ಮೊಮ್ಮಗಳಿಗೆ ಆಟಿಕೆ ತೊಟ್ಟಿಲು ಖರೀದಿಸಿದ ಡಿಕೆಶಿ
ಬೆಂಗಳೂರು: ‘ತೊಟ್ಟಿಲು ನಂಗೇ ಕೊಡಮ್ಮ, ಮೊಮ್ಮಗಳಿಗೆ ಕೊಡ್ತೇನೆ. ಎಷ್ಟು ರೂಪಾಯಿ ಆಗುತ್ತೆ ಇದಕ್ಕೆ... ’ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಜತೆ ಶುಕ್ರವಾರ ನಡೆಸಿದ ಸಂವಾದ ವೇಳೆ ಕಲಬುರಗಿ ಜಿಲ್ಲೆಯ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನೇ ಬಂಡವಾಳವಾಗಿಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸಿ, ಮಾರಾಟ ಮಾಡುತ್ತಿರುವುದಾಗಿ ಹೆಮ್ಮೆಯಿಂದ ಹೇಳಿ, ತೊಟ್ಟಿಲು, ದ

ಬೆಂಗಳೂರು: ‘ತೊಟ್ಟಿಲು ನಂಗೇ ಕೊಡಮ್ಮ, ಮೊಮ್ಮಗಳಿಗೆ ಕೊಡ್ತೇನೆ. ಎಷ್ಟು ರೂಪಾಯಿ ಆಗುತ್ತೆ ಇದಕ್ಕೆ... ’ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಜತೆ ಶುಕ್ರವಾರ ನಡೆಸಿದ ಸಂವಾದ ವೇಳೆ ಕಲಬುರಗಿ ಜಿಲ್ಲೆಯ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನೇ ಬಂಡವಾಳವಾಗಿಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸಿ, ಮಾರಾಟ ಮಾಡುತ್ತಿರುವುದಾಗಿ ಹೆಮ್ಮೆಯಿಂದ ಹೇಳಿ, ತೊಟ್ಟಿಲು, ದೀಪ ಮತ್ತಿತರ ಸಾಮಗ್ರಿ ಪ್ರದರ್ಶಿಸಿದರು. ಆಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ಮೇಲಿನಂತೆ ಇತ್ತು.ಹಣ ಪಡೆಯಲು ಮಹಿಳೆ ನಿರಾಕರಿಸಿದರು. ಆದರೆ, ಮುಖ್ಯಮಂತ್ರಿ ₹500 ನೀಡಿ ತೊಟ್ಟಿಲು ಖರೀದಿಸಿದರು. ‘ಮಗುವಿಗೆ ಶುಭವಾಗಲಿ’ ಎಂದು ಮಹಿಳೆ ಹಾರೈಸಿದರು. ‘ನನ್ನ ಮಗ ಕೊಪ್ಪಳದಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಗೃಹಲಕ್ಷ್ಮಿ ಹಣದಿಂದ ಸುಮಾರು ₹59 ಸಾವಿರ ಶುಲ್ಕ ಕಟ್ಟಿದ್ದೇನೆ. ಶಕ್ತಿ ಯೋಜನೆ ಇರುವ ಕಾರಣಕ್ಕೆ ಮಗನನ್ನು ನೋಡಿಕೊಂಡು ಬರಲು ಅನುಕೂಲವಾಗಿದೆ’ ಎಂದು ಚಿಕ್ಕಮಗಳೂರು ಜಿಲ್ಲೆಯ ಮಹಿಳೆ ಹೇಳಿದಾಗ ಸಭಾಂಗಣದಲ್ಲಿದ್ದ ಜನರು ಭಾವುಕರಾದರು. ‘ನಮ್ಮ ಮಗಳು ಪಿಯುಸಿ ಓದುತ್ತಿದ್ದಾಳೆ. ಅವಳಿಗೆ ನೃತ್ಯದ ಆಸಕ್ತಿ ಇದೆ. ನೃತ್ಯ ಕಾರ್ಯಕ್ರಮ ನೀಡಲು ಮಲೇಷ್ಯಾಗೆ ಕಳುಹಿಸಲು ಗೃಹಲಕ್ಷ್ಮಿ ಹಣ, ಉಳಿತಾಯದ ಹಣ ನೆರವಾಯಿತು’ ಎಂದು ಚನ್ನರಾಯಪಟ್ಟಣ ತಾಯಿಯೊಬ್ಬರು ಹೇಳಿದಾಗ ಸಭಾಂಗಣವೇ ಕರತಾಡತನದಲ್ಲಿ ಮುಳುಗಿತು.ತುಮಕೂರು ಜಿಲ್ಲೆಯ ತ್ರಿವೇಣಿ ಬಸವರಾಜ್ ಅವರು ತಮ್ಮ ಸಿರಿಧಾನ್ಯ, ರಾಗಿ ಉತ್ಪನ್ನಗಳ ಮಾರಾಟಕ್ಕೆ ಗೃಹಲಕ್ಷ್ಮಿ ನೆರವಾಗಿದ್ದನ್ನು ಹೆಮ್ಮೆಯಿಂದ ವಿವರಿಸಿದರು. ತರೀಕೆರೆಯ ಲಂಬಾಣಿ ಸಮಾಜದ ಮಹಿಳೆಯೊಬ್ಬರು, ‘ಗೃಹಲಕ್ಷ್ಮಿ ಯೋಜನೆಯ ಮೊತ್ತವು ಲಂಬಾಣಿ ಕಸೂತಿ ಉದ್ಯಮವನ್ನು ದೊಡ್ಡಮಟ್ಟದಲ್ಲಿ ಪ್ರಾರಂಭಿಸಲು ಅನುಕೂಲವಾಯಿತು’ ಎಂದು ಸ್ಮರಿಸಿದರು.ಕಲಬುರಗಿಯ ಅಫಜಲಪುರ ತಾಲ್ಲೂಕಿನ ಶ್ರೀದೇವಿ ಪಾಟೀಲ ಅವರು 'ಗೃಹಲಕ್ಷ್ಮಿ ಹಣವನ್ನು ಅಂಗನವಾಡಿ ಮಕ್ಕಳಿಗೆ ಯುನಿಫಾರಂ ನೀಡಲು ಬಳಸಿದ್ದೇನೆ’ ಎಂದರು.ವಿಜಯಪುರ ಜಿಲ್ಲೆಯ ಚಡಚಣದ ಮಹಿಳೆಯು ಜರ್ಸಿ ಆಕಳು ಖರೀದಿಸಿ, ಹೈನುಗಾರಿಕೆ ಮಾಡುತ್ತಿರುವುದಾಗಿ ವಿವರಿಸಿದರು. ‘ಬದುಕಿನ ಏಕಾಂಗಿ ಹೋರಾಟದಲ್ಲಿ ಗೃಹಲಕ್ಷ್ಮಿ ಜತೆಯಾಗಿದೆ. ರೊಟ್ಟಿ ಮಾರಿ ಬದುಕುತ್ತಿದ್ದ ನಾನು ಗೃಹಲಕ್ಷ್ಮಿ ಮೊತ್ತದಲ್ಲಿ ರೊಟ್ಟಿ ಯಂತ್ರ ಖರೀದಿಸಿ, ಇಬ್ಬರು ಸಹಾಯಕಿಯರ ನೆರವಿನಿಂದ ಕೆಲಸ ಮಾಡುತ್ತಿದ್ದೇನೆ’ ಚಿತ್ರದುರ್ಗದ ವಿಧವೆಯೊಬ್ಬರು ಹೇಳಿದರು. ‘ಹೊಲಿಗೆಯಂತ್ರ ಖರೀದಿಸಿ, ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದ್ದಲ್ಲದೆ ಮೂವರಿಗೆ ಉದ್ಯೋಗ ನೀಡಿದೆ. ಪ್ರತಿಯೊಬ್ಬರೂ ದಿನಕ್ಕೆ ₹2 ಸಾವಿರ ದುಡಿಯುತ್ತಿದ್ದಾರೆ. ಇದರಿಂದಾಗಿ ಪತಿಯ ಗೌರವ, ಅತ್ತೆ ಮಾವಂದಿರ ಪ್ರೀತಿ ಲಭಿಸಿದೆ’ ಎಂದು ರಾಯಚೂರಿನ ಮಹಿಳೆ ನುಡಿದರು. ಶಿವಮೊಗ್ಗ ಜಿಲ್ಲೆಯ ಕೂಲಿಕಾರ ಮಹಿಳೆಯೊಬ್ಬರು ಕೋಳಿ ವ್ಯಾಪಾರ ಪ್ರಾರಂಭಿಸಿದ ಯಶೋಗಾಥೆ ತೆರೆದಿಟ್ಟರು. ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕು ಗಂಡಬೊಮ್ಮನಹಳ್ಳಿ ಪಂಚಾಯಿತಿಯ ಮಹಿಳೆಯೊಬ್ಬರು ಸ್ವಸಹಾಯ ಗುಂಪಿನ ಗೆಳತಿಯರ ಜತೆ ಸೇರಿ ಕುರಿ ಸಾಕಾಣಿಕೆ ಉದ್ಯಮ ಬೆಳೆಸಿದ ಪರಿಯನ್ನು ವಿವರಿಸಿದರು. ‘ಐದು ಕುರಿಯಿಂದ ಪ್ರಾರಂಭವಾಗಿ ಇಂದು 300 ಕುರಿಗಳನ್ನು ಸಾಕುತ್ತಿರುವೆ’ ಎಂದು ಹೇಳಿದರು. ಊರಿನ ಸಮಸ್ಯೆಗಳಿಗೂ ಪರಿಹಾರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಜತೆ ನಡೆದ ಸಂವಾದದ ವೇಳೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲದೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆಗಳನ್ನು ಮಹಿಳೆಯೊಬ್ಬರು ಗಮನಕ್ಕೆ ತಂದರು. ತಕ್ಷಣ ಸ್ಪಂದಿಸಿದ ಶಿವಕುಮಾರ್ ತಕ್ಷಣ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ತಮಗಾದ ಅನುಕೂಲ ತಮ್ಮ ಅನುಭವಗಳನ್ನು ಮುಕ್ತವಾಗಿ ತೆರೆದಿಟ್ಟರು. ತಮ್ಮ ಊರಿನ ಸಮಸ್ಯೆಗಳನ್ನೂ ಮುಖ್ಯಮಂತ್ರಿ ಗಮನಕ್ಕೆ ತಂದು ಪರಿಹಾರ ಪಡೆದರು. ‘ಗೃಹಲಕ್ಷ್ಮಿಗೆ ಜಾನಪದ ಗೀತೆಯೇ ಪ್ರೇರಣೆ’ ‘ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದವ್ವ ನಾಯಿಗಿಂತ ಕಡೆಯಾಗಿ ಹೋಯಿತೇ ನನ್ನ ಬಾಳು ಕೇಳವ್ವ ಜಾನಪದ ಹಾಡು ಗೃಹಲಕ್ಷ್ಮಿ ಯೋಜನೆ ಜಾರಿಗೆ ಪ್ರೇರಣೆ’ ಎಂದು ಶಿವಕುಮಾರ್ ಹೇಳಿದರು. ‘ಒಂದು ರಾತ್ರಿ ನನ್ನ ಸಹೋದರ ಸಂಬಂಧಿ ಈ ಹಾಡು ಹೇಳುವಾಗ ಗೃಹಲಕ್ಷ್ಮಿ ಯೋಜನೆ ಕುರಿತ ಕಲ್ಪನೆ ಮೂಡಿತು. ಹೆಣ್ಣುಮಕ್ಕಳಿಗೆ ಶಕ್ತಿ ನೀಡಬೇಕು ಎಂದು ನಿರ್ಧರಿಸಿ ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಾಯಿತು’ ಎಂದರು. ‘ಮಹಿಳೆಯರಿಗೆ ಶಕ್ತಿ ತುಂಬಬೇಕು. ಸರ್ಕಾರ ಅವರಿಗೆ ತವರಿನ ಪ್ರೀತಿ ವಾತ್ಸಲ್ಯ ನೀಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಗೃಹಲಕ್ಷ್ಮಿ ಆರಂಭಿಸಲಾಗಿದೆ’ ಎಂದು ಹೇಳಿದರು.