ಏಸೂರ ಕೊಟ್ಟರೂ 'ಈಸೂರು' ಬಿಡೆವು: ಸ್ವಾತಂತ್ರ್ಯ ಘೋಷಿಸಿಕೊಂಡ ದೇಶದ ಮೊದಲ ಗ್ರಾಮ
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ‘ಈಸೂರು’ ದೇಶದಲ್ಲಿ ಹೆಸರು ಮಾಡಿದ ಗ್ರಾಮ. ಬ್ರಿಟಿಷರ ವಿರುದ್ಧ ಹೋರಾಡಿ, ಪ್ರಥಮ ಸ್ವತಂತ್ರ ಗ್ರಾಮವೆಂದು ಘೋಷಿಸಿಕೊಂಡ ಹಿರಿಮೆ ಇದರದ್ದು. ಇಡೀ ಗ್ರಾಮದ ಜನರು ಸ್ವಾತಂತ್ಯ ಚಳವಳಿಯಲ್ಲಿ ಪಾಲ್ಗೊಂಡ ಕೀರ್ತಿಗೆ ಪಾತ್ರವಾದ ಈಸೂರನ್ನು, ವೀರಪುತ್ರರ ನಾಡೆಂದು ಗುರುತಿಸುತ್ತಿದ್ದರು. 1942ಕ್ಕಿಂತ ಮೊದಲೇ ಇಲ್ಲಿನ ಪ್ರತಿಯೊಂದು ಮನೆಯ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ‘ಈಸೂರು’ ದೇಶದಲ್ಲಿ ಹೆಸರು ಮಾಡಿದ ಗ್ರಾಮ. ಬ್ರಿಟಿಷರ ವಿರುದ್ಧ ಹೋರಾಡಿ, ಪ್ರಥಮ ಸ್ವತಂತ್ರ ಗ್ರಾಮವೆಂದು ಘೋಷಿಸಿಕೊಂಡ ಹಿರಿಮೆ ಇದರದ್ದು. ಇಡೀ ಗ್ರಾಮದ ಜನರು ಸ್ವಾತಂತ್ಯ ಚಳವಳಿಯಲ್ಲಿ ಪಾಲ್ಗೊಂಡ ಕೀರ್ತಿಗೆ ಪಾತ್ರವಾದ ಈಸೂರನ್ನು, ವೀರಪುತ್ರರ ನಾಡೆಂದು ಗುರುತಿಸುತ್ತಿದ್ದರು. 1942ಕ್ಕಿಂತ ಮೊದಲೇ ಇಲ್ಲಿನ ಪ್ರತಿಯೊಂದು ಮನೆಯವರೂ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡವರೇ. ಈ ಕಾರಣಕ್ಕಾಗಿ ದೇಶದ ಗಮನ ಸೆಳೆದ ಈ ಗ್ರಾಮದ ಕಥೆಯೇ ರೋಚಕ... ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿ ಅವರು 1942ರಲ್ಲಿ ಬ್ರಿಟಿಷರ ವಿರುದ್ಧ ಕರೆ ನೀಡಿದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಗ್ರಾಮದ ವೀರ ಹೋರಾಟಗಾರರು ಸಕ್ರಿಯವಾಗಿ ಭಾಗವಹಿಸಿದರು. ಕಂದಾಯ ನೀಡಲು ನಿರಾಕರಿಸಿದ್ದ ಗ್ರಾಮಸ್ಥರು ಬ್ರಿಟಿಷ್ ಅಧಿಕಾರಿಗಳ ವಿರುದ್ಧ ನಡೆಸಿದ ಈ ಹೋರಾಟ ತೀವ್ರ ಸ್ವರೂಪ ಪಡೆದಿತ್ತು.‘ಏಸೂರ ಕೊಟ್ಟರೂ ಈಸೂರು ಬಿಡೆವು’ ಎಂಬ ಘೋಷಣೆಯನ್ನು ಹೇಳುತ್ತಾ ನಾಯಕತ್ವವಿಲ್ಲದೇ ಸ್ವಯಂ ಪ್ರೇರಿತರಾಗಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕೀರ್ತಿ ಈಸೂರು ಗ್ರಾಮಸ್ಥರಿಗೆ ಸಲ್ಲುತ್ತದೆ. ಗ್ರಾಮಸ್ಥರು 1942ರಲ್ಲಿ ಸೆಪ್ಟೆಂಬರ್ 26ರಂದು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಮೇಲೆ ಪ್ರತ್ಯೇಕ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸ್ವತಂತ್ರ ಗ್ರಾಮ ಎಂದು ಘೋಷಣೆ ಮಾಡಿಕೊಂಡರು. ಆಡಳಿತ ನಡೆಸಲು ಹದಿನಾಲ್ಕು ವರ್ಷದ ಜಯಣ್ಣನನ್ನು ಅಮಲ್ದಾರನನ್ನಾಗಿ, ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿ ಮಲ್ಲಣ್ಣ ಅವರನ್ನು ನೇಮಕ ಮಾಡಿಕೊಂಡರು.ಆದರೆ ಸ್ವತಂತ್ರ ಸರ್ಕಾರ ರಚಿಸಿಕೊಂಡ ಗ್ರಾಮಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಬ್ರಿಟಿಷ್ ಆಡಳಿತ ಅಧಿಕಾರಿಗಳನ್ನು ಕಳಿಸುತ್ತದೆ. ಗ್ರಾಮಕ್ಕೆ ಬಂದ ಅಧಿಕಾರಿಗಳಿಗೆ ಖಾದಿ ಟೋಪಿ ಧರಿಸುವಂತೆ ಗ್ರಾಮಸ್ಥರು ಆಜ್ಞೆ ಮಾಡುತ್ತಾರೆ.ಇವರ ದಂಗೆಯನ್ನು ಅಡಗಿಸಲು ಬ್ರಿಟಿಷ್ ಸರ್ಕಾರ ಅಮಲ್ದಾರ್ ಚನ್ನಕೃಷ್ಣಯ್ಯ ಮತ್ತು ಸಬ್ ಇನ್ಸ್ಪೆಕ್ಟರ್ ಕೆಂಚೇಗೌಡರ ನೇತೃತ್ವದಲ್ಲಿ ಪೋಲಿಸರನ್ನು ಕಳಿಸಿತು. ಈ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ತೀವ್ರ ಸಂಘರ್ಷ ನಡೆಯಿತು.ರೊಚ್ಚಿಗೆದ್ದ ಗ್ರಾಮಸ್ಥರು ಸಬ್ ಇನ್ಸ್ಪೆಕ್ಟರ್ ಕೆಂಚನಗೌಡ, ಅಮಲ್ದಾರ್ ಚನ್ನಕೃಷ್ಣಪ್ಪ ಅವರನ್ನು ಹತ್ಯೆ ಮಾಡಿದರು. ಇದನ್ನು ಕಂಡ ಬ್ರಿಟಿಷ್ ಸರ್ಕಾರ ಕೆರಳಿ, ಹೆಚ್ಚಿನ ಪೋಲಿಸ್ ತುಕಡಿಯನ್ನು ಈಸೂರಿಗೆ ಕಳುಹಿಸಿಕೊಟ್ಟಿತು. ನಂತರ ಬ್ರಿಟಿಷ್ ಅಧಿಕಾರಿಗಳು ಈಸೂರಿನ ಮೇಲೆ ದಾಳಿ ನಡೆಸಿ ಲೂಟಿ ಮಾಡಿ, ಮಹಿಳೆಯರು, ಮಕ್ಕಳೆನ್ನದೇ ಎಲ್ಲರ ಮೇಲೆ ಹಲ್ಲೆ ನಡೆಸುತ್ತಾರೆ. ಹೋರಾಟಕ್ಕೆ ಬೆಂಬಲ ನೀಡಿದ ಕಾರಣಕ್ಕೆ ಸಾಹುಕಾರ್ ಬಸವಣ್ಯಪ್ಪ ಅವರ ಮನೆಯನ್ನು ಸುಟ್ಟು ಹಾಕುತ್ತಾರೆ.ಪೋಲಿಸರ ಲಾಠಿ ಪ್ರಹಾರ ಮತ್ತು ಗೋಲಿಬಾರ್ನಿಂದ ವಿಚಲಿತರಾದ ಅನೇಕರು ಊರು ಬಿಟ್ಟು ಪರಾರಿಯಾದರು. ಬ್ರಿಟಷ್ ಅಧಿಕಾರಿಗಳು ಗುಂಡು ಹಾರಿಸಿದ್ದರಿಂದ ಗ್ರಾಮದ ಮೂವರು ಹುತಾತ್ಮರಾದರು. ಮನೆಗಳಿಗೆ ಬೆಂಕಿ ಹಚ್ಚಿ, ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿ, ಬ್ರಿಟಿಷರು ದಬ್ಬಾಳಿಕೆ ಮಾಡಿದರು. ದೊಂಬಿಗೆ ಸಂಬಂಧಿಸಿದಂತೆ ಅನೇಕರನ್ನು ಬಂಧಿಸಲಾಯಿತು. ಬಹುತೇಕರು ಕಾಡಿಗೆ ಪಲಾಯನ ಮಾಡಿ ತಲೆಮರೆಸಿಕೊಂಡರು. ಬಸವಣ್ಣಪ್ಪ ಮತ್ತು ಎ.ಹಾಲಪ್ಪ ಭೂಗತರಾಗಿದ್ದುಕೊಂಡೇ ಕ್ರಾಂತಿಕಾರಿಗಳಿಗೆ ನೆರವಾಗುತ್ತಿದ್ದರು.ಸ್ವಾತಂತ್ರ್ಯ ಹೋರಾಟಗಾರ ಹುಚ್ಚರಾಯಪ್ಪ ಈಸೂರು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಬಳಿ ಮಕ್ಕಳಿಗೆ ಹೋರಾಟದ ಕಥೆ ಹೇಳುತ್ತಿರುವುದು. (ಸಂಗ್ರಹ ಚಿತ್ರ)ಐವರ ಬಲಿದಾನಆಗ ಬಂಧಿತರಾದ ಗ್ರಾಮದ 50 ಜನರನ್ನು ಬೆಂಗಳೂರು ಮತ್ತು ಶಿವಮೊಗ್ಗ ಜೈಲಿನಲ್ಲಿಟ್ಟು ವಿಚಾರಣೆಗೆ ಗುರಿಪಡಿಸಲಾಯಿತು. ಅವರಲ್ಲಿ ಅನೇಕರನ್ನು ನಿರಪರಾಧಿಗಳೆಂದು ನ್ಯಾಯಾಲಯ ಬಿಡುಗಡೆ ಮಾಡಿತು. ಉಳಿದವರಲ್ಲಿ ಗೌಡರ ಶಂಕರಪ್ಪ, ಬಡಕಳ್ಳಿ ಹಾಲಪ್ಪ, ಕೆ.ಮಲ್ಲಪ್ಪ, ಕೆ.ಗುರಪ್ಪ ಮತ್ತು ಸೂರ್ಯ ನಾರಾಯಣಾಚಾರ್ ಅವರಿಗೆ ಮರಣದಂಡನೆ ವಿಧಿಸಿ, 1943ರ ಮಾರ್ಚ್ 8ರಂದು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ನೇಣುಗಂಬಕ್ಕೇರಿಸಲಾಯಿತು. ಇತರರಿಗೆ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಯಿತು. ಹೀಗೆ ದೇಶಕ್ಕಾಗಿ ಪ್ರಾಣ ನೀಡಿ ಹುತಾತ್ಮರಾದ ಅವರ ಹೆಸರು ದೇಶದ ಸ್ವಾತಂತ್ರ್ಯದ ಇತಿಹಾಸದಲ್ಲಿ ದಾಖಲಾಗಿ, ಅಜರಾಮರವಾಗಿದೆ. ಈಗ ಅವರ ಸ್ಮರಣಾರ್ಥ ಈಸೂರಿನಲ್ಲಿ ಸ್ಮಾರಕವಿದೆ.ಶೌರ್ಯಕ್ಕೆ, ಮಹಾಕ್ರಾಂತಿಗೆ ಹೆಸರಾದ ಶಿವಮೊಗ್ಗ ಜಿಲ್ಲೆಯ ಈಸೂರು ಬ್ರಿಟಿಷ್ ಸರ್ಕಾರವನ್ನೇ ನಡುಗಿಸಿದ್ದು ಸಾಮಾನ್ಯ ವಿಷಯವಲ್ಲ. ಇಲ್ಲಿನ ಜನ ಬ್ರಿಟಿಷರ ವಿರುದ್ಧ ಹೋರಾಡಿ, ಕಾದಾಡಿ, ಮನೆ ಮಠಗಳನ್ನು ಕಳೆದುಕೊಂಡು, ಕೊನೆಗೆ ಐವರ ಬಲಿದಾನವನ್ನೂ ಮಾಡಿ ವೀರಪುತ್ರರ ನಾಡು ಎಂದು ಕರೆಸಿಕೊಂಡಿದೆ.