ನಾನಾಗಲಿ, ರಾಜಣ್ಣ ಅವರಾಗಲಿ ಜೆಡಿಎಸ್ ಸೇರುತ್ತೇವೆ ಎಂದು ಹೇಳಿಲ್ಲ: ಎಂಎಲ್ಸಿ ರಾಜೇಂದ್ರ
– ರಾಜಣ್ಣ ಬಗ್ಗೆ ಮಾತನಾಡಿದವರಿಗೆ ಬಹುಮಾನ ಇಟ್ಟಿರಬೇಕು ಹಾಸನ: ನಾನಾಗಲಿ, ರಾಜಣ್ಣ (KN Rajanna) ಅವರಾಗಲಿ ಜೆಡಿಎಸ್ (JDS) ಸೇರುತ್ತೇವೆ ಎಂದು ಹೇಳಿಲ್ಲ ಎಂದು ಎಂಎಲ್ಸಿ ರಾಜೇಂದ್ರ (MLC Rajendra) ಹೇಳಿದ್ದಾರೆ. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಭೇಟಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೌದು, ಕುಮಾರಸ್ವಾಮಿ ಅವರನ್ನು ಭೇ

– ರಾಜಣ್ಣ ಬಗ್ಗೆ ಮಾತನಾಡಿದವರಿಗೆ ಬಹುಮಾನ ಇಟ್ಟಿರಬೇಕು ಹಾಸನ: ನಾನಾಗಲಿ, ರಾಜಣ್ಣ (KN Rajanna) ಅವರಾಗಲಿ ಜೆಡಿಎಸ್ (JDS) ಸೇರುತ್ತೇವೆ ಎಂದು ಹೇಳಿಲ್ಲ ಎಂದು ಎಂಎಲ್ಸಿ ರಾಜೇಂದ್ರ (MLC Rajendra) ಹೇಳಿದ್ದಾರೆ. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಭೇಟಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೌದು, ಕುಮಾರಸ್ವಾಮಿ ಅವರನ್ನು ಭೇಟಿ ಆಗಿದ್ದೇನೆ. ಅದರಲ್ಲಿ ಹಿಂದೆ ಮುಂದೆ ಏನು ಇಲ್ಲ. ರಾಜಕೀಯವಾಗಿ ಚರ್ಚೆ ಮಾಡಿದ್ದೇನೆ. ನಮ್ಮ ಜಿಲ್ಲೆಗೆ, ನಮ್ಮ ತಾಲೂಕಿಗೆ ಕಾರ್ಖಾನೆಗಳನ್ನು ತರಲು ಚರ್ಚೆ ಮಾಡಿದ್ದೇನೆ. ಪ್ರಸ್ತುತ ರಾಜಕೀಯವಾಗಿ ಏನು ನಡೆಯುತ್ತಿದೆ ಆ ವಿಚಾರವಾಗಿ ನಾನು ಕುಮಾರಸ್ವಾಮಿ ಅವರ ಬಳಿ ಎರಡು ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದ್ದೇನೆ. ಇನ್ನೂ ನನಗೆ ಹದಿನೆಂಟು ತಿಂಗಳು ಅಧಿಕಾರ ಇದೆ. ಪಕ್ಷ ಬದಲಾಯಿಸುವಂತದ್ದು ಸದ್ಯಕ್ಕೇನಿಲ್ಲ, ಕಾಂಗ್ರೆಸ್ನಲ್ಲೇ ಇದ್ದೇನೆ ಎಂದರು. ಬಾಲಕೃಷ್ಣ ಅವರಿಗೆ ಒಂದು ಮಾತು ಹೇಳುತ್ತೇನೆ. ಮಾತನಾಡಿದ್ರೆ ಮುಖ್ಯಮಂತ್ರಿಗಳ ಹತ್ತಿರ ಏನೋ ಸಿಗುತ್ತೆ, ರಾಜಣ್ಣ ಅವರ ಬಗ್ಗೆ ಮಾತನಾಡಿದವರಿಗೆ ಬಹುಮಾನ ಇಟ್ಟಿರಬೇಕು. ಮಾತನಾಡಿದರೆ ಅನುಕೂಲ ಆಗುತ್ತೆ ಅಂಥ ಬಾಲಕೃಷ್ಣ ಅಂದುಕೊಂಡಿರಬಹುದು. ಅವರು ಸಚಿವರಿದ್ದಾರೆ, ನಾನು ಹೆಚ್ಚು ಅವರ ಬಗ್ಗೆ ಅಗೌರವವಾಗಿ ಮಾತನಾಡಲು ಹೋಗಲ್ಲ. ಸಚಿವ ಸ್ಥಾನ ಸಿಕ್ಕಿದ ಮೇಲೆ ಅವರು ರಾಜಣ್ಣ ಬಗ್ಗೆ ಮಾತನಾಡುತ್ತಾರೆ. ಹಾಗಾದರೆ ಪುಟ್ಟಣ್ಣ ಅವರು ಏಕೆ ಸೋತರು? ಪುಟ್ಟಣ್ಣ ಅವರು ಸೋಲಲ್ಲ ಅಂತ ಇತ್ತು, ಏಕೆ ಸೋತರು? ರಾಜಣ್ಣ ಅವರು ವೋಟು ಹಾಕ್ಸೋದು ಬರೀ ಮಧುಗಿರಿಯಲ್ಲಿ. 36 ಜನ ಶಾಸಕರಿದ್ದರಲ್ಲ, ಅವರೆಲ್ಲಾ ಏನು ಮಾಡುತ್ತಿದ್ದರು? ಸೋತರೆ ರಾಜಣ್ಣ ಸೋಲಿಸಿ ಬಿಟ್ಟರು, ಗೆದ್ದರೆ ರಾಜಣ್ಣ ಏನು ಇಲ್ಲ ಎಂದು ಕಿಡಿಕಾರಿದರು. ಹಾಸನದಲ್ಲಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಗೆದ್ದು ಎಷ್ಟು ವರ್ಷ ಆಗಿತ್ತು? ಶ್ರೇಯಸ್ಪಟೇಲ್ ಟಿಕೆಟ್ ಕೊಡಿಸುವುದರಿಂದ ಹಿಡಿದು ಜವಾಬ್ದಾರಿ ತೆಗೆದುಕೊಂಡು ಇಲ್ಲಿ ಕಾಂಗ್ರೆಸ್ ಗೆದ್ದಿರುವುದು ಯಾರಿಂದ? ಒಬ್ಬರೇ ಮಾಡಿದ್ದಾರೆ ಎಂದು ಹೇಳಲು ಹೋಗಲ್ಲ, ರಾಜಣ್ಣ ಅವರ ಪಾತ್ರ ಹೆಚ್ಚಿದೆ. ಸುಮ್ಮನೆ ರಾಜಣ್ಣ ಅವರ ಮೇಲೆ ಆಪಾದನೆ ಮಾಡಿದರೆ ನಾನು ಒಪ್ಪುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇನ್ನೂ ಸಂದರ್ಭ ಇದೆ, ಸಂದರ್ಭ ಬಂದಾಗ ಇವರದ್ದೆಲ್ಲಾ ಏನೇನಿದೆ, ಏನೇನು ಮಾತನಾಡಿದ್ದಾರೆ, ಸಂದರ್ಭ ಬಂದಾಗ ಮಾತನಾಡುತ್ತೇನೆ. ಇವತ್ತು ಎಸ್ಐಆರ್ ಹೇಗೆ ಮಾಡುತ್ತಿದ್ದಾರೆ, ಅದನ್ನೇ ರಾಜಣ್ಣ ಅವತ್ತು ಆ ಮಾತು ಹೇಳಿದ್ದಾರೆ. ಅದೇ ವಿಚಾರವಾಗಿ ಎಸ್ಐಆರ್ ಮಾಡುತ್ತಿದ್ದಾರೆ. ನೇರವಾಗಿ ರಾಜಣ್ಣ ಅವರು ಮಾತನಾಡುತ್ತಾರೆ ಅಂಥನೇ ಮಂತ್ರಿಗಿರಿಯಿಂದ ತೆಗೆದು ಹಾಕಿದ್ದು. ರಾಜಣ್ಣ ಅವರು ಇರೋದು ಅದೇ ಥರ, ಅದರಲ್ಲೇನು ತಪ್ಪಿಲ್ಲ. ಅದನ್ನ ಬದಲಾವಣೆ ಮಾಡಿಕೊಳ್ಳಿ ಎಂದು ಹೇಳಲು ಆಗಲ್ಲ. ನಡೆಯುತ್ತಿದೆ ಹಾಗೇ ಇರಲಿ ತೊಂದರೆ ಇಲ್ಲ. ರಾಜಣ್ಣ ಅವರ ಬಗ್ಗೆ ಭಯ ಇರಬಹುದು, ಅದರಿಂದ ಇವೆಲ್ಲಾ ನಡಿತವೆ. ಬೇರೆ ಯಾರಾದರೂ ಮಾತನಾಡಿಲ್ವಾ, ಅವರ ಮೇಲೆ ಏಕೆ ಇಲ್ಲ? ರಾಜಣ್ಣ ಮೇಲೆ ಭಯ ಇರುವುದರಿಂದ ಇವೆಲ್ಲ ನಡೆಯುತ್ತಿದೆ ಎಂದು ಹರಿಹಾಯ್ದರು. ಎಂಎಲ್ಸಿ ಚುನಾವಣೆ ಫಲಿತಾಂಶ ಸಹಜವಾಗಿ ಸರ್ಕಾರಕ್ಕೆ ಒತ್ತಡ, ಹಿನ್ನಡೆ ಇರುತ್ತದೆ. ಕಳೆದ ಬಾರಿ ಪುಟ್ಟಣ್ಣ ಅವರು ಒಬ್ಬರೇ ಕಾಂಗ್ರೆಸ್ನಿಂದ ಗೆದ್ದಿದ್ದು ಮೂರು ಬಿಜೆಪಿನೇ ಇತ್ತು. ಈ ಬಾರಿ ಇರುವ ಒಂದು ಸೀಟ್ ಕಳೆದುಕೊಂಡಿದ್ದೇವೆ. ಸರ್ಕಾರ ಇದ್ದಾಗ ಪುಟ್ಟಣ್ಣ ಅವರಾಗಲಿ, ಬೇರೆ ಎಲ್ಲಾದರೂ ಎರಡು ಕಡೆ ಗೆಲ್ಲಬಹುದಿತ್ತು. ಕಾಲಾವಕಾಶ ಮುಗಿದಿಲ್ಲ, ಜಿ.ಪಂ., ತಾ.ಪಂ., ಪ.ಪಂ, ಪುರಸಭೆ, ಎಲೆಕ್ಷನ್ ಬರುತ್ತೆ, ಖಂಡಿತವಾಗಿಯೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದರಿಂದ ಹಿಡಿದು ಇವತ್ತು ಅವರನ್ನು ನಡೆಸಿಕೊಳ್ಳುತ್ತಿರುವುದು ಇರಬಹುದು. ಇದರಿಂದಲೇ ಅಹಿಂದ ಮತಗಳು ಹಿಂದೆ ಹೋಗಿವೆ. ಕಾಂಗ್ರೆಸ್ ಪಕ್ಷದಿಂದ ಅಹಿಂದ ಮತಗಳು ಹಿಂದೆ ಹೋಗುತ್ತಿವೆ. ಸಿದ್ದರಾಮಯ್ಯ ಅವರು ರಾಹುಲ್ಗಾಂಧಿ ಅವರನ್ನು ಭೇಟಿ ಮಾಡಿ ಬಂದಿದ್ದಾರೆ, ಮುಖ್ಯಮಂತ್ರಿಗಳು ಭೇಟಿ ಮಾಡಿದ್ದಾರೆ. ಪ್ರಸ್ತುತವಾಗಿ ಇನ್ನೂ ಏನೆಲ್ಲಾ ಬೆಳವಣಿಗೆ ಆಗುತ್ತೆ ಕಾದು ನೋಡೋಣ ಎಂದರು.