ಸ್ನೇಹಮಯಿ ಕೃಷ್ಣ ವಿರುದ್ಧದ ಪ್ರಕರಣ ರದ್ದು
ಬೆಂಗಳೂರು: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕರ್ತವ್ಯದಲ್ಲಿದ್ದ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪದಡಿ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರಿದ್ದ ಏಕಸದ

ಬೆಂಗಳೂರು: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕರ್ತವ್ಯದಲ್ಲಿದ್ದ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪದಡಿ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿ ಈ ಕುರಿತಂತೆ ಆದೇಶಿಸಿದೆ.ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ಅವರ ವಾದವನ್ನು ಮನ್ನಿಸಿರುವ ನ್ಯಾಯಪೀಠ, ‘ದೂರುದಾರರ ಮೇಲೆ ಹಲ್ಲೆ ನಡೆಸಲಾಗಿದೆ ಅಥವಾ ಅಪರಾಧಾತ್ಮಕ ಬಲಪ್ರಯೋಗ ಮಾಡಲಾಗಿದೆ ಎಂಬ ಅಂಶವನ್ನು ದೂರು ಬಹಿರಂಗಪಡಿಸುವುದಿಲ್ಲ. ದೂರಿನಲ್ಲಿರುವ ಏಕೈಕ ಆರೋಪ ಎಂದರೆ, ಕೃಷ್ಣ ಜೋರಾಗಿ ಮಾತನಾಡಿ ಪಾಠ ಕಲಿಸುತ್ತೇನೆ ಎಂದು ಹೇಳಿರುವುದು ಮಾತ್ರ’ ಎಂದು ವಿವರಿಸಿದೆ.‘ಸಿಬ್ಬಂದಿಯ ಮೇಲೆ ಕೂಗುವುದು ಅಥವಾ ಬೆದರಿಕೆ ಹಾಕುವುದನ್ನು; ಭಾರತೀಯ ದಂಡ ಸಂಹಿತೆ–1860ರ ಕಲಂ 353ರ ಅಡಿಯಲ್ಲಿ ಹಲ್ಲೆ ಎಂದು ಪರಿಗಣಿಸಲಾಗುವುದಿಲ್ಲ. ಅಪರಾಧ ಎನಿಸಲು ಆರೋಪಿಯು ನಿರ್ದಿಷ್ಟ ಹಾಗೂ ಸಕಾರಾತ್ಮಕ ಕೃತ್ಯ ಎಸಗಿರಬೇಕು’ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದೆ.ಪ್ರಕರಣ: ‘ಮೈಸೂರಿನ ಚಾಮುಂಡೇಶ್ವರಿ ದೇವಿಗೆ ಭಕ್ತರು ಕಾಣಿಕೆಯಾಗಿ ನೀಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ನೇಹಮಯಿ ಕೃಷ್ಣ ನನ್ನ ವಿರುದ್ಧ ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಗೆ 2024ರ ಡಿಸೆಂಬರ್ 14ರಂದು ದೂರು ನೀಡಿದ್ದರು. ನಾನು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪೊಲೀಸರೊಂದಿಗೆ ನನ್ನ ಕಚೇರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಅವರು ಜೋರಾಗಿ ನಿಮಗೆ ಒಂದು ಪಾಠ ಕಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಮೈಸೂರು ಶ್ರೀ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಪೊಲೀಸರಿಗೆ ದೂರು ನೀಡಿದ್ದರು.ಈ ದೂರಿನ ಅನ್ವಯ ಕೃಷ್ಣ ವಿರುದ್ಧ; ಭಾರತೀಯ ನ್ಯಾಯ ಸಂಹಿತಾ–2023ರ (ಬಿಎನ್ಎಸ್) ಕಲಂ 132ರಡಿ ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಹಲ್ಲೆ ಅಥವಾ ಅಪರಾಧಾತ್ಮಕ ಬಲಪ್ರಯೋಗ ಮತ್ತು ಕಲಂ 351ರ ಅಡಿಯಲ್ಲಿ ಕ್ರಿಮಿನಲ್ ಬೆದರಿಕೆ ಒಡ್ಡಿದ ಆರೋಪಗಳನ್ನು ದಾಖಲಿಸಲಾಗಿತ್ತು.