ಆಟೊದಲ್ಲೇ ಲಡಾಖ್ ಸುತ್ತಿ, ಅತಿ ಎತ್ತರದ ಮಾರ್ಗದಲ್ಲಿ ನಾಡಧ್ವಜ ಹಾರಿಸಿದ ಕನ್ನಡಿಗ
ಬೆಂಗಳೂರಿನ ಬಾಲಕೃಷ್ಣ ಮೋಹನ್ ಅವರು ಇತ್ತೀಚೆಗೆ ಲಡಾಖ್ ಪ್ರವಾಸ ಕೈಗೊಂಡಿದ್ದರು. ಅದಕ್ಕಾಗಿ ಅವರು ಬಳಸಿದ್ದು ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕ್, ಕಾರು ಅಥವಾ ಬಸ್ಸನ್ನೂ ಅಲ್ಲ; ತ್ರಿಚಕ್ರ ವಾಹನ ಆಟೊವನ್ನು. ನಗರಗಳಲ್ಲಿನ ಸಂಚಾರ ವ್ಯವಸ್ಥೆಯ ಪ್ರಮುಖ ವಾಹನವಾಗಿ, ಸ್ಥಳೀಯ ಪ್ರಯಾಣಕ್ಕಷ್ಟೇ ಎನ್ನುವ ಆಟೊವನ್ನು ಅಷ್ಟು ದೂರ ಕೊಂಡೊಯ್ದದ್ದು ಸಾಹಸವೇ ಸರಿ.ರಾಜ್ಯ ರಾಜ

ಬೆಂಗಳೂರಿನ ಬಾಲಕೃಷ್ಣ ಮೋಹನ್ ಅವರು ಇತ್ತೀಚೆಗೆ ಲಡಾಖ್ ಪ್ರವಾಸ ಕೈಗೊಂಡಿದ್ದರು. ಅದಕ್ಕಾಗಿ ಅವರು ಬಳಸಿದ್ದು ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕ್, ಕಾರು ಅಥವಾ ಬಸ್ಸನ್ನೂ ಅಲ್ಲ; ತ್ರಿಚಕ್ರ ವಾಹನ ಆಟೊವನ್ನು. ನಗರಗಳಲ್ಲಿನ ಸಂಚಾರ ವ್ಯವಸ್ಥೆಯ ಪ್ರಮುಖ ವಾಹನವಾಗಿ, ಸ್ಥಳೀಯ ಪ್ರಯಾಣಕ್ಕಷ್ಟೇ ಎನ್ನುವ ಆಟೊವನ್ನು ಅಷ್ಟು ದೂರ ಕೊಂಡೊಯ್ದದ್ದು ಸಾಹಸವೇ ಸರಿ.ರಾಜ್ಯ ರಾಜಧಾನಿಯ ಸರ್ಜಾಪುರದಲ್ಲಿ ನೆಲೆಸಿರುವ ಬಾಲಕೃಷ್ಣ ಹುಣಸೂರಿನವರು. ಲಡಾಖ್ನ ಉಮ್ಲಿಂಗ್ ಲಾದಲ್ಲಿ ಕನ್ನಡ ಧ್ವಜ ಹಾರಿಸಿ ಸಂಭ್ರಮಿಸಿದ ಅವರು, ‘ಪ್ರಜಾವಾಣಿ ಡಿಜಿಟಲ್’ ಜೊತೆ ಹಂಚಿಕೊಂಡಿರುವ ಪ್ರಯಾಣದ ಅನುಭವವನ್ನು ಓದಿ.***ನಾನು ಆಟೊ ಚಾಲಕನಷ್ಟೇ ಅಲ್ಲ; ಕಂಟೆಂಟ್ ಕ್ರಿಯೆಟರ್ ಕೂಡ. ಲಡಾಖ್ ಸೇರಿದಂತೆ ವಿವಿಧ ತಾಣಗಳಿಗೆ ಬೈಕ್ ಮೂಲಕ ಪ್ರವಾಸ ಹೋಗಿರುವ ‘69THEWANDERLUST’ ಯೂಟ್ಯೂಬ್ ಚಾನಲ್ನ ನಿಖಿಲ್ ರೇಣುನಾಥನ್ ಅವರ ಸಂದರ್ಶನ ಮಾಡಿದ್ದೆ. ಅದಾದ ನಂತರ ನನಗೂ ಲಡಾಖ್ಗೆ ಹೋಗುವ ಮನಸ್ಸಾಯಿತು. ಮೊದಲು ಬೈಕ್ನಲ್ಲಿ ಹೋಗಬೇಕೆಂದುಕೊಂಡೆ. ಬಳಿಕ, ಬಸ್ನಲ್ಲಿ ಹೋಗಲು ಯೋಚಿಸಿದೆ. ಆದರೆ, ಕೈಗೂಡಲಿಲ್ಲ.ಈ ನಡುವೆ ಕೇರಳದಿಂದ ಆಟೊಗಳು ಲಡಾಖ್ಗೆ ಹೋಗಿದ್ದ ಬಗ್ಗೆ ಗೊತ್ತಾಯಿತು. ಕರ್ನಾಟಕದಿಂದ ಯಾರೂ ಆ ರೀತಿ ಹೋಗಿರಲಿಲ್ಲ. ನಾನು ಪ್ರಯತ್ನಿಸಬಾರದೇಕೆ ಎನಿಸಿತು. ಆಟೊ ಎಂದಾಕ್ಷಣ ಸ್ಥಳೀಯ ಸಂಚಾರಕ್ಕಾಗಿ ಬಳಸುವ ವಾಹನ ಎಂಬುದು ನೆನಪಾಗುತ್ತದೆ. ಸೀಮಿತ ಪ್ರದೇಶದಲ್ಲಿ ಮಾತ್ರವೇ ಸಂಚರಿಸುವ ಈ ವಾಹನವನ್ನು ಹೊರಗೆ ತೆಗೆದುಕೊಂಡು ಹೋಗುವ ಧೈರ್ಯವನ್ನು ಯಾರೂ ಮಾಡುವುದಿಲ್ಲ. ಅದೂ ನನ್ನ ತಲೆಗೆ ಬಂತು. ಜೊತೆಗೆ, ಸಾಮರ್ಥ್ಯ ಪರೀಕ್ಷಿಸಿಕೊಳ್ಳೋಣ ಎನಿಸಿ ಆಟೊದಲ್ಲೇ ಪ್ರಯಾಣ ಆರಂಭಿಸುವ ಮನಸ್ಸು ಮಾಡಿದೆ. ಅದೇ ಪ್ರೇರಣೆಯೂ ಆಯಿತು.ಕೇರಳದಿಂದ ಹೋಗಿದ್ದ ಆಟೊಗಳು ಸಂಚರಿಸಿದ್ದು ಹಿಮಾಚಲ ಪ್ರದೇಶದವರೆಗಷ್ಟೇ. ವಾಹನಗಳು ಸಂಚರಿಸಬಹುದಾದ ಜಗತ್ತಿನ ಅತಿ (19,024 ಅಡಿ) ಎತ್ತರದ ಸಂಚಾರಯೋಗ್ಯ ಮಾರ್ಗವಾದ ಉಮ್ಲಿಂಗ್ ಲಾ ಮೂಲಕ ಆಟೊದಲ್ಲಿ ಸಾಗಿದ್ದು ನಾನೊಬ್ಬನೇ. ಆ ಬಗ್ಗೆ ಹೆಮ್ಮೆ ಇದೆ.ನನ್ನದೊಂದು ಆಟೊ ಇತ್ತು. ಅದರಲ್ಲೇ ಹೋಗಬೇಕೆಂದುಕೊಂಡಿದ್ದೆ. ಆದರೆ ಲಡಾಖ್ನಲ್ಲಿ ಸುಮಾರು ಮೂರೂವರೆ ಸಾವಿರ ಕಿಲೋಮೀಟರ್ ದೂರ ಎಲ್ಲಿಯೂ ಸರ್ವಿಸ್ ಸಿಗುವುದಿಲ್ಲ. ರಿಸ್ಕ್ ಮಾಡಿಕೊಳ್ಳುವುದು ಬೇಡವೆಂದು ಅದನ್ನು ಮಾರಾಟ ಮಾಡಿ, 3,400 ಕಿ.ಮೀ ಮಾತ್ರವೇ ಓಡಿದ್ದ ಇನ್ನೊಂದು ಆಟೊ ಖರೀದಿಸಿದೆ. ಅದನ್ನು ಯೆಲ್ಲೋ ಬೋರ್ಡ್ನಿಂದ ವೈಟ್ಬೋರ್ಡ್ಗೆ ಪರಿವರ್ತಿಸಿಕೊಂಡೆ.ಆಟೊವನ್ನು ಬೇಕಾದಂತೆ ರೂಪಿಸಿಕೊಳ್ಳಲು 55–60 ಸಾವಿರ ಖರ್ಚಾಯಿತು. ವಿಡಿಯೊಗಳನ್ನೂ ಮಾಡುವುದರಿಂದ ಅದಕ್ಕೆ ಬೇಕಾದ ಪರಿಕರಗಳಿಗಾಗಿ ಇನ್ನೊಂದಿಷ್ಟು ಖರ್ಚಾಯಿತು. ಊಟ, ಬಟ್ಟೆ, ಇಂಧನ, ವಾಸ್ತವ್ಯ, ವಾಹನದ ಸರ್ವೀಸ್ –ಇವೆಲ್ಲವುಗಳ ಖರ್ಚೂ ಸೇರಿದಂತೆ ಇಡೀ ಪ್ರಯಾಣಕ್ಕೆ ಅಂದಾಜು ₹ 2 ಲಕ್ಷ ಆಯಿತು.ಸಕಲ ಸಿದ್ಧತೆಯೂ ಆದ ನಂತರ ಇದೇ ವರ್ಷ (2026ರ) ಆಗಸ್ಟ್ 1ರಂದು ವಿಧಾನಸೌಧದಿಂದ ಪ್ರಯಾಣ ಆರಂಭಿಸಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಂದೇ ಮಾರ್ಗವಾದ ರಾಷ್ಟ್ರೀಯ ಹೆದ್ದಾರಿ–44ರ ಮೂಲಕ ಸಾಗಿದೆ.ಆರಂಭದ ಕೆಲವು ದಿನ 300 ಕಿ.ಮೀ. ಗುರಿ ಇಟ್ಟಕೊಂಡು ಪ್ರಯಾಣಿಸಿದೆ. ಹೀಗೆಯೇ ಹೋದರೆ ತುಂಬಾ ದಿನಗಳು ಬೇಕಾಗುತ್ತದೆ ಎಂಬುದು ಅರಿವಾದ ನಂತರ, ನಿತ್ಯದ ಗುರಿಯನ್ನು 450–480 ಕಿ.ಮೀ. ಸರಾಸರಿಗೆ ಏರಿಸಿದೆ.ಲಡಾಖ್ನ ಉಮ್ಲಿಂಗ್ ಲಾ ಪಾಸ್ ಬಳಿ ಬಾಲಕೃಷ್ಣ ಮೋಹನ್ಒಬ್ಬಂಟಿಯಾಗಿ ನಿತ್ಯವೂ ಇಷ್ಟು ಕಿ.ಮೀ. ಪ್ರಯಾಣಿಸುವುದು ಸವಾಲು. ಮೂರ್ನಾಲ್ಕು ದಿನ ಪೆಟ್ರೋಲ್ ಬಂಕ್ಗಳ ಬಳಿ ಟೆಂಟ್ ಹಾಕಿ ಉಳಿದೆ. ಸರಿಯಾಗಿ ವಿಶ್ರಾಂತಿಯಾಗದ ಕಾರಣ, ಏಕಾಗ್ರತೆ ಕಾಪಾಡಿಕೊಳ್ಳುವುದು ಕಷ್ಟವಾಯಿತು. ಸ್ವಲ್ಪ ಖರ್ಚಾದರೂ ಸರಿ ಎಂದು ಆನ್ಲೈನ್ನಲ್ಲಿ ನೋಡಿ ಹೋಟೆಲ್ ಬುಕ್ ಮಾಡಿಕೊಳ್ಳಲಾರಂಭಿಸಿದೆ. ಮಾರ್ಗದುದ್ದಕ್ಕೂ ಸಾಕಷ್ಟು ಪ್ರವಾಸಿಗರು ಪರಿಚಯವಾದರು. ಕರ್ನಾಟಕದವರೂ ಸಿಕ್ಕರು. ಪ್ರೀತು ಗೌಡ ಎಂಬ ಒಬ್ಬರು ಬೈಕರ್ ಜೊತೆಯಾದರು. ಕೆಲವು ಕಡೆ ಒಟ್ಟಿಗೆ ಉಳಿದೆವು.ನನಗೆ ಅಡುಗೆ ಮಾಡಿಕೊಳ್ಳಲು ಬರುವುದಿಲ್ಲ. ಆದರೂ, ಇರಲಿ ಎಂದು ಒಂದಿಷ್ಟು ಸಾಮಗ್ರಿಗಳನ್ನು ಕೊಂಡೊಯ್ದಿದ್ದೆ. ಹೆಚ್ಚಿನ ಕಡೆ ಹೋಟೆಲ್ನಲ್ಲೇ ಊಟ ಮಾಡಿದ್ದೇನೆ. ಹಲವು ಕಡೆ ಪ್ರವಾಸಿಗರೊಂದಿಗೆ ಸೇರಿ ರುಚಿ ಸವಿದದ್ದಾಯಿತು.ಲಡಾಖ್ ತಲುಪಿದ ನಂತರವಂತೂ ಹಲವು ಕನ್ನಡಿಗರು ಸಿಕ್ಕರು.ಕಡಿದಾದ ರಸ್ತೆಗಳಲ್ಲಿ ಬೈಕ್ ಓಡಿಸುವುದೇ ಸವಾಲು; ಇನ್ನು ಆಟೊ ಪ್ರಯಾಣ ಹೇಗಿರಬೇಡ. ಎತ್ತರದ ಮಾರ್ಗಗಳಲ್ಲಿ ನಮ್ಮ ವೇಗ 1 ಕಿ.ಮೀ.ಗೂ ಇಳಿಯುತ್ತದೆ. ಗೇರ್, ಕ್ಲಚ್ ಮೇಲೆ ಹೆಚ್ಚು ಒತ್ತಡ ಹಾಕುವಂತಿಲ್ಲ. ಹಾಗೇನಾದರೂ ಮಾಡಿದರೆ, ಕ್ಲಚ್ ಕಟ್ ಆಗಬಹುದು. ಅವನ್ನೆಲ್ಲ ಸಾಮರ್ಥ್ಯ ಪರೀಕ್ಷೆ ಎಂದುಕೊಂಡೇ ನಿಭಾಯಿಸಿದೆ. ಆ ಮಾರ್ಗದ ಸಂಚಾರವಷ್ಟೇ ಅಲ್ಲ; ಬೆಂಗಳೂರಿನಿಂದ ಪ್ರಯಾಣ ಆರಂಭವಾಗಿ ಮನೆ ತಲುಪುವವರೆಗೆ ಪ್ರತಿಯೊಂದು ಕ್ಷಣವನ್ನೂ ಜೀವಿಸಿದ್ದೇನೆ, ಸಂಭ್ರಮಿಸಿದ್ದೇನೆ. ವಿವಿಧ ಪ್ರದೇಶಗಳ ಸಂಸ್ಕೃತಿಯ ಪರಿಚಯವಾಗಿದೆ. ಸಾಕಷ್ಟು ಅಪರಿಚಿತರನ್ನು ಕಂಡಿದ್ದೇನೆ. ದಾರಿಯುದ್ದಕ್ಕೂ ಕಣ್ಣಿಗೆ ಬಿದ್ದ ಪ್ರತಿಯೊಂದರಲ್ಲೂ ಬದುಕಿನ ಪಾಠ ಕಲಿತಿದ್ದೇನೆ. ಅವನ್ನೆಲ್ಲ ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವೇ ಇಲ್ಲ.ಮಾರ್ಗಮಧ್ಯೆ ಮಹಾರಾಷ್ಟ್ರದಲ್ಲಿ ಚೂರು ಸಮಸ್ಯೆ ಆಯಿತು. ಆಟೊ ಮೇಲೆ ಕಟ್ಟಿದ್ದ ಕನ್ನಡ ಧ್ವಜವನ್ನು ಇಳಿಸಬೇಕಾಯಿತು. ಕಿಡಿಗೇಡಿಗಳಿಂದ ತೊಂದರೆಯಾದೀತೆಂಬ ಕಾರಣಕ್ಕೆ ಅಲ್ಲಿನ ಪೊಲೀಸರು ಮುನ್ನೆಚ್ಚರಿಕೆಯ ದೃಷ್ಟಿಯಿಂದ ಬಿಚ್ಚಿಸಿದ್ದರು. ಆದರೆ, ಆಟೊ ಮೇಲಿದ್ದ ‘ಕನ್ನಡಿಗ’ ಪದ, ನಂಬರ್ ಬೋರ್ಡ್ ನೋಡಿದ ಕೆಲವರು, ನಾಗಪುರ ರಸ್ತೆಯಲ್ಲಿ ಕಿಚಾಯಿಸುವ ಕೆಲಸ ಮಾಡುತ್ತಿದ್ದರು. ನನ್ನ ಗಮ್ಯ ಬೇರೆಯೇ ಆಗಿದ್ದರಿಂದ ಸಮಸ್ಯೆ ಮಾಡಿಕೊಳ್ಳಲು ಹೋಗಲಿಲ್ಲ. ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಮುನ್ನುಗ್ಗಿದೆ.ಬೇರೆಲ್ಲೂ ಧ್ವಜದ ವಿಚಾರಕ್ಕೆ ಸಮಸ್ಯೆ ಆಗಲಿಲ್ಲ. ನಮ್ಮ ಬಾವುಟ ವಿಜಯಪತಾಕೆಯಂತೆ ವಿರಾಜಮಾನವಾಗಿ ಹಾರಿತ್ತು. ಲಡಾಖ್ ಜನರು ತೋರಿದ ಪ್ರೀತಿ, ನೀಡಿದ ಆತಿಥ್ಯವಂತೂ ಮರೆಯಲಸಾಧ್ಯ. ಆ ನೆನಪುಗಳು ನನ್ನ ಹೃದಯದಲ್ಲಿ ಸದಾ ಉಳಿಯುತ್ತವೆ.ಲಡಾಖ್ನ ಉಮ್ಲಿಂಗ್ ಲಾ ಪಾಸ್ ಬಳಿ ಬಾಲಕೃಷ್ಣ ಮೋಹನ್ನಾ ಅಲ್ಲಿಗೆ ತಲುಪುವುದನ್ನೇ ಕಾಯ್ದಿದ್ದ ಲಡಾಖ್ ಕನ್ನಡಿಗʼ, ಆದರದಿಂದ ಸ್ವಾಗತಿಸಿದರು. ಹುಣಸೂರು ಮೂಲದವರಾದ ಅವರು ಅಲ್ಲಿಯೇ ನೆಲೆಸಿ, ಟ್ರಾವೆಲ್ಸ್ ನಡೆಸುತ್ತಿದ್ದಾರೆ. ‘ಏನೇ ಆದರೂ ನಾವಿದ್ದೇವೆ. ಧೈರ್ಯವಾಗಿ ನಡೆಯಿರಿ’ ಎಂದು ಬೆಂಬಲ ನೀಡಿ ಅವರು ತೋರಿದ ಪ್ರೀತಿ ಬೆಲೆ ಕಟ್ಟಲಾಗದ್ದು.ನಾನು ಲಡಾಖ್ ತಲುಪಿ ವಾಪಸ್ ಬಂದಿಲ್ಲ. ಇಡೀ ಲಡಾಖ್ ಸರ್ಕ್ಯೂಟ್ ಸುತ್ತಿದೆ. ಶ್ರೀನಗರದಿಂದ ಲೇಹ್ ಲಡಾಖ್ ಮಾರ್ಗವಾಗಿ ಸುಮಾರು 900 ಕಿ.ಮೀ. ಪ್ರಯಾಣಿಸಿ ಮನಾಲಿಯಲ್ಲಿ ಹೊರಬಂದೆ. ನಂತರ, ತಾಯ್ನಾಡಿನತ್ತ ಹಿಂದಿರುಗುವಾಗ ಕೆಲವು ದಿನ 650 ಕಿ.ಮೀ. ಕೂಡ ಕ್ರಮಿಸಿದ್ದೇನೆ.24 ದಿನಗಳ ಪ್ರಯಾಣ ಮುಗಿದು ಸರ್ಜಾಪುರದಲ್ಲಿರುವ ನನ್ನ ಮನೆಗೆ ಆಗಸ್ಟ್ 24 ರಂದು ತಲುಪುವವರೆಗೆ ನನ್ನ ಪ್ರಯಾಣದ ಒಟ್ಟು ದೂರ 8,900 ಕಿ.ಮೀ. ಆಗಿತ್ತು.ವಾಪಸ್ ಆದ ಮೇಲೆ ‘ವೈಟ್ ಬೋರ್ಡ್’ ಅನ್ನು ಮತ್ತೆ ಹಳದಿಗೆ ತಿರುಗಿಸಿದ್ದೇನೆ.ಮುಂದಿನ ದಿನಗಳಲ್ಲಿ ಬೈಕ್ನಲ್ಲಿ ಮತ್ತೊಮ್ಮೆ ಲಡಾಖ್ಗೆ ಹೋಗಿಬರಬೇಕು. ನೇಪಾಳಕ್ಕೂ ಆಟೊ ಕೊಂಡೊಯ್ಯಬೇಕು ಎಂದುಕೊಂಡಿದ್ದೇನೆ.