ಒಳನೋಟ: ಯುವಜನತೆಗೆ ಅವಕಾಶಗಳ ‘ಭಾಗ್ಯ’ನಗರ
ಕೊಪ್ಪಳ: ತಮ್ಮ ಸುತ್ತಲೂ ಇದ್ದ ತರಹೇವಾರಿ ಬಣ್ಣಗಳು ಹಾಗೂ ಕಲಾತ್ಮಕತೆ ಹೊಂದಿದ್ದ ಕಾಟನ್ ಸೀರೆಗಳನ್ನು ಗ್ರಾಹಕರಿಗೆ ತೋರಿಸುವಲ್ಲಿ ಮಗ್ನರಾಗಿದ್ದ 30 ವರ್ಷದ ಅಶೋಕ ಮೇಘರಾಜ ಅವರ ಬಳಿ ಖರೀದಿಯ ವ್ಯವಹಾರ ಮುಗಿಸಿದ ನಾಲ್ಕೈದು ಮಹಿಳೆಯರು ತಮ್ಮ ಎದುರಲ್ಲಿದ್ದ ಕ್ಯು.ಆರ್. ಕೋಡ್ ಸ್ಕ್ಯಾನ್ ಮಾಡಿ ಸೀರೆಗಳ ಬಗ್ಗೆ ಮಾಹಿತಿ ಒದಗಿಸುವ ವಾಟ್ಸ್ಆ್ಯಪ್ ಗ್ರೂಪ್ ಸೇರಿಕೊಂಡರು.

ಕೊಪ್ಪಳ: ತಮ್ಮ ಸುತ್ತಲೂ ಇದ್ದ ತರಹೇವಾರಿ ಬಣ್ಣಗಳು ಹಾಗೂ ಕಲಾತ್ಮಕತೆ ಹೊಂದಿದ್ದ ಕಾಟನ್ ಸೀರೆಗಳನ್ನು ಗ್ರಾಹಕರಿಗೆ ತೋರಿಸುವಲ್ಲಿ ಮಗ್ನರಾಗಿದ್ದ 30 ವರ್ಷದ ಅಶೋಕ ಮೇಘರಾಜ ಅವರ ಬಳಿ ಖರೀದಿಯ ವ್ಯವಹಾರ ಮುಗಿಸಿದ ನಾಲ್ಕೈದು ಮಹಿಳೆಯರು ತಮ್ಮ ಎದುರಲ್ಲಿದ್ದ ಕ್ಯು.ಆರ್. ಕೋಡ್ ಸ್ಕ್ಯಾನ್ ಮಾಡಿ ಸೀರೆಗಳ ಬಗ್ಗೆ ಮಾಹಿತಿ ಒದಗಿಸುವ ವಾಟ್ಸ್ಆ್ಯಪ್ ಗ್ರೂಪ್ ಸೇರಿಕೊಂಡರು.ಕ್ಷಣಾರ್ಧದಲ್ಲಿಯೇ ಸೀರೆಗಳ ಮಾಹಿತಿ ಗುಚ್ಛ ಮೊಬೈಲ್ಗೆ ರವಾನೆಯಾಯಿತು. ಅಂಗಡಿಯವರು ತಮ್ಮಲ್ಲಿರುವ ಸೀರೆಗಳ ವಿಶೇಷತೆ ಹಾಗೂ ಹೊಸದಾಗಿ ತಯಾರಾದ ಸೀರೆಗಳ ಬಗ್ಗೆ ಮಾಹಿತಿಯನ್ನು ನಿರಂತರವಾಗಿ ಒದಗಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಗ್ರೂಪ್ನಲ್ಲಿ ಮಾಹಿತಿ ಕಳುಹಿಸಲಾಗುತ್ತದೆ.ಇದೆಲ್ಲವನ್ನೂ ನೋಡಿದ ಆ ಮಹಿಳೆಯರಿಗೆ ಅಂಗೈಯಲ್ಲಿಯೇ ಭಾಗ್ಯನಗರದ ಸೀರೆಗಳ ಜಗತ್ತು ಸಿಕ್ಕಷ್ಟು ಖುಷಿ. ಅವರು ತಮ್ಮ ಸ್ನೇಹಿತೆಯರಿಗೆ, ಸಂಬಂಧಿಗಳ ಜೊತೆ ಕ್ಯು.ಆರ್. ಕೋಡ್ ಹಂಚಿಕೊಳ್ಳುತ್ತ ‘ಸೀರೆ ಖರೀದಿಗೆ ಭಾಗ್ಯನಗರಕ್ಕೇ ಬರಬೇಕು ಎಂದೇನಿಲ್ಲ. ಎಲ್ಲಿಯೇ ಇದ್ದರೂ ಮನೆಬಾಗಿಲಿಗೆ ತಲುಪುತ್ತವೆ’ ಎಂದು ಫೋನ್ನಲ್ಲಿ ಹೇಳಿದರು.ಇದೆಲ್ಲವನ್ನೂ ಗಮನಿಸುತ್ತಿದ್ದ ಅಶೋಕ ಮೇಘರಾಜ, ‘ನಮ್ಮ ವ್ಯಾಪಾರ ಹಾಗೂ ಭಾಗ್ಯನಗರದ ಸೀರೆಗಳು ಬ್ರ್ಯಾಂಡ್ ಆಗಿ ಬೆಳೆದಿದ್ದು ಹೀಗೆ ನೋಡಿ’ ಎಂದು ಮುಗುಳ್ನಕ್ಕರು. ಅಶೋಕ ಬಿಬಿಎಂ ಪದವೀಧರ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶಗಳಿದ್ದರೂ ತಮ್ಮ ಅಜ್ಜ ಹಾಗೂ ತಂದೆಯ ಕಾಲದಿಂದ ನಡೆದುಕೊಂಡು ಬಂದ ರವಿಕೆ, ಸೀರೆಗಳ ವ್ಯಾಪಾರವನ್ನು ಬಿಟ್ಟುಕೊಟ್ಟಿಲ್ಲ. ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮ ಕಾರಿಯಾಗಿ ಬಳಸಿ ವ್ಯಾಪಾರ ಮಾಡುತ್ತಿದ್ದಾರೆ. ಇದಕ್ಕಾಗಿ ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ ವೇದಿಕೆ ಮಾಡಿಕೊಂಡಿದ್ದಾರೆ. ಸೀರೆಗಳ ಮಾರಾಟಕ್ಕೆ ಆನ್ಲೈನ್ ಸ್ಪರ್ಶ ನೀಡಿ ದೇಶ, ವಿದೇಶಗಳಲ್ಲಿ ಗ್ರಾಹಕರನ್ನು ಸೃಷ್ಟಿಸಿಕೊಂಡಿದ್ದಾರೆ. ಮನೆಗಳಲ್ಲಿರುವ ಮಗ್ಗದಲ್ಲಿ ತಯಾರಾಗುವ ಸೀರೆಗಳು ಕಡಿಮೆ ಸಮಯದಲ್ಲಿ ಹೆಚ್ಚು ಗ್ರಾಹಕರನ್ನು ತಲುಪುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಾರ ಮಾಡುವ ಮಹಿಳೆಯರಿಗೆ ಮನೆಬಾಗಿಲಿಗೆ ಸೀರೆಗಳನ್ನು ತಲುಪಿಸಲಾಗುತ್ತಿದೆ.ಅಶೋಕ ಮೇಘರಾಜ ಅವರ ತಂದೆ ಡೀಕುಸಾ ಮೇಘರಾಜ ಅಂಗಡಿಯ ಮುಂಭಾಗದಲ್ಲಿ ಕುರ್ಚಿ ಹಾಕಿಕೊಂಡು ಕುಳಿತು ಕಣ್ಣಂಚಿನಲ್ಲಿಯೇ ಸೀರೆಗಳನ್ನು ನೋಡಿ ಅವುಗಳ ವಿಶೇಷತೆ ಗ್ರಾಹಕರಿಗೆ ಮನವರಿಕೆ ಮಾಡಿಕೊಡುತ್ತಿದ್ದರು. ಸೀರೆಗಳ ತಯಾರಿಕೆ ಹಾಗೂ ಮಾರಾಟದಲ್ಲಿ ಅಷ್ಟೊಂದು ನೈಪುಣ್ಯತೆ ಅವರದ್ದು.ಮಾರುತಿ ಮೇಘರಾಜ, ಭಾಗ್ಯನಗರ ಜವಳಿ ಉತ್ಪಾದಕರ ಸಂಘದ ಕಾರ್ಯದರ್ಶಿಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವ ಕಾರಣ ವಹಿವಾಟು ಚೆನ್ನಾಗಿ ಆಗುತ್ತಿದೆ. ನೇಕಾರರ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳ ನಡುವೆಯೂ ಭಾಗ್ಯನಗರದ ಸೀರೆ ತನ್ನ ಗುಣಮಟ್ಟ ಉಳಿಸಿಕೊಂಡಿದೆಇದೊಂದು ಉದಾಹರಣೆಯಷ್ಟೇ. ಭಾಗ್ಯನಗರದಲ್ಲಿರುವ ಅನೇಕ ಅಂಗಡಿಗಳ ಮಾಲೀಕರು ಸೀರೆಗಳ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ವೇದಿಕೆ ಮಾಡಿಕೊಂಡಿದ್ದಾರೆ. ಅಂಗಡಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಕೂಡ ವಿಡಿಯೊಗಳನ್ನು ಮಾಡಿ ಸೀರೆಗಳ ವೈಶಿಷ್ಟತೆ, ಗುಣಮಟ್ಟ, ಭಾಗ್ಯನಗರದ ಸೀರೆಗಳೇ ಯಾಕೆ ಶ್ರೇಷ್ಠ ಎನ್ನುವ ಮಾಹಿತಿಯನ್ನೂ ಒದಗಿಸುತ್ತಿರುವುದು ಗ್ರಾಹಕರನ್ನು ಸೆಳೆಯುತ್ತಿವೆ. ಇದರಿಂದಾಗಿ ಸೀರೆಗಳನ್ನು ಭಾಗ್ಯನಗರಕ್ಕೆ ಬಂದು ಖರೀದಿ ಮಾಡುವುದಕ್ಕಿಂತ ಆನ್ಲೈನ್ನಲ್ಲಿಯೇ ವ್ಯವಹಾರ ನಡೆಯುವುದು ಹೆಚ್ಚು. ಅಂಗಡಿಗಳ ಮಾಲೀಕರು ಹಾಗೂ ಗ್ರಾಹಕರು ಇಬ್ಬರಿಗೂ ಅನುಕೂಲ.ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ಪ್ರಭಾವಿಯಾಗಿವೆ. ಆದರೆ, ಭಾಗ್ಯನಗರದ ಸೀರೆಗಳಿಗೆ ಮೊದಲಿನಿಂದಲೂ ಬಾಯಿ ಮಾತೇ ಪ್ರಚಾರ. ಯಾವುದೇ ಪ್ರಚಾರದ ಭರಾಟೆ ಹಾಗೂ ಮಾರುಕಟ್ಟೆ ತಂತ್ರದ ಹಂಗಿಲ್ಲದೇ ತಮ್ಮ ಪಾಡಿಗೆ ಸೀರೆಗಳನ್ನು ತಯಾರಿಸುವ ನೂರಾರು ಕುಟುಂಬಗಳು ಕೊಪ್ಪಳದ ಭಾಗ್ಯನಗರದಲ್ಲಿವೆ. ಹಲವು ದಶಕಗಳ ಹಿಂದೆ ಸಂಪೂರ್ಣವಾಗಿ ಕೈಮಗ್ಗದಿಂದಲೇ ನೇಯ್ದ ಸೀರೆಗಳನ್ನು ಮಾರಾಟ ಮಾಡಲಾಗುತ್ತಿತ್ತು. ಕ್ರಮೇಣ ವ್ಯಾಪಕವಾಗಿ ಕಾಡಿದ ಕಾರ್ಮಿಕರ ಕೊರತೆಯಿಂದಾಗಿ ಬಹಳಷ್ಟು ಸೀರೆ ತಯಾರಕರು ಕೈ ಮಗ್ಗದ ಜೊತೆಗೆ ವಿದ್ಯುತ್ ಚಾಲಿತ ಮಗ್ಗಗಳನ್ನು ಅಳವಡಿಸಿಕೊಂಡಿದ್ದಾರೆ.ಭಾಗ್ಯನಗರಕ್ಕೆ ಕಾಲಿಟ್ಟರೆ ಪ್ರತಿ ಮನೆ–ಮನೆಗಳಲ್ಲಿಯೂ ಮಗ್ಗಗಳ ಸದ್ದು ಮಾರ್ದನಿಸುತ್ತದೆ. ಕಾರ್ಮಿಕರ ಬದುಕಿನ ಸಾಧನೆಯ ಗಾಥೆಗಳು ಅನಾವರಣಗೊಳ್ಳುತ್ತವೆ. ಇಲ್ಲಿ 1800ರಿಂದ 2000 ಮಗ್ಗಗಳಿವೆ. ಅಷ್ಟೇ ಸಂಖ್ಯೆಯ ನೇಕಾರರು ಕೂಡ ಇದ್ದಾರೆ. ಮನೆಯ ಮುಂಭಾಗದಲ್ಲಿ ಮಗ್ಗಗಳಿದ್ದರೆ ಅದರ ಹಿಂಭಾಗದಲ್ಲಿಯೇ ಮನೆಗಳು ಇರುವುದು ಸಾಮಾನ್ಯ. ಕೊಪ್ಪಳದ ಭಾಗ್ಯನಗರದಲ್ಲಿ ಸೀರೆಗಳ ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು ಭಾಗ್ಯನಗರದಲ್ಲಿ ಇರುವವರು ಮೂಲತಃ ಕೊಪ್ಪಳ ತಾಲ್ಲೂಕಿನ ಕಾತರಕಿ ಗ್ರಾಮದವರು. ತುಂಗಭದ್ರಾ ಆಣೆಕಟ್ಟೆಯ ಹಿನ್ನೀರಿನ ಪ್ರದೇಶವಾದ ಕಾತರಕಿ ಗ್ರಾಮವು ಜಲಾಶಯದ ನೀರಿನಿಂದ ಮುಳುಗಡೆಯಾಗಿದ್ದರಿಂದ 1956ರಲ್ಲಿ ಸಂಪೂರ್ಣವಾಗಿ ಊರಿನ ಜನರನ್ನು ಭಾಗ್ಯನಗರಕ್ಕೆ ಸ್ಥಳಾಂತರಿಸಲಾಯಿತು. ಆರೇಳು ದಶಕಗಳ ಹಿಂದೆ ರವಿಕೆ ಮಾರಾಟಕ್ಕೆ ಮಹಾರಾಷ್ಟ್ರದ ಜೊತೆ ನಂಟು ಹೊಂದಿದ್ದ ಕಾತರಕಿ ಗ್ರಾಮಸ್ಥರು, ಸ್ಥಳಾಂತರಗೊಂಡು ಹಲವು ವರ್ಷಗಳ ಬಳಿಕ ಸೀರೆಗಳ ನೇಯ್ಗೆ ಹೆಚ್ಚಿಸಿದರು.ಕುರುಹಿನಶೆಟ್ಟಿ, ಪದ್ಮಶಾಲಿ ಹಾಗೂ ದೇವಾಂಗ ಸಮಾಜದ ಜನರಿಗೆ ನೇಕಾರಿಕೆ ಕುಲಕಸುಬು ಆಗಿದ್ದು ತಲೆಮಾರುಗಳಿಂದಲೂ ಈ ಸಮಾಜದ ಜನ ಇದೇ ಕಾಯಕ ಮಾಡಿಕೊಂಡು ಬಂದಿದ್ದಾರೆ. ಜೊತೆಗೆ ಇದನ್ನು ವೃತ್ತಿಯಾಗಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಎಸ್ಎಸ್ಕೆ), ಮೋಚಿ, ಲಿಂಗಾಯತರು, ನಾಯಕರು ಹೀಗೆ ಅನೇಕ ಸಮುದಾಯಗಳ ಜನ ನೇಕಾರಿಕೆ ಕೆಲಸ ಕಲಿತಿದ್ದು, ಭಾಗ್ಯನಗರದಲ್ಲಿ ಈಗಲೂ ಬಟ್ಟೆಗಳ ನೇಯುವುದನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ಈ ಸಮುದಾಯಗಳ ಹಿರಿಯರು ವ್ಯಾಪಾರ ಮಾಡಿಕೊಂಡು ಬಂದಿದ್ದನ್ನು ಯುವಜನತೆ ಮುಂದುವರಿಸಿಕೊಂಡು ಸ್ಪರ್ಧೆಗೆ ತಕ್ಕಂತೆ ಮಾರಾಟಕ್ಕೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡಿದ್ದಾರೆ.ಕೊಪ್ಪಳದ ಭಾಗ್ಯನಗರದಲ್ಲಿ ಸಾಮೂಹಿಕ ನೇಯ್ಗೆ ಹಾಗೂ ತರಬೇತಿ ಕೇಂದ್ರ ಮುಚ್ಚಿರುವುದು ಮೂಲತಃ ಭಾಗ್ಯನಗರದಲ್ಲಿ ನೆಲೆಸಿದ್ದು ವೈವಾಹಿಕ ಅಥವಾ ಕೌಟುಂಬಿಕ ಕಾರಣಗಳಿಗಾಗಿ ಜಿಲ್ಲೆಯ ಕಿನ್ನಾಳ, ದೋಟಿಹಾಳ, ಅಳವಂಡಿ, ಹಿರೇಬಗನಾಳ, ಹನುಮಸಾಗರ ಹೀಗೆ ಬೇರೆ ಬೇರೆ ಕಡೆ ತೆರಳಿದವರು ಸೀರೆಗಳನ್ನು ನೇಯುತ್ತಿದ್ದರೂ ಸೀರೆಗಳ ತಯಾರಿಕೆಗೆ ಭಾಗ್ಯನಗರವೇ ಕೇಂದ್ರಸ್ಥಾನ. ಅಪ್ಪಟ ದೇಶಿ ಧಿರಿಸು, ತರಹೇವಾರಿ ಬಣ್ಣಗಳ ಸೀರೆಗಳು, ಯುವತಿಯರಿಂದ ಹಿರಿಯ ನಾಗರಿಕರ ತನಕ ಎಲ್ಲರಿಗೂ ಒಪ್ಪುವ ಸೀರೆಗಳನ್ನು ತಯಾರಿಸಲಾಗುತ್ತದೆ. ಇವು ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಹೆಚ್ಚು ಮಾರಾಟವಾಗುತ್ತವೆ.ಕೊಪ್ಪಳದ ಭಾಗ್ಯನಗರದಲ್ಲಿ ಸೀರೆಗಳ ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು ಮಸರೈಸಡ್ ಕಾಟನ್ ಭಾಗ್ಯನಗರ ಸೀರೆಗಳಲ್ಲಿ ಪ್ರಮುಖ ಆಕರ್ಷಣೆ. ಸಾಮಾನ್ಯ ಹತ್ತಿ ದಾರ ಅಥವಾ ಬಟ್ಟೆಯನ್ನು ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಿಂದ ಸಂಸ್ಕರಿಸುವುದರಿಂದ ಆ ಬಟ್ಟೆಗಳು ಹೆಚ್ಚು ಹೊಳಪು, ಬಲ ಮತ್ತು ಬಣ್ಣ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಇದು ಸಾಮಾನ್ಯ ಹತ್ತಿಗಿಂತ ಹೆಚ್ಚು ಮೃದುವಾಗಿರುತ್ತದೆ, ಸುಲಭವಾಗಿ ಸುಕ್ಕುಗಟ್ಟುವುದಿಲ್ಲ. ಮಸರೈಸಡ್ ಕಾಟನ್ ಸೀರೆಗಳಿಗೆ ಪ್ರತಿಬಾರಿಯೂ ಇಸ್ತ್ರೀ ಬೇಕಾಗುವುದಿಲ್ಲ ಎನ್ನುವ ಕಾರಣಕ್ಕೆ ಬೇಡಿಕೆ ಹೆಚ್ಚು. ಇವು ಈಗ ಟ್ರೆಂಡ್ ಆಗಿದೆ.‘ಭಾಗ್ಯನಗರದ ಸೀರೆಗಳ ಹೆಸರಿನಲ್ಲಿ ನಕಲು ಮಾಡುವ ಪ್ರಯತ್ನಗಳು ಅನೇಕ ಕಡೆ ನಡೆಯುತ್ತಿದ್ದರೂ ಮೊದಲ ಗುಣಮಟ್ಟದ ಸೀರೆಗಳು ಬೇಕಾದರೆ ಇಲ್ಲಿಗೇ ಬರಬೇಕು. ಮಸರೈಸಡ್ ಕಾಟನ್ ಹಾಗೂ ಬಾಂಡ್ ಸೀರೆಗಳಿಗೆ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಬೇಡಿಕೆ ಹೆಚ್ಚು. ಮಕ್ಕಳು ಆನ್ಲೈನ್ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡಿದ್ದರಿಂದ ಅಂಗಡಿಗೆ ಬಂದು ಖರೀದಿ ಮಾಡುವವರಿಗಿಂತ ಹೊರರಾಜ್ಯಗಳಿಗೆ ಸಗಟು ವ್ಯಾಪಾರವೇ ಹೆಚ್ಚಾಗಿದೆ’ ಎಂದು ಐದು ದಶಕಗಳಿಂದ ಸೀರೆಗಳ ವ್ಯಾಪಾರದಲ್ಲಿ ತೊಡಗಿರುವ 65 ವರ್ಷದ ಡೀಕುಸಾ ಮೇಘರಾಜ ತಿಳಿಸಿದರು.ಕೊಪ್ಪಳದ ಭಾಗ್ಯನಗರದಲ್ಲಿ ಸೀರೆಗಳ ತಯಾರಿಕೆಯಲ್ಲಿ ತೊಡಗಿದ ನೇಕಾರರು ವಿದ್ಯುತ್ ಇದ್ದರೆ ಸಾಕು ನಿರಂತರವಾಗಿ ಮಗ್ಗಗಳ ಸದ್ದು ಕೇಳಿಸುತ್ತಲೇ ಇರುತ್ತದೆ. ಕಾರ್ಮಿಕರಿಗೆ ಕೈ ತುಂಬಾ ಕೆಲಸ ಸಿಗುತ್ತದೆ. ಕೆಲಸ ಕಲಿತವರು ಸ್ವಂತ ಮಗ್ಗಗಳನ್ನು ಆರಂಭಿಸಿದ ಉದಾಹರಣೆಗಳೂ ಇವೆ. ಭಾಗ್ಯನಗರಕ್ಕೆ ಕಾಲಿಟ್ಟರೆ ಸಾಕು ಮಗ್ಗಗಳ ಕೆಲಸ ಮಾಡುವವರು ಅಥವಾ ಕೂದಲು ಹಿಂಜುವ ಕಾಯಕದಲ್ಲಿ ತೊಡಗಿದ್ದವರು ಸಿಗುತ್ತಾರೆ. ಹೀಗಾಗಿ ಭಾಗ್ಯನಗರ ಸದಾ ಶ್ರಮಿಕರ ಊರು. ಆಧುನಿಕ ಕಾಲಮಾನಕ್ಕೆ ಒಪ್ಪುವ ರೀತಿಯಲ್ಲಿ ಕಾಟನ್ ಸಿಲ್ಕ್, ಪ್ರಿಂಟೆಡ್, ಸೆಮಿ ಸಿಲ್ಕ್, ಚೂಡಿದಾರ್, ಡ್ರೆಸ್ ಮೆಟರೀಯಲ್ ಬಟ್ಟೆಗಳಿಗೆ ಬೇಡಿಕೆಯಿದೆ. ಹೆಚ್ಚು ಬಿಸಿಲಿರುವ ಪ್ರದೇಶಗಳಲ್ಲಿ ಕಾಟನ್ ಸೀರೆಗಳ ವ್ಯಾಪಾರ ತುಸು ಹೆಚ್ಚೇ ಇರುತ್ತದೆ.ಸೀರೆಗಳನ್ನು ತಯಾರಿಸಲು ತಮಿಳುನಾಡಿನ ಸೇಲಂ, ಕೊಯಮತ್ತೂರಿನಿಂದ ನೂಲು ಹಾಗೂ ನೂಲು ಸುತ್ತಲು ಬಳೆಗಳನ್ನು ತರಲಾಗುತ್ತದೆ. ಒಂದು ನೂಲಿನ ರೋಲ್ನಿಂದ (ಬೀಮ್) 110ರಿಂದ 115 ಸೀರೆಗಳನ್ನು ತಯಾರಿಸಬಹುದು. ಒಂದು ಸೀರೆ ತಯಾರಿಸಲು ನಾಲ್ಕೈದು ತಾಸು ಬೇಕಾಗುತ್ತದೆ ಎಂದು ನೇಕಾರ ಅಶೋಕ ಗೋರಂಟ್ಲಿ ಹೇಳುತ್ತಾರೆ.ದೇಶ ಹಾಗೂ ವಿದೇಶಗಳಲ್ಲಿ ಜನರ ಬಾಯಿಂದ ಬಾಯಿಗೆ ಹರಡಿ ‘ಭಾಗ್ಯನಗರದ ಸೀರೆ’ಗಳು ಎನ್ನುವ ಬ್ರ್ಯಾಂಡ್ ಇದ್ದರೂ ಇಲ್ಲಿನ ವ್ಯಾಪಾರಿಗಳು ಸೀರೆಯ ಮೇಲೆ ಭಾಗ್ಯನಗರದ ಸೀರೆಗಳು ಎಂದು ಮುದ್ರಿಸುವುದಿಲ್ಲ. ಸೀರೆಗಳ ಗುಣಮಟ್ಟ, ತಯಾರಿಕೆಯ ಶೈಲಿ ಹಾಗೂ ಸೀರೆಯನ್ನು ನೋಡಿಯೇ ಇವು ಎಲ್ಲಿಯ ಸೀರೆಗಳು ಎಂದು ಗ್ರಾಹಕ ನಿರ್ಧರಿಸಿ ಭಾಗ್ಯನಗರಕ್ಕೆ ಬರಬೇಕೆನ್ನುವುದು ಇಲ್ಲಿನ ಸೀರೆ ತಯಾರಕರ ಮಾತುಗಳು. ಸಾಂಪ್ರದಾಯಿಕ ಕರಕುಶಲತೆ ಉಳಿಸಿಕೊಳ್ಳುವ ಜೊತೆಗೆ ಇಂದಿನ ನೇಕಾರರು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಸೀರೆಗಳನ್ನು ತಯಾರಿಸುತ್ತಿರುವುದು ಕೂಡ ಭಾಗ್ಯನಗರದ ಸೀರೆಗಳಿಗೆ ಬೇಡಿಕೆ ಹೆಚ್ಚಾಗಲು ಕಾರಣ.‘ಕಾರ್ಮಿಕರ ವ್ಯಾಪಕ ಕೊರತೆ ಕಾರಣಕ್ಕೆ ಕೈ ಮಗ್ಗದಿಂದ ವಿದ್ಯುತ್ ಚಾಲಿತ ಮಗ್ಗಗಳಿಂದ ಸೀರೆ ತಯಾರಿಸುವ ಪ್ರಮಾಣ ಹೆಚ್ಚಿದೆ. ಕಾಟನ್ ಸೀರೆಗಳ ಬೆಲೆ ₹600ರಿಂದ ಆರಂಭವಾಗಿ ₹3,000 ತನಕವೂ ಇವೆ. ವಾರ್ಷಿಕವಾಗಿ ಅಂದಾಜು ನಾಲ್ಕೂವರೆಯಿಂದ ಐದು ಲಕ್ಷ ಸೀರೆಗಳನ್ನು ತಯಾರಿಸಲಾಗುತ್ತಿದ್ದು ಭಾಗ್ಯನಗರದಿಂದ ವಾರ್ಷಿಕ ಅಂದಾಜು ₹30 ಕೋಟಿ ವಹಿವಾಟು ನಡೆಯುತ್ತದೆ’ ಎಂದು ಭಾಗ್ಯನಗರ ಜವಳಿ ಉತ್ಪಾದಕರ ಸಂಘದ ಕಾರ್ಯದರ್ಶಿ ಮಾರುತಿ ಮೇಘರಾಜ ತಿಳಿಸಿದರು.ಕೊಪ್ಪಳದ ಭಾಗ್ಯನಗರದ ಸರ್ಕಾರಿ ಮಗ್ಗದಲ್ಲಿ ಬಟ್ಟೆ ನೇಯುವ ಕಾಯಕದಲ್ಲಿ ನೇಕಾರ ನೇಕಾರರ ಉತ್ತೇಜನಕ್ಕೂ ಬೇಕಿದೆ ಒತ್ತುಭಾಗ್ಯನಗರದ ಸೀರೆಗಳು ಒಂದೆಡೆ ಹೆಣ್ಣುಮಕ್ಕಳಿಗೆ ಅಚ್ಚುಮೆಚ್ಚಾಗಿದ್ದರೆ ವ್ಯಾಪಾರಿಗಳಿಗೆ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಲು ಕಾರಣವಾಗಿವೆ. ಆದರೆ, ಸೀರೆಗಳನ್ನು ತಯಾರಿಸುವ ನೇಕಾರರ ಬದುಕು ಅಷ್ಟೊಂದು ಸುಖಕರವಾಗಿಲ್ಲ. ಮೊದಲು ಸರ್ಕಾರದ ಜವಳಿ ಇಲಾಖೆಯಿಂದಲೇ ಸಬ್ಸಿಡಿ ದರದಲ್ಲಿ ಮಗ್ಗಗಳನ್ನು ಹಾಗೂ ಕಚ್ಚಾ ವಸ್ತುಗಳನ್ನು ನೀಡಲಾಗುತ್ತಿತ್ತು. ಸರ್ಕಾರವೇ ಬಟ್ಟೆಗಳನ್ನು ಖರೀದಿ ಮಾಡುತ್ತಿತ್ತು. ಈಗ ಆ ಕೆಲಸವಾಗುತ್ತಿಲ್ಲ ಎನ್ನುವುದು ನೇಕಾರರ ಬೇಸರ.‘ಬಣ್ಣಬಣ್ಣದ ಸೀರೆಗಳನ್ನು ತಯಾರಿಸಿ ಕೊಟ್ಟರೂ ನೇಕಾರರ ಬದುಕು ಮಾತ್ರ ಕಪ್ಪಾಗಿಯೇ ಇದೆ. ನೇಕಾರರ ಕಾರ್ಡ್ ಮಾತ್ರ ಕೊಟ್ಟಿದ್ದು ವಾರ್ಷಿಕ ₹5000 ಪ್ರೋತ್ಸಾಹ ಧನವಷ್ಟೇ ಸಿಗುತ್ತಿದೆ. ಬೇರೆ ಕಾರ್ಮಿಕರ ರೀತಿಯಲ್ಲಿ ಕಾರ್ಮಿಕರ ಕಾರ್ಡ್ ಕೊಡಬೇಕು, ಕಿಟ್ಗಳನ್ನು ನೀಡಬೇಕು, ಸಾಕಷ್ಟು ಹೆಸರು ಮಾಡಿರುವ ಭಾಗ್ಯನಗರದ ಸೀರೆಯ ಉದ್ಯಮ ಬೆಳೆಯಲು ಸರ್ಕಾರವೇ ಉಚಿತವಾಗಿ ಯುವಜನತೆಗೆ ಕೈಮಗ್ಗದ ತರಬೇತಿ ನೀಡಬೇಕು, ಬಂದ್ ಮಾಡಿರುವ ಸಾಮೂಹಿಕ ನೇಯ್ಗೆ ಹಾಗೂ ತರಬೇತಿ ಕೇಂದ್ರ ಪುನರಾರಂಭಿಸಬೇಕು. ಮಗ್ಗಗಳ ಖರೀದಿಗೆ ಸಬ್ಸಿಡಿ ನೀಡಬೇಕು. ನಾವು ಜೀವನಪೂರ್ತಿ ದುಡಿಯುತ್ತಲೇ ಹೋದರೆ ಮಾಲೀಕರಾಗುವುದು ಯಾವಾಗ?’ ಎಂದು ಭಾಗ್ಯನಗರ ನೇಕಾರರ ಸೇವಾಸಂಘದ ಅಧ್ಯಕ್ಷ ಅಶೋಕ ಗೋರಂಟ್ಲಿ ಪ್ರಶ್ನಿಸುತ್ತಾರೆ.15 ವರ್ಷಗಳಿಂದ ಸೀರೆಗಳ ನೇಯ್ಗೆಯಲ್ಲಿ ತೊಡಗಿರುವ ಯುವಕನೊಬ್ಬ ಹೆಸರು ಬಹಿರಂಗಪಡಿಸಬೇಡಿ ಎನ್ನುವ ಷರತ್ತಿನೊಂದಿಗೆ ‘ಒಂದು ಚೌಕುಡ ಸೀರೆ ನೇಯ್ದರೆ ₹140, ಪ್ಲೇನ್ ಸೀರೆಗೆ ₹120ರಿಂದ ₹130 ಮಜೂರಿ ಸಿಗುತ್ತದೆ. ಒಬ್ಬ ನೇಕಾರನಿಗೆ ಒಂದು ಮಗ್ಗ ನಿರ್ವಹಣೆ ಮಾಡುವುದೇ ಕಷ್ಟ. ಹೆಚ್ಚು ಕೂಲಿ ದುಡಿಯಬೇಕು ಎನ್ನುವ ಕಾರಣಕ್ಕೆ ಎರಡು ಮಗ್ಗಗಳನ್ನು ಒಟ್ಟಿಗೆ ನಿರ್ವಹಣೆ ಮಾಡುತ್ತಾನೆ. ಮೂರು ವರ್ಷಗಳಿಗೊಮ್ಮೆ ಸೀರೆಗಳ ವಿನ್ಯಾಸದ ಆಧಾರದ ಮೇಲೆ ₹5ರಿಂದ ₹10 ಮಾತ್ರ ಕೂಲಿ ಮೊತ್ತ ಹೆಚ್ಚಳ ಮಾಡುತ್ತಾರೆ. ಹೀಗಾದರೆ ನೇಕಾರರು ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ’ ಎಂದು ಬೇಸರ ತೋಡಿಕೊಂಡರು.ಕಂಪ್ಯೂಟರ್ ಆಧಾರಿತವಾಗಿ ಸೀರೆಗಳ ವಿನ್ಯಾಸ, ಸರ್ಕಾರದಿಂದಲೇ ಕಚ್ಚಾವಸ್ತುಗಳನ್ನು ನೀಡಲು ಕ್ರಮ, ನಿರಂತರ ವಿದ್ಯುತ್ ಪೂರೈಕೆ, ತಾಂತ್ರಿಕ ನೆರವು, ಇದ್ದೂರಿನಲ್ಲಿಯೇ ಸರ್ಕಾರದಿಂದಲೇ ಶೋ ರೂಮ್, ತಾಂತ್ರಿಕ ನೆರವು ಸಿಗಬೇಕು ಎನ್ನುವುದು ನೇಕಾರರ ಬೇಡಿಕೆಯಾಗಿದೆ.ಒಂದೆಡೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ವ್ಯಾಪಕ ಬೇಡಿಕೆ ಸೃಷ್ಟಿಸಿಕೊಂಡ ಭಾಗ್ಯನಗರದ ಸೀರೆಗಳು, ಮತ್ತೊಂದೆಡೆ ಸೌಲಭ್ಯಗಳಿಗಾಗಿ ನೇಕಾರರ ಅಳಲು ಹೀಗೆ ವಿಭಿನ್ನ ಸಮಸ್ಯೆಗಳು, ಸವಾಲುಗಳ ಹಾದಿಯ ನಡುವೆಯೂ ಸೀರೆಗಳು ಬ್ರ್ಯಾಂಡ್ ಆಗಿ ಬೆಳೆದಿವೆ. ಸರ್ಕಾರ ಹಾಗೂ ಸೀರೆಗಳ ವ್ಯಾಪಾರಿಗಳು ನೇಕಾರರ ಹಿತಾಸಕ್ತಿ ಕಾಯಲು ಒತ್ತು ಕೊಟ್ಟರೆ ಸೀರೆಗಳಲ್ಲಿ ಬಳಕೆಯಾಗುವ ತರಹೇವಾರಿ ಬಣ್ಣಗಳ ನೂಲುಗಳಂತೆಯೇ ನೇಕಾರರ ಬದುಕು ಕೂಡ ಬಣ್ಣಗಳಂತೆ ಕಂಗೊಳಿಸಲು ಸಾಧ್ಯವಾಗುತ್ತದೆ.ಅಶೋಕ ಗೋರಂಟ್ಲಿ, ಭಾಗ್ಯನಗರ ನೇಕಾರರ ಸೇವಾಸಂಘದ ಅಧ್ಯಕ್ಷನೇಕಾರ ಜೀವನಪೂರ್ತಿ ನೇಕಾರನೇ ಆಗಿ ದುಡಿಯುವ ಪರಿಸ್ಥಿತಿಯಿದ್ದು, ಸರ್ಕಾರ ಕೈ ಜೋಡಿಸಿದರೆ ತಾನು ಮಾಲೀಕ ಕೂಡ ಆಗಬಹುದು. ಸರ್ಕಾರದ ಮನಸ್ಸು ಮಾಡಬೇಕಷ್ಟೇಬಸವರಾಜ ಗಾಳಿ, ಗದಗ ವಿಭಾಗದ ವ್ಯವಸ್ಥಾಪಕ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಯುವ ನೇಕಾರರು ನೇಯ್ಗೆಯತ್ತ ಆಸಕ್ತಿ ತೋರಲಿ ಎನ್ನುವ ಕಾರಣಕ್ಕಾಗಿ ಮಜೂರಿ ಹೆಚ್ಚಳ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಸರ್ಕಾರಿ ಮಗ್ಗದಲ್ಲಿ ಕೇವಲ ಒಂಬತ್ತು ಜನರಷ್ಟೇ ನೇಕಾರರು!ಭಾಗ್ಯನಗರಕ್ಕೆ ದೊಡ್ಡ ಹೆಸರು ತಂದುಕೊಟ್ಟ ಬಟ್ಟೆಗಳ ತಯಾರಿಕೆಯ ಸರ್ಕಾರಿ ಸ್ವಾಮ್ಯದ ಉದ್ಯಮದ ಸ್ಥಿತಿ ಚಿಂತಾಜನಕವಾಗಿದೆ. ಹಲವು ದಶಕಗಳ ಹಿಂದೆ ನೂರಾರು ಸಂಖ್ಯೆಯಲ್ಲಿದ್ದ ಕಾರ್ಮಿಕರ ಸಂಖ್ಯೆ ಈಗ ಒಂಬತ್ತಕ್ಕೆ ಇಳಿದಿದೆ.ಅಲ್ಲಿ ಬೆಡ್ಶೀಟ್, ಪ್ಯಾಂಟ್, ಶರ್ಟ್ ಬಟ್ಟೆ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಬಟ್ಟೆಗಳನ್ನು ತಯಾರಿಸುವ ಕೆಲಸ ನಡೆಯುತ್ತಿತ್ತು. ಮಗ್ಗಗಳ ನಿರ್ವಹಣೆ ಕೊರತೆ, ಕಾರ್ಮಿಕರ ಹಿತಾಸಕ್ತಿಗೆ ಆದ್ಯತೆ ಕೊಡದ ಕಾರಣಕ್ಕೆ ಬಹಳಷ್ಟು ನೇಕಾರರು ಸರ್ಕಾರಿ ಮಗ್ಗಗಳಲ್ಲಿ ನೇಯುವುದನ್ನು ಬಿಟ್ಟಿದ್ದಾರೆ. 30 ರಿಂದ 40 ವರ್ಷಗಳಿಂದ ಇದೇ ಕೆಲಸವನ್ನು ಮಾಡಿಕೊಂಡಿರುವ ಹಿರಿಯ ಜೀವಿಗಳು ತಮ್ಮ ದೇಹದ ಶಕ್ತಿಯನ್ನೆಲ್ಲ ಬಳಸಿಕೊಂಡು ಬದುಕಿನ ಬಂಡಿ ಸಾಗಿಸಲು ಕಡಿಮೆ ಕೂಲಿಯಲ್ಲಿ ಸರ್ಕಾರಿ ಸ್ವಾಮ್ಯದ ಮಗ್ಗಗಳಲ್ಲಿಯೇ ಕೆಲಸ ಮಾಡುತ್ತಿದ್ದಾರೆ.‘ಮೂರು ದಶಕಗಳಿಂದ ಇದೇ ಮಗ್ಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಬೇರೆ ಕೆಲಸವೂ ಗೊತ್ತಿಲ್ಲ. ಬದುಕಿರುವಷ್ಟು ದಿನ ಅದೇ ಮಗ್ಗದಲ್ಲಿ ದುಡಿಯುವುದು ಅನಿವಾರ್ಯವಾಗಿದೆ. ದಿನಕ್ಕೆ ₹300ರಿಂದ ₹350 ಮಜೂರಿ ಸಿಕ್ಕರೆ ಅದೇ ಹೆಚ್ಚು’ ಎಂದು 65 ವರ್ಷದ ಅಬ್ದುಲ್ ರಸೂಲಸಾಬ್ ಬೇಸರದಿಂದ ಹೇಳುತ್ತಾರೆ. ಸರ್ಕಾರಿ ಸ್ವಾಮ್ಯದಲ್ಲಿಯೇ ಇದ್ದ ತರಬೇತಿ ಕೇಂದ್ರಗಳು, ಬಣ್ಣ ಹಾಕುವ ವಿಶಾಲವಾದ ಕೊಠಡಿಗಳು ಬಂದ್ ಆಗಿದ್ದು ಮದ್ಯ ವ್ಯಸನಿಗಳ ತಾಣಗಳಾಗಿವೆ.