ಇಂದು ಹಾಸನಾಂಬ ದೇವಿ ದರ್ಶನಕ್ಕೆ ಸಿಎಂ ಡಿಕೆಶಿ, ಕೇಂದ್ರ ಸಚಿವ ಹೆಚ್ಡಿಕೆ ಆಗಮನ
-ಕುಟುಂಬ ಸಮೇತರಾಗಿ ದರ್ಶನ ಪಡೆಯಲಿರುವ ಸಿಎಂ ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು ಹತ್ತನೇ ದಿನ. ಭಾನುವಾರದ ರಜಾ ದಿನವಾಗಿರುವುದರಿಂದ ದೇವಿಯ ದರ್ಶನ ಪಡೆಯಲು ಭಕ್ತಸಾಗರವೇ ಹರಿದುಬರುತ್ತಿದೆ. ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್

-ಕುಟುಂಬ ಸಮೇತರಾಗಿ ದರ್ಶನ ಪಡೆಯಲಿರುವ ಸಿಎಂ ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು ಹತ್ತನೇ ದಿನ. ಭಾನುವಾರದ ರಜಾ ದಿನವಾಗಿರುವುದರಿಂದ ದೇವಿಯ ದರ್ಶನ ಪಡೆಯಲು ಭಕ್ತಸಾಗರವೇ ಹರಿದುಬರುತ್ತಿದೆ. ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಇಂದು ದೇವಿಯ ದರ್ಶನ ಪಡೆಯಲಿದ್ದಾರೆ. ದರ್ಶನ ಪಡೆಯಲಿರುವ ಮುಖ್ಯಮಂತ್ರಿ ಡಿಕೆಶಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಹಾಸನಾಂಬ ದೇವಿಯ ದರ್ಶನ ಪಡೆಯಲಿದ್ದಾರೆ. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 10.45ರ ಸುಮಾರಿಗೆ ಹಾಸನದ ಬೂವನಹಳ್ಳಿ ಹೆಲಿಪ್ಯಾಡ್ಗೆ ಆಗಮಿಸಲಿರುವ ಅವರು, ಬಳಿಕ ಹಾಸನಾಂಬ ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆಯಲಿದ್ದಾರೆ. ನಂತರ ಬೆಳಗ್ಗೆ 11.30ಕ್ಕೆ ಹಾಸನ ಮಹಾನಗರಪಾಲಿಕೆ ವಸ್ತುಪ್ರದರ್ಶನ ಮೈದಾನದಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನ ಹಾಗೂ ಹಾಸನಾಂಬ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.20ಕ್ಕೆ ಹಾಸನ ತಾಲ್ಲೂಕಿನ ಬೀಕನಹಳ್ಳಿ ಗ್ರಾಮದ ಪುರದಮ್ಮ ದೇವಾಲಯಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ 1.25ಕ್ಕೆ ಬೂವನಹಳ್ಳಿ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಪ್ರತಿವರ್ಷ ಹಾಸನಾಂಬ ದೇವಿಯ ದರ್ಶನ ಪಡೆಯುವ ಸಂಪ್ರದಾಯ ಹೊಂದಿರುವ ಡಿ.ಕೆ. ಶಿವಕುಮಾರ್ ಅವರು, ಈ ಹಿಂದೆಯೂ ಪತ್ನಿ ಉಷಾ ಅವರೊಂದಿಗೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದರು. ಡಿಕೆಶಿ ಜೈಲಿನಲ್ಲಿದ್ದ ಸಂದರ್ಭದಲ್ಲಿ ಅವರ ಪತ್ನಿ ಉಷಾ ಅವರು ಹಾಸನಾಂಬ ದೇವಿಯ ದರ್ಶನ ಪಡೆದಿದ್ದರು. ದರ್ಶನಕ್ಕೆ ಹೆಚ್ಡಿಕೆ ಆಗಮನ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕೂಡ ಇಂದು ಹಾಸನಾಂಬ ದೇವಿಯ ದರ್ಶನ ಪಡೆಯಲಿದ್ದಾರೆ. ಬೆಳಗ್ಗೆ 9 ಗಂಟೆಗೆ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯಲಿರುವ ಅವರು, ನಿನ್ನೆಯೇ ಹಾಸನಕ್ಕೆ ಆಗಮಿಸಿ ತಾಯಿ ಚೆನ್ನಮ್ಮ ಅವರ ಸಮಾಧಿಗೆ ಪೂಜೆ ಸಲ್ಲಿಸಿ ವಾಸ್ತವ್ಯ ಹೂಡಿದ್ದಾರೆ. ದೇವಿಯ ದರ್ಶನದ ಬಳಿಕ ಶಾಸಕ ಹೆಚ್.ಪಿ ಸ್ವರೂಪ್ರಕಾಶ್ ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ, ಬೆಂಗಳೂರಿಗೆ ತೆರಳಲಿದ್ದಾರೆ. ಭಾನುವಾರ ಭಕ್ತಸಾಗರ ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು ಹತ್ತನೇ ದಿನವಾಗಿದ್ದು, ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಭಾನುವಾರದ ರಜಾ ದಿನವಾಗಿರುವುದರಿಂದ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ದೇವಾಲಯದ ಆವರಣದಲ್ಲಿ ಧರ್ಮದರ್ಶನದ ಸರತಿ ಸಾಲು ಭಕ್ತರಿಂದ ತುಂಬಿ ತುಳುಕುತ್ತಿದೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇನ್ನೊಂದೆಡೆ 1,000 ಹಾಗೂ 300 ರೂಪಾಯಿ ವಿಶೇಷ ದರ್ಶನದ ಸರತಿಯಲ್ಲಿ ಕಡಿಮೆ ಸಂಖ್ಯೆಯ ಭಕ್ತರು ಕಂಡುಬರುತ್ತಿದ್ದಾರೆ. ಇಂದು ಕೂಡ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋಟೋಕಾಲ್ ಮೂಲಕ ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ.