ವಯನಾಡು ಭೂಕುಸಿತದಲ್ಲಿ ಇಡೀ ಕುಟುಂಬ ಕಳೆದುಕೊಂಡಿದ್ದ ಶೃತಿ ಬಾಳಲ್ಲಿ ಹೊಸ ಅಧ್ಯಾಯ – ಗುರುವಾಯೂರಿನಲ್ಲಿ ವಿವಾಹ
-ಅಪಘಾತದಲ್ಲಿ ಸಾವನ್ನಪ್ಪಿದ್ದ ಭಾವಿ ಪತಿ ತಿರುವನಂತಪುರಂ: ವಯನಾಡು ಭೂಕುಸಿತ (Wayanad Landslide) ದುರಂತದಲ್ಲಿ ಕುಟುಂಬ, ಮನೆ ಹಾಗೂ ಮದುವೆಯಾಗಬೇಕಿದ್ದ ಹುಡುಗನನ್ನು ಕಳೆದುಕೊಂಡಿದ್ದ ಶೃತಿ ಇದೀಗ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ವಯನಾಡಿನ ಚೂರಲ್ಮಲ ಮೂಲದ ಎಸ್.ಶೃತಿ ಇಂದು ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ (Guruvayur Sree Krishna Temple) ಸಂದೀಪ್

-ಅಪಘಾತದಲ್ಲಿ ಸಾವನ್ನಪ್ಪಿದ್ದ ಭಾವಿ ಪತಿ ತಿರುವನಂತಪುರಂ: ವಯನಾಡು ಭೂಕುಸಿತ (Wayanad Landslide) ದುರಂತದಲ್ಲಿ ಕುಟುಂಬ, ಮನೆ ಹಾಗೂ ಮದುವೆಯಾಗಬೇಕಿದ್ದ ಹುಡುಗನನ್ನು ಕಳೆದುಕೊಂಡಿದ್ದ ಶೃತಿ ಇದೀಗ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ವಯನಾಡಿನ ಚೂರಲ್ಮಲ ಮೂಲದ ಎಸ್.ಶೃತಿ ಇಂದು ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ (Guruvayur Sree Krishna Temple) ಸಂದೀಪ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾನಂತವಾಡಿ ಮೂಲದ ಸಂದೀಪ್ ಅವರು ವಯನಾಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆ (Marriage) ಸಮಾರಂಭದಲ್ಲಿ ಆಪ್ತ ಸಂಬಂಧಿಕರು ಹಾಗೂ ಸ್ನೇಹಿತರು ಭಾಗವಹಿಸಿದ್ದರು. ಮದುವೆ ಶಾಸ್ತ್ರಗಳನ್ನು ನೆರವೇರಿಸಿದ ಮಾಜಿ ಸಚಿವ: ಮಾಜಿ ಕಂದಾಯ ಸಚಿವ ಕೆ. ರಾಜನ್ ಅವರು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ತಂದೆಯ ಸ್ಥಾನದಲ್ಲಿ ನಿಂತು ಮದುವೆಯ ಶಾಸ್ತ್ರಗಳನ್ನು ನೆರವೇರಿಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ಮದುವೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶೃತಿ, ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ತಾನು ಎದುರಿಸಿದ ಎಲ್ಲ ನೋವು ಮತ್ತು ದುರಂತಗಳ ಬಗ್ಗೆ ತಿಳಿದಿದ್ದರೂ ಸಂದೀಪ್ ತನ್ನೊಂದಿಗೆ ಬದುಕಲು ನಿರ್ಧರಿಸಿದ್ದಾರೆ. ನಮ್ಮ ಮುಂದಿನ ಜೀವನ ಸಂತೋಷದಿಂದ ಕೂಡಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ವಯನಾಡು ಭೂಕುಸಿತದಲ್ಲಿ ಕುಟುಂಬವನ್ನೇ ಕಳೆದುಕೊಂಡಿದ್ದ ಶ್ರುತಿ: 2024ರ ಜುಲೈ 30ರಂದು ವಯನಾಡಿನ ಚೂರಲ್ಮಲ ಮತ್ತು ಮುಂಡಕ್ಕೈ ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತ ಶೃತಿ ಅವರ ಕುಟುಂಬವನ್ನೇ ಬಲಿ ಪಡೆದಿತ್ತು. ಈ ದುರಂತದಲ್ಲಿ ತಂದೆ, ತಾಯಿ ಮತ್ತು ಸಹೋದರಿ ಸೇರಿದಂತೆ ಅವರ ಒಂಬತ್ತು ಸಂಬಂಧಿಕರು ಮೃತಪಟ್ಟಿದ್ದರು. ಅಷ್ಟೇ ಅಲ್ಲ, ಹೊಸದಾಗಿ ನಿರ್ಮಿಸಿದ್ದ ಮನೆಯೂ ಭೂಕುಸಿತದಲ್ಲಿ ಸಂಪೂರ್ಣ ನಾಶವಾಗಿತ್ತು. ಹಲವು ಲಕ್ಷ ರೂಪಾಯಿ ಮೌಲ್ಯದ ನಗದು, ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ಅವರು ಕಳೆದುಕೊಂಡಿದ್ದರು. ಸುಮಾರು 4 ಲಕ್ಷ ರೂಪಾಯಿ ನಗದು ಮತ್ತು 15 ಪವನ್ ಚಿನ್ನಾಭರಣ ನಷ್ಟವಾಗಿತ್ತು ಎಂದು ವರದಿಯಾಗಿದೆ. ಈ ಕಷ್ಟದ ಸಮಯದಲ್ಲಿ ಶೃತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೆನ್ಸನ್ ಅವರಿಗೆ ಆಸರೆಯಾಗಿದ್ದರು. ಇಬ್ಬರೂ ಸುಮಾರು 10 ವರ್ಷಗಳಿಂದ ಪ್ರೀತಿಸುತ್ತಿದ್ದರು. 2024ರ ಜೂನ್ 2ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಭೂಕುಸಿತ ಸಂಭವಿಸಿದ ಕೇವಲ ಆರು ವಾರಗಳ ಬಳಿಕ ಮತ್ತೊಂದು ದುರಂತ ಎದುರಾಗಿತ್ತು. 2024ರ ಸೆಪ್ಟೆಂಬರ್ 12ರಂದು ಶೃತಿ ಮತ್ತು ಜೆನ್ಸನ್ ಪ್ರಯಾಣಿಸುತ್ತಿದ್ದ ವಾಹನವು ಕಲ್ಪೆಟ್ಟ ಸಮೀಪದ ವೆಳ್ಳಾರಂ ಕುನ್ನು ಎಂಬಲ್ಲಿ ಖಾಸಗಿ ಬಸ್ಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ 27 ವರ್ಷದ ಜೆನ್ಸನ್ ಮೃತಪಟ್ಟಿದ್ದರು. ಶೃತಿ ಅವರ ಕಾಲುಗಳಿಗೂ ಗಂಭೀರ ಗಾಯಗಳಾಗಿದ್ದವು. ಹೀಗೆ ಒಂದರ ಹಿಂದೆ ಒಂದರಂತೆ ದುರಂತಗಳನ್ನು ಎದುರಿಸಿದ್ದ ಶೃತಿ ಮತ್ತೊಮ್ಮೆ ಬದುಕು ಕಟ್ಟಿಕೊಳ್ಳುವ ಸವಾಲು ಎದುರಿಸಿದ್ದರು. ಸರ್ಕಾರಿ ಉದ್ಯೋಗ ನೀಡಿದ್ದ ಕೇರಳ ಸರ್ಕಾರ: ಸರಣಿ ದುರಂತಗಳ ನಡುವೆಯೇ ಜೀವನೋಪಾಯಕ್ಕಾಗಿ ಕೆಲಸ ಹುಡುಕುವ ಪರಿಸ್ಥಿತಿಯೂ ಶೃತಿ ಅವರಿಗೆ ಎದುರಾಗಿತ್ತು. ಅವರ ಪರಿಸ್ಥಿತಿಯನ್ನು ಪರಿಗಣಿಸಿದ ಕೇರಳ ಸರ್ಕಾರ ಉದ್ಯೋಗ ನೀಡಲು ನಿರ್ಧರಿಸಿತ್ತು. 2024ರ ಡಿಸೆಂಬರ್ನಲ್ಲಿ ವಯನಾಡು ಜಿಲ್ಲಾಧಿಕಾರಿ ಕಚೇರಿಯ ಕಂದಾಯ ಇಲಾಖೆಯ ಸಾರ್ವಜನಿಕ ಕುಂದುಕೊರತೆ ಪರಿಹಾರ ಘಟಕದಲ್ಲಿ ಗುಮಾಸ್ತೆಯಾಗಿ ಶೃತಿ ಕೆಲಸಕ್ಕೆ ಸೇರ್ಪಡೆಯಾಗಿದ್ದರು. ಈ ಸಂದರ್ಭದಲ್ಲಿ ಕಷ್ಟದ ಸಮಯದಲ್ಲಿ ತಮ್ಮ ಬೆನ್ನಿಗೆ ನಿಂತ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದರು. ಇದೀಗ ಅದೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಂದೀಪ್ ಅವರೊಂದಿಗೆ ಶೃತಿ ಹೊಸ ಜೀವನ ಆರಂಭಿಸಿದ್ದಾರೆ. ಇದನ್ನೂ ಓದಿ: ವಯನಾಡು ದುರಂತದಲ್ಲಿ ಕುಟುಂಬದ 9 ಮಂದಿಯನ್ನು ಕಳೆದುಕೊಂಡ್ಳು, ಈಗ ಮದುವೆಯಾಗಬೇಕಿದ್ದ ಹುಡುಗನೂ ಅಪಘಾತದಲ್ಲಿ ಸಾವು