ಹಳೇ ಕಾಲದ ವಿಗ್ರಹ ಕಳ್ಳತನ: ಸ್ವಾಮೀಜಿ ಸೇರಿ ಐವರ ವಿರುದ್ಧ ಎಫ್ಐಆರ್
ಬೆಂಗಳೂರು: ಹಳೇ ಕಾಲದ ವಿಗ್ರಹಗಳನ್ನು ಕಳವು ಮಾಡಿ ಮಾರಾಟ ಮಾಡಿದ್ದ ಆರೋಪದಡಿ ಉಡುಪಿಯ ಬ್ರಹ್ಮಾವರ ತಾಲ್ಲೂಕಿನ ಬಾಳೆಕುದುರು ಮಠದ ಸ್ವಾಮೀಜಿ ಸೇರಿ ಐವರ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಬೆಂಗಳೂರಿನ ಬಸವೇಶ್ವರನಗರ ನಿವಾಸಿ ಜಗದೀಶ್ ಐತಾಳ್ ಅವರು ನೀಡಿದ ದೂರಿನ ಮೇರೆಗೆ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ(ಮಧುಸೂದನ್ ಭಟ್ಟ), ಮಠದ ಆಡಳಿ

ಬೆಂಗಳೂರು: ಹಳೇ ಕಾಲದ ವಿಗ್ರಹಗಳನ್ನು ಕಳವು ಮಾಡಿ ಮಾರಾಟ ಮಾಡಿದ್ದ ಆರೋಪದಡಿ ಉಡುಪಿಯ ಬ್ರಹ್ಮಾವರ ತಾಲ್ಲೂಕಿನ ಬಾಳೆಕುದುರು ಮಠದ ಸ್ವಾಮೀಜಿ ಸೇರಿ ಐವರ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಬೆಂಗಳೂರಿನ ಬಸವೇಶ್ವರನಗರ ನಿವಾಸಿ ಜಗದೀಶ್ ಐತಾಳ್ ಅವರು ನೀಡಿದ ದೂರಿನ ಮೇರೆಗೆ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ(ಮಧುಸೂದನ್ ಭಟ್ಟ), ಮಠದ ಆಡಳಿತಾಧಿಕಾರಿ ಅನಿಲ್ ಕುಮಾರ್, ಲೆಕ್ಕಾಧಿಕಾರಿ ಜಯಲಕ್ಷ್ಮಿ, ಪರಿಚಾರಕ ಶ್ರೇಯಸ್, ಬಸವೇಶ್ವರ ನಗರದ ಪ್ರಸಿದ್ಧ್ ಐಡೆಲ್ಸ್ ಅಂಗಡಿ ಮಾಲೀಕ ನಾಗೇಂದ್ರ ಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.ಬ್ರಹ್ಮಾವರ ತಾಲ್ಲೂಕಿನ ಜಗದೀಶ್ ಅವರು ಬಸವೇಶ್ವರ ಠಾಣೆಗೆ ದೂರು ನೀಡಿದ್ದರು. ಸದ್ಯ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ. ಪ್ರಕರಣದ ಮುಂದಿನ ತನಿಖೆಗೆ ಅಲ್ಲಿನ ಠಾಣೆಗೆ ವರ್ಗಾವಣೆ ಮಾಡಲಾಗುವುದು ಎಂದು ಪೊಲೀಸರು ಹೇಳಿದರು.2024ರಿಂದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಮಠದಲ್ಲಿ ಇದ್ದರು. ನಿತ್ಯ ಪೂಜೆಗೊಳಪಡುತ್ತಿದ್ದ ಹಳೆಯ ವಲ್ಲಭ ಗಣಪತಿ ವಿಗ್ರಹ, ಶಕ್ತಿಗಣಪತಿ, ಲಕ್ಷ್ಮೀನರಸಿಂಹ ವಿಗ್ರಹಗಳನ್ನು ಸ್ವಾಮೀಜಿ ಸೇರಿ ಇತರರು ಸಂಚು ರೂಪಿಸಿ ಕಳ್ಳತನ ಮಾಡಿ, ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಇರುವ ಪ್ರಸಿದ್ಧ್ ಐಡೆಲ್ಸ್ ಮಳಿಗೆಯ ಮಾಲೀಕ ನಾಗೇಂದ್ರ ಪ್ರಸಾದ್ಗೆ ಮಾರಾಟ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಮಾರಾಟ ಮಾಡಿದ ವಿಗ್ರಹಗಳ ಪ್ರತಿರೂಪಗಳನ್ನು ಅದೇ ಪ್ರಸಿದ್ಧ್ ಐಡೆಲ್ಸ್ ಮಳಿಗೆಯ ಮಾಲೀಕರಿಂದ ತಯಾರಿಸಿ, ಮಠದಲ್ಲಿಟ್ಟು ಪೂಜೆ ಮಾಡಿ ಮಠದ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಜಗದೀಶ್ ದೂರಿನಲ್ಲಿ ಆರೋಪಿಸಿದ್ದಾರೆ.