ಕಾವೇರಿ ನದಿಗಿಳಿದು ರೈತರ ಪ್ರತಿಭಟನೆ: ತಮಿಳುನಾಡಿಗೆ ನೀರು ಬಿಡುವುದಕ್ಕೆ ವಿರೋಧ
ಶ್ರೀರಂಗಪಟ್ಟಣ (ಮಂಡ್ಯ): ತಮಿಳುನಾಡಿಗೆ 15 ದಿನ ಪ್ರತಿದಿನ 3 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ನಿರ್ದೇಶನ ವಿರೋಧಿಸಿ ಭೂಮಿತಾಯಿ ಹೋರಾಟ ಸಮಿತಿಯ ರೈತರು ಶನಿವಾರ ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದರು.ರೈತ ನಾಯಕ ಕೆ.ಎಸ್. ನಂಜುಂಡೇಗೌಡ ನೇತೃತ್ವದಲ್ಲಿ, ಇಲ್ಲಿನ ಸ್ನಾನಘಟ್ಟದ ಬಳಿ ಕಾವೇರಿ ನದಿಯಲ್ಲ

ಶ್ರೀರಂಗಪಟ್ಟಣ (ಮಂಡ್ಯ): ತಮಿಳುನಾಡಿಗೆ 15 ದಿನ ಪ್ರತಿದಿನ 3 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ನಿರ್ದೇಶನ ವಿರೋಧಿಸಿ ಭೂಮಿತಾಯಿ ಹೋರಾಟ ಸಮಿತಿಯ ರೈತರು ಶನಿವಾರ ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದರು.ರೈತ ನಾಯಕ ಕೆ.ಎಸ್. ನಂಜುಂಡೇಗೌಡ ನೇತೃತ್ವದಲ್ಲಿ, ಇಲ್ಲಿನ ಸ್ನಾನಘಟ್ಟದ ಬಳಿ ಕಾವೇರಿ ನದಿಯಲ್ಲಿ ನಿಂತು ಪ್ರತಿಭಟಿಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯದ ಜಲಾಶಯಗಳ ನೀರಿನ ಕೊರತೆ ಕುರಿತು ಪ್ರಾಧಿಕಾರಕ್ಕೆ ವಸ್ತುಸ್ಥಿತಿ ತಿಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ತೀವ್ರ ಬರಗಾಲ ಸ್ಥಿತಿ ಇದೆ. ಈ ಬಾರಿ ವಾಡಿಕೆಗಿಂತ ಶೇ 40ರಷ್ಟು ಮಳೆ ಕೊರತೆಯಾಗಿದ್ದು ಕೆರೆ, ಕಟ್ಟೆಗಳಲ್ಲಿ ಹಕ್ಕಿ ಕುಡಿಯಲೂ ನೀರಿಲ್ಲದ ಸ್ಥಿತಿ ಬಂದೊದಗಿದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕೂಡ ಅತ್ಯಲ್ಪ ನೀರಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಆತಂಕವಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ನಿರ್ದೇಶನ ರಾಜ್ಯದ ರೈತರ ಪಾಲಿಗೆ ಮರಣಶಾಸನವಾಗಿದೆ ಎಂದು ಕೆ.ಎಸ್. ನಂಜುಂಡೇಗೌಡ ಟೀಕಿಸಿದರು.ಜಲ ಸಂಪನ್ಮೂಲ ಮತ್ತು ಕೃಷಿ ಸಚಿವ ಇಬ್ಬರೂ ಮಂಡ್ಯ ಜಿಲ್ಲೆಯವರೇ ಆಗಿದ್ದು, ರೈತರ ಹಿತ ಕಾಯುವಲ್ಲಿ ವಿಫಲರಾಗಿದ್ದಾರೆ. ಸೂಕ್ತ ಬರ ಪರಿಹಾರವನ್ನೂ ನೀಡುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ದಿಟ್ಟತನ ಪ್ರದರ್ಶಿಸಬೇಕು ಎಂದು ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ ಒತ್ತಾಯಿಸಿದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ವಿ. ಕೃಷ್ಣ, ಸದಸ್ಯ ರಾಮಕೃಷ್ಣ, ಬಲ್ಲೇನಹಳ್ಳಿ ಮಂಜುನಾಥ್, ದರಸಗುಪ್ಪೆ ಸುರೇಶ್, ಮಹೇಶ್, ಸೋಮಶಂಕರ್, ದೊಡ್ಡಪಾಳ್ಯ ಜಗದೀಶ್, ಮಹೇಶ್, ಚಂದಗಿರಿಕೊಪ್ಪಲು ಕೆಂಪೇಗೌಡ, ಚಾಮರಾಜು, ಕೃಷ್ಣ, ಮೇಳಾಪುರ ಬಾಲಚಂದ್ರ, ದೇವರಾಜು ಪಾಲ್ಗೊಂಡಿದ್ದರು.