ಇರಾನ್ ಪರಮಾಣು ಯೋಜನೆ ಮಾಹಿತಿ ಕೊಟ್ಟವರಿಗೆ 188 ಕೋಟಿ ರೂ. ಬಹುಮಾನ ಘೋಷಿಸಿದ ಅಮೆರಿಕ
ವಾಷಿಂಗ್ಟನ್: ಇರಾನ್ನ ಪರಮಾಣು ಯೋಜನೆ (Iran’s Nuclear Program) ಬಗ್ಗೆ ಮಾಹಿತಿ ನೀಡಿದವರಿಗೆ 20 ಮಿಲಿಯನ್ ಡಾಲರ್ (188.09 ಕೋಟಿ ರೂ.) ಬಹುಮಾನ ನೀಡುವುದಾಗಿ ಅಮೆರಿಕ (America) ಘೋಷಿಸಿದೆ. ಇರಾನ್ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಸೌಲಭ್ಯಗಳು, ಉಪಕರಣಗಳು ಮತ್ತು ಅದರಲ್ಲಿ ತೊಡಗಿಕೊಂಡಿರುವ ಸಿಬ್ಬಂದಿ ಕುರಿತು ಮಾಹಿತಿ ನೀಡುವವರಿಗೆ ಬಹುಮಾನ ನೀಡಲಾಗುವು

ವಾಷಿಂಗ್ಟನ್: ಇರಾನ್ನ ಪರಮಾಣು ಯೋಜನೆ (Iran’s Nuclear Program) ಬಗ್ಗೆ ಮಾಹಿತಿ ನೀಡಿದವರಿಗೆ 20 ಮಿಲಿಯನ್ ಡಾಲರ್ (188.09 ಕೋಟಿ ರೂ.) ಬಹುಮಾನ ನೀಡುವುದಾಗಿ ಅಮೆರಿಕ (America) ಘೋಷಿಸಿದೆ. ಇರಾನ್ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಸೌಲಭ್ಯಗಳು, ಉಪಕರಣಗಳು ಮತ್ತು ಅದರಲ್ಲಿ ತೊಡಗಿಕೊಂಡಿರುವ ಸಿಬ್ಬಂದಿ ಕುರಿತು ಮಾಹಿತಿ ನೀಡುವವರಿಗೆ ಬಹುಮಾನ ನೀಡಲಾಗುವುದು. ಅಲ್ಲದೇ ಮಾಹಿತಿ ನೀಡಿದವರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗುವುದು ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ. ಇದೇ ವೇಳೆ, ಯುದ್ಧವನ್ನು ಕೊನೆಗೊಳಿಸಲು ಇರಾನ್ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಟ್ರಂಪ್ ಹತ್ಯೆಗೆ ಸಂಚು ಆರೋಪ – ವೈಟ್ಹೌಸ್ ಬಳಿ ಶಸ್ತ್ರಾಸ್ತ್ರಗಳೊಂದಿಗೆ ವೆನೆಜುವೆಲಾ ಪ್ರಜೆ ಅರೆಸ್ಟ್ ವಿದೇಶಾಂಗ ಇಲಾಖೆಯ ‘ರಿವಾರ್ಡ್ಸ್ ಫಾರ್ ಜಸ್ಟಿಸ್’ (Rewards for Justice) ಕಾರ್ಯಕ್ರಮದ ಅಡಿಯಲ್ಲಿ ಬಹುಮಾನ ಹಾಗೂ ಸುರಕ್ಷಿತ ಸ್ಥಳಾಂತರದ ಅವಕಾಶವನ್ನು ನೀಡಲಾಗುತ್ತಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ಅಮೆರಿಕದ ಪ್ರಜೆಗಳ ಜೀವ ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ಮಾಹಿತಿಯನ್ನು ಒದಗಿಸುವವರಿಗೆ ಬಹುಮಾನ ನೀಡುವ ಉದ್ದೇಶದಿಂದ, 1984ರಲ್ಲಿ ವಿದೇಶಾಂಗ ಇಲಾಖೆಯ ರಾಷ್ಟ್ರೀಯ ಭದ್ರತಾ ಬಹುಮಾನ ಕಾರ್ಯಕ್ರಮದ ಅಡಿಯಲ್ಲಿ ರಿವಾರ್ಡ್ಸ್ ಫಾರ್ ಜಸ್ಟಿಸ್ನ್ನು ಸ್ಥಾಪಿಸಲಾಗಿದೆ. ಈ ಬಹುಮಾನದ ಕುರಿತಾದ ಹೇಳಿಕೆಯಲ್ಲಿ, ಇರಾನ್ ‘ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ’ಯ (IAEA) ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ. ಇದರಿಂದ ಸೆಂಟ್ರಿಫ್ಯೂಜ್ಗಳಂತಹ ಪ್ರಮುಖ ಘಟಕಗಳ ಉತ್ಪಾದನೆ ಮತ್ತು ದಾಸ್ತಾನಿನ ಬಗ್ಗೆ ಮಾಹಿತಿ ಪಡೆಯಲು ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಇದರಲ್ಲಿ, ಯಾವ ರೀತಿಯ ನಿರ್ದಿಷ್ಟ ಮಾಹಿತಿ ನೀಡಿದರೆ 20 ಮಿಲಿಯನ್ ಡಾಲರ್ ಬಹುಮಾನ ಸಿಗುತ್ತದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾನದಂಡಗಳನ್ನು ನೀಡಲಾಗಿಲ್ಲ. ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್ನಲ್ಲಿ ಮಾತನಾಡಿರುವ ಟ್ರಂಪ್, ಇರಾನ್ನ ಪರಮಾಣು ಯೋಜನೆಯನ್ನು ಅಮೆರಿಕದ ಪಡೆಗಳು ಪರಿಣಾಮಕಾರಿಯಾಗಿ ನಾಶಪಡಿಸಿವೆ. ನಾವು ಇರಾನ್ ಮೇಲೆ ದಾಳಿ ಮಾಡಿರದಿದ್ದರೆ, ಇಂದು ಇಸ್ರೇಲ್ ಅಸ್ತಿತ್ವದಲ್ಲಿರುತ್ತಿರಲಿಲ್ಲ. ಒಂದು ವೇಳೆ ಅವರ ಬಳಿ ಪರಮಾಣು ಶಸ್ತ್ರಾಸ್ತ್ರಗಳಿದ್ದಿದ್ದರೆ, ಅವರು ಖಂಡಿತವಾಗಿಯೂ ಅವುಗಳನ್ನು ಬಳಸುತ್ತಿದ್ದರು. ಅವರು ಇಡೀ ಮಧ್ಯಪ್ರಾಚ್ಯವನ್ನೇ ನಾಶಪಡಿಸುತ್ತಿದ್ದರು ಎಂದು ಹೇಳಿದ್ದಾರೆ. ಕಳೆದ ಎಂಟು ತಿಂಗಳ ಯುದ್ಧದಿಂದಾಗಿ ಇರಾನ್ನ ಆರ್ಥಿಕತೆ ಮತ್ತು ಸೇನೆಗೆ ತೀವ್ರ ಹಾನಿಯಾಗಿದ್ದು, ಈಗ ಅದು ಸಂಘರ್ಷವನ್ನು ಕೊನೆಗೊಳಿಸಲು ಉತ್ಸುಕವಾಗಿದೆ. ನಾವು ಈಗ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಅವರಿಗೆ ಒಪ್ಪಂದ ಮಾಡಿಕೊಳ್ಳುವ ತೀವ್ರ ಬಯಕೆಯಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಇರಾನ್ ತೈಲ ವ್ಯಾಪಾರಕ್ಕೆ ನೆರವು: ಭಾರತೀಯ ಉದ್ಯಮಿ, ಪತ್ನಿ, 9 ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ