ಬಾಡೂಟಕ್ಕೆ ಕರೆಸಿ 7 ಮಂದಿ ಹತ್ಯೆ: ಮೃತದೇಹಗಳನ್ನು ಬೇರೆ ಬೇರೆ ಕಡೆ ಬಿಸಾಡಿದ ಆರೋಪಿ
ಬೆಂಗಳೂರು: ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಹಾಗೂ ಆಕೆಯ ತವರು ಮನೆಯ ಏಳು ಮಂದಿಯನ್ನು ಮನೆಗೆ ಪ್ರತ್ಯೇಕವಾಗಿ ಕರೆಸಿಕೊಂಡು, ರುಬ್ಬುವ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಘಟನೆ ರಾಜಾಜಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಭಾಷ್ಯಂ ಸರ್ಕಲ್ ಸಮೀಪದ 59ನೇ ಕ್ರಾಸ್ ನಿವಾಸಿಯಾದ ಕ್ಯಾಬ್ ಚಾಲಕ ಇಂದುಶೇಖರ್ ಅಲಿಯಾಸ್ ಅರ್ಜುನ್ನನ್ನು (52) ಪೊಲೀಸರು ಬಂಧಿಸಿದ್ದಾ

ಬೆಂಗಳೂರು: ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಹಾಗೂ ಆಕೆಯ ತವರು ಮನೆಯ ಏಳು ಮಂದಿಯನ್ನು ಮನೆಗೆ ಪ್ರತ್ಯೇಕವಾಗಿ ಕರೆಸಿಕೊಂಡು, ರುಬ್ಬುವ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಘಟನೆ ರಾಜಾಜಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಭಾಷ್ಯಂ ಸರ್ಕಲ್ ಸಮೀಪದ 59ನೇ ಕ್ರಾಸ್ ನಿವಾಸಿಯಾದ ಕ್ಯಾಬ್ ಚಾಲಕ ಇಂದುಶೇಖರ್ ಅಲಿಯಾಸ್ ಅರ್ಜುನ್ನನ್ನು (52) ಪೊಲೀಸರು ಬಂಧಿಸಿದ್ದಾರೆ. ಆರೋಪಿಯ 17 ವರ್ಷದ ಪುತ್ರಿ ಹಾಗೂ ಮತ್ತೊಬ್ಬ ಬಾಲಕ ಕೃತ್ಯಕ್ಕೆ ಸಹಕರಿಸಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯ ಪತ್ನಿ ಸುನಿತಾ (39), ಅತ್ತೆ ರೂಪವತಿ (62), ಬಾಮೈದ ಶಿವಕುಮಾರ್ (30), ಅವರ 7 ವರ್ಷದ ಪುತ್ರ ಪುನೀತ್, ಮತ್ತೊಬ್ಬ ಬಾಮೈದ ಶಂಕರ್ (44), ನಾದಿನಿಯರಾದ ದಿವ್ಯಾ (30), ನಳಿನಿ (29) ಕೊಲೆಯಾದವರು. ಬಳಿಕ ಮತ್ತೊಬ್ಬ ಬಾಲಕನ ಕೊಲೆಗೂ ಆರೋಪಿ ಸಂಚು ರೂಪಿಸಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿಯು ಪತ್ನಿ ಮೇಲಿನ ಕೋಪಕ್ಕೆ ಈ ಕೃತ್ಯ ಎಸಗಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಗೊತ್ತಾಗಿದೆ. ಮನೆಗೆ ಪ್ರತ್ಯೇಕವಾಗಿ ಕರೆಸಿಕೊಂಡು ಬಾಡೂಟದ ಆಮಿಷವೊಡ್ಡಿ, ಊಟದಲ್ಲಿ ಮತ್ತಿನ ಮಾತ್ರೆಗಳನ್ನು ಬೆರೆಸಿ ಪ್ರಜ್ಞಾಹೀನರನ್ನಾಗಿ ಮಾಡಿ, ನಂತರ ರುಬ್ಬುವ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಕೊಲೆ ನಂತರ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿ, ನಂದಿ ಬೆಟ್ಟ, ಚಾರ್ಮಾಡಿ ಘಾಟ್, ತಮಿಳುನಾಡಿನ ಸೇಲಂ ಕಣಿವೆ ಪ್ರದೇಶಗಳಲ್ಲಿ ಬಿಸಾಡಲಾಗಿದೆ. ಕಾರಿನಲ್ಲಿ ಮೃತದೇಹಗಳನ್ನು ಸಾಗಿಸಿರುವ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.ನಂದಿಬೆಟ್ಟದ ಸಮೀಪ ಏಳು ವರ್ಷದ ಪುನೀತ್ನ ಶವ ಪತ್ತೆಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿಗೆ ತರಲಾಗಿದೆ. ಇತರ ಶವಗಳ ಶೋಧ ಕಾರ್ಯ ನಡೆಯುತ್ತಿದೆ.15–20 ದಿನಗಳ ಅವಧಿಯಲ್ಲಿ ಕೊಲೆ: 15–20 ದಿನಗಳ ಅವಧಿಯಲ್ಲಿ ಎಲ್ಲರನ್ನೂ ಊಟ ಹಾಗೂ ಮದ್ಯದ ಪಾರ್ಟಿ ನೆಪದಲ್ಲಿ ಪ್ರತ್ಯೇಕವಾಗಿ ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದು, ಅಕ್ಟೋಬರ್ 16ರಂದು ಮೊದಲು ಪತ್ನಿ ಸುನಿತಾಳನ್ನು ಕೊಲೆ ಮಾಡಿದ್ದ. ಬಳಿಕ, ಪತ್ನಿಯು ಸ್ನೇಹಿತೆಯರ ಜತೆ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ಕುಟುಂಬದವರು ಹಾಗೂ ಅಕ್ಕಪಕ್ಕದವರನ್ನು ನಂಬಿಸಿದ್ದ. ನಂತರ ರೂಪವತಿ, ಪುನೀತ್ ಅವರನ್ನು ಕೊಲೆ ಮಾಡಿದ್ದ. ನಾಲ್ಕನೆಯದಾಗಿ ಶಿವಕುಮಾರ್ ಮತ್ತು ಶಂಕರ್ ಅವರನ್ನು ಮದ್ಯದ ಪಾರ್ಟಿ ನೆಪದಲ್ಲಿ ಕರೆಸಿ ಹತ್ಯೆಗೈದಿದ್ದ. ಕೊನೆಯದಾಗಿ ನಳಿನಿ ಮತ್ತು ದಿವ್ಯಾ ಅವರನ್ನು ಊಟಕ್ಕೆ ಆಹ್ವಾನಿಸಿ ಕೊಲೆ ಮಾಡಲಾಗಿದೆ. ಘಟನೆಯಲ್ಲಿ ಶಂಕರ್ ಅವರ ಜೊತೆಗೆ ಬಂದಿದ್ದ 10 ವರ್ಷದ ಮಗ ಬದುಕುಳಿದಿದ್ದಾನೆ.ಯಾರಿಗೂ ಅನುಮಾನ ಬರಬಾರದೆಂದು ಕೊಲೆಯ ಬಳಿಕ ಸ್ಥಳವನ್ನು ರಾಸಾಯನಿಕ ಬಳಸಿ ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ವಿಚಾರಣೆಯ ಪ್ರಕಾರ, ಇಂದುಶೇಖರ್ ಹಾಗೂ ಆತನ ಪತ್ನಿ ಸುನಿತಾ ನಡುವೆ ಎರಡು ದಶಕಗಳಿಂದ ಕೌಟುಂಬಿಕ ವೈಮನಸ್ಸಿತ್ತು. ಗಲಾಟೆ ವೇಳೆ, ಪತ್ನಿ ಪರವಾಗಿ ಆಕೆಯ ತಾಯಿ ಹಾಗೂ ಸಹೋದರರ ಕುಟುಂಬದವರು ನಿಲ್ಲುತ್ತಿದ್ದರು. ತನ್ನ ಸಂಸಾರದಲ್ಲಿ ಅವರ ಹಸ್ತಕ್ಷೇಪ ಹೆಚ್ಚಾಗಿದೆ ಎಂಬ ದ್ವೇಷದಿಂದ ಇಡೀ ಕುಟುಂಬವನ್ನೇ ಮುಗಿಸಲು ಆರೋಪಿ ಸಂಚು ರೂಪಿಸಿದ್ದ ಎಂಬುದು ಗೊತ್ತಾಗಿದೆ.‘ಪತ್ನಿ ಯಾವಾಗಲೂ ನಿಂದಿಸುತ್ತಿದ್ದಳು. ಸಣ್ಣ ವಿಚಾರಕ್ಕೂ ಗಲಾಟೆ ಮಾಡುತ್ತಿದ್ದಳು. ಕೆಲಸಕ್ಕೆ ಬಾರದವನು ಎಂದು ನಿಂದಿಸುತ್ತಿದ್ದಳು ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಅಲ್ಲದೆ ಕೃತ್ಯಕ್ಕೆ ಮಗಳ ಸಹಾಯ ಪಡೆದಿರುವ ಬಗ್ಗೆಯೂ ಮಾಹಿತಿ ನೀಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು. ಶ್ರೀರಾಮಪುರದ ಇಂದುಶೇಖರ್ ಎರಡು ದಶಕದ ಹಿಂದೆ ಸುನಿತಾ ಅವರನ್ನು ವಿವಾಹವಾಗಿದ್ದ. ರೂಪವತಿ ಕುಟುಂಬಕ್ಕೆ ಸೇರಿದ ಸುಮಾರು ₹2.5 ಕೋಟಿ ಮೌಲ್ಯದ ಆಸ್ತಿ ಶ್ರೀರಾಮಪುರದಲ್ಲಿದೆ. ಆಸ್ತಿ ವಿಚಾರವಾಗಿ ಕೆಲ ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು. ಆಸ್ತಿಗಾಗಿಯೇ ಕೊಲೆ ಮಾಡಲಾಗಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.ಒಬ್ಬರ ಹಿಂದೆ ಒಬ್ಬರಂತೆ ವ್ಯಕ್ತಿಗಳು ನಾಪತ್ತೆಯಾಗಿದ್ದರೂ ಆರಂಭದಲ್ಲಿ ಯಾವುದೇ ದೂರು ದಾಖಲಾಗಿರಲಿಲ್ಲ. ನಳಿನಿ ಕಾಣೆಯಾಗಿರುವ ಬಗ್ಗೆ ಆಕೆಯ ತಾಯಿ ತುಂಗಮ್ಮ ಅವರು ನವೆಂಬರ್ 3ರಂದು ಶ್ರೀರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ಸಂಶಯದ ಮೇಲೆ ಇಂದುಶೇಖರ್ನನ್ನು ಆತನ ಮನೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸರಣಿ ಕೊಲೆ ಪ್ರಕರಣ ಗೊತ್ತಾಗಿದೆ. ಆರೋಪಿಯ ಮನೆಯಲ್ಲಿ ಪತ್ತೆಯಾಗಿರುವ ಡೈರಿಯಲ್ಲಿ ಪೊಲೀಸ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳು ಇವೆ. ಇದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.ಕೊಲೆ ಮಾಡಿದ ಬಳಿಕ ಅವರೆಲ್ಲರ ಮೊಬೈಲ್ಗಳನ್ನು ಆರೋಪಿ ತನ್ನ ಬಳಿಯೇ ಇಟ್ಟುಕೊಂಡಿದ್ದ. ಯಾರಾದರೂ ಕರೆ ಮಾಡಿದರೆ, ‘ಎಲ್ಲರೂ ಪ್ರವಾಸದಲ್ಲಿದ್ದೇವೆ. ಇಲ್ಲಿ ನೆಟ್ವರ್ಕ್ ಸಮಸ್ಯೆಯಿದೆ’ ಎಂಬ ಸಂದೇಶ ಕಳುಹಿಸುತ್ತಿದ್ದ. ಹಾಗಾಗಿ, ಕುಟುಂಬದವರಿಗೆ ಅನುಮಾನ ಬಂದಿರಲಿಲ್ಲ. ನಳಿನಿ ಅವರ ಮೊಬೈಲ್ ಲೊಕೇಷನ್ ಪತ್ತೆ ಮಾಡಿ, ಆರೋಪಿಯನ್ನು ಬಂಧಿಸಲಾಯಿತು. ಆತ ನೀಡಿದ ಮಾಹಿತಿ ಆಧರಿಸಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.ಮೃತದೇಹ ಸಾಗಿಸಲು ಗೋಣಿ ಚೀಲ: ಮೃತದೇಹ ಸಾಗಿಸಲು ಪ್ಲಾಸ್ಟಿಕ್ ಮತ್ತು ಗೋಣಿ ಚೀಲಗಳನ್ನು ಆರೋಪಿ ಮೊದಲೇ ತಂದಿಟ್ಟುಕೊಂಡಿದ್ದ. ಸಮಯ ಸಂದರ್ಭ ನೋಡಿಕೊಂಡು ಕೊಲೆ ಮಾಡಿ, ಮೃತದೇಹಗಳನ್ನು ಈ ಚೀಲಗಳಲ್ಲಿ ಪ್ಯಾಕ್ ಮಾಡಿ ಸಾಗಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಕೊಲೆಯಾದವರು12 ದಿನ ಪೊಲೀಸ್ ಕಸ್ಟಡಿಗೆ ಆರೋಪಿಯನ್ನು ರಾಜಾಜಿನಗರ ಠಾಣೆ ಪೊಲೀಸರು ನಗರದ 32ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ನ್ಯಾಯಾಲಯ ಆರೋಪಿಯನ್ನು 12 ದಿನ ಕಸ್ಟಡಿಗೆ ನೀಡಿ ಆದೇಶಿಸಿತು. ಚಿನ್ನದ ಸರ ಕದ್ದಿದ್ದ ಆರೋಪಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಇಂದುಶೇಖರ್ ವಿರುದ್ಧ ಆರು ವರ್ಷಗಳ ಹಿಂದೆ ಚಿನ್ನದ ಸರ ಕಳವು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದರು. 2018ರಲ್ಲಿ ದರೋಡೆ ಪ್ರಕರಣವೊಂದರಲ್ಲಿ ಆರೋಪಿ ಬಂಧಿತನಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದರು. ಭಾಷ್ಯಂ ಸರ್ಕಲ್ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಆರೋಪಿ ತಾನು ವಾಸವಿರುವ ಕಟ್ಟಡದ ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದ. ನಕಲಿ ಸಹಿ ಮಾಡಿ ಕಟ್ಟಡ ತನಗೆ ಸೇರಿದ್ದೆಂದು ಮನೆ ಮಾಲೀಕರನ್ನು ಬೆದರಿಸಿದ್ದ. ‘ಪೊಲೀಸ್ ವಾಯ್ಸ್’ ಎಂಬ ಹೆಸರಿನ ಪತ್ರಿಕೆಯನ್ನು ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಕೃತ್ಯಕ್ಕೆ ಸಹಕಾರ: ಪುತ್ರಿಯ ವಿಚಾರಣೆ ಪ್ರಕರಣದ ತನಿಖೆಗಾಗಿ ಪಶ್ಚಿಮ ಮತ್ತು ಉತ್ತರ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಎರಡು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಲಾಗಿದೆ. ಕೃತ್ಯಕ್ಕೆ ಆರೋಪಿಯ 17 ವರ್ಷದ ಪುತ್ರಿ ಮತ್ತು ಮತ್ತೊಬ್ಬ ಬಾಲಕ ಸಹಕರಿಸಿದ್ದು ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ‘ಆರೋಪಿ ನೀಡುತ್ತಿರುವ ಮಾಹಿತಿ ಆಧರಿಸಿ ಪೊಲೀಸ್ ತಂಡಗಳು ಹೊರ ಜಿಲ್ಲೆಗಳೂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಮೃತದೇಹಗಳ ರವಾನೆಗೆ ಬಳಸಿದ್ದ ಕಾರು ಸೇರಿದಂತೆ ಕೃತ್ಯಕ್ಕೆ ಸಂಬಂಧಿಸಿದ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು. ‘ನವೆಂಬರ್ 3ರಂದು ಪ್ರಕರಣ ದಾಖಲಾಗಿದೆ. ಸಂಬಂಧಿಕರು ಪೊಲೀಸರ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ತಪ್ಪು ಕಂಡುಬಂದರೆ ಪೊಲೀಸ್ ಸಿಬ್ಬಂದಿಯ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿಗೆ ಕಾನೂನು ಪ್ರಕಾರ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳುವುದು ನಮ್ಮ ಗುರಿ’ ಎಂದು ಹೇಳಿದರು. ಶವಗಳಿದ್ದ ಕಾರಿನಲ್ಲೇ ಬಾಲಕ ಸುತ್ತಾಟ ಹತ್ಯೆಗೀಡಾದ ಶಂಕರ್ ಮತ್ತು ನಳಿನಿ ದಂಪತಿಯ ಪುತ್ರನಾಗಿರುವ 11 ವರ್ಷದ ಬಾಲಕ ತನ್ನ ಪೋಷಕರ ಮೃತದೇಹಗಳಿದ್ದ ಕಾರಿನಲ್ಲಿಯೇ ಆರೋಪಿ ಜೊತೆಗೆ ವಿವಿಧೆಡೆ ಪ್ರಯಾಣಿಸಿದ್ದ ಎಂಬುದು ಗೊತ್ತಾಗಿದೆ. ಅಷ್ಟೇ ಅಲ್ಲ ಮೃತದೇಹಗಳನ್ನು ದೊಡ್ಡ ದೊಡ್ಡ ಚೀಲಗಳಲ್ಲಿ ತುಂಬಿ ಬೇರೆ ಬೇರೆ ನಿರ್ಜನ ಪ್ರದೇಶಗಳಲ್ಲಿ ಎಸೆಯುವುದನ್ನು ತಾನು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.ಪೊಲೀಸರಿಗೆ ಹೇಳಿಕೆ ನೀಡಲು ಬಂದಿದ್ದ ಬಾಲಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ‘ಶುಕ್ರವಾರ ಪೋಷಕರೊಂದಿಗೆ ಇಂದುಶೇಖರ್ ಮನೆಗೆ ಹೋಗಿದ್ದೆ. ಅಂದು ರಾತ್ರಿ ಮೂವರೂ ಅಲ್ಲಿಯೇ ಮಲಗಿದ್ದೆವು. ಮರುದಿನ ಬೆಳಿಗ್ಗೆ ನೋಡಿದಾಗ ತಂದೆ ಮನೆಯಲ್ಲಿ ಇರಲಿಲ್ಲ. ಬಳಿಕ ತಾಯಿಯೊಂದಿಗೆ ಹೊರಗೆ ಹೋಗಲು ಮುಂದಾದಾಗ ಮನೆಯಲ್ಲಿದ್ದ ಅಕ್ಕ ನನ್ನನ್ನು ಒಳಗೆ ಎಳೆದುಕೊಂಡು ಬಾಗಿಲು ಹಾಕಿದರು. ಈ ವೇಳೆ ತಾಯಿ ಜೋರಾಗಿ ಕಿರುಚಿದ ಶಬ್ದ ಕೇಳಿಸಿತು. ಆ ನಂತರ ಏನಾಯಿತೆಂದು ನನಗೆ ಗೊತ್ತಿಲ್ಲ’ ಎಂದು ಹೇಳಿದ್ದಾನೆ. ‘ಬಳಿಕ ಇಂದುಶೇಖರ್ ನನ್ನನ್ನು ತನ್ನ ಕಾರಿನಲ್ಲಿ ಕರೆದೊಯ್ದರು. ಈ ವೇಳೆ ಕಾರಿನಲ್ಲಿ ಕೆಲವು ಚೀಲಗಳಿದ್ದವು. ಡಿಕ್ಕಿ ಹಾಗೂ ಆಸನಗಳ ಕೆಳಭಾಗದಲ್ಲಿ ಚೀಲಗಳನ್ನು ಇಡಲಾಗಿತ್ತು. ಚೀಲಗಳ ಬಗ್ಗೆ ಕೇಳಿದಾಗ ಕಸದ ಚೀಲಗಳು ಬೇರೆಡೆ ಎಸೆಯಲು ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದರು. ಕಾರಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಧರ್ಮಸ್ಥಳ ಶೃಂಗೇರಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋದರು’ ಎಂದು ಬಾಲಕ ಮಾಹಿತಿ ನೀಡಿದ್ದಾನೆ. ‘ಮೃತದೇಹಗಳನ್ನು ನಿರ್ಜನ ಪ್ರದೇಶಗಳಲ್ಲಿ ಎಸೆಯುವಾಗ ಇಂದುಶೇಖರ್ ಸುತ್ತಮುತ್ತ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಒಂದೊಂದೇ ಚೀಲಗಳನ್ನು ಎಸೆದುಬರುತ್ತಿದ್ದರು. ಹೀಗೆ ನಾಲ್ಕು ಚೀಲಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿರುವುದನ್ನು ನೋಡಿದ್ದೇನೆ’ ಎಂದು ಬಾಲಕ ತಿಳಿಸಿದ್ದಾನೆ. ಪತ್ನಿಯ ಕುಟುಂಬದವರನ್ನು ಕೊಲೆ ಮಾಡಿದ ಬಳಿಕ ಬಾಲಕನನ್ನೂ ಹತ್ಯೆಗೈಯ್ಯುವ ತಯಾರಿಯಲ್ಲಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದರು. ಇದರಿಂದ ಮತ್ತೊಂದು ಅವಘಡ ತಪ್ಪಿದೆ.