ನುಡಿ ಬೆಳಗು| ಕೃತಜ್ಞತೆಯನ್ನು ಮರೆಯದಿರೋಣ
* ರೈಲಿನಲ್ಲಿ ಭಿಕ್ಷೆ ಬೇಡುತ್ತಾ ಬಂದ ಬಾಲಕಿಯೊಬ್ಬಳಿಗೆ ‘ಇಲ್ಲಿ ಬರಬೇಡ, ನೀವೆಲ್ಲರೂ ಕಳ್ಳರು’ ಅಂತ ಒಬ್ಬರು ಗದರಿದರು. ಆ ಹುಡುಗಿಯ ಕಣ್ಣು ಒದ್ದೆಯಾದವು.* ನಮಾಜಿಗೆ ಕುಳಿತ ಸಾಲುಗಳಲ್ಲಿ ಡ್ರೈಫ್ರೂಟ್ಸ್ ಹಂಚುತ್ತಾ ಬಂದವರಿಂದ ಪಡೆದ ಬಾದಾಮಿ ತಿಂದ ಒಬ್ಬನು ‘ಇವರು ಡೈರೆಕ್ಟ್ ಸ್ವರ್ಗಕ್ಕೆ ಹೋಗುವಂತೆ ಕಾಣುತ್ತದೆ’ ಅಂತ ಗೊಣಗಿದ.* ರಾಮನವಮಿಯ ದಿವಸ ಬಂದವರಿಗೆಲ್ಲಾ ತಣ್ಣನೆ

* ರೈಲಿನಲ್ಲಿ ಭಿಕ್ಷೆ ಬೇಡುತ್ತಾ ಬಂದ ಬಾಲಕಿಯೊಬ್ಬಳಿಗೆ ‘ಇಲ್ಲಿ ಬರಬೇಡ, ನೀವೆಲ್ಲರೂ ಕಳ್ಳರು’ ಅಂತ ಒಬ್ಬರು ಗದರಿದರು. ಆ ಹುಡುಗಿಯ ಕಣ್ಣು ಒದ್ದೆಯಾದವು.* ನಮಾಜಿಗೆ ಕುಳಿತ ಸಾಲುಗಳಲ್ಲಿ ಡ್ರೈಫ್ರೂಟ್ಸ್ ಹಂಚುತ್ತಾ ಬಂದವರಿಂದ ಪಡೆದ ಬಾದಾಮಿ ತಿಂದ ಒಬ್ಬನು ‘ಇವರು ಡೈರೆಕ್ಟ್ ಸ್ವರ್ಗಕ್ಕೆ ಹೋಗುವಂತೆ ಕಾಣುತ್ತದೆ’ ಅಂತ ಗೊಣಗಿದ.* ರಾಮನವಮಿಯ ದಿವಸ ಬಂದವರಿಗೆಲ್ಲಾ ತಣ್ಣನೆ ಮಜ್ಜಿಗೆ, ಶರಬತ್ತು ಕೊಡುತ್ತಿದ್ದ ಒಬ್ಬರನ್ನು ಕುರಿತು ‘ನೋಡು, ಇವನದು ಮುಂದಿನ ಚುನಾವಣೆಗೆ ನಿಲ್ಲುವ ತಯಾರಿ’ ಅಂತ ಇವನ್ಯಾರೋ ಭವಿಷ್ಯ ನುಡಿದ.‘ಕುಚ್ ತೋ ಲೋಗ್ ಕೆಹತೇ ಹೈ, ಲೋಗೋಂಕಾ ಕಾಮ್ ಹೈ ಕೆಹನಾ’. ಹೌದು, ಜನತೆಯಂತೆ ಜಗತ್ತು! ನಂಬಿಕೆಯು ಮನುಷ್ಯ ಸಮಾಜದ ಆತ್ಮ. ಅದನ್ನು ಕಳೆದುಕೊಂಡ ಮನುಷ್ಯ ಕ್ರೂರಿಯೂ ಸಿನಿಕನೂ ಆಗುತ್ತಾನೆ. ಪರಸ್ಪರ ನಂಬಬೇಕೆಂದರೆ ಒಬ್ಬರಿಗೊಬ್ಬರ ಆಸರೆ ಇರಬೇಕು. ಜನ ಮಾತಿನ ತೂಕ ಕಳೆದುಕೊಂಡು ಎಲ್ಲವನ್ನೂ ಅನುಮಾನಿಸಿ ಅಣಕಿಸುತ್ತಾ ಹೊರಟರೆ ಪರಸ್ಪರ ಗೌರವ, ಕೃತಜ್ಞತೆ ಉಳಿಯುವುದಾದರೂ ಹೇಗೆ? ನಮ್ಮ ವರ್ತನೆಗೂ ಆಡುವ ಮಾತಿಗೂ ತಾಳ ತಂತಿಯಿಲ್ಲದೆ ಹೋದರೆ ಮನುಷ್ಯತ್ವಕ್ಕೇನು ಅರ್ಥ?ನಾಗರಿಕರಾಗಿ ಬಹುದೂರ ಸಾಗಿ ಬಂದಿದ್ದೇವೆ. ಗೆಲ್ಲುವ ಹುಮ್ಮಸ್ಸಿನಲ್ಲಿ ನಮಗೆ ನಾವೇ ಸ್ಪರ್ಧಿಗಳಾಗಿದ್ದೇವೆ. ಇದು ಕಾರಣವಾಗಿ ಸೋತು ಸುಣ್ಣವಾಗಿದ್ದೇವೆ. ನಮ್ಮೊಳಗಿನ ಲಾಲಸೆ ಲವಲೇಶವಿಲ್ಲದಂತೆ ಕರಗುವುದು ಮುಖ್ಯ. ನಮಗೆ ಹಣ, ಅಧಿಕಾರದ ಸುಖ ಸವಲತ್ತುಗಳು ಬೇಕು. ಅದರಲ್ಲೂ ಕಷ್ಟವಿಲ್ಲದೆ ಅವು ದಕ್ಕಬೇಕು. ನಾವು ಅದಕ್ಕಾಗಿ ಎಲ್ಲಿ ಹೇಗೆ ಎಷ್ಟು ಬೇಕಾದರೂ ಬಾಗಬಲ್ಲೆವು ಎಂಬುದು ನಮ್ಮ ಅವನತಿಯನ್ನು ಸೂಚಿಸುತ್ತದೆ. ದಿನನಿತ್ಯ ಇಂತಹ ವ್ಯಕ್ತಿ ವರಸೆಗಳನ್ನು ನೋಡುತ್ತಿದ್ದೇವೆ.ಪುಕ್ಕಟೆ ಬರುವುದು ಬರಲಿ, ನನಗೂ ನಮ್ಮವರಿಗೂ ಇರಲಿ ಎಂದು ಪಡೆಯುವಾಗ ಹೋದ ಘನತೆಯನ್ನು ಮರಳಿ ಗಳಿಸುವ ಯತ್ನದಲ್ಲಿ ಕೊಟ್ಟವನನ್ನೇ ಕೀಳಾಗಿ ಕಾಣುತ್ತೇವೆ. ಕುಡಿದ ನೀರು ಅಲ್ಲಾಡದಂತೆ ಸಲೀಸಾಗಿ ಬರುವುದನ್ನು ಪಡೆದು ಅನುಭವಿಸುತ್ತಲೇ ತಾನೊಬ್ಬ ಮಹಾ ಸಾರ್ವಜನಿಕ ಕಾಳಜಿಯ ಮನುಷ್ಯನಂತೆ ಪೋಜು ಕೊಡುವ ಇಬ್ಬಂದಿತನ ಆತ್ಮಘಾತುಕವಾದುದು. ರಾಜಮಹಾರಾಜರ ಕಾಲವನ್ನು ಆರಾಧಿಸುವ ಮನಃಸ್ಥಿತಿ ಜನಪ್ರಿಯವಾಗಿದೆ. ಯಥಾ ರಾಜಾ ತಥಾ ಪ್ರಜಾ ಎನ್ನುವ ಮಾತು ರಾಜ ಮತ್ತು ಪ್ರಜೆಗಳ ನಡುವಿನ ನೈತಿಕ ಸಮತೋಲನದ ಸಂಕೇತವಾಗಿತ್ತು. ಈಗ ಏನಾಗಿದೆ? ಪ್ರಜಾಸತ್ತೆಯಲ್ಲಿ ಯಾರು, ಯಾರ ಬಗ್ಗೆ ಅಂಥ ಕೃತಜ್ಞತೆ ಉಳಿಸಿಕೊಂಡಿದ್ದೇವೆ? ಯಥಾ ಪ್ರಜಾ ತಥಾ ರಾಜ ಅನ್ನುವಂತಾಗಿರುವುದು ಸಮಾಜದ ಅಣಕ. ಪುಣ್ಯಾತ್ಮ, ನಮ್ಮ ಹಸಿವಿಗೆ ಅನ್ನವಾದ, ಬದುಕಿಗೆ ಆಸರೆ ತಂದ, ಕಷ್ಟಕ್ಕೆ ಆಗಿ ಬಂದ ಅವನನ್ನು ತಂಪುಹೊತ್ತಿನಲ್ಲಿ ನೆನೆಯಬೇಕು ಎಂಬ ಮನುಷ್ಯನ ಋಣಪ್ರಜ್ಞೆಯನ್ನು ಎಲ್ಲಿ ಹೂತಿಟ್ಟಿದ್ದೇವೆ? ಕೊನೇಪಕ್ಷ ನಮ್ಮ ಮಾತಿನಲ್ಲಿ ಅಂಥದೊಂದು ಭಾವನೆ ವ್ಯಕ್ತವಾಗಬೇಕಲ್ಲ? ದೇಶವನ್ನು ಸ್ವತಂತ್ರಗೊಳಿಸಿದ, ಹೀಗೆ ಘನತೆಯಿಂದ ಬದುಕಿರಿ ಎಂದು ಜೀವಸಮಾನತೆಯನ್ನು ಕಲಿಸಿದವರ ಬಗ್ಗೆಯೇ ನಾವು ಕೃತಘ್ನರಾಗಿದ್ದೇವೆ! ಇನ್ನು ಬಾದಾಮಿ ತಿನ್ನಿಸಿ ಶರಬತ್ತು ಕುಡಿಸಿದವರ ಪಾಡೇನು? ನೀರು ಮಜ್ಜಿಗೆ ಕೊಟ್ಟವರನ್ನೂ ಕೊನೆತನಕ ನೆನೆಯುತ್ತಿದ್ದ ಸಮಾಜ ಈಗ ಕೃತಜ್ಞತೆ ಕಳೆದುಕೊಂಡು ಕ್ರೂರವಾಗಿದೆ.ಬಾಳು ಎಂಬುದಿದು ತಿಳಿದು ನೋಡಿದರೆ ಋಣದ ರತ್ನ ಗಣಿಯೋ ಅನ್ನುವ ಮಾತು ನಿಜವೇ ಆಗುವುದಾದರೆ ತುತ್ತಿಟ್ಟವರ, ಒಂದಕ್ಷರ ಕಲಿಸಿದವರ, ಕಣ್ಣೀರೊರೆಸಿದವರ ಕುರಿತಾಗಿ ಒಂದಿಷ್ಟು ಒಳ್ಳೆಯ ಮಾತುಗಳನ್ನು ಹಂಚಿಕೊಳ್ಳೋಣ; ನಾಲಿಗೆ ಮಲಿನವನ್ನು ಕಳೆದುಕೊಂಡು ಕರುಣೆ, ಕ್ಷಮೆ, ಕೃತಜ್ಞತೆಗಳ ಮೂಲಕ ಮಾತಿಗೆ ತೂಕ ತುಂಬುವವರ ಸಾಲಿನಲ್ಲಿ ಸಾಗೋಣ.