ದುಡಿಮೆಯ ನಡುವೆಯೇ ಶಿಕ್ಷಣ: ಬಹರೇನ್ನಲ್ಲಿ ಉನ್ನತ ಹುದ್ದೆಗೇರಿದ ಉಡುಪಿಯ ಇಕ್ಬಾಲ್
ಕಾಲೇಜು ಶುಲ್ಕಕ್ಕಾಗಿ ರಜಾದಿನಗಳಲ್ಲಿ ದುಡಿಯುತ್ತಿದ್ದ ಉಡುಪಿ ಜಿಲ್ಲೆಯ ಹೂಡೆಯ ಇಕ್ಬಾಲ್ ತೋನ್ಸೆ ಹವಾಲ್ದಾರ್, ಇಂದು ಬಹ್ರೇನ್ನ ಕಿಂಗ್ಡಮ್ ವಿಶ್ವವಿದ್ಯಾಲಯದಲ್ಲಿ ಕಾರ್ಯತಂತ್ರ, ಗುಣಮಟ್ಟ ಮತ್ತು ಆಡಳಿತದ ಹೊಣೆ ಹೊತ್ತಿದ್ದಾರೆ. ಮೂರು ದಶಕಗಳ ಅಧ್ಯಾಪನ, ಸಂಶೋಧನೆ ಮತ್ತು ಶೈಕ್ಷಣಿಕ ಆಡಳಿತದ ಅನುಭವ ಹೊಂದಿರುವ ಅವರು, ಹಣಕಾಸು ಮಾರುಕಟ್ಟೆಯಿಂದ ಕೃತಕ ಬುದ್ಧಿಮತ್ತೆ ಮತ್
ಕಾಲೇಜು ಶುಲ್ಕಕ್ಕಾಗಿ ರಜಾದಿನಗಳಲ್ಲಿ ದುಡಿಯುತ್ತಿದ್ದ ಉಡುಪಿ ಜಿಲ್ಲೆಯ ಹೂಡೆಯ ಇಕ್ಬಾಲ್ ತೋನ್ಸೆ ಹವಾಲ್ದಾರ್, ಇಂದು ಬಹ್ರೇನ್ನ ಕಿಂಗ್ಡಮ್ ವಿಶ್ವವಿದ್ಯಾಲಯದಲ್ಲಿ ಕಾರ್ಯತಂತ್ರ, ಗುಣಮಟ್ಟ ಮತ್ತು ಆಡಳಿತದ ಹೊಣೆ ಹೊತ್ತಿದ್ದಾರೆ. ಮೂರು ದಶಕಗಳ ಅಧ್ಯಾಪನ, ಸಂಶೋಧನೆ ಮತ್ತು ಶೈಕ್ಷಣಿಕ ಆಡಳಿತದ ಅನುಭವ ಹೊಂದಿರುವ ಅವರು, ಹಣಕಾಸು ಮಾರುಕಟ್ಟೆಯಿಂದ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಹಣಕಾಸಿನವರೆಗೆ ತಮ್ಮ ಸಂಶೋಧನೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ.ಉಡುಪಿ ತಾಲ್ಲೂಕಿನ ಹೂಡೆ ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಬೆಳೆದ ಇಕ್ಬಾಲ್ ತೋನ್ಸೆ ಹವಾಲ್ದಾರ್ ಅವರಿಗೆ ಉನ್ನತ ಶಿಕ್ಷಣ ಸುಲಭವಾಗಿ ದೊರೆತ ಅವಕಾಶವಾಗಿರಲಿಲ್ಲ. ತಂದೆ ದಿವಂಗತ ಅಬ್ದುಲ್ಲಾ ತೋನ್ಸೆ ಹವಾಲ್ದಾರ್ ಮತ್ತು ತಾಯಿ ರಬಿಯಾಂಬಿ ಅವರ ಕುಟುಂಬದಲ್ಲಿ ಔಪಚಾರಿಕ ಶಿಕ್ಷಣದ ಅವಕಾಶಗಳು ಸೀಮಿತವಾಗಿದ್ದವು. ಓದಿನ ಜತೆಗೆ ಕುಟುಂಬದ ಆರ್ಥಿಕ ನೆರವಿಗೂ ಕೈಜೋಡಿಸಬೇಕಾದ ಪರಿಸ್ಥಿತಿ ಇತ್ತು. ಶಾಲೆ-ಕಾಲೇಜಿನ ದಿನಗಳಲ್ಲಿ ವಾರಾಂತ್ಯ ಮತ್ತು ರಜಾದಿನಗಳಲ್ಲಿ ದುಡಿದು ಕುಟುಂಬಕ್ಕೆ ನೆರವಾಗುವುದರ ಜತೆಗೆ ತಮ್ಮ ಕಾಲೇಜು ಶುಲ್ಕವನ್ನೂ ಭರಿಸುತ್ತಿದ್ದರು. ಸಹೋದರರ ಶಿಕ್ಷಣದ ವೆಚ್ಚವನ್ನೂ ತಮ್ಮ ದುಡಿಮೆಯಿಂದ ಬಂದ ಹಣದಿಂದಲೇ ನೀಡುತ್ತಿದ್ದರು. ಇದು ಅವರಲ್ಲಿ ಸ್ವಾವಲಂಬನೆ ಮತ್ತು ಶಿಕ್ಷಣದ ಬಗ್ಗೆ ಗಟ್ಟಿಯಾದ ನಂಬಿಕೆಯನ್ನು ಬೆಳೆಸಿತು. ಸುದ್ದಿಹಾಳೆ ಬಿಕ್ಕಟ್ಟು: ಆತಂಕದಲ್ಲಿ ಪತ್ರಿಕೋದ್ಯಮದ ಭವಿಷ್ಯ, ಪರಿಹಾರವೇನು?ಹೂಡೆಯ ಸರ್ಕಾರಿ ಉರ್ದು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಆರಂಭಿಸಿದ ಅವರು, ಬಳಿಕ ಹಿಂದೂ ಪ್ರಾಥಮಿಕ ಶಾಲೆ, ಕೆಮ್ಮಣ್ಣುವಿನ ಸರ್ಕಾರಿ ಪ್ರೌಢಶಾಲೆ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಓದಿದರು. 1994ರಲ್ಲಿ ಮಿಲಾಗ್ರಿಸ್ ಕಾಲೇಜಿನಿಂದ ವಾಣಿಜ್ಯ ಪದವಿ, 1996ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯ ಸ್ನಾತಕೋತ್ತರ ಪದವಿ ಪಡೆದರು. ಹಣಕಾಸು ಮಾರುಕಟ್ಟೆ, ಹೂಡಿಕೆ ನಿರ್ಧಾರ ಮತ್ತು ವ್ಯವಹಾರ ನಿರ್ವಹಣೆಯ ಆಸಕ್ತಿ ಅವರನ್ನು ಹಣಕಾಸು ವಿಷಯದಲ್ಲಿ ಸಂಶೋಧನೆಗೆ ಕರೆದೊಯ್ದಿತು. ಮಂಗಳೂರು ವಿಶ್ವವಿದ್ಯಾಲಯದಿಂದ 2006ರಲ್ಲಿ ಹಣಕಾಸು ವಿಷಯದಲ್ಲಿ ಪಿಎಚ್ಡಿ ಪಡೆದರು. 2010ರಲ್ಲಿ ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯದಿಂದ ಹಣಕಾಸಿನಲ್ಲಿ ಎಂಬಿಎ ಪೂರ್ಣಗೊಳಿಸಿದರು.ಕರ್ನಾಟಕದಲ್ಲಿ ಆರಂಭವಾದ ಉಪನ್ಯಾಸಕ ವೃತ್ತಿ1996ರಲ್ಲಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಅವರ ಅಧ್ಯಾಪನ ವೃತ್ತಿ ಆರಂಭವಾಯಿತು. ನಂತರ ಮಂಗಳೂರಿನ ಎಸ್ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಮತ್ತು ಪಿಎ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಕಾರ್ಯನಿರ್ವಹಿಸಿದರು. ಪಿಎ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗದ ಹಣಕಾಸು ಪ್ರಾಧ್ಯಾಪಕರಾಗಿದ್ದರು.ಕರ್ನಾಟಕದ ಈ ಸಂಸ್ಥೆಗಳಲ್ಲಿನ ಅನುಭವ ಅವರ ಶೈಕ್ಷಣಿಕ ಬದುಕಿಗೆ ಅಡಿಪಾಯ ಹಾಕಿತು. ಬೋಧನೆಯ ಜತೆಗೆ ಸಂಶೋಧನೆಯಲ್ಲೂ ಆಸಕ್ತಿ ಬೆಳೆಸಿಕೊಂಡ ಅವರು, 2009ರ ಅಕ್ಟೋಬರ್ನಲ್ಲಿ ಬಹರೇನ್ನ ಕಿಂಗ್ಡಮ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿದರು. ಅಂತರರಾಷ್ಟ್ರೀಯ ಶೈಕ್ಷಣಿಕ ವಾತಾವರಣದಲ್ಲಿ ಕೆಲಸ ಮಾಡುವ ಅವಕಾಶದೊಂದಿಗೆ ವಿವಿಧ ಹಿನ್ನೆಲೆಯ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವ ಅನುಭವವೂ ದೊರೆಯಿತು.2011ರಲ್ಲಿ ಸಹ ಪ್ರಾಧ್ಯಾಪಕರಾಗಿ, 2017ರಲ್ಲಿ ಹಣಕಾಸು ವಿಭಾಗದ ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು. ಬಳಿಕ ವಿಶ್ವವಿದ್ಯಾಲಯದ ವ್ಯವಹಾರ ಆಡಳಿತ ಕಾಲೇಜಿನ ಡೀನ್ ಮತ್ತು ಲೆಕ್ಕಪತ್ರ ಹಾಗೂ ಹಣಕಾಸು ವಿಭಾಗದ ಮುಖ್ಯಸ್ಥರಾಗಿಯೂ ಜವಾಬ್ದಾರಿ ನಿರ್ವಹಿಸಿದರು. ಬೋಧನೆ ಮತ್ತು ಸಂಶೋಧನೆಯ ಜತೆಗೆ ಆಡಳಿತಾತ್ಮಕ ಹೊಣೆಗಾರಿಕೆಗಳು ಹೆಚ್ಚಾದಂತೆ ಅವರ ಕೆಲಸದ ವ್ಯಾಪ್ತಿಯೂ ವಿಸ್ತರಿಸಿತು.2013ರ ಏಪ್ರಿಲ್ನಿಂದ 2025ರ ಜುಲೈವರೆಗೆ ವಿಶ್ವವಿದ್ಯಾಲಯದ ಅಧ್ಯಕ್ಷರ ಸಹಾಯಕರಾಗಿ ಮಾನ್ಯತೆ ಮತ್ತು ಗುಣಮಟ್ಟ ಖಾತರಿ ವಿಭಾಗದ ಜವಾಬ್ದಾರಿ ವಹಿಸಿದ್ದರು. 2025ರ ಜುಲೈನಲ್ಲಿ ಅಧ್ಯಕ್ಷರ ಸಹಾಯಕರು – ಕಾರ್ಯತಂತ್ರ, ಗುಣಮಟ್ಟ ಮತ್ತು ಆಡಳಿತ ಎಂಬ ಹುದ್ದೆಗೆ ನೇಮಕಗೊಂಡರು. ಇದು ವಿಶ್ವವಿದ್ಯಾಲಯದ ಹಿರಿಯ ಆಡಳಿತದ ಪ್ರಮುಖ ಸ್ಥಾನವಾಗಿದೆ.ಗುಣಮಟ್ಟ ಮತ್ತು ಆಡಳಿತದ ಹೊಣೆಪ್ರಸ್ತುತ ಹುದ್ದೆಯಲ್ಲಿ ವಿಶ್ವವಿದ್ಯಾಲಯದ ಕಾರ್ಯತಂತ್ರದ ಆದ್ಯತೆಗಳು, ಆಡಳಿತ ವ್ಯವಸ್ಥೆ, ಶೈಕ್ಷಣಿಕ ಗುಣಮಟ್ಟ ಮತ್ತು ಸಂಸ್ಥೆಯ ಕಾರ್ಯಕ್ಷಮತೆಯನ್ನು ಸುಧಾರಿಸುವ ಕೆಲಸದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ವಿಶ್ವವಿದ್ಯಾಲಯದ ಗುರಿಗಳನ್ನು ಕಾರ್ಯತಂತ್ರದ ಯೋಜನೆಗಳು ಮತ್ತು ಕಾರ್ಯಕ್ಷಮತೆಯ ಮಾನದಂಡಗಳೊಂದಿಗೆ ಹೊಂದಿಸುವುದು, ಗುಣಮಟ್ಟದ ಪ್ರಗತಿಯನ್ನು ಪರಿಶೀಲಿಸುವುದು ಹಾಗೂ ನಿಯಂತ್ರಕ ಸಂಸ್ಥೆಗಳ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯವಿಧಾನಗಳನ್ನು ಬಲಪಡಿಸುವುದು ಅವರ ಜವಾಬ್ದಾರಿಗಳಲ್ಲಿವೆ.ಈ ಕೆಲಸದಲ್ಲಿ ಪಾರದರ್ಶಕ ನಿರ್ಧಾರ, ಹೊಣೆಗಾರಿಕೆ ಮತ್ತು ದತ್ತಾಂಶ ಆಧಾರಿತ ಯೋಜನೆಗೆ ಅವರು ಒತ್ತು ನೀಡುತ್ತಾರೆ. ಬೋಧನೆ, ಸಂಶೋಧನೆ ಮತ್ತು ಆಡಳಿತವನ್ನು ಸಮತೋಲನಗೊಳಿಸುವುದರ ಜತೆಗೆ ಬದಲಾಗುತ್ತಿರುವ ಶೈಕ್ಷಣಿಕ ಮಾನದಂಡಗಳು ಹಾಗೂ ತಂತ್ರಜ್ಞಾನದ ಬೆಳವಣಿಗೆಗಳಿಗೆ ಸಂಸ್ಥೆಯನ್ನು ಸಿದ್ಧಗೊಳಿಸುವುದು ತಮ್ಮ ವೃತ್ತಿಜೀವನದ ಪ್ರಮುಖ ಸವಾಲುಗಳಾಗಿದ್ದವು ಎಂದು ಅವರು ಹೇಳುತ್ತಾರೆ.ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಅವರ ಅನುಭವಕ್ಕೆ ಬ್ರಿಟನ್ನ ಅಡ್ವಾನ್ಸ್ ಎಚ್ಇ ಸಂಸ್ಥೆಯ ಮೂರು ಹಂತದ ಮಾನ್ಯತೆಗಳು ದೊರೆತಿವೆ. 2019ರಲ್ಲಿ ಫೆಲೋ, 2021ರಲ್ಲಿ ಸೀನಿಯರ್ ಫೆಲೋ ಮತ್ತು 2024ರ ಏಪ್ರಿಲ್ 17ರಂದು ಪ್ರಿನ್ಸಿಪಲ್ ಫೆಲೋ ಗೌರವ ಪಡೆದರು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯತಂತ್ರದ ನಾಯಕತ್ವ ಮತ್ತು ನಿರಂತರ ಪ್ರಭಾವ ಬೀರಿದವರನ್ನು ಗುರುತಿಸುವ ಮಾನ್ಯತೆ ಇದು. ಬ್ರಿಟನ್ನ ಚಾರ್ಟರ್ಡ್ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ನಿಂದ ಚಾರ್ಟರ್ಡ್ ಮ್ಯಾನೇಜರ್ ಮಾನ್ಯತೆಯನ್ನೂ ಪಡೆದಿದ್ದಾರೆ.ತಂತ್ರಜ್ಞಾನ ಮತ್ತು ವ್ಯವಹಾರ ನಿರ್ವಹಣೆಯ ಬದಲಾವಣೆಗಳಿಗೆ ತಮ್ಮನ್ನು ಸಿದ್ಧಪಡಿಸಿಕೊಳ್ಳುವ ಭಾಗವಾಗಿ 2021ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಫಿನ್ಟೆಕ್ ಇನ್ನೋವೇಷನ್ ಕಾರ್ಯಕ್ರಮ ಹಾಗೂ 2022ರಲ್ಲಿ ಎಂಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಮತ್ತು ಎಂಐಟಿಯ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಲ್ಯಾಬೊರೇಟರಿ ನಡೆಸಿದ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್: ಇಂಪ್ಲಿಕೇಷನ್ಸ್ ಫಾರ್ ಬಿಸಿನೆಸ್ ಸ್ಟ್ರಾಟಜಿ’ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದಾರೆ.ಶಿಕ್ಷಣ, ಸಂಶೋಧನೆ... ಬಹರೇನ್ನಲ್ಲಿ ಉಪ್ಪಿನಂಗಡಿಯ ಹಬೀಬ್ ಅವರ ಹೆಜ್ಜೆಗುರುತುಷೇರು ಮಾರುಕಟ್ಟೆಯಿಂದ ಕೃತಕ ಬುದ್ಧಿಮತ್ತೆಯವರೆಗೆಹವಾಲ್ದಾರ್ ಅವರ ಆರಂಭಿಕ ಸಂಶೋಧನೆ ಷೇರು ಮಾರುಕಟ್ಟೆಯ ದಕ್ಷತೆ ಮತ್ತು ಕಂಪನಿಗಳ ಲಾಭದ ಪ್ರಕಟಣೆಗಳಿಗೆ ಷೇರು ಬೆಲೆಗಳು ತೋರುವ ಪ್ರತಿಕ್ರಿಯೆ ಕುರಿತಾಗಿತ್ತು. ನಂತರ ಹಣಕಾಸು ಮಾರುಕಟ್ಟೆಯ ಏರಿಳಿತ, ಬ್ಯಾಂಕಿಂಗ್ ದಕ್ಷತೆ, ಹೂಡಿಕೆದಾರರ ನಡವಳಿಕೆ ಮತ್ತು ಹಣಕಾಸು ಅಪಾಯಗಳ ಅಧ್ಯಯನದತ್ತ ಸಂಶೋಧನೆ ವಿಸ್ತರಿಸಿತು.ಇತ್ತೀಚಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಆಧಾರಿತ ಷೇರು ಮಾರುಕಟ್ಟೆ ಮುನ್ಸೂಚನೆ, ಡಿಜಿಟಲ್ ಬ್ಯಾಂಕಿಂಗ್, ಫಿನ್ಟೆಕ್ ಬಳಕೆ ಮತ್ತು ಸುಸ್ಥಿರ ಹಣಕಾಸು ಅವರ ಸಂಶೋಧನೆಯ ಪ್ರಮುಖ ಕ್ಷೇತ್ರಗಳಾಗಿವೆ. ಷೇರು ಮಾರುಕಟ್ಟೆಯ ಮುನ್ಸೂಚನೆಗೆ ಡೀಪ್ ಲರ್ನಿಂಗ್ ಮಾದರಿಗಳ ಬಳಕೆ, ಭಾರತೀಯ ಮಾರುಕಟ್ಟೆಯ ವಹಿವಾಟಿನ ಮಾದರಿಗಳ ಅಲ್ಗಾರಿದಮಿಕ್ ವಿಶ್ಲೇಷಣೆ ಮತ್ತು ಸುಸ್ಥಿರ ಹಣಕಾಸು ಕುರಿತ ಅಧ್ಯಯನಗಳು ಅವರ ಇತ್ತೀಚಿನ ಪ್ರಕಟಣೆಗಳಲ್ಲಿ ಸೇರಿವೆ.ಹಣಕಾಸು ಕ್ಷೇತ್ರದ ಮುಂದಿನ ಬೆಳವಣಿಗೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಪ್ರಮುಖ ಪಾತ್ರ ವಹಿಸಲಿವೆ ಎಂಬುದು ಅವರ ಅಭಿಪ್ರಾಯ. ಹಣಕಾಸು ಮುನ್ಸೂಚನೆ, ಸಾಲದ ಅರ್ಹತೆ ನಿರ್ಧಾರ, ವಂಚನೆ ಪತ್ತೆ ಮತ್ತು ಅಪಾಯ ನಿರ್ವಹಣೆಯಲ್ಲಿ ಈ ತಂತ್ರಜ್ಞಾನಗಳನ್ನು ಬಳಸಬಹುದು. ಡಿಜಿಟಲ್ ಬ್ಯಾಂಕಿಂಗ್ ಮತ್ತು ಫಿನ್ಟೆಕ್ ಹಣಕಾಸು ಸೇವೆಗಳನ್ನು ಹೆಚ್ಚು ಜನರಿಗೆ ತಲುಪಿಸಬಲ್ಲವು. ಆದರೆ ಸೈಬರ್ ಸುರಕ್ಷತೆ ಮತ್ತು ಗ್ರಾಹಕರ ಹಿತಾಸಕ್ತಿಗೆ ಸಮಾನ ಆದ್ಯತೆ ನೀಡಬೇಕು. ಪರಿಸರ ಮತ್ತು ಸಾಮಾಜಿಕ ಅಂಶಗಳನ್ನು ಹೂಡಿಕೆ ನಿರ್ಧಾರಗಳಲ್ಲಿ ಪರಿಗಣಿಸುವ ಸುಸ್ಥಿರ ಹಣಕಾಸಿಗೂ ಮುಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಬರಲಿದೆ ಎಂದು ಅವರು ವಿಶ್ಲೇಷಿಸುತ್ತಾರೆ.ತಂತ್ರಜ್ಞಾನ ಅಳವಡಿಕೆಯ ವೇಗಕ್ಕಿಂತಲೂ ಅದನ್ನು ವಿಶ್ವಾಸಾರ್ಹ ದತ್ತಾಂಶ, ಜವಾಬ್ದಾರಿಯುತ ನಿರ್ಧಾರ ಮತ್ತು ಸೂಕ್ತ ಅಪಾಯ ನಿರ್ವಹಣೆಯೊಂದಿಗೆ ಬಳಸುವುದು ಮುಖ್ಯ ಎಂಬುದು ಅವರ ಒತ್ತಾಯ. ಶೈಕ್ಷಣಿಕ ಕೊಡುಗೆ2006ರಲ್ಲಿ ಎಸ್ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ನಿಂದ ಪಡೆದ ವರ್ಷದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ಅವರು ವಿಶೇಷವಾಗಿ ನೆನಪಿಸಿಕೊಳ್ಳುತ್ತಾರೆ. ಅಧ್ಯಾಪನ ವೃತ್ತಿಯ ಆರಂಭದ ಹಂತದಲ್ಲಿ ದೊರೆತ ಈ ಗೌರವ ಅವರ ಬೋಧನಾ ಕೆಲಸಕ್ಕೆ ದೊರೆತ ಮಾನ್ಯತೆಯಾಗಿತ್ತು. 2017ರಲ್ಲಿ ಕಿಂಗ್ಡಮ್ ವಿಶ್ವವಿದ್ಯಾಲಯದ ಸಂಶೋಧನಾ ಪ್ರಕಟಣೆಗಳಲ್ಲಿನ ಶ್ರೇಷ್ಠತೆಗಾಗಿ ಅಧ್ಯಕ್ಷರ ಪ್ರಶಸ್ತಿ ಹಾಗೂ 2020ರಲ್ಲಿ ವರ್ಷದ ಸಂಶೋಧಕ ಪ್ರಶಸ್ತಿ ಪಡೆದಿದ್ದಾರೆ. ಹಣಕಾಸು ಕ್ಷೇತ್ರದ ಕೊಡುಗೆಗಾಗಿ ಡಿಸ್ಟಿಂಗ್ವಿಶ್ಡ್ ಸೈಂಟಿಸ್ಟ್ಸ್ ಪ್ರಶಸ್ತಿ ಮತ್ತು ಗ್ಲೋಬಲ್ ಚಾಯ್ಸಸ್ ಪ್ರಶಸ್ತಿಯೂ ಅವರಿಗೆ ಲಭಿಸಿವೆ.ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಪರಿವರ್ತನೆಯ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳ ಜವಾಬ್ದಾರಿಯೂ ಬದಲಾಗಬೇಕಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ. ವಿಷಯಜ್ಞಾನ ನೀಡುವುದರ ಜತೆಗೆ ವಿಮರ್ಶಾತ್ಮಕ ಚಿಂತನೆ, ಡಿಜಿಟಲ್ ಕೌಶಲ, ಸಮಸ್ಯೆ ಪರಿಹಾರ, ಸೃಜನಶೀಲತೆ ಮತ್ತು ನಿರಂತರ ಕಲಿಕೆಯ ಸಾಮರ್ಥ್ಯ ಬೆಳೆಸಬೇಕು. ಪದವೀಧರರಲ್ಲಿ ಸಿದ್ಧಾಂತದ ಜ್ಞಾನವಿದ್ದರೂ ದತ್ತಾಂಶ ವಿಶ್ಲೇಷಣೆ, ಸಂವಹನ ಮತ್ತು ಪ್ರಾಯೋಗಿಕ ಅನ್ವಯದಲ್ಲಿ ಕೊರತೆ ಇರಬಹುದು. ಪಠ್ಯಕ್ರಮವನ್ನು ನಿಯಮಿತವಾಗಿ ನವೀಕರಿಸುವುದು, ಉದ್ಯಮಗಳೊಂದಿಗೆ ಸಹಯೋಗ, ಇಂಟರ್ನ್ಶಿಪ್ ಮತ್ತು ಅನುಭವಾಧಾರಿತ ಕಲಿಕೆಗೆ ಅವಕಾಶ ಕಲ್ಪಿಸುವುದು ಅಗತ್ಯ. ಕೃತಕ ಬುದ್ಧಿಮತ್ತೆ ಮಾನವನ ವಿವೇಚನೆಗೆ ಪರ್ಯಾಯವಾಗಬಾರದು; ಅದಕ್ಕೆ ಪೂರಕವಾಗಿ ಬಳಕೆಯಾಗಬೇಕು ಎಂಬುದು ಅವರ ಸ್ಪಷ್ಟ ನಿಲುವು.ಕರ್ನಾಟಕದ ಸಂಶೋಧನಾ ವಲಯದೊಂದಿಗೆ ನಂಟುಬಹರೇನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕರ್ನಾಟಕದ ಶೈಕ್ಷಣಿಕ ವಲಯದೊಂದಿಗೆ ಹವಾಲ್ದಾರ್ ಸಂಪರ್ಕ ಉಳಿಸಿಕೊಂಡಿದ್ದಾರೆ. ಮಣಿಪಾಲ, ಉಡುಪಿ, ಮಂಗಳೂರು, ಮೈಸೂರು ಮತ್ತು ಬೆಂಗಳೂರಿನ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಸಂಬಂಧ ಹೊಂದಿದ್ದಾರೆ. ಭಾರತದ 25ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಗೆ ಪಿಎಚ್ಡಿ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಆರಂಭಿಕ ಹಂತದ ಅಧ್ಯಾಪಕರು ಮತ್ತು ಸಂಶೋಧಕರಿಗೆ ಮಾರ್ಗದರ್ಶನ ನೀಡುವುದರ ಜತೆಗೆ ಸಂಶೋಧನಾ ಸಹಯೋಗದಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಹಲವು ಶಿಕ್ಷಣ ಸಂಸ್ಥೆಗಳ ಪಿಎಚ್ಡಿ ಮತ್ತು ಸಮ್ಮೇಳನಗಳ ಸಲಹಾ ಮಂಡಳಿಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.ವಿದೇಶದಲ್ಲಿರುವ ಕನ್ನಡಿಗರು ತವರು ರಾಜ್ಯದ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಕೊಡುಗೆ ನೀಡಲು ಹಲವು ಅವಕಾಶಗಳಿವೆ ಎಂಬುದು ಅವರ ಅಭಿಪ್ರಾಯ. ಅತಿಥಿ ಉಪನ್ಯಾಸ, ಸಂಶೋಧನಾ ಮಾರ್ಗದರ್ಶನ, ಜಂಟಿ ಪ್ರಕಟಣೆಗಳು ಮತ್ತು ಅಂತರರಾಷ್ಟ್ರೀಯ ಶೈಕ್ಷಣಿಕ ಸಂಪರ್ಕಗಳ ಮೂಲಕ ಕರ್ನಾಟಕದ ವಿದ್ಯಾರ್ಥಿಗಳು ಹಾಗೂ ಸಂಸ್ಥೆಗಳಿಗೆ ನೆರವಾಗಬಹುದು. ವಿದೇಶಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿವೇತನ, ಸಂಶೋಧನಾ ಇಂಟರ್ನ್ಶಿಪ್ ಮತ್ತು ಸಹಯೋಗದ ಅವಕಾಶಗಳ ಬಗ್ಗೆ ಯುವಜನರಿಗೆ ಮಾಹಿತಿ ನೀಡುವುದೂ ಮುಖ್ಯ ಎನ್ನುತ್ತಾರೆ ಅವರು.ಪ್ರಜಾವಾಣಿ ಕರುನಾಡೋತ್ಸವ| ಕುವೆಂಪು ನೆನಪುಗಳಿರುವ ಕುಪ್ಪಳ್ಳಿಯ ‘ಕವಿಮನೆ’