ದಾರೆ. ಪಡಿತರ ಅಂಗಡಿಯವನು ಅಧಿಕಾರಿಗಳಿಗೆ ಎಂಟು ಕೆ.ಜಿ. ಅಕ್ಕಿ ಉಳಿಸಿ ಲಂಚ ಕೊಡಬೇಕು. ನನಗೆ ಏನು ಸಿಗುತ್ತದೆ ಎನ್ನುವ ಆಸೆಗಳ್ಳರೇ ಹೆಚ್ಚಾಗಿದ್ದಾರೆ. ಆದ್ದರಿಂದ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು’ ಎಂದು ಸೂಚನೆ ನೀಡಿದರು.ಜಿಲ್ಲೆಯಲ್ಲಿರುವ ಕೆರೆಗಳು, ಒತ್ತುವರಿಯಾದ ಪ್ರಮಾಣ, ಅಲ್ಲಿನ ನೀರು ಕುಡಿಯಲು ಯೋಗ್ಯವೇ? ಹೀಗೆ ಅನೇಕ ಮಾಹಿತಿಗಳನ್ನು ಪಡೆದ ಲೋಕಾಯುಕ್ತ ನ್ಯಾಯಮೂರ್ತಿಯವರು ಕೆರೆಯಲ್ಲಿನ ನೀರು ಬಳಕೆಗೆ ಯಾಕೆ ಯೋಗ್ಯವಲ್ಲ ಎನ್ನುವ ಬಗ್ಗೆ ವರದಿ ನೀಡಬೇಕು, ಸುಧಾರಣಾ ಕ್ರಮಗಳ ಮಾಹಿತಿಯನ್ನೂ ಕೊಡಬೇಕು ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟರು.ಅಧಿಕಾರಿಗಳು ತಮ್ಮ ಆಡಳಿತ ವೈಖರಿಯಲ್ಲಿ ಬದಲಾವಣೆ ತರಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಅರ್ಹರಿಗೆ ಸರ್ಕಾರದ ಯೋಜನೆ ಸಮರ್ಪಕವಾಗಿ ದೊರಕಿಸಿಕೊಡಬೇಕು. ಸರ್ಕಾರ ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಅನುದಾನ ಒದಗಿಸುತ್ತಿದೆ. ಅವು ಎಲ್ಲರಿಗೂ ತಲುಪಬೇಕು ಎಂದರು. ಲೋಕಾಯುಕ್ತದ ಕಾರ್ಯದರ್ಶಿ ಶ್ರೀನಾಥ, ಹೆಚ್ಚುವರಿ ನಿಬಂಧಕ ಕೃಷ್ಣಯ್ಯ, ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ನಿರ್ಮಲಾ, ಕರ್ನಾಟಕ ಲೋಕಾಯುಕ್ತದ ರಾಯಚೂರು ಎಸ್.ಪಿ. ಸಿದ್ದರಾಜು ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.ಸಭೆಯಲ್ಲಿ ನ್ಯಾಯಮೂರ್ತಿಯವರು ಹೇಳಿದ್ದೇನು?* ಕಾರಟಗಿ ತಾಲ್ಲೂಕಿನ ಸಿದ್ದಾಪುರದಲ್ಲಿ ಅಕ್ರಮ ಮರಳು ಸಾಗಾಟದ ದೂರು. ಎರಡು ವಾರಗಳಲ್ಲಿ ವರದಿ ನೀಡಲು ಸೂಚನೆ.* ಕೊಪ್ಪಳ ಉಪನೋಂದಣಿ ಕಚೇರಿಯಲ್ಲಿ 180 ಅರ್ಜಿ ವಿಲೇವಾರಿ ಬಾಕಿ, ಮೂವರು ಅನಧಿಕೃತವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ದೂರು ಇದೆ. ಸ್ವಯಂಪ್ರೇರಿತ ದೂರು ದಾಖಲು * ಸರ್ಕಾರದ ಯೋಜನೆ ಹಾಗೂ ಅನುದಾನ ಅರ್ಹರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ.* ಅಧಿಕಾರಿಗಳು ಅಥವಾ ಸಿಬ್ಬಂದಿ ಭ್ರಷ್ಟಾಚಾರ ನಡೆಸಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ.* ಜಿಲ್ಲೆಯ ಆಡಳಿತದಲ್ಲಿ ಜನಪರ ಕಾಳಜಿ, ಚಾಕಚಕ್ಯತೆ ಇದ್ದರೆ ರಾಜ್ಯದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಲು ಸಾಧ್ಯ.* ಜಿಲ್ಲೆಯಲ್ಲಿ ಭ್ರಷ್ಟಾಚಾರದ ಆರೋಪದ ಬಗ್ಗೆ ಹತ್ತು ಪ್ರಕರಣಗಳು ದಾಖಲು. ಆರೋಪ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಶಿಫಾರಸು.* ಅಧಿಕಾರಿ ಹಾಗೂ ಸಿಬ್ಬಂದಿ ದುರಾಸೆಗೊಳಗಾಗಿ ತಾವು ಮಾಡುವ ತಪ್ಪಿಗೆ ತಮ್ಮ ಕುಟುಂಬವನ್ನು ಮುಜುಗರಕ್ಕೆ ತಳ್ಳುತ್ತಾರೆ. ನಾವು ಬೆಳೆದು ಬಂದ ಹಾದಿಯಲ್ಲಿ, ತಂದೆ ತಾಯಿಯರ ಮಾರ್ಗದರ್ಶನದಲ್ಲಿ ಪ್ರಜ್ಞೆಯೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು.* ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯ, ವಸತಿ ಶಾಲೆಗಳಲ್ಲಿ ಸಾಮರ್ಥ್ಯ ಮೀರಿ ಪ್ರವೇಶ ನೀಡಬೇಡಿ. ಇದರಿಂದ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯದ ಕೊರತೆ ಎದುರಾಗುತ್ತದೆ. ಹೆಚ್ಚುವರಿ ಸಂಖ್ಯೆ ಇರುವ ವಸತಿ ನಿಲಯಗಳಿಂದ ವಿದ್ಯಾರ್ಥಿಗಳನ್ನು ಬಾಡಿಗೆ ಕಟ್ಟಡಗಳಿಗೆ ವರ್ಗಾಯಿಸಲು ಸೂಚನೆ.