ಕರುನಾಡೋತ್ಸವ: ನಾಡದೇವಿ ಭುವನೇಶ್ವರಿಯ ನೋಡ ಬನ್ನಿ...
ಈ ನಾಡಿನಲ್ಲಿ ಹಲವಾರು ಮಹಾಪುರುಷರ ಪ್ರತಿಮೆಗಳು ತಲೆಯೆತ್ತಿವೆ. ನಾಡದೇವಿ ಭುವನೇಶ್ವರಿಯ ಪ್ರತಿಮೆ ನಿರ್ಮಿಸಬೇಕೆಂಬುದು ಕನ್ನಡಿಗರ ಒತ್ತಾಯವಾಗಿತ್ತು. ಪರಿಣಾಮ, ವಿಧಾನಸೌಧದ ಪಶ್ಚಿಮ ದ್ವಾರದ ಆವರಣದಲ್ಲಿ 25 ಅಡಿ ಎತ್ತರದ ಭುವನೇಶ್ವರಿಯ ಕಂಚಿನ ಪ್ರತಿಮೆ ಕಳೆದ ವರ್ಷ ಪ್ರತಿಷ್ಠಾಪಿಸಲ್ಪಟ್ಟಿದೆ. ಈ ನಾಡದೇವಿಯ ಪ್ರತಿಮೆ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲ

ಈ ನಾಡಿನಲ್ಲಿ ಹಲವಾರು ಮಹಾಪುರುಷರ ಪ್ರತಿಮೆಗಳು ತಲೆಯೆತ್ತಿವೆ. ನಾಡದೇವಿ ಭುವನೇಶ್ವರಿಯ ಪ್ರತಿಮೆ ನಿರ್ಮಿಸಬೇಕೆಂಬುದು ಕನ್ನಡಿಗರ ಒತ್ತಾಯವಾಗಿತ್ತು. ಪರಿಣಾಮ, ವಿಧಾನಸೌಧದ ಪಶ್ಚಿಮ ದ್ವಾರದ ಆವರಣದಲ್ಲಿ 25 ಅಡಿ ಎತ್ತರದ ಭುವನೇಶ್ವರಿಯ ಕಂಚಿನ ಪ್ರತಿಮೆ ಕಳೆದ ವರ್ಷ ಪ್ರತಿಷ್ಠಾಪಿಸಲ್ಪಟ್ಟಿದೆ. ಈ ನಾಡದೇವಿಯ ಪ್ರತಿಮೆ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣಗೊಂಡು 50 ವರ್ಷಗಳು ಪೂರೈಸಿದ ಸುವರ್ಣ ಸಂಭ್ರಮದ ನೆನಪಿಗಾಗಿ ಈ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಪ್ರತಿಮೆ 25 ಅಡಿ ಎತ್ತರವಿದ್ದು, ನೆಲ ಮಟ್ಟದಿಂದ ಒಟ್ಟಾರೆ 43.6 ಅಡಿ ಎತ್ತರವಿದೆ. ಪ್ರತಿಮೆಯ ಸುತ್ತಲೂ ಉದ್ಯಾನವಿದ್ದು, ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಮುಖ್ಯಮಂತ್ರಿ ಅವರಿಂದ ಪುಷ್ಪಾರ್ಚನೆ ನಡೆಯಲಿದೆ. ಈ ಬಾರಿಯೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಉಳಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ನಾಡದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪವಿದೆ. ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ. ಕರ್ನಾಟಕದ ಪ್ರಸಿದ್ಧ ಶಿಲ್ಪಕಲಾ ಶೈಲಿಗಳಾದ ಹೊಯ್ಸಳ, ಚಾಲುಕ್ಯ, ಕದಂಬ ಹಾಗೂ ಆಧುನೀಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ, ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಹೊಯ್ಸಳ ಲಾಂಛನ, ವೈಜಯ ಜಯಂತಿ ಮಾಲೆ, ಕಂಠಿಹಾರ, ಗಂಡ ಭೇರುಂಡ ರಾಜಲಾಂಛನಗಳಿವೆ. ಭುವನೇಶ್ವರಿಯ ಕಂಚಿನ ಪ್ರತಿಮೆಯನ್ನು ಶಿಲ್ಪಿ ಶ್ರೀಧರ್ ಮೂರ್ತಿ ನೇತೃತ್ವದಲ್ಲಿ ಕಲಾವಿದರು ನಿರ್ಮಾಣ ಮಾಡಿದ್ದಾರೆ. ಈ ಮೂರ್ತಿ ನಿರ್ಮಾಣಕ್ಕೆ 12 ತಿಂಗಳು ಸಮಯ ತೆಗೆದುಕೊಂಡಿದ್ದರು. ನೂರಾರು ಶಿಲ್ಪಿಗಳು, ತಂತ್ರಜ್ಞರು, ಕಲಾವಿದರು ಮೂರ್ತಿ ನಿರ್ಮಾಣಕ್ಕೆ ನೆರವಾಗಿದ್ದಾರೆ. ಸ್ಥಳ ಗುರುತು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸುಮಾರು ₹ 2 ಕೋಟಿ ವೆಚ್ಚದಲ್ಲಿ 30 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆ ರೂಪಿಸಿತ್ತು. ಇದಕ್ಕೆ ಅನುಮೋದನೆಯೂ ದೊರೆತಿತ್ತು. ಆದರೆ, ಪ್ರತಿಮೆಯ ಸ್ಥಳ ನಿಗದಿ ವಿಚಾರವಾಗಿ ಗೊಂದಲ ಉಂಟಾಗಿದ್ದರಿಂದ ನಿರ್ಮಾಣ ಸಾಕಾರವಾಗಿರಲಿಲ್ಲ. ಬಳಿಕ ಚುನಾವಣೆ ನೀತಿ ಸಂಹಿತೆ ಜಾರಿಯಿಂದಾಗಿ ಪ್ರತಿಮೆ ನಿರ್ಮಾಣಕ್ಕೆ ಅನುದಾನ ಒದಗಿಸಿರಲಿಲ್ಲ. ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರವು ಈ ಯೋಜನೆಯನ್ನು ಸಾಕಾರ ಮಾಡಿದೆ.ಈ ಹಿಂದೆ ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನದ ಮುಂಭಾಗ ಈ ಪ್ರತಿಮೆ ನಿರ್ಮಿಸಲು ಇಲಾಖೆ ಮುಂದಾಗಿತ್ತು. ಆದರೆ, ಕನ್ನಡ ಭವನದ ಮುಂಭಾಗ ಸ್ಥಳಾವಕಾಶದ ಕೊರತೆ ಎದುರಾಗಿತ್ತು. ಹೀಗಾಗಿ, ಕಲಾಗ್ರಾಮದಲ್ಲಿ ಪ್ರತಿಮೆ ನಿರ್ಮಿಸಲು ಅಧಿಕಾರಿಗಳು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. 30 ಎಕರೆಯಲ್ಲಿ ವ್ಯಾಪಿಸಿಕೊಂಡಿರುವ ಕಲಾಗ್ರಾಮದಲ್ಲಿ, ಸಂಸ್ಕೃತಿ ಇಲಾಖೆ 11 ಎಕರೆ ಪ್ರದೇಶವನ್ನು ನಿರ್ವಹಣೆ ಮಾಡುತ್ತಿದೆ. ಅಂತಿಮವಾಗಿ, ‘ಕರ್ನಾಟಕ’ ಎಂದು ಮರುನಾಮಕರಣಗೊಂಡು 50 ವರ್ಷಗಳು ಪೂರೈಸಿದ ಸುವರ್ಣ ಸಂಭ್ರಮದ ನೆನಪಿಗಾಗಿ ನಿರ್ಮಿಸಲಾದ ಈ ಪ್ರತಿಮೆಗೆ ವಿಧಾನಸೌಧದ ಆವರಣವೇ ಸೂಕ್ತವೆಂದು ನಿರ್ಧರಿಸಿ, ಸ್ಥಳವನ್ನು ಗೊತ್ತುಪಡಿಸಲಾಯಿತು. 4,500 ಚದರ ಅಡಿ ವಿಸ್ತೀರ್ಣದಲ್ಲಿ ಭುವನೇಶ್ವರಿ ಪ್ರತಿಮೆಯ ಫೆಡಸ್ಟಾಲ್ ಉದ್ಯಾನವಿದ್ದು, ಒಟ್ಟು ₹ 21.24 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ಪ್ರತಿಮೆ 31.5 ಟನ್ ತೂಕ ಹೊಂದಿದೆ.ಹನ್ನೆರಡನೇ ಶತಮಾನದ ಸಾಮಾಜಿಕ ಹರಿಕಾರ ಬಸವಣ್ಣ ಮತ್ತು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಭವ್ಯವಾದ ಅಶ್ವಾರೂಢ ಭಂಗಿಯ ಪ್ರತಿಮೆಗಳು ವಿಧಾನಸೌಧದ ಮುಂಭಾಗ 2023ರಲ್ಲಿ ಅನಾವರಣಗೊಂಡಿದ್ದವು. ಅಲ್ಲಿ ಗಾಂಧೀಜಿ, ನೆಹರೂ, ಅಂಬೇಡ್ಕರ್, ಬಸವಣ್ಣ, ಕೆಂಗಲ್ ಹನುಮಂತಯ್ಯ, ಕೆಂಪೇಗೌಡ ಅವರ ಪ್ರತಿಮೆಗಳಿವೆ. ಈ ಪ್ರತಿಮೆಗಳ ಪಟ್ಟಿಗೆ ಹೊಸದಾಗಿ ಭುವನೇಶ್ವರಿಯೂ ಪ್ರತಿಮೆ ಸೇರ್ಪಡೆಯಾಗಿದೆ.