ಕೋಲಾರ| ಯುವ ಪ್ರತಿಭೆಗಳಿಗೆ ಯುವಜನೋತ್ಸವ ವೇದಿಕೆ: ಎಡಿಸಿ ಎಸ್.ಎಂ.ಮಂಗಳಾ
ಕೋಲಾರ: ಯುವ ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸಲು ಜಿಲ್ಲಾ ಮಟ್ಟದ ಯುವಜನೋತ್ಸವ ಒಂದು ಉತ್ತಮ ವೇದಿಕೆಯಾಗಿದೆ. ಎಲ್ಲರೂ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ ತಿಳಿಸಿದರು.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ

ಕೋಲಾರ: ಯುವ ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸಲು ಜಿಲ್ಲಾ ಮಟ್ಟದ ಯುವಜನೋತ್ಸವ ಒಂದು ಉತ್ತಮ ವೇದಿಕೆಯಾಗಿದೆ. ಎಲ್ಲರೂ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ ತಿಳಿಸಿದರು.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಭಾರತ್ ಹಾಗೂ ಜಿಲ್ಲಾ ಯುವ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ-2026 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ಮಾತನಾಡಿ, ‘ಯುವಜನೋತ್ಸವದಲ್ಲಿ 19 ರಿಂದ 29ರ ವಯೋಮಾನದ ಯುವ ಪ್ರತಿಭೆಗಳು ಭಾಗವಹಿಸಿದ್ದೀರಿ. ತಮ್ಮ ಪ್ರತಿಭೆ ಪ್ರದರ್ಶಿಸಲು ಇದೊಂದು ಉತ್ತಮ ಅವಕಾಶ. ಕಲಾಸಕ್ತರನ್ನು ಒಗ್ಗೂಡಿಸುವ ಪ್ರಯತ್ನ ನಡೆದಿದೆ. ಇಲ್ಲಿ ಬಹುಮಾನ ಗೆಲ್ಲುವ ಯುವಜನರಿಗೆ ಮುಂದೆ ಇನ್ನೂ ಹೆಚ್ಚಿನ ಅವಕಾಶಗಳು ಬರಲಿದೆ’ ಎಂದರು.ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮುನಿಸ್ವಾಮಿ ಮಾತನಾಡಿದರು.ಕಾರ್ಯಕ್ರಮದಲ್ಲಿ ನೃತ್ಯ, ಜನಪದ ಗೀತೆ, ಚಿತ್ರಕಲೆ, ಕವಿತೆ, ವಿಜ್ಞಾನ ಮೇಳ, ಬೀದಿ ನಾಟಕ ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಕೆ.ಎನ್.ಕವನಾ, ತಹಶೀಲ್ದಾರ್ ನಾಗವೇಣಿ, ಕೈಗಾರಿಕೆ ಸಂಸ್ಥೆಯ ಗೋಪಾಲ್, ಕಲಾವಿದ ಮತ್ತಿಕುಂಟೆ ಕೃಷ್ಣ ಇದ್ದರು.ರೇಣುಕಾ ಕಾರ್ಯಕ್ರಮ ನಿರೂಪಿಸಿದರು. ಹಲವು ತಂಡಗಳು ಸಾಂಸ್ಕೃತಿ ಕಾರ್ಯಕ್ರಮ ನೀಡಿ ಸಭಿಕರನ್ನು ರಂಜಿಸಿದವು.261108-18-1040304590