ಮೋದಿ ಆಡಳಿತದಲ್ಲಿ ದೇಶದ ಅಸ್ತಿತ್ವಕ್ಕೆ ಭಾರಿ ಪೆಟ್ಟು ಬಿದ್ದಿದೆ: ಸೋನಿಯಾ ಆರೋಪ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 12 ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಅಸ್ತಿತ್ವ, ಪ್ರಜಾಪ್ರಭುತ್ವ ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಭಾರಿ ಪೆಟ್ಟು ಬಿದ್ದಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕುರಿತು ‘ದಿ ಹಿಂದೂ’ ಪತ್ರಿಕೆಗೆ ನೀಡಿದ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 12 ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಅಸ್ತಿತ್ವ, ಪ್ರಜಾಪ್ರಭುತ್ವ ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಭಾರಿ ಪೆಟ್ಟು ಬಿದ್ದಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕುರಿತು ‘ದಿ ಹಿಂದೂ’ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಮೋದಿ ಅವರು ಅಧಿಕಾರದಿಂದ ಕೆಳಗಿಳಿದ ಬಳಿಕವೂ ದೇಶದ ವ್ಯವಸ್ಥೆಯನ್ನು ಮೊದಲಿನ ಸ್ಥಿತಿಗೆ ತರಲು ಸಾಕಷ್ಟು ಸಮಯ ಬೇಕಾಗುತ್ತದೆ’ ಎಂದು ಪ್ರತಿಪಾದಿಸಿದ್ದಾರೆ. ಮೋದಿ ಆಡಳಿತದಲ್ಲಿ ಆಗಿರುವ ಹಾನಿಯ ಬಗ್ಗೆ ದೇಶದ ಜನರಲ್ಲಿ ಅಸಮಾಧಾನ ಮೂಡುತ್ತಿದೆ. ಆದರೆ, ನಾನು ಆಶಾವಾದಿಯಾಗಿದ್ದು, ದೇಶದ ಜನರು ಹೊಸ ಸರ್ಕಾರವನ್ನು ಮುಕ್ತವಾಗಿ ಸ್ವಾಗತಿಸಲಿದ್ದಾರೆ ಎಂಬ ಭರವಸೆ ನನಗಿದೆ ಎಂದಿದ್ದಾರೆ.ಕಳೆದ 12 ವರ್ಷಗಳಲ್ಲಿ ನಮ್ಮ ದೇಶದ ಅಸ್ತಿತ್ವ, ಪ್ರಜಾಪ್ರಭುತ್ವ ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಭಾರಿ ಹಾನಿಯಾಗಿದೆ. ಮೋದಿ ಸರ್ಕಾರ ನಿರ್ಗಮಿಸಿದ ನಂತರವೂ ವ್ಯವಸ್ಥೆಯನ್ನು ಮತ್ತೆ ಸುಸ್ಥಿತಿಗೆ ತರಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದಕ್ಕಾಗಿ ರಾಜಕೀಯ ಪಕ್ಷಗಳ ಅಪಾರ ಶ್ರಮವು ಅಗತ್ಯವಿದೆ ಎಂದೂ ತಿಳಿಸಿದ್ದಾರೆ.ಕಾಂಗ್ರೆಸ್ ಪಕ್ಷದ ಹಿನ್ನಡೆ ಹಾಗೂ ಪ್ರಸ್ತುತ ಸ್ಥಿತಿಗತಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ನಿರಾಶಾವಾದಿಯಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಗೆ ಸಮಾನ ಅವಕಾಶಗಳು ಸಿಕ್ಕಿಲ್ಲ. ಚುನಾವಣೆ ಆಯೋಗ ಸೇರಿದಂತೆ ಎಲ್ಲಾ ಸ್ವಾಯತ್ತ ಸಂಸ್ಥೆಗಳ ಮೇಲೆ ಸರ್ಕಾರ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಮುಖ್ಯವಾಹಿನಿಯ ಮಾಧ್ಯಮಗಳ ನಿಯಂತ್ರಣ, ಹಣ ಬಲ ಮತ್ತು ಧರ್ಮದ ದುರ್ಬಳಕೆಯನ್ನು ಕಾಣಬಹುದಾಗಿದೆ’ ಎಂದಿದ್ದಾರೆ.‘ಹೀಗಿದ್ದರೂ, ನಮ್ಮ ಪಕ್ಷವು ನಿರಂತರವಾಗಿ ಹೋರಾಡುತ್ತಿದೆ. ವಾಸ್ತವವಾಗಿ, ಬಿಜೆಪಿ ಸರ್ಕಾರದ ಎಲ್ಲ ರೀತಿಯ ದಾಳಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಇರುವುದು ಕಾಂಗ್ರೆಸ್ಗೆ ಮಾತ್ರ. ನಮ್ಮ ಕಾರ್ಯಕರ್ತರು ಮತ್ತು ನಾಯಕರು ಎಲ್ಲ ರೀತಿಯ ಕಿರುಕುಳ ಎದುರಿಸಿದ್ದಾರೆ. ಆದಾಗ್ಯೂ, ಪ್ರತಿಯೊಂದು ಹಳ್ಳಿ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸಿಗರು ಸಂವಿಧಾನದ ಮೌಲ್ಯಗಳಿಗಾಗಿ ಹೋರಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.ಈಚೆಗೆ ನಡೆದ ಹಲವು ಚುನಾವಣೆಗಳಲ್ಲಿ ‘ಮತ ಕಳವು’ ಸೇರಿದಂತೆ ಹಲವು ಅಕ್ರಮಗಳು ನಡೆದಿರುವುದು ಸಾಬೀತಾಗಿದೆ. ಜನರಲ್ಲಿ ಈ ಬಗ್ಗೆ ಅರಿವು ಮೂಡುತ್ತಿದೆ’ ಎಂದಿದ್ದಾರೆ.ಮೋದಿ, ಆರ್ಎಸ್ಎಸ್ ಬಗ್ಗೆ ಸೋನಿಯಾ ಮಾತು...ಪ್ರಧಾನಿ ಮೋದಿ ಅವರಿಂದ ಕಾಂಗ್ರೆಸ್ ಕಲಿಯಬೇಕಾದ ಪಾಠಗಳಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು (ಮೋದಿ) ತೀರಾ ಭಿನ್ನ ಸಿದ್ಧಾಂತದಿಂದ ಬಂದಿದ್ದಾರೆ ಎಂಬುದು ನಿಜ. ಆದರೆ, ಕಾಂಗ್ರೆಸ್ ಪಕ್ಷದ ಒಳಗಡೆಯೇ ಡಾ. ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರು ರಾಜಕೀಯವಾಗಿ ಯಶಸ್ಸು ಕಂಡ ಹಲವು ಸಂಗತಿಗಳಿವೆ. ನಮಗೆ ಆರ್ಎಸ್ಎಸ್ನಿಂದ ಕಲಿಯುವುದು ಏನೂ ಇಲ್ಲ’ ಎಂದಿದ್ದಾರೆ.2004ರಲ್ಲಿ ಪ್ರಧಾನಿ ಹುದ್ದೆ ಸ್ವೀಕರಿಸದೇ ಇದ್ದುದರ ಬಗ್ಗೆ ವಿಷಾದವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಖಂಡಿತವಾಗಿಯೂ ಇಲ್ಲ. ಆ ಆಲೋಚನೆ ನನ್ನ ಮನಸ್ಸಿನಲ್ಲಿ ಎಂದಿಗೂ ಬಂದಿಲ್ಲ. ಯುಪಿಎ ಸರ್ಕಾರದ ಅವಧಿಯ ಅನುಭವ ಅತ್ಯಂತ ಸಕಾರಾತ್ಮಕವಾಗಿತ್ತು. ನಾವು ತಂಡವಾಗಿ ಕೆಲಸ ಮಾಡಿದ್ದೇವೆ. ಮನಮೋಹನ್ ಸಿಂಗ್ ಅವರು ಸರ್ಕಾರವನ್ನು ಮುನ್ನಡೆಸಿದ್ದರೆ, ನಾನು ಪಕ್ಷವನ್ನು ಮುನ್ನಡೆಸಿದ್ದೆ’ ಎಂದು ಸ್ಪಷ್ಟಪಡಿಸಿದ್ದಾರೆ.ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲೇನಿದೆ?‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕವು ಇಟಲಿಯಿಂದ ಬಂದು ನೆಹರು-ಗಾಂಧಿ ಕುಟುಂಬದ ಭಾಗವಾದ ಸೋನಿಯಾ ಗಾಂಧಿ ಅವರ ಜೀವನ ಕಥೆಯನ್ನು ಒಳಗೊಂಡಿದೆ. ಅತ್ತೆ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗಿನ ಒಡನಾಟ, ಭಾರತೀಯ ಜೀವನಶೈಲಿ ಹಾಗೂ ಸಂಸ್ಕೃತಿಗೆ ಹೊಂದಿಕೊಳ್ಳಲು ಸೋನಿಯಾ ನಡೆಸಿದ ಪ್ರಯತ್ನಗಳ ಬಗ್ಗೆ ವಿವರಿಸುತ್ತದೆ.ಈ ಪುಸ್ತಕವು ಸೋನಿಯಾ ಜೀವನದ ಮೇಲೆ ಆಳವಾದ ಪ್ರಭಾವ ಬೀರಿದ ವೈಯಕ್ತಿಕ ದುರಂತಗಳ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಇದರಲ್ಲಿ 1980ರಲ್ಲಿ ವಿಮಾನ ದುರಂತದಲ್ಲಿ ಸಂಭವಿಸಿದ ಸಂಜಯ್ ಗಾಂಧಿ ಸಾವು, 1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆ ಮತ್ತು 1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯಂತಹ ಘಟನೆಗಳು ಸೇರಿವೆ.ಅಲ್ಲದೆ, ಕಳೆದ ಆರು ದಶಕಗಳಲ್ಲಿ ಗಾಂಧಿ ಕುಟುಂಬವು ಕಂಡ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳ ಬಗ್ಗೆಯೂ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ.ಬಿಡುಗಡೆಗೂ ಮುನ್ನ ವಿವಾದ...‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕವು ಭಾರತದಲ್ಲಿ ಬಿಡುಗಡೆಯಾಗುವುದಕ್ಕೂ ಮುನ್ನವೇ ಗಮನ ಸೆಳೆದಿದೆ. ಪ್ರಕಾಶಕರು ಸೂಚಿಸಿದ ಸಂಪಾದಕೀಯ ಬದಲಾವಣೆಗಳನ್ನು ಮಾಡಲು ಸೋನಿಯಾ ಅವರು ನಿರಾಕರಿಸಿದ್ದರಿಂದ ಅವರ ಆತ್ಮಕಥೆಯನ್ನು ಭಾರತದಲ್ಲಿ ಪ್ರಕಟಿಸುವ ನಿರ್ಧಾರದಿಂದ ‘ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ’ (ಪಿಆರ್ಎಚ್ಐ) ಹಿಂದೆ ಸರಿದಿತ್ತು. ಇದರಿಂದ ಪುಸ್ತಕ ಬಿಡುಗಡೆ ಕುರಿತ ಅನಿಶ್ಚಿತತೆ ಉಂಟಾಗಿತ್ತು. ಬಳಿಕ ‘ಹಾರ್ಪರ್ ಕಾಲಿನ್ಸ್ ಇಂಡಿಯಾ’ ಪುಸ್ತಕ ಪ್ರಕಟಿಸುವುದಾಗಿ ಘೋಷಿಸಿರುವುದರಿಂದ ಅನಿಶ್ಚಿತತೆಗೆ ತೆರೆ ಬಿದ್ದಿದೆ.‘ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ ಮತ್ತು ಭಾರತದ ಭೂ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿರುವ ವಿಷಯಗಳಿಗೆ ಸಂಬಂಧಿಸಿದ ಕೆಲ ಭಾಗಗಳನ್ನು ತೆಗೆಯಲು ಸೋನಿಯಾ ಅವರು ಒಪ್ಪದ ಕಾರಣ ಪಿಆರ್ಎಚ್ಐ ಹಿಂದೆ ಸರಿದಿತ್ತು’ ಎಂದು ಮೂಲಗಳು ಹೇಳಿವೆ.‘ಹಾರ್ಪರ್ಕಾಲಿನ್ಸ್ ಇಂಡಿಯಾ’ ಹೇಳಿದ್ದೇನು?‘ಬಹುನಿರೀಕ್ಷಿತ ಈ ಆತ್ಮಕಥೆಯು ಭಾರತದಲ್ಲಿ ಈ ವರ್ಷದ ನವೆಂಬರ್ 10ರಂದು ಓದುಗರಿಗೆ ಲಭ್ಯವಾಗಲಿದೆ. ನಮ್ಮ ಕಾಲದ ಅತ್ಯಂತ ಪ್ರಮುಖ ರಾಜಕೀಯ ನಾಯಕರ ಆತ್ಮಕಥೆಗಳಲ್ಲಿ ಇದೂ ಒಂದು. ಪ್ರೀತಿ, ಅಸ್ಮಿತೆ, ಕರ್ತವ್ಯ, ಬಾಂಧವ್ಯದ ಕುರಿತಾದ ಆಳವಾದ ಜೀವನಚರಿತ್ರೆ ಇದಾಗಿದೆ. ಭಾರತದ ಪಯಣದ ಕುರಿತು ಅಪರೂಪದ ಒಳನೋಟಗಳನ್ನು ಇದು ಒದಗಿಸುತ್ತದೆ’ ಎಂದು ‘ಹಾರ್ಪರ್ಕಾಲಿನ್ಸ್ ಇಂಡಿಯಾ’ ಪ್ರಕಟಣೆಯಲ್ಲಿ ತಿಳಿಸಿದೆ.ಸೋನಿಯಾ ಅವರ ಪುಸ್ತಕವು 544 ಪುಟಗಳನ್ನು ಹೊಂದಿದ್ದು, ವೈಯಕ್ತಿಕ ಮತ್ತು ರಾಜಕೀಯ ವಿಷಯಗಳ ಜತೆಗೆ ಪ್ರೀತಿ, ಕುಟುಂಬ ಮತ್ತು ಭಾರತದ ಕುರಿತಾದ ರೋಚಕ ಕಥೆಯನ್ನು ಹೇಳುತ್ತದೆ ಎಂದು ಅದು ವಿವರಿಸಿದೆ.ಸ್ವಾತಂತ್ರ್ಯ ನಂತರ ಭಾರತದ ಇತಿಹಾಸ, ಪ್ರಸ್ತುತ ರಾಜಕೀಯ ಹೋರಾಟಗಳು, 60 ವರ್ಷಗಳಲ್ಲಿ ದೇಶದ ಆರ್ಥಿಕ, ಸಾಮಾಜಿಕ ಬದಲಾವಣೆಗಳ ಬಗ್ಗೆ ತೀಕ್ಷ್ಣ ದೃಷ್ಟಿಕೋನವನ್ನು ಪುಸ್ತಕ ನೀಡುತ್ತದೆ ಎಂದು ಅದು ತಿಳಿಸಿದೆ.