ಸೌಹಾರ್ದ ಸೃಷ್ಟಿಸುವ ದೊಡ್ಡ ಚಳವಳಿ ಕನಸು: ಮಾರುತಿ ಬೌದ್ಧೆ
ಬೀದರ್: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮೊದಲ ಬಾರಿಗೆ ಬೀದರ್ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಾಹಿತ್ಯ ಸಮ್ಮೇಳನ ಇದೇ ಶನಿವಾರ (ನ.7) ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ದಲಿತರು, ಶೋಷಿತರು, ದಮನಿತರ ಹಕ್ಕುಗಳಿಗಾಗಿ ಸದಾ ಹೋರಾಡುವ, ಹೋರಾಟವೇ ಉಸಿರಾಗಿಸಿಕೊಂಡಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮ

ಬೀದರ್: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮೊದಲ ಬಾರಿಗೆ ಬೀದರ್ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಾಹಿತ್ಯ ಸಮ್ಮೇಳನ ಇದೇ ಶನಿವಾರ (ನ.7) ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ದಲಿತರು, ಶೋಷಿತರು, ದಮನಿತರ ಹಕ್ಕುಗಳಿಗಾಗಿ ಸದಾ ಹೋರಾಡುವ, ಹೋರಾಟವೇ ಉಸಿರಾಗಿಸಿಕೊಂಡಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಅವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಬೀದರ್ ನಗರದ ಅಂಬೇಡ್ಕರ್ ಕಾಲೊನಿ ನಿವಾಸಿಯಾಗಿರುವ 65 ವರ್ಷ ವಯಸ್ಸಿನ, ಬೌದ್ಧೆ ಅವರು ಸಮ್ಮೇಳನದ ಹೊಸ್ತಿಲಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ. ಅದರ ಕೆಲ ಆಯ್ದ ಪ್ರಶ್ನೊತ್ತರಗಳ ವಿವರ ಇಲ್ಲಿದೆ.ಪ್ರಶ್ನೆ: ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಏನೆನಿಸುತ್ತದೆ?–ನಿಜಕ್ಕೂ ನನಗೆ ಬಹಳ ಖುಷಿಯಾಗಿದೆ. ಕಿಂಚಿತ್ತೂ ನಿರೀಕ್ಷಿಸಿರಲಿಲ್ಲ. ಜಿಲ್ಲೆಯಲ್ಲಿ ನನಗಿಂತ ಅನೇಕ ಜನ ದಲಿತ ಬಂಡಾಯ ಹೋರಾಟಗಾರರು ಇದ್ದಾರೆ. ಆದರೂ ಕನ್ನಡ ಸಾಹಿತ್ಯ ಪರಿಷತ್ತಿನವರು ನನ್ನನ್ನು ಏಕೆ ಆಯ್ಕೆ ಮಾಡಿದ್ದಾರೇ ಗೊತ್ತಿಲ್ಲ. ಆದರೆ, ಅವರಿಗೆ ಮನಃಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆಪ್ರಶ್ನೆ: ಸಾಮಾನ್ಯ ಕುಟುಂಬದಿಂದ ಬಂದಿರುವ ನೀವು ಹೋರಾಟಗಾರನಾಗಿ ಬದಲಾಗಲು ಪ್ರೇರಣೆ ಏನು?–1981ರಲ್ಲಿ ಜಿಲ್ಲೆಯಲ್ಲಿ ನಡೆದ ಎರಡೂ ಘಟನೆಗಳು ನನ್ನ ಮೇಲೆ ಗಾಢ ಪರಿಣಾಮ ಬೀರಿದವು. ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ಮಾಡಿದಾಗ ಕಲ್ಲು ತೂರಾಟ ನಡೆಸಲಾಗುತ್ತದೆ. ಬಳಿಕ ಊರೊಳಗೆ ದಲಿತರಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಇನ್ನೊಂದು ಘಟನೆ ಭಾಲ್ಕಿಯಲ್ಲಿ ನಡೆದದ್ದು. ಭಾಲ್ಕಿ ತಾಲ್ಲೂಕಿನ ಖುದ್ದಂಪುರದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತದೆ. ಅದು ಭಾಲ್ಕಿ ಗಾಂಧಿ ಗಂಜ್ಗೂ ಹರಡುತ್ತದೆ. ಘರ್ಷಣೆಯಲ್ಲಿ ಮೇಲ್ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಸಾವನ್ನಪ್ಪುತ್ತಾರೆ. ಪೊಲೀಸರು ಅನೇಕರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಹಲವು ಜನ ಊರು, ಪಟ್ಟಣ ಬಿಟ್ಟು ಬೇರೆಡೆಗೆ ಹೋಗುತ್ತಾರೆ. ಪ್ರಕರಣದ ವಕಾಲತ್ತಿಗೆ ಹೈದರಾಬಾದ್ನಿಂದ ದಲಿತ ಸಮುದಾಯಕ್ಕೆ ಸೇರಿದ ವಕೀಲ ತುಕಾರಾಂ ಕುಂದೆ ಅವರು ಭಾಲ್ಕಿಗೆ ಬಂದಿರುತ್ತಾರೆ. ಮೇಲ್ಜಾತಿಯವರು ಅವರನ್ನು ಜೀವಂತವಾಗಿ ಸುಟ್ಟು ಕೊಲೆ ಮಾಡುತ್ತಾರೆ. ಘಟನೆ ಬಳಿಕ ಅನೇಕರು ಪಟ್ಟಣ ತೊರೆದು ಬೀದರ್ನ ಭೀಮ್ ನಗರ, ಅಂಬೇಡ್ಕರ್ ಕಾಲೊನಿಯಲ್ಲಿ ಆಶ್ರಯ ಪಡೆಯುತ್ತಾರೆ. ಭಯದಲ್ಲಿ ಕಾಲ ಕಳೆಯುತ್ತಾರೆ. ಅದು ನನ್ನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. 1984–85ರಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪರಿಚಯವಾಗುತ್ತದೆ. ಸಮಿತಿಯ ಮುಖಂಡರು ನಮ್ಮ ಕಾಲೊನಿಗೆ ಬಂದು ಸಭೆಗಳನ್ನು ನಡೆಸುತ್ತಿರುತ್ತಾರೆ. 1986ರಲ್ಲಿ ದಲಿತ ವ್ಯಕ್ತಿಗೆ ಮಲ ತಿನ್ನಿಸಿದ ಪ್ರಕರಣ ನಡೆಯುತ್ತದೆ. ದಸಂಸ ವಿಭಾಗ ಸಂಚಾಲಕ ಡಿ.ಜಿ. ಸಾಗರ್ ನೇತೃತ್ವದಲ್ಲಿ ಐತಿಹಾಸಿಕ ರ್ಯಾಲಿ ಬೆಂಗಳೂರಿನಲ್ಲಿ ನಡೆಯುತ್ತದೆ. ಅದರಲ್ಲಿ ಪಾಲ್ಗೊಂಡಿದ್ದ ನನ್ನಲ್ಲಿ ಹೋರಾಟದ ಕಿಚ್ಚು ಹಚ್ಚುತ್ತದೆ. ಬಳಿಕ ನಾನು ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ, 1994ರಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕನಾಗಿ ಸಂಪೂರ್ಣವಾಗಿ ಹೋರಾಟದಲ್ಲಿ ತೊಡಗಿಸಿಕೊಳ್ಳುತ್ತೇನೆ.ಪ್ರಶ್ನೆ: ಯುವ ಹೋರಾಟಗಾರರಿಗೆ ಏನು ಹೇಳಲು ಬಯಸುತ್ತೀರಿ?–ಹೋರಾಟಗಳು ಸತ್ಯ, ನಿಷ್ಠೆಯಿಂದ ಕೂಡಿರಬೇಕು. ಯಾರೋ ಏನೋ ಹೇಳಿದ ಮಾತು ಕೇಳಿ, ಸೋಷಿಯಲ್ ಮೀಡಿಯಾಗಳಲ್ಲಿ ಅರ್ಧ ಸತ್ಯವಿರುವ ವಿಚಾರವನ್ನು ನಂಬಿ ದುಡುಕಬಾರದು, ಪ್ರತಿಕ್ರಿಯಿಸಬಾರದು. ಏನೇ ನಡೆದರೂ ಸ್ಥಳಕ್ಕೆ ಹೋಗಿ ಸತ್ಯ ತಿಳಿದು ಆನಂತರ ಹೋರಾಟಕ್ಕಿಳಿಯಬೇಕು. ವಿಷಯದ ಆಳಕ್ಕೆ ಹೋಗಿ, ಆನಂತರ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸಬೇಕು. ಇದರಿಂದ ಸಂಘಟನೆ ಬಲಿಷ್ಠಗೊಳ್ಳುತ್ತದೆ. ಎಲ್ಲರೂ ಸಹಕಾರ ಕೊಡುತ್ತಾರೆ. ಸಮಾಜದಿಂದ ಮಾನ್ಯತೆ ಸಿಗುತ್ತದೆ.ಪ್ರಶ್ನೆ: ನಿಮ್ಮ ಮುಂದಿರುವ ಹೊಸ ಸವಾಲುಗಳೇನು?– ಬಸವಾದಿ ಪರಂಪರೆಯ ಮಠದಲ್ಲಿ ಬೆಳೆದಿರುವ ಒಬ್ಬ ಸ್ವಾಮೀಜಿ ಬಸವಾದಿ ಶರಣರ ಆಶಯಗಳಿಗೆ ವಿರುದ್ಧವಾಗಿ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಮನುಸ್ಮೃತಿ ಇದೆ ಎಂದು ಹೇಳುತ್ತಿದ್ದಾರೆ. ನಮ್ಮೆಲ್ಲರನ್ನೂ ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಒಟ್ಟಾರೆ ಎಲ್ಲಾ ಕಡೆಗಳಿಂದ ಸಂವಿಧಾನಕ್ಕೆ ಕಂಟಕ ತರುತ್ತಿರುವ ಕೆಲಸ ಆರ್ಎಸ್ಎಸ್ ಸೇರಿದಂತೆ ಇತರ ಸಂಘಟನೆಗಳು ಮಾಡುತ್ತಿವೆ. ಸಂವಿಧಾನ ಉಳಿದರೆ ಈ ದೇಶ ಉಳಿಯುತ್ತದೆ. ಬುದ್ಧ, ಬಸವ,ಅಂಬೇಡ್ಕರ್ ತತ್ವಗಳಲ್ಲಿ ನಂಬಿಕೆ ಹೊಂದಿದವರು ಅದನ್ನು ಪ್ರತಿಭಟಿಸಬೇಕು. ಇಂತಹ ಸ್ವಾಮೀಜಿಯನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಸೌಹಾರ್ದ ರೂಪಿಸುವ ದೊಡ್ಡ ಚಳವಳಿ ಸೃಷ್ಟಿಸುವುದು ನನ್ನ ಬದುಕಿನ ದೊಡ್ಡ ಕನಸು.