ರಾಮನಗರ| ಕಸಾಪಕ್ಕೆ ಆಡಳಿತ ಹಿನ್ನೆಲೆಯ ದಕ್ಷ ಅಧ್ಯಕ್ಷ ಬೇಕು: ಸಿ. ಸೋಮಶೇಖರ್
ರಾಮನಗರ: ‘ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ಗೆ ಕಾಯಕಲ್ಪ ನೀಡಲು ಆಡಳಿತ ಅನುಭವದ ಹಿನ್ನೆಲೆ ಇರುವ ದಕ್ಷ ಅಧ್ಯಕ್ಷ ಬೇಕಿದೆ. ಅಂತಹವರು ಅಧಿಕಾರ ವಹಿಸಿಕೊಂಡರೆ ಮಾತ್ರ ಸಂಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗಿ ಕನ್ನಡಪರ ಕೆಲಸಗಳನ್ನು ಮಾಡಲಿದೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸಿ. ಸ

ರಾಮನಗರ: ‘ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ಗೆ ಕಾಯಕಲ್ಪ ನೀಡಲು ಆಡಳಿತ ಅನುಭವದ ಹಿನ್ನೆಲೆ ಇರುವ ದಕ್ಷ ಅಧ್ಯಕ್ಷ ಬೇಕಿದೆ. ಅಂತಹವರು ಅಧಿಕಾರ ವಹಿಸಿಕೊಂಡರೆ ಮಾತ್ರ ಸಂಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗಿ ಕನ್ನಡಪರ ಕೆಲಸಗಳನ್ನು ಮಾಡಲಿದೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸಿ. ಸೋಮಶೇಖರ್ ಹೇಳಿದರು.‘ಆಡಳಿತದ ಹಿನ್ನೆಲೆಯವರನ್ನು ಚುನಾವಣೆಯಿಂದ ದೂರವಿಡಬೇಕೆಂಬ ಕೂಗು ಕೆಲ ಸ್ವಯಂ ಘೋಷಿತ ಸಾಹಿತಿಗಳಿಂದ ಕೇಳಿ ಬರುತ್ತಿದೆ. ಆದರೆ, ಪರಿಷತ್ತನ್ನು ಸ್ಥಾಪಿಸಿ ಬೆಳೆಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಹ ದಕ್ಷ ಆಡಳಿತಕ್ಕೆ ಹೆಸರುವಾಸಿಯಾಗಿದ್ದರು ಎಂಬುದನ್ನು ಮರೆಯಬಾರದು’ ಎಂದು ನಗರದಲ್ಲಿರುವ ಕರುನಾಡ ಸೇನೆ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‘ಕನ್ನಡ ಸಾಹಿತ್ಯ, ಸಂಸ್ಕತಿ ಹಾಗೂ ಕಲೆಗಳ ಆರಾಧಕನಾಗಿರುವ ನಾನು ಪರಿಷತ್ತಿನ ಚಿಂತಕರು ಮತ್ತು ಮಿತ್ರರ ಒತ್ತಾಸೆಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಯಸಿದ್ದೇನೆ. ಆ ನಿಟ್ಟಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಪರಿಷತ್ತಿನ ಆಜೀವ ಸದಸ್ಯರು, ಹಿರಿಯ ಸಾಹಿತಿಗಳು, ಕನ್ನಡಪರ ಹೋರಾಟಗಾರರನ್ನು ಸಂಪರ್ಕಿಸಿ ಸಹಕಾರ ಮತ್ತು ಮಾರ್ಗದರ್ಶನ ಪಡೆಯುತ್ತಿದ್ದೇನೆ’ ಎಂದರು.ಚಿಂತಕ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ‘ಕನ್ನಡದಲ್ಲಿಯೇ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಸೋಮಶೇಖರ್ ಅವರು, ತಮ್ಮ ಸೇವಾವಧಿಯಲ್ಲಿ ಹಲವು ಸಾಧನೆ ಮಾಡಿದ್ದಾರೆ. ಕನ್ನಡ ಸಾಹಿತ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಾದ ಇವರನ್ನು ಎಲ್ಲರೂ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಯೋಗಾನಂದ್, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಐಜೂರು ಎಂ. ಜಗದೀಶ್, ಸಂಸ್ಕೃತಿ ಸೌರಭ ಟ್ರಸ್ಟ್ ಅಧ್ಯಕ್ಷ ರಾ.ಬಿ. ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್.ಆರ್. ರಾಜು, ಮಾಗಡಿ ಅಧ್ಯಕ್ಷ ವಿನೋದ್ ರಾಜ್, ವಿದ್ವಾನ್ ಚಂದ್ರಶೇಖರಯ್ಯ, ಮುಖಂಡರಾದ ಎಂ.ಆರ್. ಶಿವಕುಮಾರಸ್ವಾಮಿ, ಪಾಲನೇತ್ರ, ಸೋಮಶೇಖರ್, ಶಿವರಾಜಮ್ಮ, ವಿ.ಎನ್. ಗಂಗಾಧರ್, ಅಕ್ಕಮಹಾದೇವಮ್ಮ, ಶೋಭಾ ಹಾಗೂ ಇತರರು ಭಾಗವಹಿಸಿದ್ದರು.‘ಸದಸ್ಯರ ಸಂಖ್ಯೆ 50 ಲಕ್ಷಕ್ಕೆ ಹೆಚ್ಚಿಸುವೆ’‘ಪ್ರಸ್ತುತ ಕಸಾಪ ಸದಸ್ಯರ ಸಂಖ್ಯೆ ರಾಜ್ಯದಲ್ಲಿ ಕೇವಲ 4 ಲಕ್ಷವಿದೆ. ನಾನು ಅಧ್ಯಕ್ಷನಾದರೆ ಆ ಸಂಖ್ಯೆಯನ್ನು 50ರಿಂದ 60 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸುವೆ. ಶಿಕ್ಷಕರು ಹಾಗೂ ಸರ್ಕಾರಿ ನೌಕರರನ್ನು ಸಹ ಪರಿಷತ್ ಸದಸ್ಯರನ್ನಾಗಿಸುತ್ತೇನೆ. ಕೇಂದ್ರ ಸ್ಥಾನದಲ್ಲಿ ಕನ್ನಡ ಚುಟುವಟಿಕೆಗಳು ನಿತ್ಯೋತ್ಸವದಂತೆ ನಡೆಯಲು ಶ್ರಮಿಸುತ್ತೇನೆ. ಪರಿಷತ್ತನ್ನು ಕನ್ನಡಿಗರ ಸ್ವಾಭಿಮಾನದ ಗೌರವ ಸಂಸ್ಥೆಯನ್ನಾಗಿ ರೂಪಿಸಿ ಅದರ ಮೂಲ ಉದ್ದೇಶಗಳಾದ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಗಾಗಿ ಶ್ರಮಿಸುವೆ. ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ’ ಎಂದು ಸೋಮಶೇಖರ್ ಆಶ್ವಾಸನೆ ನೀಡಿದರು.261108-14-1186869740