ಲಂಡನ್ನಲ್ಲಿ ರಾಜ್ಯೋತ್ಸವ: ಸುಧಾ ಮೂರ್ತಿ, ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಭಾಗಿ
ಲಂಡನ್: ಕರ್ನಾಟಕದ ವಿವಿಧ ಭಾಗಗಳ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ಕನ್ನಡಿಗರುಯುಕೆ ಸಂಸ್ಥೆಯು ಲಂಡನ್ನ ಫೆಲ್ತಮ್ನ ಟ್ಯೂಡರ್ ಪಾರ್ಕ್ನಲ್ಲಿ ನವೆಂಬರ್ 1ರಂದು ‘ಕರ್ನಾಟಕ ಸಂಸ್ಕೃತಿ ಸಂಗಮ 2026’ ಹೆಸರಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿತು.ಸುಮಾರು 350ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ

ಲಂಡನ್: ಕರ್ನಾಟಕದ ವಿವಿಧ ಭಾಗಗಳ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ಕನ್ನಡಿಗರುಯುಕೆ ಸಂಸ್ಥೆಯು ಲಂಡನ್ನ ಫೆಲ್ತಮ್ನ ಟ್ಯೂಡರ್ ಪಾರ್ಕ್ನಲ್ಲಿ ನವೆಂಬರ್ 1ರಂದು ‘ಕರ್ನಾಟಕ ಸಂಸ್ಕೃತಿ ಸಂಗಮ 2026’ ಹೆಸರಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿತು.ಸುಮಾರು 350ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಇಸ್ರೋ ಮಾಜಿ ಅಧ್ಯಕ್ಷ, ಪದ್ಮಶ್ರೀ ಪುರಸ್ಕೃತ ಎ.ಎಸ್. ಕಿರಣ್ ಕುಮಾರ್ ಮತ್ತು ಭಾರತೀಯ ವಿದ್ಯಾಭವನದ ಲಂಡನ್ ಕೇಂದ್ರದ ನಿರ್ದೇಶಕ ಮತ್ತೂರು ನಂದಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪದ್ಮಭೂಷಣ ಪುರಸ್ಕೃತ ಸುಧಾ ಮೂರ್ತಿ ಅವರ ಅನಿರೀಕ್ಷಿತ ಆಗಮನ ಕಾರ್ಯಕ್ರಮದ ವಿಶೇಷವಾಗಿತ್ತು.ದೀಪ ಬೆಳಗಿಸುವಿಕೆ ಮತ್ತು ಸಾಮೂಹಿಕ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಭರತನಾಟ್ಯ, ಜಾನಪದ ನೃತ್ಯ, ಕನ್ನಡ ಗೀತೆಗಳ ಗಾಯನ ಹಾಗೂ ಭಾಷಣಗಳು ನಡೆದವು. ಯುಕೆಯಲ್ಲಿ ಬೆಳೆಯುತ್ತಿರುವ ಕನ್ನಡಿಗರ ಮಕ್ಕಳು ಕನ್ನಡದಲ್ಲಿ ಭಾಷಣ ಮಾಡಿ, ಹಾಡು ಮತ್ತು ನೃತ್ಯ ಪ್ರದರ್ಶಿಸಿದರು. ‘ಕನ್ನಡ ಕೋಗಿಲೆ’ ಖ್ಯಾತಿಯ ಗಾಯಕಿ ಹರ್ಷಿತ ಅವರ ಗಾಯನವೂ ಗಮನ ಸೆಳೆಯಿತು. ಕರ್ನಾಟಕದ ವಿವಿಧ ಭಾಗಗಳ ಆಹಾರ ಪದಾರ್ಥಗಳೊಂದಿಗೆ ಸಾಂಪ್ರದಾಯಿಕ ಭೋಜನ ಏರ್ಪಡಿಸಲಾಗಿತ್ತು.ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯನ್ನು ಆಧರಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲೂ ಸಭಿಕರು ಉತ್ಸಾಹದಿಂದ ಪಾಲ್ಗೊಂಡರು. ಇದೇ ವೇಳೆ ಯುಕೆಯ ಕನ್ನಡಿಗರ ಕ್ರೀಡಾ ಸಾಧನೆಗಳನ್ನು ಗುರುತಿಸಲಾಯಿತು. 2026ರ ಸರ್ರೆ ಚಾಂಪಿಯನ್ಸ್ ಪಂದ್ಯಾವಳಿ ಗೆದ್ದ ಕನ್ನಡಿಗರುಯುಕೆ ಕ್ರಿಕೆಟ್ ಕ್ಲಬ್ನ ಸದಸ್ಯರು, ಯುರೋ ಥ್ರೋಬಾಲ್ ಚಾಂಪಿಯನ್ಷಿಪ್ ಗೆದ್ದ ಮಹಿಳಾ ತಂಡದ ಆಟಗಾರ್ತಿಯರು ಹಾಗೂ ಸರ್ರೆ ಕೌಂಟಿಯ ಅಂಡರ್-14 ವಿಭಾಗವನ್ನು ಪ್ರತಿನಿಧಿಸುತ್ತಿರುವ ದೀಪ್ತಿ ಧೂಳಪ್ಪನವರ್ ಅವರಿಗೆ ಕಿರಣ್ ಕುಮಾರ್ ಬಹುಮಾನ ವಿತರಿಸಿದರು.ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಕಿರಣ್ ಕುಮಾರ್ ಅವರನ್ನು ಸಂಸ್ಥೆ ಸನ್ಮಾನಿಸಿತು. ವಿದೇಶದಲ್ಲಿ ಇಷ್ಟೊಂದು ಸಂಖ್ಯೆಯ ಕನ್ನಡಿಗರು ಸೇರಿ ಭಾಷೆ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುತ್ತಿರುವುದು ಸಂತೋಷ ತಂದಿದೆ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಸುಧಾ ಮೂರ್ತಿ ಅವರು ಕನ್ನಡ ಭಾಷೆ, ಅದರ ಮೇಲಿನ ಅಭಿಮಾನ, ತಮ್ಮ ಬದುಕಿನ ಅನುಭವಗಳು ಮತ್ತು ಕನ್ನಡ ನಾಡಿನ ಇತಿಹಾಸದ ಕುರಿತು ಮಾತನಾಡಿದರು. ಕನ್ನಡಿಗರ ಮುಂದಿನ ಪೀಳಿಗೆಗೆ ಭಾಷೆ ಮತ್ತು ಸಂಸ್ಕೃತಿಯ ಪರಿಚಯ ಮಾಡಿಸುವ ಮಹತ್ವವನ್ನು ವಿವರಿಸಿದರು.ಕನ್ನಡಿಗರುಯುಕೆ ಅಧ್ಯಕ್ಷ ಗಣಪತಿ ಭಟ್ ಸಂಸ್ಥೆಯ ಮುಂದಿನ ಯೋಜನೆಗಳನ್ನು ಪರಿಚಯಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆ ನೂರ್ಜಹಾನ್ ಬಷೀರ್ ಅವರು ಯುಕೆಯ ಅನಿವಾಸಿ ಮಕ್ಕಳಿಗೆ ಕನ್ನಡ ಕಲಿಸುವ ‘ಕನ್ನಡ ಕಲಿ’ ಯೋಜನೆಯ ಪ್ರಗತಿಯನ್ನು ವಿವರಿಸಿದರು. ಅಧ್ಯಕ್ಷರಾಗಿ ಹತ್ತನೇ ವರ್ಷ ಪೂರೈಸಿದ ಗಣಪತಿ ಭಟ್ ಮತ್ತು ಅವರ ಪತ್ನಿ ವೀಣಾ ಭಟ್ ಅವರನ್ನು ಸುಧಾ ಮೂರ್ತಿ ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಸಣ್ಣ ಉದ್ಯಮಗಳ ಮಳಿಗೆಗಳು, ಮಕ್ಕಳಿಗಾಗಿ ವಿಶೇಷ ಮಳಿಗೆಗಳು ಹಾಗೂ ಡಿಜೆ ಸಂಗೀತ ಮತ್ತು ನೃತ್ಯ ಕಾರ್ಯಕ್ರಮವೂ ನಡೆದವು. ಆಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಗೌರವಿಸಲಾಯಿತು. ಕಾರ್ಯಕ್ರಮದ ನೇರಪ್ರಸಾರದ ಮೂಲಕ ವಿಶ್ವದ ವಿವಿಧ ಭಾಗಗಳ ಕನ್ನಡಿಗರೂ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.ವರದಿ: ರಜನಿ ರಾಜು, ಲಂಡನ್