ಎಲ್ಲ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ
ಚಿಕ್ಕಮಗಳೂರು: ‘ಇಂಗ್ಲಿಷ್ ಮಾಧ್ಯಮ ಇಲ್ಲದಿದ್ದರೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಪೋಷಕರು ಕಳುಹಿಸುವುದಿಲ್ಲ. ಆದ್ದರಿಂದ ಮುಂದಿನ ಶೈಕ್ಷಣಿಕ ಸಾಲಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಆರಂಭಿಸಲಾಗುವುದು’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.‘ಪ್ರಸಕ್ತ ಸಾಲಿನಲ್ಲೇ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಇಂಗ್ಲಿಷ್ ಹೇಳಿಕೊಡಲು ಅ

ಚಿಕ್ಕಮಗಳೂರು: ‘ಇಂಗ್ಲಿಷ್ ಮಾಧ್ಯಮ ಇಲ್ಲದಿದ್ದರೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಪೋಷಕರು ಕಳುಹಿಸುವುದಿಲ್ಲ. ಆದ್ದರಿಂದ ಮುಂದಿನ ಶೈಕ್ಷಣಿಕ ಸಾಲಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಆರಂಭಿಸಲಾಗುವುದು’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.‘ಪ್ರಸಕ್ತ ಸಾಲಿನಲ್ಲೇ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಇಂಗ್ಲಿಷ್ ಹೇಳಿಕೊಡಲು ಅರ್ಹ ಶಿಕ್ಷಕರು ಬೇಕು. ಶಿಕ್ಷಕರ ನೇಮಕ ಆಗುವ ತನಕ ಕಾಯುವುದು ಬೇಡ ಎನ್ನುವ ಕಾರಣಕ್ಕೆ, ಸಾಧ್ಯವಿರುವ ಕಡೆ ಶಿಕ್ಷಕರಿಗೆ ತರಬೇತಿ ನೀಡಿ ರಾಜ್ಯದ ಅರ್ಧದಷ್ಟು ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಲಾಯಿತು. ಈಗ ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, ಹೊಸದಾಗಿ ಶಿಕ್ಷಕರ ನೇಮಕ ಪ್ರಕ್ರಿಯೆಯೂ ನಡೆಯುತ್ತಿದೆ. ಮುಂದಿನ ವರ್ಷ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಆರಂಭವಾಗಲಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.‘ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆರೆಯಲಾಗುತ್ತಿದೆ. ಹಾಗೆಂದ ಮಾತ್ರಕ್ಕೆ ಹಳ್ಳಿಯಲ್ಲಿನ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಸರ್ಕಾರಿ ಶಾಲೆಯಲ್ಲಿ ಒಂದೇ ಒಂದು ಮಗು ಇದ್ದರೂ ಪಾಠ ಮಾಡಲಾಗುತ್ತದೆ. ಪೋಷಕರು ತಮ್ಮ ಊರಿನ ಶಾಲೆಗೇ ಮಕ್ಕಳನ್ನು ಕಳುಹಿಸಿದರೆ ಆ ಶಾಲೆಗೆ ಮೂಲಸೌಕರ್ಯ ಕಲ್ಪಿಸಲಾಗುವುದು. ಆದರೆ, ಕೆಪಿಎಸ್ ತೆರೆಯುವುದು ಬೇಡ ಎನ್ನುವುದು ಸರಿಯಲ್ಲ. ಕೆಪಿಎಸ್ ತೆರೆದೇ ತೆರೆಯುತ್ತೇವೆ’ ಎಂದರು.ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನಿಂದ (ಎಡಿಬಿ) ₹2,500 ಕೋಟಿ ಸಾಲ ಪಡೆದು 500 ಕೆಪಿಎಸ್ಗಳನ್ನು ತೆರೆಯಲಾಗುತ್ತಿದೆ. ಡಿಪಿಆರ್ ಎಲ್ಲವೂ ಸಿದ್ಧವಾಗಿದ್ದು, ಡಿಸೆಂಬರ್ನಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.‘ಸರ್ಕಾರಿ ಶಾಲೆಗೆ 18 ಸಾವಿರ ಶಿಕ್ಷಕರು, ಅನುದಾನಿತ ಶಾಲೆಗೆ 6 ಸಾವಿರ ಶಿಕ್ಷಕರನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುವುದು. ಈಗಾಗಲೇ ನೇಮಕಕ್ಕೆ ಅನುಮತಿ ನೀಡಿರುವ 13 ಸಾವಿರ ಶಿಕ್ಷಕರು ಸೇರಿ ಮುಂದಿನ ಶೈಕ್ಷಣಿಕ ಸಾಲಿನಿಂದ 37 ಸಾವಿರ ಹೊಸ ಶಿಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ವರ್ಷಕ್ಕೆ 5 ಸಾವಿರ ಶಿಕ್ಷಕರು ನಿವೃತ್ತಿ ಹೊಂದುತ್ತಿದ್ದಾರೆ. ಹಿಂದಿನ ಸರ್ಕಾರ 4,500 ಶಿಕ್ಷಕರನ್ನು ಮಾತ್ರ ನೇಮಕ ಮಾಡಿದೆ. ನಮ್ಮ ಅವಧಿಯಲ್ಲಿ ಶಿಕ್ಷಕರ ನೇಮಕದ ವಿಷಯದಲ್ಲಿ ಇತಿಹಾಸ ಸೃಷ್ಟಿಸಲಾಗುತ್ತಿದೆ’ ಎಂದರು.‘ನಮ್ಮ ಶಾಲೆ–ನಮ್ಮ ಜವಾಬ್ದಾರಿ’ ಕಾರ್ಯಕ್ರಮದ ಅಡಿ ಸರ್ಕಾರಿ ಶಾಲೆಗೆ ಸಹಾಯ ಮಾಡಿದವರನ್ನು ಮಕ್ಕಳ ದಿನಾಚರಣೆ ದಿನ ವಿಶೇಷವಾಗಿ ಸನ್ಮಾನಿಸಬೇಕು. ಈ ಸಂಬಂಧ ಸುತ್ತೋಲೆ ಹೊರಡಿಸಲಾಗುವುದು’ ಎಂದು ಹೇಳಿದರು.‘ಇಡೀ ದೇಶದಲ್ಲಿ 99 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇದಕ್ಕೆ ಹೊಣೆ ಯಾರು? ಮಧ್ಯಪ್ರದೇಶವೊಂದರಲ್ಲಿಯೇ 16 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲಾಯಿತು. ಸಚಿವ ಸಂಪುಟದ ಮುಂದೆ ವಿಷಯ ಮಂಡಿಸಿ ಈ ನಿರ್ಧಾರ ಕೈಗೊಳ್ಳಲಾಯಿತು. ನಮ್ಮ ರಾಜ್ಯದಲ್ಲಿ 7,500 ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎನ್ನುವ ಬಿಜೆಪಿ ಸಂಸದರಿಗೆ ನಾಚಿಕೆಯಾಗುವುದಿಲ್ಲವೇ? ಇದಕ್ಕೆ ಮೊದಲು ಉತ್ತರ ಕೊಡಲಿ’ ಎಂದು ತಿರುಗೇಟು ನೀಡಿದರು.