ನಾಗಮಂಗಲ:ಗಣೇಶ ಮೂರ್ತಿ ವಿಸರ್ಜನೆ ವೇಳೆ ಅರ್ಧಕ್ಕೆ ಮುಳುಗಿದ ತೆಪ್ಪ;ತಪ್ಪಿದ ಅನಾಹುತ
ನಾಗಮಂಗಲ (ಮಂಡ್ಯ): ಪಟ್ಟಣದ ಹಂಪೆ ಅರಸನ ಕೊಳದಲ್ಲಿ ಶುಕ್ರವಾರ ತಡರಾತ್ರಿ ಶ್ರೀಕೋಟೆ ವಿದ್ಯಾಗಣಪತಿ ಮೂರ್ತಿಯ ವಿಸರ್ಜನೆ ವೇಳೆ ಜನರಿದ್ದ ತೆಪ್ಪ ಅರ್ಧಕ್ಕೆ ಮುಳುಗಿದ ಘಟನೆ ನಡೆದಿದೆ. ತೆಪ್ಪದಲ್ಲಿದ್ದವರು ತಕ್ಷಣ ನೀರಿಗೆ ಜಿಗಿದು ದಡ ಸೇರಿದ್ದರಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ.ಡ್ರಮ್ಗಳನ್ನು ಬಳಸಿ ನಿರ್ಮಿಸಿ ಅಲಂಕರಿಸಿದ್ದ ತೆಪ್ಪದಲ್ಲಿ ಗಣೇಶನ ಮೂರ್ತಿಯನ್ನು

ನಾಗಮಂಗಲ (ಮಂಡ್ಯ): ಪಟ್ಟಣದ ಹಂಪೆ ಅರಸನ ಕೊಳದಲ್ಲಿ ಶುಕ್ರವಾರ ತಡರಾತ್ರಿ ಶ್ರೀಕೋಟೆ ವಿದ್ಯಾಗಣಪತಿ ಮೂರ್ತಿಯ ವಿಸರ್ಜನೆ ವೇಳೆ ಜನರಿದ್ದ ತೆಪ್ಪ ಅರ್ಧಕ್ಕೆ ಮುಳುಗಿದ ಘಟನೆ ನಡೆದಿದೆ. ತೆಪ್ಪದಲ್ಲಿದ್ದವರು ತಕ್ಷಣ ನೀರಿಗೆ ಜಿಗಿದು ದಡ ಸೇರಿದ್ದರಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ.ಡ್ರಮ್ಗಳನ್ನು ಬಳಸಿ ನಿರ್ಮಿಸಿ ಅಲಂಕರಿಸಿದ್ದ ತೆಪ್ಪದಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಿಕೊಂಡು ದಡದಿಂದ ಸ್ವಲ್ಪ ದೂರ ಸಾಗುತ್ತಿದ್ದಂತೆ ಹೆಚ್ಚಿನ ಜನರ ಭಾರಕ್ಕೆ ಎಡಭಾಗದಿಂದ ತೆಪ್ಪ ಮುಳುಗಲಾರಂಭಿಸಿತು. ಶೇ 30ರಷ್ಟು ತೆಪ್ಪ ನೀರಿನಲ್ಲಿ ಮುಳುಗುತ್ತಿದ್ದಂತೆ ಅದರಲ್ಲಿದ್ದವರು ನೀರಿಗೆ ಜಿಗಿದು ಈಜಿಕೊಂಡು ದಡ ಸೇರಿದರು. ಬಳಿಕ ಭಾರ ಸಮತೋಲನಗೊಂಡು ತೆಪ್ಪ ಸಹಜ ಸ್ಥಿತಿಗೆ ಮರಳಿತು.ಘಟನೆಯಿಂದಾಗಿ ವಿಸರ್ಜನೆ ವೇಳೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತೆಪ್ಪದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಹತ್ತುವುದನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹೊರತುಪಡಿಸಿ ತೆಪ್ಪದಲ್ಲಿದ್ದ ಯುವಕರು ಸುರಕ್ಷತಾ ಜಾಕೆಟ್ ಧರಿಸಿರಲಿಲ್ಲ. ಕೊಳದಲ್ಲಿ ರಕ್ಷಣಾ ಬೋಟ್ ವ್ಯವಸ್ಥೆಯೂ ಇರಲಿಲ್ಲ. ಸುರಕ್ಷತಾ ಕ್ರಮಗಳ ಕೊರತೆ ಕುರಿತು ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.