ಮಗುವಿನ ಕಸ್ಟಡಿ ತಡೆಗೆ ಪೋಕ್ಸೊ ಕಾಯ್ದೆಯ ದುರುಪಯೋಗ: ಹೈಕೋರ್ಟ್ ಕೆಂಡಾಮಂಡಲ
ಬೆಂಗಳೂರು: ಮಗುವಿನ ಕಸ್ಟಡಿ ಮತ್ತು ಭೇಟಿಯ ಹಕ್ಕುಗಳಿಗೆ ತಡೆಯೊಡ್ಡುವ ದುರುದ್ದೇಶದಿಂದ, ಪತಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಪತ್ನಿ ಹೊರಿಸಿದ್ದ ಪೋಕ್ಸೊ ಪ್ರಕರಣವನ್ನು ರದ್ದುಪಡಿಸಿರುವ ಹೈಕೋರ್ಟ್, ‘ಒಂದು ವೇಳೆ ಪತಿ ಇಚ್ಛೆಪಟ್ಟಲ್ಲಿ ಪತ್ನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬಹುದು’ ಎಂಬ ಮಹತ್ವದ ತೀರ್ಪು ಪ್ರಕಟಿಸಿದೆ.‘ನಮ್ಮ ವಿರುದ್ಧದ ಕ್ರಿಮಿನಲ್ ಪ

ಬೆಂಗಳೂರು: ಮಗುವಿನ ಕಸ್ಟಡಿ ಮತ್ತು ಭೇಟಿಯ ಹಕ್ಕುಗಳಿಗೆ ತಡೆಯೊಡ್ಡುವ ದುರುದ್ದೇಶದಿಂದ, ಪತಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಪತ್ನಿ ಹೊರಿಸಿದ್ದ ಪೋಕ್ಸೊ ಪ್ರಕರಣವನ್ನು ರದ್ದುಪಡಿಸಿರುವ ಹೈಕೋರ್ಟ್, ‘ಒಂದು ವೇಳೆ ಪತಿ ಇಚ್ಛೆಪಟ್ಟಲ್ಲಿ ಪತ್ನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬಹುದು’ ಎಂಬ ಮಹತ್ವದ ತೀರ್ಪು ಪ್ರಕಟಿಸಿದೆ.‘ನಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಪತಿ, ಅವರ ತಂದೆ, ತಾಯಿ ಮತ್ತು ಸಹೋದರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ. ‘ಹಾಲಿ ಪ್ರಕರಣದಲ್ಲಿ ಪತ್ನಿ ತನ್ನ ಪತಿಯ ವಿರುದ್ಧ ಹೊರಿಸಿರುವ ಮೂರೂವರೆ ವರ್ಷದ ಮಗಳ ಮೇಲಿನ ಲೈಂಗಿಕ ದೌರ್ಜನ್ಯದ ಪೋಕ್ಸೊ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ–2012) ಪ್ರಕರಣಕ್ಕೆ ವೈದ್ಯಕೀಯ ಆಧಾರಗಳೇ ಇಲ್ಲ. ಇದು ಹೆತ್ತ ತಾಯಿಯೊಬ್ಬರು ಹೆಣೆದ ಕಟ್ಟುಕಥೆ’ ಎಂದು ಬಣ್ಣಿಸಿದೆ.‘ಕಸ್ಟಡಿ ಮತ್ತು ಭೇಟಿಗೆ ಸಂಬಂಧಿಸಿದ ವಿಚಾರಣೆಗಳಲ್ಲಿ ದಾವೆದಾರರು ಕ್ರಿಮಿನಲ್ ಕಾನೂನನ್ನು ಪರೋಕ್ಷ ಸಾಧನವನ್ನಾಗಿ ಬಳಸಿಕೊಳ್ಳಲು ಸುತಾರಾಂ ಅವಕಾಶ ನೀಡಲಾಗದು. ಹಾಗಾಗಿ, ಈ ಪ್ರಕರಣದಲ್ಲಿ ಪತಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಹೆಚ್ಚಿನ ತನಿಖೆಗೆ ಅವಕಾಶ ನೀಡುವುದು ನ್ಯಾಯಿಕ ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ ಆಗುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.‘ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಬಗ್ಗೆ ಮಗುವಿನಿಂದ ಯಾವುದೇ ಸ್ವತಂತ್ರ ವಿವರಣೆಯಿಲ್ಲ. ಮಗುವನ್ನು ಪರೀಕ್ಷಿಸಿದ ವೈದ್ಯರೂ ಅಂತಹ ಉಕ್ತಿಯನ್ನು ಉಲ್ಲೇಖಿಸಿಲ್ಲ. ಆರೋಪ ಕೇವಲ ತಾಯಿಯ ಬಾಯಿಯಿಂದ ಹೊರಹೊಮ್ಮಿದೆ. ಮಗುವಿನ ಕಸ್ಟಡಿ ಮತ್ತು ಭೇಟಿಯ ಹಕ್ಕುಗಳಿಗೆ ತಡೆಯೊಡ್ಡುವ ಸಲುವಾಗಿ ಒಬ್ಬ ತಾಯಿ, ಕ್ಲಿನಿಕಲ್ ಸಂಶೋಧನೆಗಳನ್ನು ಅರ್ಥೈಸುತ್ತಾ ಇಂತಹ ಗುರುತರ ಆಪಾದನೆಯನ್ನು ಕುಟುಂಬದ ಸದಸ್ಯರೆಲ್ಲರ ವಿರುದ್ಧ ಮಾಡಿರುವುದು ಅತ್ಯಂತ ನೋವಿನ ಸಂಗತಿ’ ಎಂದು ಉದ್ಗರಿಸಿದೆ.ಕೋರ್ಟ್ ನಿರ್ದೇಶನದ ಪ್ರಕಾರ ಮಗುವಿನ ತಪಾಸಣೆ ನಡೆಸಿದ್ದ ಡಾ.ಪಿ.ಬಿಂದು ಮತ್ತು ಡಾ.ಅನುರಾಧಾ ಸದಾಶಿವಮೂರ್ತಿ ಅವರ ಪ್ರಮಾಣಪತ್ರಗಳನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಪೀಠ, ‘ಆರೋಪಗಳನ್ನು ಸಾಬೀತುಪಡಿಸುವಂತಹ ಯಾವುದೇ ಲೈಂಗಿಕ ದೌರ್ಜನ್ಯ ಮಗುವಿನ ಮೇಲೆ ನಡೆದಿಲ್ಲ’ ಎಂಬುದನ್ನು ತೀರ್ಪಿನಲ್ಲಿ ದಾಖಲಿಸಿದೆ.‘ದಂಪತಿ ತಮ್ಮ ಕೌಟುಂಬಿಕ ವ್ಯಾಜ್ಯಕ್ಕೆ ಪುಟ್ಟ ಮಗುವನ್ನು ಕ್ರಿಮಿನಲ್ ಮೊಕದ್ದಮೆಯ ಸುಳಿಗೆ ಸಿಲುಕಿಸಿದ್ದಾರೆ. ಇಲ್ಲಿ ಪೋಷಕರ ನಡುವಿನ ಭಿನ್ನಾಭಿಪ್ರಾಯ ವೈವಾಹಿಕ ಸಂಬಂಧಗಳ ಗಡಿ ದಾಟಿ ಹೋಗಿದೆ. ವಾತ್ಸಲ್ಯದ ಕಣ್ಮಣಿಯಾಗಬೇಕಿದ್ದ ಮಗುವೀಗ ಅವರ ವಿರೋಧಿ ಹೋರಾಟದ ಕೇಂದ್ರ ಬಿಂದುವಾಗಿದೆ. ಕಂದಮ್ಮನ ಕೋಮಲತೆ, ಭಾವನಾತ್ಮಕ ಭದ್ರತೆ ಮತ್ತು ಯೋಗಕ್ಷೇಮದ ಮೇಲೆ ಕವಿದಿರುವ ಕರಿನೆರಳು ಅದರ ಮನದಲ್ಲಿ ಭೀತಿಯ ಬೀಜಗಳನ್ನು ಬಿತ್ತಿದೆ’ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ. ‘ಈ ಪ್ರಕರಣದಲ್ಲಿ ಪತ್ನಿಯು ತನ್ನ ಪತಿ ಮತ್ತವರ ಕುಟುಂಬದ ಸದಸ್ಯರ ವಿರುದ್ಧ ಸುಳ್ಳು ದೂರು ಸಲ್ಲಿಸಿ ಅವರನ್ನು ಅವಮಾನಕ್ಕೆ ಈಡುಮಾಡುವ ದುರುದ್ದೇಶದಿಂದ ಪೋಕ್ಸೊ ಕಾಯ್ದೆಯಡಿ ಆಪಾದನೆ ಹೊರಿಸಿದ್ದಾರೆ. ಹಾಗಾಗಿ, ಪೋಕ್ಸೊ ಕಾಯ್ದೆಯ ಕಲಂ 22ರ ಅನುಸಾರ ಪತ್ನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಅವಕಾಶವನ್ನು ಪತಿ ಮತ್ತು ಅವರ ಕುಟುಂಬದ ಸದಸ್ಯರ ಪಾಲಿಗೆ ಮುಕ್ತವಾಗಿ ಇರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದೆ.ನ್ಯಾ.ಎಂ.ನಾಗಪ್ರಸನ್ನಆರ್.ರಂಗನಾಥ ರೆಡ್ಡಿನ್ಯಾ.ಎಂ.ನಾಗಪ್ರಸನ್ನಕೋರ್ಟ್ಗಳಲ್ಲಿ ಇಂದು ವೈವಾಹಿಕ ವ್ಯಾಜ್ಯಗಳು ಗಿಜಿಗುಟ್ಟುತ್ತಿವೆ. ಇವುಗಳಲ್ಲಿ ಮಗುವಿನ ಕಸ್ಟಡಿ ಭೇಟಿ ವಿಚಾರಗಳು ಗಂಭೀರ ದುಷ್ಕೃತ್ಯದ ಆರೋಪಗಳೊಂದಿಗೆ ತಳುಕು ಹಾಕಿಕೊಂಡಿರುವುದು ಕಳವಳಕಾರಿ ಅಂಶ. ತುರಿಕೆಯನ್ನೇ ಅಸ್ತ್ರವನ್ನಾಗಿಸಿದ ತಾಯಿ..! 35 ವರ್ಷದ ಅರ್ಜಿದಾರ ಪತಿ (ಉದ್ಯಮಿ) ಮತ್ತು ಪ್ರತಿವಾದಿಯಾಗಿರುವ 33 ವರ್ಷದ ಪತ್ನಿ (ಗೃಹಿಣಿ) 2018ರ ಜುಲೈ 1ರಂದು ಮದುವೆಯಾಗಿದ್ದರು. ದಂಪತಿಗೆ 2022ರ ನವೆಂಬರ್ 14ರಂದು ಹೆಣ್ಣು ಮಗು ಜನಿಸಿತ್ತು. ಕೌಟುಂಬಿಕ ಮನಸ್ತಾಪ ಹೆಚ್ಚಾಗಿ 2024ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲು ತುಳಿದಿದ್ದರು. ಏತನ್ಮಧ್ಯೆ ಪುಟ್ಟ ಮಗು ಅಪ್ಪನ ಭೇಟಿಯಾಗಿ ಸಮಯ ಕಳೆಯಲು ಪತ್ನಿ ನಿರಂತರವಾಗಿ ಅಡ್ಡಿಪಡಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಅರ್ಜಿದಾರ ತಂದೆ ಮಗುವಿನ ಜೊತೆಗಿನ ಒಡನಾಟದ ಹಕ್ಕನ್ನು ಪ್ರತಿಪಾದಿಸಿ ಪಾಲನೆ ಮತ್ತು ಭೇಟಿ ಹಕ್ಕುಗಳನ್ನು ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿತ್ತು. ನಿಗದಿತ ದಿನಗಳಂದು ನಿಗದಿಪಡಿಸಿದ ಸಮಯದಲ್ಲಿ ಮಗಳ ಜೊತೆ ಇರಲು ತಂದೆಗೆ ಅನುಮತಿ ನೀಡಿತ್ತು. ಅದೊಂದು ದಿನ ಮಗು ತನಗೆ ಮಲ ವಿಸರ್ಜನೆ ಮಾಡಲು ತೊಂದರೆಯಾಗಿದೆ ಎಂಬ ಅಸ್ವಸ್ಥತೆಯನ್ನು ಕಸಿವಿಸಿಯಿಂದ ಅಸ್ಪಷ್ಟವಾಗಿ ತಾಯಿ ಬಳಿ ಅಲವತ್ತುಕೊಂಡಿತ್ತು. ತಾಯಿ ಪರೀಕ್ಷಿಸಿದಾಗ ಮಗುವಿನ ಗುಪ್ತಾಂಗದ ಸುತ್ತ ತುರಿಕೆಯಿಂದ ಚರ್ಮ ಕೆಂಪಗಾಗಿ ದದ್ದುಗಳು ಉಂಟಾಗಿದ್ದುದು ಕಂಡು ಬಂದಿತ್ತು. ಕೂಡಲೇ ತಾಯಿ ಮಗುವನ್ನು ಮಲ್ಲೇಶ್ವರದ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ತೋರಿಸಿದ್ದರು. ನಂತರ ‘ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ’ ಎಂದು ಆರೋಪಿಸಿ ತನ್ನ ಗಂಡ ಅತ್ತೆ ಮಾವ ಮತ್ತು ಗಂಡನ ತಂಗಿಯ ವಿರುದ್ಧ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪೋಕ್ಸೊ ಕಾಯ್ದೆಯ ಕಲಂ 8 ಮತ್ತು 10ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ತಕ್ಕ ಪಾಠದ ತೀರ್ಪು ಸ್ವಂತ ಮಗಳು ಅದೂ ಮೂರೂವರೆ ವರ್ಷದ ಮುಗ್ಧ ಕಂದಮ್ಮನಿಗೆ ಸ್ವತಃ ತಂದೆ ಮತ್ತು ಅವರ ಕುಟುಂಬದಿಂದಲೇ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಲು ಯಾವ ತಾಯಿಗೆ ತಾನೇ ಮನಸ್ಸು ಬರುತ್ತದೆಯೋ ಕಾಣೆ. ದೇಶದ ಗಮನ ಸೆಳಯುವಂತಿರುವ ಈ ಮಹತ್ವಪೂರ್ಣ ತೀರ್ಪು ಸುಳ್ಳು ದೂರು ನೀಡಿ ಪೋಕ್ಸೊ ಕಾಯ್ದೆಯ ದುರುಪಯೋಗ ಮಾಡಿಕೊಳ್ಳುವ ಪೋಷಕರಿಗೆ ತಕ್ಕ ಪಾಠ ಕಲಿಸುತ್ತದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಆರ್.ರಂಗನಾಥ ರೆಡ್ಡಿ