ದೀಪಾವಳಿ ಪಾಡ್ಯಕ್ಕೆ ಸಗಣಿ ಪಾಂಡವರ ಸಂಭ್ರಮ; ಉತ್ತರ ಕರ್ನಾಟಕದ ವಿಶಿಷ್ಟ ʻಹಟ್ಟಿ ಹಬ್ಬʼ
ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ದೀಪಾವಳಿ ಪಾಡ್ಯದಂದು ನಡೆಯುವ ಸಗಣಿ ಪಾಂಡವರ ಆಚರಣೆ ವಿಶೇಷ ಗಮನ ಸೆಳೆಯುತ್ತದೆ. ಆಧುನಿಕತೆಯ ನಡುವೆಯೂ ಈ ಸಂಪ್ರದಾಯವನ್ನು ಜನರು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಬಾಗಲಕೋಟೆ, ಗದಗ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಹಿಳೆಯರು ಪಾಡ್ಯದ ದಿನ ಬೆಳ್ಳಂಬೆಳಿಗ

ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ದೀಪಾವಳಿ ಪಾಡ್ಯದಂದು ನಡೆಯುವ ಸಗಣಿ ಪಾಂಡವರ ಆಚರಣೆ ವಿಶೇಷ ಗಮನ ಸೆಳೆಯುತ್ತದೆ. ಆಧುನಿಕತೆಯ ನಡುವೆಯೂ ಈ ಸಂಪ್ರದಾಯವನ್ನು ಜನರು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಬಾಗಲಕೋಟೆ, ಗದಗ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಹಿಳೆಯರು ಪಾಡ್ಯದ ದಿನ ಬೆಳ್ಳಂಬೆಳಿಗ್ಗೆ ಮನೆ ಮುಂದೆ ಸಗಣಿಯಿಂದ ಪಾಂಡವರ ಪ್ರತಿಕೃತಿಗಳನ್ನು ತಯಾರಿಸಿ ಪ್ರತಿಷ್ಠಾಪಿಸುತ್ತಾರೆ. ವನವಾಸ ಮುಗಿಸಿ ಮರಳಿದ ಪಾಂಡವರ ನೆನಪಿಗಾಗಿ ಈ ಆಚರಣೆ ನಡೆಸಲಾಗುತ್ತದೆ ಎಂಬ ನಂಬಿಕೆಯಿದೆ. ಸಗಣಿ ಪಾಂಡವರಿಗೆ ಉತ್ತರಾಣಿ ಕಡ್ಡಿ, ಬಸವನ ಹೂವು ಸೇರಿದಂತೆ ಹೊಲ-ಗದ್ದೆಗಳಲ್ಲಿ ಸಿಗುವ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗುತ್ತದೆ. ವಿಶೇಷವಾಗಿ ಶ್ಯಾವಿಗೆ ಪಾಯಸ ತಯಾರಿಸಿ ನೈವೇದ್ಯ ಅರ್ಪಿಸುತ್ತಾರೆ. ಹೊಸ ವಾಹನಗಳಿಗೂ ಪೂಜೆ ಸಲ್ಲಿಸಿ ದೀಪಾವಳಿ ಪಾಡ್ಯವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಏನಿದು ಸಗಣಿ ಪಾಂಡವರು? ಸಗಣಿ ಪಾಂಡವರು ಎಂದರೆ ದೀಪಾವಳಿ ಪಾಡ್ಯದಂದು ಸಗಣಿಯಿಂದ ತಯಾರಿಸುವ ಐದು ಪಾಂಡವರ ಪ್ರತಿಕೃತಿಗಳು. ಮಹಾಭಾರತದ ಪಾಂಡವರು ಅನುಭವಿಸಿದ ಕಷ್ಟಗಳು ಯಾರಿಗೂ ಬರಬಾರದು ಎಂಬ ಪ್ರಾರ್ಥನೆಯೊಂದಿಗೆ ಈ ಪ್ರತಿಕೃತಿಗಳನ್ನು ಪೂಜಿಸುವುದು ಸಂಪ್ರದಾಯವಾಗಿದೆ. ಇದು ದನಗಳಿಗೆ ಮತ್ತು ದನದ ಕೊಟ್ಟಿಗೆಗೆ ರೈತಾಪಿ ಜನರು ನೀಡುವ ಗೌರವದ ಸಂಕೇತವೂ ಹೌದು. ದನದ ಸಗಣಿಯನ್ನು ಪವಿತ್ರವೆಂದು ಭಾವಿಸುವ ಗ್ರಾಮೀಣ ಸಂಸ್ಕೃತಿಯ ಪ್ರತಿಬಿಂಬವಾಗಿ ಈ ಆಚರಣೆ ಬೆಳೆದು ಬಂದಿದೆ. ಮನೆ ಮುಂದೆ ಪಾಂಡವರ ಪ್ರತಿಷ್ಠಾಪನೆ ಸಗಣಿಯಿಂದ ತಯಾರಿಸಿದ ಪಾಂಡವರನ್ನು ಮನೆಯ ಬಾಗಿಲಿನ ಅಕ್ಕಪಕ್ಕ ಅಥವಾ ಮೇಲ್ಛಾವಣಿಯ ಮೇಲೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಮನೆಯ ಬಾಗಿಲ ಮುಂದೆ ಸುಣ್ಣದಿಂದ ಆಕಳ ಹೆಜ್ಜೆಗಳನ್ನು ಬಿಡಿಸುವ ಪದ್ಧತಿಯೂ ಇದೆ. ಉತ್ತರಾಣಿ ಕಡ್ಡಿ, ಹಳದಿ ಹೂವು, ಅನ್ನ, ಮೊಸರು, ಕಬ್ಬು ಹಾಗೂ ಜೋಳದ ದಂಟಿನಿಂದ ತಯಾರಿಸಿದ ವಿಶೇಷ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಕೆಲವು ಮನೆಗಳಲ್ಲಿ ಶ್ಯಾವಿಗೆ ಪಾಯಸವನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಇದಲ್ಲದೆ, ಒಲೆ, ಗ್ಯಾಸ್ ಸ್ಟೌವ್, ಬಚ್ಚಲುಮನೆ ಮತ್ತು ದೇವರಮನೆಯ ಬಾಗಿಲಿನ ಬಳಿಯೂ ಸಗಣಿ ಪಾಂಡವರನ್ನು ಇಡುವ ಸಂಪ್ರದಾಯವಿದೆ. ರಾತ್ರಿ ಅಥವಾ ಮರುದಿನ ಈ ಪ್ರತಿಕೃತಿಗಳನ್ನು ಮನೆಯ ಛಾವಣಿಯ ಮೇಲೆ ಇಡುತ್ತಾರೆ. ತವರಿಗೆ ಬರುವ ಹೆಣ್ಣುಮಕ್ಕಳ ಸಂಭ್ರಮ ಈ ಆಚರಣೆಯಲ್ಲಿ ಕುಟುಂಬದ ಸಂಪ್ರದಾಯಕ್ಕೂ ವಿಶೇಷ ಸ್ಥಾನವಿದೆ. ಕೆಲವು ಕಡೆ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣುಮಕ್ಕಳು ದೀಪಾವಳಿ ಪಾಡ್ಯಕ್ಕೆ ತವರಿಗೆ ಬಂದು ಸಗಣಿ ಪಾಂಡವರನ್ನು ತಯಾರಿಸಿ ಪ್ರತಿಷ್ಠಾಪಿಸುವ ಪದ್ಧತಿಯೂ ಇದೆ. ಹೀಗೆ ಸಗಣಿ ಪಾಂಡವರ ಆಚರಣೆ ಕೇವಲ ಧಾರ್ಮಿಕ ಸಂಪ್ರದಾಯವಾಗಿ ಉಳಿಯದೆ, ಕುಟುಂಬದ ಸದಸ್ಯರನ್ನು ಒಟ್ಟುಗೂಡಿಸುವ ಹಬ್ಬವಾಗಿಯೂ ಬೆಳೆದಿದೆ. ದನ, ಕೃಷಿ, ಪ್ರಕೃತಿ ಮತ್ತು ಕುಟುಂಬದ ಸಂಸ್ಕೃತಿಗೆ ಗೌರವ ಸಲ್ಲಿಸುವ ಈ ವಿಶಿಷ್ಟ ಆಚರಣೆಯೇ ಉತ್ತರ ಕರ್ನಾಟಕದ ಹಟ್ಟಿ ಹಬ್ಬದ ವಿಶೇಷತೆ.