ಸ್ವಂತ ಜಾಗದಲ್ಲೇ ಬದಲಿ ನಿವೇಶನಕ್ಕೆ ಪಟ್ಟು
ಬೆಂಗಳೂರು: ಡಾ.ಶಿವರಾಮ ಕಾರಂತ ಬಡಾವಣೆಗಾಗಿ ವಶಪಡಿಸಿಕೊಂಡ 17 ಗ್ರಾಮಗಳ ಜಮೀನುಗಳ ರೈತರಿಗೆ ನೀಡಿದಂತೆಯೇ ಅಷ್ಟೂ ಗ್ರಾಮಗಳ ಕಂದಾಯ ನಿವೇಶನದಾರರಿಗೂ ಸ್ವಂತ ಜಾಗದಲ್ಲೇ, ಅಷ್ಟೇ ವಿಸ್ತೀರ್ಣದ ಅಭಿವೃದ್ಧಿಪಡಿಸಿದ ಬದಲಿ ನಿವೇಶನ ನೀಡುವಂತೆ ನಿವೇಶನ ಮಾಲೀಕರು ಪಟ್ಟು ಹಿಡಿದಿದ್ದಾರೆ.ಬೇಡಿಕೆ ಈಡೇರಿಕೆಗಾಗಿ ಎರಡು ತಿಂಗಳಿಂದ ಹೋರಾಟ ಮಾಡುತ್ತಿದ್ದು, ಬೆಂಗಳೂರು ಅಭಿವೃದ್ಧಿ ಪ್ರ

ಬೆಂಗಳೂರು: ಡಾ.ಶಿವರಾಮ ಕಾರಂತ ಬಡಾವಣೆಗಾಗಿ ವಶಪಡಿಸಿಕೊಂಡ 17 ಗ್ರಾಮಗಳ ಜಮೀನುಗಳ ರೈತರಿಗೆ ನೀಡಿದಂತೆಯೇ ಅಷ್ಟೂ ಗ್ರಾಮಗಳ ಕಂದಾಯ ನಿವೇಶನದಾರರಿಗೂ ಸ್ವಂತ ಜಾಗದಲ್ಲೇ, ಅಷ್ಟೇ ವಿಸ್ತೀರ್ಣದ ಅಭಿವೃದ್ಧಿಪಡಿಸಿದ ಬದಲಿ ನಿವೇಶನ ನೀಡುವಂತೆ ನಿವೇಶನ ಮಾಲೀಕರು ಪಟ್ಟು ಹಿಡಿದಿದ್ದಾರೆ.ಬೇಡಿಕೆ ಈಡೇರಿಕೆಗಾಗಿ ಎರಡು ತಿಂಗಳಿಂದ ಹೋರಾಟ ಮಾಡುತ್ತಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಇದು ತಲೆನೋವಾಗಿ ಪರಿಣಮಿಸಿದೆ.ಉತ್ತರ ಬೆಂಗಳೂರಿನ ಆವಲಹಳ್ಳಿ, ರಾಮಗೊಂಡನಹಳ್ಳಿ, ಜಾರಕಬಂಡೆ ಕಾವಲ್ ಸೇರಿದಂತೆ ಒಟ್ಟು ಹದಿನೇಳು ಹಳ್ಳಿಗಳ ಸುಮಾರು 3,069 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಲಾಗಿದೆ. ಬಡಾವಣೆಗೆ ಭೂಮಿ ನೀಡಿದ 3,200 ರೈತರಿಗೆ ಪರಿಹಾರ ರೂಪದಲ್ಲಿ 18,399 ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ. ಕಂದಾಯ ನಿವೇಶನದಾರರಿಗೆ 3,200 ಮತ್ತು ಸಾರ್ವಜನಿಕರಿಗೆ ಒಟ್ಟು 2,815 ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ.‘ನ್ಯಾಯಮೂರ್ತಿ ಬೋಪಯ್ಯ ಸಮಿತಿ ವರದಿಯಂತೆ ಕಂದಾಯ ನಿವೇಶನಗಳ ಮಾಲೀಕರಿಗೆ ಅವರ ಸ್ವಂತ ಜಾಗದಲ್ಲೇ ಅದೇ ವಿಸ್ತೀರ್ಣದ ಬದಲಿ ನಿವೇಶನ ನೀಡಬೇಕು. ರೈತರಿಗೆ ನಿವೇಶನಗಳನ್ನು ನೀಡಿರುವ ರೀತಿಯಲ್ಲೇ ಕಂದಾಯ ನಿವೇಶನದಾರರಿಗೂ ನ್ಯಾಯ ಒದಗಿಸಬೇಕು ಎಂದು ಉಲ್ಲೇಖಿಸಿದ್ದರೂ ಬಿಡಿಎ, ಬದಲಿ ನಿವೇಶನ ನೀಡುವ ವಿಚಾರದಲ್ಲಿ ನಿಖರವಾದ ಮಾಹಿತಿ ನೀಡುತ್ತಿಲ್ಲ’ ಎಂಬುದು ನಿವೇಶನ ಮಾಲೀಕರ ಆರೋಪವಾಗಿದೆ.‘ಬಡಾವಣೆ ನಿರ್ಮಾಣಕ್ಕಾಗಿ 3 ಸಾವಿರಕ್ಕೂ ಹೆಚ್ಚು ಜನರು, ಸ್ವಂತ ನಿವೇಶನಗಳನ್ನು ಕಳೆದುಕೊಂಡು ಹತ್ತು ವರ್ಷದಿಂದ ತೊಂದರೆ ಅನುಭವಿಸುತ್ತಿದ್ದೇವೆ. ನಿವೇಶನಗಳಿಗೆ ಪಾವತಿಸ ಬೇಕಾದ ಶುಲ್ಕವನ್ನು ಪ್ರತಿವರ್ಷ ಪಾವತಿಸಲಾಗುತ್ತಿದೆ. ಆದರೆ, ಬದಲಿ ನಿವೇಶನ ನೀಡುವ ಕುರಿತು ಪ್ರಾಧಿಕಾರ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ’ ಎಂದು ವಿದ್ಯಾರಣ್ಯಪುರ ನಿವಾಸಿ ಶಶಾಂಕ್ ದೂರಿದರು.‘ರಸ್ತೆ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗಾಗಿ ಸ್ವಾಧೀನಪಡಿಸಿ ಕೊಂಡಿರುವ ನಿವೇಶನಗಳ ಮಾಲೀಕರಿಗೂ ಅದೇ ವ್ಯಾಪ್ತಿಯಲ್ಲಿ ಬದಲಿ ನಿವೇಶನ ನೀಡಬೇಕು. ಇದಕ್ಕಾಗಿ ವಿಧಿಸುವ ಅಭಿವೃದ್ಧಿ ಶುಲ್ಕವನ್ನು ಪಾವತಿಸಲು ಸಿದ್ಧರಿದ್ದು, ಎಲ್ಲರಿಗೂ ಏಕರೂಪದ ಅಭಿವೃದ್ಧಿ ಶುಲ್ಕ ನಿಗದಿ ಪಡಿಸಬೇಕು’ ಎಂದು ಆಗ್ರಹಿಸಿದರು.‘ನಿವೇಶನಗಳನ್ನು ಖರೀದಿಸಿರು ವವರಲ್ಲಿ ಬಹುತೇಕ ಮಂದಿ, ಬಡವರು, ಕೂಲಿಕಾರ್ಮಿಕರು, ಚಾಲಕರು, ಚಿಲ್ಲರೆ ವ್ಯಾಪಾರಿಗಳು ಹಾಗೂ ಮದ್ಯಮ ವರ್ಗದವರಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ನಿರಂತರ ವಾಗಿ ಪ್ರಾಧಿಕಾರಕ್ಕೆ ಅಲೆದಾಡಬೇಕಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ವಿಚಾರದಲ್ಲಿ ಸರಿಯಾದ ಮಾಹಿತಿ ಯನ್ನೂ ನೀಡುತ್ತಿಲ್ಲ’ ಎಂದು ನಿವೇಶನ ದಾರ ನಟರಾಜ್ ದೂರಿದರು.ನಿವೇಶನದಾರರಾದ ಅಶ್ವಿನಿ, ‘ಸರ್ಕಾರವೇ ಕಂದಾಯ ನಿವೇಶನಗಳನ್ನು ನೋಂದಣಿ ಮಾಡಿಕೊಟ್ಟಿದೆ. ಹೀಗಾಗಿ, ಬಿಡಿಎ ನಮ್ಮ ಹಕ್ಕನ್ನು ಪರಿಗಣಿಸಬೇಕು. ಅಭಿವೃದ್ಧಿಪಡಿಸಿದ ಸಮಾನ ವಿಸ್ತೀರ್ಣದ ಬದಲಿ ನಿವೇಶನಗಳನ್ನು ಸ್ವಂತ ಜಾಗಗಳಲ್ಲಿಯೇ ನೀಡಬೇಕು. ಬೇರೆ ಪ್ರದೇಶಗಳಲ್ಲಿನ ನಿವೇಶನಗಳು ಬೇಡ, ಪ್ರಾಧಿಕಾರ ನಿಗದಿಪಡಿಸುವ ಕನಿಷ್ಠ ಅಭಿವೃದ್ಧಿ ಶುಲ್ಕವನ್ನು ಪಾವತಿಸಲು ಸಿದ್ಧ’ ಎಂದು ಹೇಳಿದರು.ಸಭೆ ಕರೆದು ಗೊಂದಲ ನಿವಾರಿಸಿ ‘ಉತ್ತಮ ಭವಿಷ್ಯದ ಕನಸಿನೊಂದಿಗೆ ಕಷ್ಟಪಟ್ಟು ಹಣಸಂಪಾದಿಸಿ ಖರೀದಿಸಿದ್ದ ನಿವೇಶನಗಳನ್ನು ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಯ ನೆಪದಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದೆ. ಪರಿಣಾಮವಾಗಿ ಸ್ವಂತ ನಿವೇಶನವೂ ಇಲ್ಲದೆ ಸಕಾಲದಲ್ಲಿ ಬದಲಿ ನಿವೇಶನವೂ ದೊರೆಯದೆ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿ ಎಂ.ರಮೇಶ್ ರಾಮಗೊಂಡನಹಳ್ಳಿ ಅಸಮಾಧಾನ ವ್ಯಕ್ತಪಡಿಸಿದರು. ‘ನಿವೇಶನ ಕಳೆದುಕೊಂಡು 9 ವರ್ಷ ಕಳೆದರೂ ಪ್ರಾಧಿಕಾರ ನಿವೇಶನದಾರರೊಂದಿಗೆ ಸಮನ್ವಯ ಸಾಧಿಸದೆ ಸತಾಯಿಸುತ್ತಿದೆ. ಈ ಸಂಬಂಧ ಸಭೆ ಕರೆದು ಗೊಂದಲ ನಿವಾರಿಸಬೇಕು. ಸುಪ್ರೀಂ ಕೋರ್ಟ್ ವಕೀಲ ರೊಬ್ಬರನ್ನು ಶೀಘ್ರದಲ್ಲೇ ಭೇಟಿ ಮಾಡಿ ಕಾನೂನು ಹೋರಾಟದ ಬಗ್ಗೆಚರ್ಚಿಸಲಾಗುವುದು. ಬೇಡಿಕೆ ಈಡೇರಿಕೆಗಾಗಿ ಬಿಡಿಎ ಕಚೇರಿ ಎದುರು ನ.11 ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.ಷರತ್ತು ಪಾಲಿಸಬೇಕು: ಬಿಡಿಎ ಕಂದಾಯ ನಿವೇಶನದಾರರು ಕೆಲವು ಷರತ್ತುಗಳನ್ನು ಪಾಲಿಸಬೇಕು ಎಂದು ಬಿಡಿಎ ಸ್ಪಷ್ಟಪಡಿಸಿದೆ. ನಗರ ವ್ಯಾಪ್ತಿಯಲ್ಲಿ ನಿವೇಶನ ಮನೆ ಹೊಂದಿಲ್ಲ ಎಂಬ ಖಾತರಿಗೆ ಪ್ರಮಾಣ ಪತ್ರ ಸಲ್ಲಿಸಬೇಕು. 15 ವರ್ಷಗಳಿಂದ ರಾಜ್ಯದಲ್ಲಿ ವಾಸವಾಗಿರುವ ಬಗ್ಗೆ ತಹಶೀಲ್ದಾರ್ ಅವರಿಂದ ವಾಸಸ್ಥಳ ದೃಢೀಕರಣ ಪತ್ರ ಸಲ್ಲಿಸಬೇಕು ಎಂದು ಬಿಡಿಎ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ. ಕಂದಾಯ ನಿವೇಶನ 20X30 ಅಡಿ ಅಳತೆ ಆಗಿದ್ದಲ್ಲಿ ಹಾಗೂ ಯಾರಿಗೂ ಹಂಚಿಕೆಯಾಗದಿದ್ದರೆ ಅದನ್ನು ಪ್ರಾಧಿಕಾರದ ಆರ್ಥಿಕ ವಿಭಾಗ ವಿಧಿಸುವ ದರ ಪಾವತಿಸಬೇಕು. ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಬೇರೆ 20X30 ಅಡಿ ಅಳತೆಯ ನಿವೇಶನ ಹಂಚಿಕೆ ಮಾಡಲಾಗುವುದು. ಪ್ರಾಧಿಕಾರದಲ್ಲಿ ಕಂದಾಯ ನಿವೇಶನಗಳಿಗೆ 30X40 ಅಡಿ ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡುವ ನಿಯಮ ವಾಡಿಕೆಯಲ್ಲಿದ್ದು ನಿವೇಶನ 30X40 ಅಡಿ ಅಳತೆಗಿಂತ ಹೆಚ್ಚಾಗಿದ್ದಲ್ಲಿ ಬೇರೆ ಸ್ಥಳದಲ್ಲಿ 30X40 ಅಡಿ ಅಳತೆಯ ನಿವೇಶನವನ್ನು ಹಂಚಿಕೆ ಮಾಡಲಾಗುವುದು. ಆದರೆ ಅದಕ್ಕೆ ದರ ಪಾವತಿಸಬೇಕು ಎಂದು ಹೇಳಿದ್ದಾರೆ.