ಪತ್ನಿ ಜೊತೆಗೆ ಹಾಸನಾಂಬೆ ದರ್ಶನ ಪಡೆದ ರೇವಣ್ಣ – ಸಚಿವ ಪುಟ್ಟರಂಗಶೆಟ್ಟಿ ಕಾರು ತಡೆದ ಸಿಬ್ಬಂದಿ
ಹಾಸನ: ನಗರದ ಅಧಿದೇವತೆ ಹಾಸನಾಂಬ ದೇಗುಲದಲ್ಲಿ ಭಕ್ತರ ಮಹಾಪೂರ ಮುಂದುವರಿದಿದ್ದು, ಶುಕ್ರವಾರದ ಪವಿತ್ರ ದಿನದಂದು ರಾಜಕೀಯ ಗಣ್ಯರು ದೇವಿ ದರ್ಶನ ಪಡೆದು ಪುನೀತರಾಗಿದ್ದಾರೆ. ಇನ್ನೊಂದೆಡೆ ತಡರಾತ್ರಿ ಸುರಿದ ಧಾರಾಕಾರ ಮಳೆ ಹಾಗೂ ವಿದ್ಯುತ್ ಕಡಿತದಿಂದಾಗಿ ಭಕ್ತರು ತೀವ್ರ ಪರದಾಟ ಅನುಭವಿಸಿದ ಘಟನೆಗಳು ನಡೆದಿವೆ. “ಹಾಸನಾಂಬೆ ಉತ್ಸವಕ್ಕೆ ನನ್ನನ್ನು ಯಾರೂ ಆಹ್ವಾನಿಸಿಲ್ಲ, ಹ

ಹಾಸನ: ನಗರದ ಅಧಿದೇವತೆ ಹಾಸನಾಂಬ ದೇಗುಲದಲ್ಲಿ ಭಕ್ತರ ಮಹಾಪೂರ ಮುಂದುವರಿದಿದ್ದು, ಶುಕ್ರವಾರದ ಪವಿತ್ರ ದಿನದಂದು ರಾಜಕೀಯ ಗಣ್ಯರು ದೇವಿ ದರ್ಶನ ಪಡೆದು ಪುನೀತರಾಗಿದ್ದಾರೆ. ಇನ್ನೊಂದೆಡೆ ತಡರಾತ್ರಿ ಸುರಿದ ಧಾರಾಕಾರ ಮಳೆ ಹಾಗೂ ವಿದ್ಯುತ್ ಕಡಿತದಿಂದಾಗಿ ಭಕ್ತರು ತೀವ್ರ ಪರದಾಟ ಅನುಭವಿಸಿದ ಘಟನೆಗಳು ನಡೆದಿವೆ. “ಹಾಸನಾಂಬೆ ಉತ್ಸವಕ್ಕೆ ನನ್ನನ್ನು ಯಾರೂ ಆಹ್ವಾನಿಸಿಲ್ಲ, ಹೀಗಾಗಿ ಈ ಬಾರಿ ನಾನು ದರ್ಶನಕ್ಕೆ ಹೋಗುವುದಿಲ್ಲ” ಎಂದು ಈ ಹಿಂದೆ ಅಸಮಾಧಾನ ಹೊರಹಾಕಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಶುಕ್ರವಾರ ಪತ್ನಿ ಭವಾನಿ ರೇವಣ್ಣ ಅವರೊಂದಿಗೆ ಆಗಮಿಸಿ ದೇವಿ ದರ್ಶನ ಪಡೆದರು. 1000 ರೂ. ಮೌಲ್ಯದ ವಿಶೇಷ ದರ್ಶನದ ಟಿಕೆಟ್ ಪಡೆದಿದ್ದರೂ ಸರತಿ ಸಾಲಿನಲ್ಲಿ ನಿಲ್ಲದೆ, ಮುಖ್ಯದ್ವಾರದ ಮೂಲಕವೇ ನೇರವಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವಿ ದರ್ಶನಕ್ಕೆ ಆಗಮಿಸಿದ್ದ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಮುಖ್ಯದ್ವಾರದ ಬಳಿ ಮುಜುಗರದ ಸನ್ನಿವೇಶ ಎದುರಾಯಿತು. ಪ್ರೋಟೋಕಾಲ್ ಪಾಲಿಸದೆ ನೇರವಾಗಿ ಸರ್ಕಾರಿ ವಾಹನದಲ್ಲಿ ಮುಖ್ಯದ್ವಾರದ ಬಳಿಗೆ ಬಂದಿದ್ದ ಸಚಿವರ ಕಾರನ್ನು ಕರ್ತವ್ಯನಿರತ ಭದ್ರತಾ ಸಿಬ್ಬಂದಿ ಒಳಗೆ ಬಿಡದೆ ತಡೆದರು. “ಇವರು ಸಚಿವರು, ಕಾರು ಒಳಗೆ ಬಿಡಿ” ಎಂದು ಸಚಿವರ ಪಿಎ ಮನವಿ ಮಾಡಿದರೂ ಸಿಬ್ಬಂದಿ ನಿಯಮ ಸಡಿಲಿಸಲು ನಿರಾಕರಿಸಿದರು. ಅಂತಿಮವಾಗಿ ಸಚಿವರು ಕಾರಿನಿಂದಿಳಿದು ಕಾಲ್ನಡಿಗೆಯಲ್ಲೇ ದೇವಾಲಯದ ಆವರಣ ಪ್ರವೇಶಿಸಿ ಹಾಸನಾಂಬೆಯ ದರ್ಶನ ಪಡೆದರು. ಧಾರಾಕಾರ ಮಳೆ ಗುರುವಾರ ತಡರಾತ್ರಿ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿದ ಪರಿಣಾಮ ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸೂಕ್ತ ಜನರೇಟರ್ ವ್ಯವಸ್ಥೆ ಇಲ್ಲದ ಕಾರಣ ದೇಗುಲದ ಸರತಿ ಸಾಲಿನ ಆವರಣದಲ್ಲಿ ಸಂಪೂರ್ಣ ಕತ್ತಲು ಆವರಿಸಿ ಧರ್ಮ ದರ್ಶನದ ಸಾಲಿನಲ್ಲಿ ನಿಂತಿದ್ದ ನೂರಾರು ಭಕ್ತರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಕೆಲವರು ಮೊಬೈಲ್ ಟಾರ್ಚ್ ಆನ್ ಮಾಡಿಕೊಂಡೇ ಗಂಟೆಗಟ್ಟಲೆ ನಿಂತರು. ಗಂಟೆಗಳ ಕಾಲ ಕಾದು ಸುಸ್ತಾದ ಭಕ್ತರು ಸರತಿ ಸಾಲಿನ ಬ್ಯಾರಿಕೇಡ್ಗಳಿಗೇ ಒರಗಿ ನಿದ್ದೆಗೆ ಜಾರಿದ ದೃಶ್ಯಗಳು ಕಂಡುಬಂದವು. ಮುಂಜಾನೆಯೇ ಕುಟುಂಬ ಸಮೇತರಾಗಿ ದೇವಾಲಯಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ದೇವಿ ದರ್ಶನ ಪಡೆದರು. ಗರ್ಭಗುಡಿ ಪ್ರವೇಶಿಸುವ ಮುನ್ನ ಪೊಲೀಸರ ಬಳಿ ಮಾತನಾಡಿದ ಸಚಿವರು, “ರಾತ್ರಿ ಸುರಿದ ಮಳೆಯಿಂದ ಸರತಿ ಸಾಲಿನಲ್ಲಿದ್ದ ಭಕ್ತರಿಗೆ ಏನಾದರೂ ತೊಂದರೆಯಾಗಿದೆಯೇ?” ಎಂದು ಆತಂಕದಿಂದ ವಿಚಾರಿಸಿದರು. ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ ಬಳಿಕ ಅವರು ಪೂಜಾ ಕಾರ್ಯಗಳಲ್ಲಿ ಭಾಗಿಯಾದರು.