ಒಂದೂವರೆ ದಶಕದಿಂದ ಕನ್ನಡ ಮನಸುಗಳನ್ನು ಬೆಸೆಯುತ್ತಿರುವ ‘ಕೊರಿಯಾ ಕನ್ನಡ ಕೂಟ’
ಊರು ಬಿಟ್ಟು ಹೊರಡುವಾಗ ಎಲ್ಲವನ್ನೂ ಜೊತೆಯಲ್ಲಿ ಕೊಂಡೊಯ್ಯಲು ಸಾಧ್ಯವಿಲ್ಲ. ಆದರೆ ಆಡಿದ ಭಾಷೆ, ಬಾಲ್ಯದ ನೆನಪು, ಬೆಳೆದ ನೆಲದ ನಂಟು ಮತ್ತು ಹಬ್ಬಗಳ ಸಂಭ್ರಮ ನಮ್ಮೊಳಗೇ ಉಳಿಯುತ್ತವೆ. ದೂರದ ದಕ್ಷಿಣ ಕೊರಿಯಾದಲ್ಲಿ ಅಪರಿಚಿತರ ನಡುವೆ ‘ನಮಸ್ಕಾರ, ನೀವು ಕನ್ನಡದವರಾ?’ ಎಂಬ ಮಾತು ಕೇಳಿದಾಗ ಈ ನೆನಪುಗಳೆಲ್ಲ ಒಮ್ಮೆಲೆ ಜೀವ ತಳೆಯುತ್ತವೆ. ತಾಯ್ನಾಡು ಸಾವಿರಾರು ಕಿಲೋಮೀಟರ್ ದ

ಊರು ಬಿಟ್ಟು ಹೊರಡುವಾಗ ಎಲ್ಲವನ್ನೂ ಜೊತೆಯಲ್ಲಿ ಕೊಂಡೊಯ್ಯಲು ಸಾಧ್ಯವಿಲ್ಲ. ಆದರೆ ಆಡಿದ ಭಾಷೆ, ಬಾಲ್ಯದ ನೆನಪು, ಬೆಳೆದ ನೆಲದ ನಂಟು ಮತ್ತು ಹಬ್ಬಗಳ ಸಂಭ್ರಮ ನಮ್ಮೊಳಗೇ ಉಳಿಯುತ್ತವೆ. ದೂರದ ದಕ್ಷಿಣ ಕೊರಿಯಾದಲ್ಲಿ ಅಪರಿಚಿತರ ನಡುವೆ ‘ನಮಸ್ಕಾರ, ನೀವು ಕನ್ನಡದವರಾ?’ ಎಂಬ ಮಾತು ಕೇಳಿದಾಗ ಈ ನೆನಪುಗಳೆಲ್ಲ ಒಮ್ಮೆಲೆ ಜೀವ ತಳೆಯುತ್ತವೆ. ತಾಯ್ನಾಡು ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದರೂ, ಆ ಕ್ಷಣಕ್ಕೆ ಅದರ ಅಂತರ ಕಡಿಮೆಯಾದ ಅನುಭವವಾಗುತ್ತದೆ.ಶಿಕ್ಷಣ, ಸಂಶೋಧನೆ ಮತ್ತು ಉದ್ಯೋಗಕ್ಕಾಗಿ ದಕ್ಷಿಣ ಕೊರಿಯಾದ ವಿವಿಧ ನಗರಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಭಾಷೆ ಮತ್ತು ಸಂಸ್ಕೃತಿಯ ನಂಟಿನಲ್ಲಿ ಬೆಸೆಯುತ್ತಿರುವುದು ‘ಕೊರಿಯಾ ಕನ್ನಡ ಕೂಟ (ಕೆಕೆಕೆ)’. ಬಿಡುವಿಲ್ಲದ ವೃತ್ತಿಜೀವನದ ನಡುವೆಯೂ ಕನ್ನಡದಲ್ಲಿ ಮನಬಿಚ್ಚಿ ಮಾತನಾಡಲು, ಹಬ್ಬಗಳನ್ನು ಒಟ್ಟಾಗಿ ಆಚರಿಸಲು, ಊರಿನ ನೆನಪುಗಳನ್ನು ಹಂಚಿಕೊಳ್ಳಲು ಈ ಕೂಟ ಒಂದು ಆತ್ಮೀಯ ವೇದಿಕೆಯಾಗಿದೆ. ಇಲ್ಲಿ ಪರಿಚಯವಾಗುವವರ ಮಾತುಗಳು ಬಹುಬೇಗ ಅವರವರ ಊರು, ಹಬ್ಬ, ಆಹಾರ ಮತ್ತು ಬಾಲ್ಯದ ನೆನಪುಗಳತ್ತ ಹೊರಳುತ್ತವೆ. ಕರ್ನಾಟಕದ ವಿವಿಧ ಭಾಗಗಳಿಂದ ಬಂದವರು ದೂರದ ಕೊರಿಯಾದಲ್ಲಿ ಒಂದೆಡೆ ಸೇರುತ್ತಾರೆ. ಅಪರಿಚಿತ ಮುಖಗಳು ಪರಿಚಯವಾಗಿ, ಪರಿಚಯಗಳು ಸ್ನೇಹವಾಗಿ, ಸ್ನೇಹಗಳು ಒಂದು ಪರಿವಾರದ ಭಾವವಾಗಿ ಬೆಳೆಯುತ್ತವೆ.ವೃತ್ತಿಬದುಕಿನ ಜತೆಗೆ ಕನ್ನಡದ ನಂಟನ್ನೂ ಉಳಿಸಿಕೊಳ್ಳಬೇಕೆಂಬ ಆಸೆಯಿಂದ ಆರಂಭವಾದ ಈ ಪ್ರಯತ್ನಕ್ಕೆ ಈಗ ಒಂದೂವರೆ ದಶಕದ ಅನುಭವ. ಈ ಪಯಣದಲ್ಲಿ ರಾಜ್ಯೋತ್ಸವದ ಸಂಭ್ರಮವಿದೆ; ಹಬ್ಬಗಳ ಒಡನಾಟವಿದೆ; ಪ್ರವಾಸದ ಖುಷಿಯಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಹೊಸ ನೆಲದಲ್ಲಿ ತಮ್ಮ ಭಾಷೆಯವರನ್ನು ಕಂಡುಕೊಂಡ ನೆಮ್ಮದಿಯಿದೆ.ಪರಿಚಯದಿಂದ ಬೆಳೆದ ಪರಿವಾರಕೊರಿಯಾ ಕನ್ನಡ ಕೂಟದ ಆರಂಭದ ಪ್ರಯತ್ನಗಳು 2011–12ರ ಅವಧಿಯಲ್ಲಿ ನಡೆದವು. ನವನೀತ್, ರಾಹುಲ್ ಗೌಡ ಮತ್ತು ಬ್ರಿಜೇಶ್ ಅವರು ಕೊರಿಯಾದಲ್ಲಿದ್ದ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಚಾಲನೆ ನೀಡಿದರು. ರಾಜ್ಯೋತ್ಸವ, ಕುಟುಂಬಗಳ ಸಮ್ಮಿಲನ, ಪ್ರವಾಸ ಮತ್ತು ಪರ್ವತಾರೋಹಣದಂತಹ ಕಾರ್ಯಕ್ರಮಗಳು ವಿವಿಧ ನಗರಗಳಲ್ಲಿ ನೆಲೆಸಿದ್ದ ಕನ್ನಡಿಗರ ನಡುವೆ ಸಂಪರ್ಕ ಬೆಳೆಸಿದವು. ಹೀಗೆ ಕೆಲಸ ಮತ್ತು ಮನೆಯ ನಡುವಿನ ದಿನಚರಿಯಲ್ಲಿ ಕನ್ನಡದ ಒಡನಾಟಕ್ಕೂ ಜಾಗ ಸಿಕ್ಕಿತು.ವಿದೇಶದಲ್ಲಿ ಸ್ವಯಂಸೇವೆಯ ಆಧಾರದಲ್ಲಿ ಒಂದು ಸಂಘಟನೆಯನ್ನು ನಿರಂತರವಾಗಿ ಮುನ್ನಡೆಸುವುದು ಸುಲಭವಲ್ಲ. ಸದಸ್ಯರ ಉದ್ಯೋಗದ ಒತ್ತಡ, ಸ್ಥಳಾಂತರ ಮತ್ತು ವೈಯಕ್ತಿಕ ಹೊಣೆಗಾರಿಕೆಗಳು ಸಂಘಟನೆಯ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತವೆ. ಕೊರಿಯಾ ಕನ್ನಡ ಕೂಟದ ಪಯಣದಲ್ಲಿಯೂ ಚಟುವಟಿಕೆಗಳು ಹೆಚ್ಚು ಸಕ್ರಿಯವಾಗಿದ್ದ ದಿನಗಳಿವೆ; ಕಾರ್ಯಕ್ರಮಗಳು ಸೀಮಿತಗೊಂಡ ಅವಧಿಗಳೂ ಇವೆ. ಇಂತಹ ಸಂದರ್ಭಗಳಲ್ಲಿ ದಿವ್ಯಾ, ದಯಾನಂದ, ಇಕ್ಬಾಲ್ ಖಾಜಿ ಮತ್ತು ಕಿಶೋರ್ ಸೇರಿದಂತೆ ಹಲವು ಸದಸ್ಯರು ಕಾರ್ಯಕ್ರಮಗಳನ್ನು ಆಯೋಜಿಸಿ, ಕನ್ನಡಿಗರ ನಡುವಿನ ಸಂಪರ್ಕದ ಕೊಂಡಿ ಕಳಚದಂತೆ ನೋಡಿಕೊಂಡರು. ಒಬ್ಬರ ಪ್ರಯತ್ನಕ್ಕೆ ಮತ್ತೊಬ್ಬರು ಕೈಜೋಡಿಸುತ್ತಾ ಬಂದಿರುವುದೇ ಕೂಟದ ಬೆಳವಣಿಗೆಯ ಹಿಂದಿನ ಶಕ್ತಿ.ಕೋವಿಡ್ ಅವಧಿಯಲ್ಲಿ ಮುಖಾಮುಖಿ ಭೇಟಿಗಳಿಗೆ ವಿರಾಮ ಬಿದ್ದರೂ ಕನ್ನಡದ ಒಡನಾಟಕ್ಕೆ ಅಡ್ಡಿಯಾಗಲಿಲ್ಲ. 2020–21ರಲ್ಲಿ ರಾಜ್ಯೋತ್ಸವವನ್ನು ಆನ್ಲೈನ್ ವೇದಿಕೆಯಲ್ಲಿ ಆಚರಿಸಲಾಯಿತು. ಹಿರಿಯ ನಟ ಶ್ರೀನಾಥ್ ಮತ್ತು ನಿರ್ದೇಶಕ ಟಿ.ಎಸ್. ನಾಗಾಭರಣ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದು, ದೂರದಲ್ಲಿದ್ದ ಕನ್ನಡಿಗರ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.ಕನ್ನಡ ಚಿತ್ರಗಳ ಪ್ರದರ್ಶನದ ಮೂಲಕವೂ ಈ ನಂಟು ವಿಸ್ತರಿಸಿತು. ‘ಕೆಜಿಎಫ್: ಚಾಪ್ಟರ್ 2’ ಮತ್ತು ‘ಕಾಂತಾರ’ ಚಿತ್ರಗಳು ದಕ್ಷಿಣ ಕೊರಿಯಾದಲ್ಲಿ ಪ್ರದರ್ಶನಗೊಳ್ಳುವಲ್ಲಿ ಕೂಟದ ಸದಸ್ಯರು ಶ್ರಮಿಸಿದರು. ದೂರದ ದೇಶದ ಚಿತ್ರಮಂದಿರದಲ್ಲಿ ಕನ್ನಡದ ಸಂಭಾಷಣೆ ಕೇಳುತ್ತಾ, ತಮ್ಮ ನೆಲದ ಕಥೆಗಳನ್ನು ಒಟ್ಟಿಗೆ ನೋಡುವ ಅವಕಾಶ ಅಲ್ಲಿನ ಕನ್ನಡಿಗರಿಗೆ ದೊರೆಯಿತು.ಹಬ್ಬ, ಪ್ರವಾಸ, ಕಲೆಗಳ ಒಡನಾಟಹಿಂದಿನ ವರ್ಷಗಳಲ್ಲಿ ಹಾಕಿದ ಬುನಾದಿಯ ಮೇಲೆ 2025ರಿಂದ ಕೂಟದ ಚಟುವಟಿಕೆಗಳು ಮತ್ತೆ ಹೊಸ ಚೈತನ್ಯ ಪಡೆದುಕೊಂಡಿವೆ. ಕೇಶವಾನಂದ ಪ್ರಭು ಮತ್ತು ಶಂಭುಲಿಂಗ ಅರಳೇಕಲ್ಲು ಅವರ ನೇತೃತ್ವದಲ್ಲಿ ಹಿರಿಯರು ಹಾಗೂ ಹೊಸ ಸದಸ್ಯರ ಸಹಭಾಗಿತ್ವದೊಂದಿಗೆ ಕಾರ್ಯಕ್ರಮಗಳು ಮುಂದುವರಿದಿವೆ.2025ರ ನವೆಂಬರ್ನಲ್ಲಿ ನಡೆದ ರಾಜ್ಯೋತ್ಸವದಲ್ಲಿ ಕನ್ನಡ ಭಾಷೆ, ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ನಡೆದವು. ಬಳಿಕ 2026ರ ಫೆಬ್ರುವರಿಯಲ್ಲಿ ಚೋನಾನ್ನಲ್ಲಿ ಶಿವರಾತ್ರಿ ಆಚರಣೆ, ಮಾರ್ಚ್ನಲ್ಲಿ ಸುವಾನ್ನಲ್ಲಿ ಯುಗಾದಿ ಸಂಭ್ರಮ ನಡೆಯಿತು. ವಿವಿಧ ನಗರಗಳಿಂದ ಆಗಮಿಸಿದ ಕುಟುಂಬಗಳು ಹಬ್ಬದ ಸಂತೋಷವನ್ನು ಹಂಚಿಕೊಂಡವು. ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಸಾಂಪ್ರದಾಯಿಕ ಊಟ ಮತ್ತು ಆತ್ಮೀಯ ಮಾತುಕತೆಗೂ ಅವಕಾಶವಿತ್ತು. ಏಪ್ರಿಲ್ನಲ್ಲಿ ನಡೆದ ಬುಸಾನ್–ಗೋಜೇ ಪ್ರವಾಸವು ಸದಸ್ಯರ ನಡುವಿನ ಒಡನಾಟವನ್ನು ಮತ್ತಷ್ಟು ಗಟ್ಟಿಗೊಳಿಸಿತು.ಮೇ ತಿಂಗಳಲ್ಲಿ ಭಾರತದ ರಾಯಭಾರ ಕಚೇರಿ ಆಯೋಜಿಸಿದ್ದ ‘ಇಂಡಿಯಾ ಡೇ’ ಕಾರ್ಯಕ್ರಮವು ಕರ್ನಾಟಕದ ಸಂಸ್ಕೃತಿಯನ್ನು ವಿಶಾಲ ಪ್ರೇಕ್ಷಕವರ್ಗಕ್ಕೆ ಪರಿಚಯಿಸುವ ಅವಕಾಶ ಕಲ್ಪಿಸಿತು. ಕೂಟದ ಸದಸ್ಯರು ಕೋಲಾಟ, ಕೊಳಲುವಾದನ, ಭರತನಾಟ್ಯ ಮತ್ತು ಕರ್ನಾಟಕದ ಸಾಂಪ್ರದಾಯಿಕ ಉಡುಗೆಗಳ ಪ್ರದರ್ಶನದಲ್ಲಿ ಭಾಗವಹಿಸಿದರು. ಕನ್ನಡಿಗರೊಳಗಿನ ಸಾಂಸ್ಕೃತಿಕ ಸಂಭ್ರಮವು ಕೊರಿಯಾದ ಜನರು ಹಾಗೂ ಇತರ ದೇಶಗಳ ಸಮುದಾಯಗಳೊಂದಿಗೂ ಹಂಚಿಕೊಳ್ಳುವ ಅನುಭವವಾಗಿ ವಿಸ್ತರಿಸಿತು.ಆಗಸ್ಟ್ನಲ್ಲಿ ಸಿಯೋಲ್ನ ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲೂ ಕೂಟದ ಸದಸ್ಯರು ಭಾಗವಹಿಸಿದರು. ಕೊರಿಯಾದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಾರತೀಯರೊಂದಿಗೆ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ, ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು. ಕನ್ನಡದ ಒಡನಾಟದ ಜತೆಗೆ ಕೊರಿಯಾದಲ್ಲಿರುವ ವಿಶಾಲ ಭಾರತೀಯ ಸಮುದಾಯದೊಂದಿಗೆ ಬೆರೆಯಲು ಈ ಕಾರ್ಯಕ್ರಮ ಅವಕಾಶ ನೀಡಿತು.ಸೆಪ್ಟೆಂಬರ್ನಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಕುಟುಂಬ ಸಮೇತರಾಗಿ ಸೇರಿ ಆಚರಿಸಲಾಯಿತು. ಕೃಷ್ಣನ ಅಲಂಕಾರ, ಪೂಜೆ, ಭಜನೆ ಮತ್ತು ಸಾಂಪ್ರದಾಯಿಕ ಉಡುಗೆಗಳೊಂದಿಗೆ ಹಬ್ಬಕ್ಕೆ ಕಳೆ ತುಂಬಿತು. ಮಕ್ಕಳ ಉತ್ಸಾಹ ಮತ್ತು ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸಿದ ಸಂಭ್ರಮ ಊರಿನ ವಾತಾವರಣವನ್ನು ನೆನಪಿಸಿತು. ಹಿರಿಯರಿಗೆ ತಾಯ್ನಾಡಿನ ನೆನಪುಗಳನ್ನು ಹಂಚಿಕೊಳ್ಳುವ ಅವಕಾಶವಾದರೆ, ಮಕ್ಕಳಿಗೆ ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಿಕೊಳ್ಳುವ ಸಂದರ್ಭವೂ ಆಯಿತು.ಅಕ್ಟೋಬರ್ನಲ್ಲಿ ಸಿಯೋಲ್ನ ಭಾರತೀಯ ರಾಯಭಾರ ಕಚೇರಿಯಲ್ಲಿ ಕರ್ನಾಟಕದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರೊಂದಿಗೆ ಕೂಟದ ಸದಸ್ಯರು ಸಂವಾದ ನಡೆಸಿದರು. ಕರ್ನಾಟಕ ಮತ್ತು ದಕ್ಷಿಣ ಕೊರಿಯಾ ನಡುವೆ ಶಿಕ್ಷಣ, ಸಂಶೋಧನೆ, ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳ ಕುರಿತು ಚರ್ಚಿಸಲಾಯಿತು. ಕೊರಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗರ ಜ್ಞಾನ ಮತ್ತು ವೃತ್ತಿಪರ ಅನುಭವವನ್ನು ಕರ್ನಾಟಕದ ಅಭಿವೃದ್ಧಿಯೊಂದಿಗೆ ಬೆಸೆಯುವ ಆಶಯಕ್ಕೆ ಈ ಭೇಟಿ ವೇದಿಕೆಯಾಯಿತು.ಹಲವು ಕೈಗಳ ಒಗ್ಗಟ್ಟಿನ ದುಡಿಮೆಕೂಟದ ಕಾರ್ಯಕ್ರಮಗಳ ಹಿಂದೆ ಹಲವು ಸದಸ್ಯರ ಸಮಯ, ಶ್ರಮ ಮತ್ತು ಸಹಕಾರವಿದೆ. ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಮುಂದುವರಿಸಲು ರೂಪಿಸಿರುವ ಕಾರ್ಯಕಾರಿ ತಂಡಕ್ಕೆ ಹಿರಿಯರಾದ ನಾಗರಾಜ ಬಸವೇಗೌಡ, ವಿಶ್ವನಾಥ್ ಮತ್ತು ನವನೀತ್ ಸಲಹೆ ಹಾಗೂ ಮಾರ್ಗದರ್ಶನ ನೀಡುತ್ತಿದ್ದಾರೆ.ಶಂಭುಲಿಂಗ ಅರಳೇಕಲ್ಲು ಖಜಾಂಚಿಯಾಗಿ, ಕೇಶವಾನಂದ ಪ್ರಭು ಭಾರತೀಯ ರಾಯಭಾರ ಕಚೇರಿಯೊಂದಿಗಿನ ಸಮನ್ವಯದ ಹೊಣೆ ಹೊತ್ತಿದ್ದಾರೆ. ರಮ್ಯಾ ಗೌಡ ಮತ್ತು ಲೀನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದಾರೆ. ಇಕ್ಬಾಲ್ ಖಾಜಿ ಮತ್ತು ಮಂಜುನಾಥ್ ಕಾರ್ಯಕ್ರಮಗಳ ಯೋಜನೆ ಹಾಗೂ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರೀಡಾ ಚಟುವಟಿಕೆಗಳ ಸಂಯೋಜನೆಯನ್ನೂ ಇಕ್ಬಾಲ್ ನೋಡಿಕೊಳ್ಳುತ್ತಿದ್ದಾರೆ. ಮಹೇಶ್ ಇಟಗಿ ಮಾಧ್ಯಮ ಸಂವಹನದ ಜವಾಬ್ದಾರಿ ವಹಿಸಿಕೊಂಡಿದ್ದರೆ, ಅನುಷಾ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮಾಡುತ್ತಿದ್ದಾರೆ. ಸೌಮ್ಯಶ್ರೀ ಮತ್ತು ಶಿಲ್ಪಾ ಸೇರಿದಂತೆ ಕಾರ್ಯಕಾರಿ ತಂಡದ ಇತರ ಸದಸ್ಯರೂ ಆಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.ಉದ್ಯೋಗ ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆಯೂ ಇವರೆಲ್ಲರೂ ಕೂಟಕ್ಕಾಗಿ ಸಮಯ ಮೀಸಲಿಡುತ್ತಿದ್ದಾರೆ. ಯಾವುದೇ ಒಂದು ವ್ಯಕ್ತಿಯ ಪ್ರಯತ್ನಕ್ಕಿಂತ ಸದಸ್ಯರ ಒಗ್ಗಟ್ಟು ಮತ್ತು ಸ್ವಯಂಸೇವೆಯೇ ಸಂಘಟನೆಯ ಚಟುವಟಿಕೆಗಳಿಗೆ ಆಧಾರವಾಗಿದೆ.ದೇಗುವಿನತ್ತ 2026ರ ರಾಜ್ಯೋತ್ಸವದ ಹೆಜ್ಜೆಸಾಮಾನ್ಯವಾಗಿ ಸಿಯೋಲ್ ಮತ್ತು ಸುವಾನ್ ಸುತ್ತಮುತ್ತ ನಡೆಯುತ್ತಿದ್ದ ಕೊರಿಯಾ ಕನ್ನಡ ಕೂಟದ ರಾಜ್ಯೋತ್ಸವ ಈ ಬಾರಿ ದೇಗು ನಗರದಲ್ಲಿ ನಡೆಯಲಿದೆ. ದೇಗು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ಕನ್ನಡಿಗರೂ ಸುಲಭವಾಗಿ ಭಾಗವಹಿಸಬೇಕು ಎಂಬುದು ಈ ಆಯೋಜನೆಯ ಉದ್ದೇಶ.ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಸಿಯೋಲ್ನಿಂದ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಹೀಗಾಗಿ ರಾಜ್ಯೋತ್ಸವದ ಸಂಭ್ರಮ ವೇದಿಕೆಯಲ್ಲಿ ಆರಂಭವಾಗುವ ಮೊದಲೇ ಪ್ರಯಾಣದಲ್ಲಿಯೇ ಕಳೆಗಟ್ಟಲಿದೆ. ಕನ್ನಡದ ಮಾತು, ನಗು, ಹರಟೆಯೊಂದಿಗೆ ನಮ್ಮವರನ್ನು ಭೇಟಿಯಾಗಲು ಹೊರಡುವುದೇ ಒಂದು ಸಂಭ್ರಮ; ಎಲ್ಲರೂ ಸೇರಿ ದೂರದ ಊರಿಗೆ ಪ್ರಯಾಣಿಸುವುದೇ ಒಂದು ಪುಟ್ಟ ಜಾತ್ರೆ.ಕೆಲವು ವಿಶೇಷ ಅತಿಥಿಗಳು ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಿ ಮಾತನಾಡಲಿದ್ದು, ಇನ್ನು ಕೆಲವರು ಆನ್ಲೈನ್ ಮೂಲಕ ಶುಭಾಶಯ ಹಂಚಿಕೊಳ್ಳಲಿದ್ದಾರೆ. ಮಧ್ಯಾಹ್ನ ಕರ್ನಾಟಕದ ಊಟದ ಸವಿಯೊಂದಿಗೆ, ಸಂಜೆ ಚಹಾ ಮತ್ತು ತಿಂಡಿಯ ನಡುವೆ ದಿನವಿಡೀ ಒಡನಾಡುವ ಅವಕಾಶವೂ ಇರಲಿದೆ.ಹೊರನಾಡಿನಲ್ಲಿ ಭಾಷೆಯ ನಂಟು ಉಳಿಯುವುದು ಇಂತಹ ಬದುಕಿನ ಅನುಭವಗಳ ಮೂಲಕವೂ ಹೌದು. ಕನ್ನಡದಲ್ಲಿ ಹೊಸ ಸ್ನೇಹಗಳು ಹುಟ್ಟಿದಾಗ, ಮಕ್ಕಳು ಹಿರಿಯರೊಂದಿಗೆ ಬೆರೆತಾಗ, ಊರಿನ ಹಬ್ಬವನ್ನು ದೂರದ ನೆಲದಲ್ಲಿ ಒಟ್ಟಾಗಿ ಆಚರಿಸಿದಾಗ ಭಾಷೆಯೊಂದಿಗಿನ ಸಂಬಂಧಕ್ಕೆ ಹೊಸ ಜೀವ ಬರುತ್ತದೆ. ಕೊರಿಯಾ ಕನ್ನಡ ಕೂಟದ ಒಂದೂವರೆ ದಶಕದ ಪಯಣದಲ್ಲಿ ಇಂತಹ ಸಣ್ಣ ಸಣ್ಣ ಒಗ್ಗೂಡುವಿಕೆಗಳೇ ಮಹತ್ವದ ಪಾತ್ರ ವಹಿಸಿವೆ.ಕಾರ್ಯಕ್ರಮ ಮುಗಿದ ಬಳಿಕ ಕೊರಿಯಾದ ಬೇರೆ ಬೇರೆ ನಗರಗಳಿಂದ ಬಂದವರು ತಮ್ಮ ಮನೆಗಳಿಗೆ ಮರಳುತ್ತಾರೆ. ಆದರೆ ಮರಳುವಾಗ ಅವರ ಪರಿಚಯದ ವಲಯ ಸ್ವಲ್ಪ ವಿಸ್ತರಿಸಿರುತ್ತದೆ; ಮುಂದಿನ ಭೇಟಿಗೆ ಹೊಸದೊಂದು ಕಾರಣವೂ ಸಿಕ್ಕಿರುತ್ತದೆ. ತಾಯ್ನಾಡು ದೂರದಲ್ಲಿದ್ದರೂ ಕನ್ನಡದಲ್ಲಿ ಮಾತನಾಡಲು, ಹಬ್ಬ ಆಚರಿಸಲು, ನೆನಪುಗಳನ್ನು ಹಂಚಿಕೊಳ್ಳಲು ನಮ್ಮವರು ಇಲ್ಲಿಯೂ ಇದ್ದಾರೆ ಎಂಬ ಭರವಸೆಯನ್ನು ಈ ಕೂಟ ಉಳಿಸಿಕೊಂಡಿದೆ.