ತಾಕತ್ತಿದ್ದರೆ ನನ್ನ ಮೇಲೆ ಬುಲ್ಡೋಜರ್ ಹತ್ತಿಸಿ: ಬಿಜೆಪಿಗೆ ಮಮತಾ ಸವಾಲು
ಕೋಲ್ಕತ್ತ: ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ನಡೆದ ದಾಳಿ ಹಾಗೂ ಕಾಳಿಘಾಟ್ ಪ್ರದೇಶದಲ್ಲಿ ನಿರ್ಬಂಧ ವಿಧಿಸಿರುವ ವಿಚಾರವಾಗಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.‘ನಿಮ್ಮ (ಬಿಜೆಪಿ) ಬಳಿ ಎಷ್ಟು ಬುಲ್ಡೋಜರ್ಗಳಿವೆ? ಎಲ್ಲವನ್ನೂ ತನ್ನಿ. ತಾಕತ್ತ
ಕೋಲ್ಕತ್ತ: ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ನಡೆದ ದಾಳಿ ಹಾಗೂ ಕಾಳಿಘಾಟ್ ಪ್ರದೇಶದಲ್ಲಿ ನಿರ್ಬಂಧ ವಿಧಿಸಿರುವ ವಿಚಾರವಾಗಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.‘ನಿಮ್ಮ (ಬಿಜೆಪಿ) ಬಳಿ ಎಷ್ಟು ಬುಲ್ಡೋಜರ್ಗಳಿವೆ? ಎಲ್ಲವನ್ನೂ ತನ್ನಿ. ತಾಕತ್ತಿದ್ದರೆ ನನ್ನ ಮೇಲೆಯೇ ಬುಲ್ಡೋಜರ್ ಹತ್ತಿಸಿ. ನಾನು ಇಲ್ಲೇ ನಿಂತಿದ್ದೇನೆ. ನನ್ನ ಎದೆಯ ಮೇಲೆಯೇ ಬುಲ್ಡೋಜರ್ ಓಡಿಸಿ ನೋಡೋಣ’ ಎಂದು ಸವಾಲು ಹಾಕಿದ್ದಾರೆ.ರಾತ್ರಿ ವೇಳೆ ಬಿಜೆಪಿ ಬೆಂಬಲಿತ ಗೂಂಡಾಗಳು ಪೊಲೀಸರೊಂದಿಗೆ ಸೇರಿಕೊಂಡು ಜನರ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ‘ರಾತ್ರಿ 2 ಅಥವಾ 3 ಗಂಟೆಗೆ ಜನರ ಮನೆಗಳ ಮೇಲೆ ದಾಳಿ ನಡೆಸಲು ಗೂಂಡಾಗಳನ್ನು ಕರೆತರುವ ಅಗತ್ಯವೇನಿದೆ?’ ಎಂದು ಪ್ರಶ್ನಿಸಿದ್ದಾರೆ.ಇದೇ ವೇಳೆ, ತಮ್ಮ ಕಾಳಿಘಾಟ್ ನಿವಾಸಕ್ಕೆ ತೆರಳುವ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 163ರ ಅಡಿಯಲ್ಲಿ ನಿರ್ಬಂಧ ವಿಧಿಸಿದ್ದಾರೆ ಎಂದು ಮಮತಾ ದೂರಿದ್ದಾರೆ. ಇದರಿಂದ ಮನೆಯಲ್ಲಿ ನಡೆಯುತ್ತಿರುವ ವಾರ್ಷಿಕ ಕಾಳಿಪೂಜೆಯ ಸಿದ್ಧತೆಗಳಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.‘ಮನೆಯಲ್ಲಿ ಪೂಜೆ ನಡೆಯುತ್ತಿದೆ. ಸಾಕಷ್ಟು ಸಿದ್ಧತೆ ಮಾಡಿಕೊಳ್ಳುವುದಿದೆ. ಆದರೆ ಪೊಲೀಸರು ರಸ್ತೆಯನ್ನು ತಡೆದಿದ್ದಾರೆ. ಮೂರ್ತಿಗಳನ್ನು ತಯಾರಿಸುವ ಪಟುವಾಪಾರಾ ಪ್ರದೇಶದ ಜನರು ತಮ್ಮ ಕೆಲಸಗಳನ್ನು ಮಾಡದಂತೆ ತಡೆಯುತ್ತಿರುವುದೇಕೆ?’ ಎಂದು ಪ್ರಶ್ನಿಸಿದ್ದಾರೆ.ಪ್ರಜಾಪ್ರಭುತ್ವ ಎಲ್ಲಿದೆ?‘ಪ್ರಜಾಪ್ರಭುತ್ವದ ರಕ್ಷಣೆ ಕುರಿತು ಮಾತನಾಡುವ ಬಿಜೆಪಿ ನಾಯಕರು, ಜನರಿಗೆ ತಮ್ಮ ಧಾರ್ಮಿಕ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲು ಹಾಗೂ ದೈನಂದಿನ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುತ್ತಿಲ್ಲ’ ಎಂದು ಮಮತಾ ಟೀಕಿಸಿದ್ದಾರೆ.‘ಜನರು ತಮ್ಮ ಹಬ್ಬಗಳನ್ನು ಆಚರಿಸಲೂ ಅವಕಾಶವಿಲ್ಲದಿದ್ದರೆ ಪ್ರಜಾಪ್ರಭುತ್ವ ಎಲ್ಲಿದೆ?’ ಎಂದು ಪ್ರಶ್ನಿಸಿದ ಅವರು, ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಬಿಜೆಪಿ ಹಣ ಬಲ ಮತ್ತು ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.ಕಾಳಿಘಾಟ್ ಪ್ರದೇಶದಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ಶನಿವಾರ ನಸುಕಿನ ಜಾವ ಬಿಜೆಪಿ ಬೆಂಬಲಿತ ದುಷ್ಕರ್ಮಿಗಳು ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿದ್ದಾರೆ ಎಂಬುದು ಮಮತಾ ಬ್ಯಾನರ್ಜಿ ಅವರ ಪ್ರಮುಖ ಆರೋಪವಾಗಿದೆ. ಈ ಘಟನೆ ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗಿದೆ.