ಆಳ–ಅಗಲ| ವಿಧ ವಿಧ ಹಬ್ಬ: ಬಗೆ ಬಗೆ ಬೆಳಕು
ದೀಪಾವಳಿ ಬೆಳಕು ಹಾಗೂ ಸೌಂದರ್ಯದ ಸಂಕೇತ; ಹಣತೆ ಬೆಳಗಿಸಿ, ಕತ್ತಲನ್ನು ಓಡಿಸಿ, ಬದುಕಿನ ಬಗ್ಗೆ ಭರವಸೆಯನ್ನೂ ಪ್ರೀತಿಯನ್ನೂ ಹಂಚುವ ಹಬ್ಬ. ದೀಪಾವಳಿಯನ್ನು ರಾಜ್ಯದ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಆಚರಿಸಲಾಗುತ್ತದೆ. ಪೂಜಿಸುವ ದೇವರು, ಆಚರಣೆಯ ಹೆಸರು, ಮಾಡುವ ಅಡುಗೆ ಬಗೆ ಬಗೆ ಆದರೂ ಅವುಗಳ ಹಿಂದಿನ ಮನಃಸ್ಥಿತಿ, ಅರ್ಥವಂತಿಕೆ ಒಂದೇ; ವ್ಯಕ್ತಿ, ಕುಟುಂಬ ಮತ್ತು

ದೀಪಾವಳಿ ಬೆಳಕು ಹಾಗೂ ಸೌಂದರ್ಯದ ಸಂಕೇತ; ಹಣತೆ ಬೆಳಗಿಸಿ, ಕತ್ತಲನ್ನು ಓಡಿಸಿ, ಬದುಕಿನ ಬಗ್ಗೆ ಭರವಸೆಯನ್ನೂ ಪ್ರೀತಿಯನ್ನೂ ಹಂಚುವ ಹಬ್ಬ. ದೀಪಾವಳಿಯನ್ನು ರಾಜ್ಯದ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಆಚರಿಸಲಾಗುತ್ತದೆ. ಪೂಜಿಸುವ ದೇವರು, ಆಚರಣೆಯ ಹೆಸರು, ಮಾಡುವ ಅಡುಗೆ ಬಗೆ ಬಗೆ ಆದರೂ ಅವುಗಳ ಹಿಂದಿನ ಮನಃಸ್ಥಿತಿ, ಅರ್ಥವಂತಿಕೆ ಒಂದೇ; ವ್ಯಕ್ತಿ, ಕುಟುಂಬ ಮತ್ತು ಸಮಾಜದಲ್ಲಿ ಶಾಂತಿ, ಸಮೃದ್ಧಿ, ಸೌಹಾರ್ದ ಹಾಗೂ ಬೆಳಕನ್ನು ಕಾಣುವುದು ಮತ್ತು ಹರಡುವುದು. ಈ ದಿಸೆಯಲ್ಲಿ, ರಾಜ್ಯದ ವಿವಿಧ ಭಾಗಗಳಲ್ಲಿ ದೀಪಗಳ ಹಬ್ಬವನ್ನು ಹೇಗೆ ಭಿನ್ನ ಭಿನ್ನವಾಗಿ ಆಚರಿಸುತ್ತಾರೆ ಎನ್ನುವ ವಿವರಗಳು ಇಲ್ಲಿವೆಕರಾವಳಿಯಲ್ಲಿ ಪ್ರಕೃತಿ, ಸಂಸ್ಕೃತಿ, ಪುರಾಣದ ಮಿಳಿತ ತುಳುನಾಡಿನಲ್ಲಿ (ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ) ದೀಪಾವಳಿ ಬೆಳಕಿನ ಹಬ್ಬ ಮಾತ್ರವಲ್ಲ, ಕೃಷಿ ಸಂಸ್ಕೃತಿ, ಪ್ರಕೃತಿ ಮತ್ತು ಪುರಾಣ ಕಥೆಗಳೊಂದಿಗೆ ಮಿಳಿತವಾಗಿದೆ. ದೀಪಾವಳಿ ಸಂದರ್ಭದಲ್ಲಿ ಇಲ್ಲಿ ಭೂಮಿಯ ಆರಾಧನೆ ನಡೆಯುತ್ತದೆ, ದನ-ಕರುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನರಕ ಚತುರ್ದಶಿಯಿಂದ ಬಲಿಪಾಡ್ಯಮಿವರೆಗೆ ಮೂರು ದಿನ ಹಬ್ಬ ಆಚರಿಸಲಾಗುತ್ತದೆ. ಕೆಲವು ಭಾಗಗಳಲ್ಲಿ ನರಕ ಚತುರ್ದಶಿ ಆಚರಣೆ ಇಲ್ಲ. ಅಮಾವಾಸ್ಯೆಯಂದು ಹಬ್ಬ ಆರಂಭಿಸಿ ಎರಡನೇ ದಿನ ಪಾಡ್ಯ ಆಚರಿಸುತ್ತಾರೆ. ಮೂರನೇ ದಿನ ನೆರೆಹೊರೆಯವರು ಪರಸ್ಪರ ಮನೆಗೆ ಭೇಟಿ ನೀಡುವುದಕ್ಕೆ ಸೀಮಿತ. ತುಳುನಾಡಿನ ದೀಪಾವಳಿಯ ಪ್ರಮುಖ ವೈಶಿಷ್ಟ್ಯ ಬಲೀಂದ್ರ ಪೂಜೆ. ಬಲಿ ಚಕ್ರವರ್ತಿ ಪ್ರಜೆಗಳನ್ನು ನೋಡಲು ಭೂಲೋಕಕ್ಕೆ ಬರುವ ದಿನ ಬಲಿಪಾಡ್ಯಮಿ ಎಂಬ ನಂಬಿಕೆಯೊಂದಿಗೆ ಪಾಲೆ (ಹಾಲೆ) ಮರದ ನಾಲ್ಕು ಟಿಸಿಲುಗಳಿರುವ ಭಾಗವನ್ನು ಕತ್ತರಿಸಿ ತಂದು ಮನೆ ಮತ್ತು ಗದ್ದೆಗಳಲ್ಲಿ ನೆಟ್ಟು ಚೆಂಡು ಹೂವು, ಗುಡ್ಡದಲ್ಲಿ ಸಿಗುವ ‘ಪಾದೆಪೂ’ ಮತ್ತು ಅರಿಶಿಣ-ಕುಂಕುಮದಿಂದ ಅಲಂಕರಿಸಿ, ತೆಂಗಿನಕಾಯಿಯ ಚಿಪ್ಪು ಅಥವಾ ಹಣತೆಯಲ್ಲಿ ದೀಪ ಹಚ್ಚಿ ಬಲೀಂದ್ರನನ್ನು ಕೂಗಿ ಕರೆಯಲಾಗುತ್ತದೆ. ಅಕ್ಕಿ ದೋಸೆ ಹಾಗೂ ತೆಂಗಿನಕಾಯಿ ಹಾಲು, ಅರಿಸಿನ ಎಲೆಯ ಗಟ್ಟಿ ಮುಂತಾದ ಖಾದ್ಯಗಳೂ ಇಲ್ಲಿನ ದೀಪಾವಳಿಯ ಅವಿಭಾಜ್ಯ ಅಂಗ.ಇಲ್ಲಿ ಪಗಡೆ ಆಟವೇ ದೀಪಾವಳಿಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳಿಗಳಲ್ಲಿ ದೀಪಾವಳಿ ಬಂತೆಂದರೆ ಸಾಕು, ಪಗಡೆ ಆಟದ ಸಂಭ್ರಮ ಮನೆ ಮಾಡುತ್ತದೆ. ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ ಪಗಡೆ ಆಟದ ಸಂಭ್ರಮ ಕಂಡುಬರುತ್ತದೆ. ಆದರೆ, ಮೂಡಲಗಿ ತಾಲ್ಲೂಕಿನಲ್ಲಿ ಇದರ ಸಂಭ್ರಮ ಇನ್ನೊಂದು ಹಂತದ್ದು. ಕೈಯಲ್ಲಿ ಪಗಡೆ ಹಾಸು, ಕವಡೆ ಕಾಯಿಗಳನ್ನು ಹಿಡಿದುಕೊಂಡು ಗ್ರಾಮದ ಅಗಸಿ ಕಟ್ಟೆ, ಪಂಚಾಯಿತಿ ಕಟ್ಟೆ, ದೇವಸ್ಥಾನದ ಕಟ್ಟೆಗೋ ಹೊರಟರೆಂದರೆ ದೀಪಾವಳಿ ಮೈದುಂಬಿಕೊಂಡಿದೆ ಎಂದರ್ಥ.ದೀಪಾವಳಿಯ ಸುತ್ತ ಐದು ದಿನಗಳವರೆಗೆ ಪಗಡೆ ಆಟದ ರಂಗು ಏರುತ್ತದೆ. ಊರುಗಳಲ್ಲಿ ಆಕಾಶಬುಟ್ಟಿ ಮತ್ತು ಹಣತೆಗಳ ಬೆಳಕಿನ ಸಂಭ್ರಮ ಒಂದೆಡೆಯಾದರೆ ದೀಪದ ಬೆಳಕಿನ ಅಡಿಯಲ್ಲಿ ಪಗಡೆ ಆಡುವವರ ಸಂಭ್ರಮ ಇನ್ನೊಂದೆಡೆ ಇರುತ್ತದೆ. ಹಲವು ಗ್ರಾಮಗಳಲ್ಲಿ ದಸರಾ ಹಬ್ಬದ ಬನ್ನಿ ಕೊಡುವ ದಿನದ ರಾತ್ರಿ ಪಗಡೆ ಪಟ್ಟಾವನ್ನು ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ಆಟ ಪ್ರಾರಂಭಿಸಿ ದೀಪಾವಳಿ ಅಮಾವಾಸ್ಯೆಯವರೆಗೆ ಇಲ್ಲವೆ ಕಡೇಪಾಡ್ಯಕ್ಕೆ ಮುಗಿಸುತ್ತಾರೆ. ಇನ್ನು ಕೆಲವು ಗ್ರಾಮಗಳಲ್ಲಿ ತುಳಸಿ ಲಗ್ನಕ್ಕೆ ಇಲ್ಲವೆ ಗೌರಿ ಹುಣ್ಣಿಮೆವರೆಗೆ ಮುಂದುವರಿಸುತ್ತಾರೆ. ಕೆಲವು ಊರುಗಳಲ್ಲಿ ದೀಪಾವಳಿ ಪಾಡ್ಯ ರಾತ್ರಿ ಮತ್ತು ಕಡೇಪಾಡ್ಯ ರಾತ್ರಿಯಂದು ಒಂದೇ ದಿನ ಆಡುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ.ಮೂಡಲಗಿ ತಾಲ್ಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ದೀಪಾವಳಿಯ ಹಬ್ಬದ ಅಂಗವಾಗಿ ಕಂಡುಬಂದ ಪಗಡೆ ಆಟದಲ್ಲಿ ತಲ್ಲಿನರಾಗಿರುವ ಚಿತ್ರಹಬ್ಬವಲ್ಲ; ಶೋಕಾಚರಣೆನಾಡಿನಾದ್ಯಂತ ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬವಾಗಿ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ, ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬಂಜಾರ ಗೋರ್ ಸಮಾಜದ ಹಲವು ತಾಂಡಾಗಳಲ್ಲಿ ಮಾತ್ರ ದೀಪಾವಳಿ ಅಮಾವಾಸ್ಯೆ ಸಂಭ್ರಮದ ದಿನವಲ್ಲ; ಶೋಕಾಚರಣೆಯ ಗಳಿಗೆ. ಅಂದು ಪೂರ್ವಜರ ನೆನಪಿನ ಶೋಕದೀಪ ಬೆಳಗಿಸುವುದು ಈ ಸಮಾಜದ ವಿಶಿಷ್ಟ ಪರಂಪರೆ. ಬೀದರ್ನಲ್ಲಿ ಇಂಥ ಆಚರಣೆ ಇದೆ.‘ಬಂಜಾರಾ ಗೋರ್ ಸಮಾಜದ ಜನಪದ ನಂಬಿಕೆಯ ಪ್ರಕಾರ ಗೋವುಗಳ ಸಾಕಣೆ ಮತ್ತು ರಕ್ಷಣೆಗೆ ಬಳಿರಾಜರು ಹೆಚ್ಚಿನ ಮಹತ್ವ ನೀಡುತ್ತಿದ್ದರು. ಅವರ ಏಳಿಗೆ ಸಹಿಸದವರು ದೀಪಾವಳಿ ಅಮಾವಾಸ್ಯೆಯಂದು ಅವರನ್ನು ಹತ್ಯೆ ಮಾಡಿ, ಗೋವುಗಳನ್ನು ಕದ್ದೊಯ್ದರು ಎಂಬ ಐತಿಹ್ಯ ಸಮಾಜದಲ್ಲಿ ಪ್ರಚಲಿತದಲ್ಲಿದೆ. ಈ ದುರಂತದ ನೆನಪಿಗಾಗಿ ಸಮಾಜದವರು ಇಂದಿಗೂ ದೀಪಾವಳಿಯನ್ನು ಶೋಕದ ದಿನವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ’ ಎಂದು ಬೀದರ್ ಜಿಲ್ಲೆಯ ಚಿಕ್ಲಿ(ಯು) ತಾಂಡಾದ ಗೋರ್ ಸೇನಾ ಜಿಲ್ಲಾಧ್ಯಕ್ಷ ದಿನೇಶ ರಾಠೋಡ್ ಹೇಳುತ್ತಾರೆ.ಅಲ್ಲದೇ, ದೀಪಾವಳಿಯ ದಿನ ಲಂಬಾಣಿ ಸಾಂಪ್ರದಾಯಿಕ ಉಡುಪು ತೊಟ್ಟ ಯುವತಿಯರು ಕೈಯಲ್ಲಿ ದೀಪ ಹಿಡಿದು ಮನೆ ಮನೆಗೆ ತೆರಳಿ ಪೂರ್ವಜರ ನೆನಪಿನ ಶೋಕಗೀತೆಗಳನ್ನು ಹಾಡುತ್ತಾರೆ.ಬಂಜಾರ ಸಮಾಜದ ಹೆಣ್ಣು ಮಕ್ಕಳು ದೀಪ ಬೆಳಗಿ ಶೋಕ ಗೀತೆ ಹಾಡುತ್ತಾರೆಸಗಣಿಯಲ್ಲಿ ‘ಪಾಂಡೋರು’ದೀಪಾವಳಿ ಬಂದರೆ ಉತ್ತರ ಕರ್ನಾಟಕದಲ್ಲಿ ಗೋವಿನ ಸಗಣಿಗೂ ದೇವರ ಸ್ಥಾನ ಸಿಗುತ್ತದೆ. ನಗರವೂ ಸೇರಿದಂತೆ ಪ್ರತಿ ಹಳ್ಳಿಯಲ್ಲೂ ಸಗಣಿಯಿಂದ ಪಾಂಡವರ ಮೂರ್ತಿ ಮಾಡಿ ಪೂಜಿಸುವುದು ಈ ಭಾಗದ ವೈಶಿಷ್ಟ್ಯ. ಹಳ್ಳಿಗಳಲ್ಲಿ ಈಗಲೂ ರೈತಾಪಿ ಜನ ಇವರಿಗೆ ‘ಪಾಂಡೋರು’ ಎಂದೇ ಕರೆಯುತ್ತಾರೆ. ನರಕ ಚತುರ್ದಶಿ ದಿನದಿಂದ ಬಲಿಪಾಡ್ಯದವರೆಗೆ ಪಾಂಡವರ ಮೂರ್ತಿ ತಯಾರಿಸುವುದು ಸಂಪ್ರದಾಯ. ಮತ್ತೆ ಕೆಲವರು ಬಲಿಪಾಡ್ಯದ ದಿನ ಮಾತ್ರ ಪೂಜಿಸುವುದು ರೂಢಿ.ಹಸುಗಳು ಇಲ್ಲದವರು ಇದಕ್ಕಾಗಿ ಮೂರ್ನಾಲ್ಕು ದಿನ ಮುಂಚಿತವಾಗಿಯೇ ಸಗಣಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಬಲಿಪಾಡ್ಯದಂದು ಬೆಳಿಗ್ಗೆ ಪಾಂಡವರನ್ನು ತಯಾರಿಸಿ, ಅವುಗಳಿಗೆ ಉತ್ತರಾಣಿ ಕಡ್ಡಿ, ಹಳದಿ ಬಣ್ಣದ ಹೊನ್ನಾರಿ ಹೂವು, ಬಿಳಿ ಹೊಣ್ಣೆ ಹೂವುಗಳನ್ನು ತಲೆಗೆ ಕೀರಿಟದಂತೆ ಹಾಕುತ್ತಾರೆ. ಕುಂಕುಮ, ಭಂಡಾರ ಹಚ್ಚಿ, ಚೆಂಡು ಹೂವುಗಳಿಂದ ಸಿಂಗರಿಸುತ್ತಾರೆ. ಪಾಂಡವರು ಕಾಡಿನಲ್ಲಿದ್ದಾಗ ಉತ್ತರಾಣಿ ಕಡ್ಡಿಗಳು ಪ್ರಿಯವಾಗಿದ್ದವು ಎಂಬ ನಂಬಿಕೆಯ ಕಾರಣ ಸಗಣಿಯ ಮೂರ್ತಿಗಳ ಸಿಂಗಾರಕ್ಕೆ ಅವುಗಳನ್ನೇ ಬಳಸುವ ರೂಢಿ ಬೆಳೆದುಬಂದಿದೆ.ಬೈಲಹೊಂಗಲದಲ್ಲಿ ದೀಪಾವಳಿ ಪಾಡ್ಯದಿನ ಪಾಂಡವರ ಪೂಜೆಗೆ ಸಿದ್ದಗೊಂಡಿರುವ ಪಾಂಡವರ ಪ್ರತಿಮೆಗಳಿಗೆ ಪೂಜೆ ಸಲ್ಲಿಸಿ ಪುಷ್ಪ ಸಲ್ಲಿಸಿರುವುದು.ಸ್ಮಶಾನದಲ್ಲಿ ದೇವಿ ಪೂಜೆರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನೆಲಸಿರುವ ಬಂಗಾಳಿ ಸಮುದಾಯದ ದೀಪಾವಳಿ ಆಚರಣೆ ಬಹುಭಿನ್ನ. ಬೆಳಕಿನ ಹಬ್ಬಕ್ಕೆ ಅವರು ಮನೆಯಲ್ಲಿ ಕಾಳಿಕಾ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವುದು ಒಂದೆಡೆಯಾದರೆ, ಸ್ಮಶಾನದಲ್ಲಿ ದೇವಸ್ಥಾನ ನಿರ್ಮಿಸಿ ವರ್ಷಕ್ಕೊಮ್ಮೆ ದೇವಿಯಮೂರ್ತಿ ಪ್ರತಿಷ್ಠಾಪಿಸಿ ಸಾಮೂಹಿಕವಾಗಿ ಆರಾಧಿಸುವುದು ಮತ್ತೊಂದು ವಿಶೇಷ.ಅಮಾವಾಸ್ಯೆಯಂದು ಸ್ಮಶಾನದಲ್ಲಿರುವ ದೇವಸ್ಥಾನದಲ್ಲಿ ದೇವಿಯ ಹೊಸ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ರಾತ್ರಿ 10 ಗಂಟೆ ಬಳಿಕ ಕ್ಯಾಂಪ್ನ ನಿವಾಸಿಗಳು ದೇವಿ ಸನ್ನಿಧಿಯಲ್ಲಿ ಸೇರಿ ಸಾಮೂಹಿಕ ಪೂಜೆ ಸಲ್ಲಿಸುತ್ತಾರೆ. ಬೆಳಕು ಹರಿಯುವವರೆಗೂ ಚಂಡಿಹೋಮ, ಭಜನೆ, ದೇವಿಯ ಪವಾಡಗಳ ಹಾಡು ಹಾಗೂ ನೃತ್ಯ ನಡೆಯುತ್ತವೆ. ಬೆಳಿಗ್ಗೆ ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ. ‘ಶಿವ ಸ್ಮಶಾನವಾಸಿ. ಕಾಳಿಕಾ ದೇವಿ ಆತನ ಪತ್ನಿ. ಹೀಗಾಗಿ ಶಿವನ ನೆಲೆಯಲ್ಲಿಯೇ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ’ ಎಂದು ಬಂಗಾಳಿಗಳು ಹೇಳುತ್ತಾರೆ.ಸಿಂಧನೂರು ತಾಲ್ಲೂಕಿನ ಪುನರ್ವಸತಿ ಕ್ಯಾಂಪ್ ನಂ.2ರ ಸ್ಮಶಾನದಲ್ಲಿ ನಿರ್ಮಿಸಿರುವ ದೇವಸ್ಥಾನದಲ್ಲಿ ಕಳೆದ ದೀಪಾವಳಿ ಸಂದರ್ಭದಲ್ಲಿ ಪ್ರತಿಷ್ಠಾಪಿಸಿರುವ ಕಾಳಿಕಾದೇವಿ ಮೂರ್ತಿಪಶು ಸಂಪತ್ತಿನ ಆರಾಧನೆತುಮಕೂರು ಜಿಲ್ಲೆಯ ಕಾಡುಗೊಲ್ಲ ಜನಾಂಗದವರು ಪಶು ಸಂಪತ್ತು ಮತ್ತು ಪರಿಸರವನ್ನು ಆರಾಧಿಸುವ ಮೂಲಕ ದೀಪಾವಳಿಯನ್ನು ಭಿನ್ನವಾಗಿ ಆಚರಿಸುತ್ತಾರೆ.ಹಬ್ಬಕ್ಕಾಗಿ ಕಾಡುಗೊಲ್ಲ ಹಟ್ಟಿಗಳು ವಿಶೇಷವಾಗಿ ಸಿದ್ಧಗೊಳ್ಳುತ್ತವೆ. ಇಡೀ ಮನೆಯನ್ನು ಶುದ್ಧೀಕರಿಸಲಾಗುತ್ತದೆ. ಮನೆಯಲ್ಲಿರುವ ಪ್ರತಿಯೊಂದು ವಸ್ತುವನ್ನೂ ಸ್ವಚ್ಛಗೊಳಿಸಿ ಹಬ್ಬದ ಆಚರಣೆಯಲ್ಲಿ ತೊಡಗುತ್ತಾರೆ. ಈ ಸಮಯದಲ್ಲಿ ಮಾಂಸಾಹಾರ ಮತ್ತು ಮದ್ಯ ಕುಡಿಯುವುದು ಸಂಪೂರ್ಣ ನಿಷಿದ್ಧ. ದೀಪಾವಳಿ ಹಬ್ಬದ ಐದು ದಿನ ಪಶುಗಳಿಂದ ಹಾಲು ಕರೆಯುವುದನ್ನು ನಿಲ್ಲಿಸುತ್ತಾರೆ. ಒಂದು ವೇಳೆ ಹಾಲು ಕರೆದರೂ ಅದನ್ನು ಬಳಕೆ ಮಾಡದೆ ಹುತ್ತಕ್ಕೆ ಹಾಕುವ ಪದ್ಧತಿ ರೂಢಿಸಿಕೊಂಡು ಬಂದಿದ್ದಾರೆ. ದೀಪಾವಳಿ (ನರಕ ಚತುರ್ದಶಿ) ದಿನ ತಮ್ಮ ಕುರಿರೊಪ್ಪಗಳಲ್ಲಿ ಸಗಣಿಯಿಂದ ಕಟ್ಟೆ ಕಟ್ಟಿ ಅದಕ್ಕೆ ಹಾಲು ಸುರಿದು ಭಕ್ತಿ ಸಮರ್ಪಿಸುವರು. ಜತೆಗೆ ಜೋಳ, ರಾಗಿ, ಸಜ್ಜೆ ಸೇರಿದಂತೆ ಎಲ್ಲಾ ಧಾನ್ಯಗಳ ತೆನೆಗಳನ್ನು ಇಟ್ಟು ಪ್ರಕೃತಿಯನ್ನು ಪೂಜಿಸುತ್ತಾರೆ.ತುಮಕೂರು ಕಾಡುಗೊಲ್ಲರ ದೀಪಾವಳಿದೀಪಾವಳಿಯೂ ನೋಮುಲ ಪಂಡುಗವೂದೀಪಾವಳಿ ಹಬ್ಬವನ್ನು ಕೋಲಾರ ಜಿಲ್ಲೆಯಲ್ಲಿ ನೋಮುಲ ಪಂಡುಗ (ಹಬ್ಬ) ಹಾಗೂ ಕಜ್ಜಾಯದ ಹಬ್ಬ ಎಂದೂ ಕರೆಯುತ್ತಾರೆ. ಉತ್ತರ ಭಾಗದ ರಾಖಿ ಹಬ್ಬದ ಮಾದರಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಬಣ್ಣ ಬಣ್ಣದ ನೋಮು ದಾರವನ್ನು ಬಲ ಕೈಗೆ ಕಟ್ಟಿಕೊಳ್ಳುವ ಸಂಪ್ರದಾಯ ಇರುವುದರಿಂದ ಈ ಹೆಸರು ಬಂದಿದೆ. ದೀಪಾವಳಿ ಹಬ್ಬದ ದಿನ (ಅಮಾವಾಸ್ಯೆಯಂದು) ಹೊಸ ಮೊರದಲ್ಲಿ ರಾಶಿ ಅಥವಾ ಎಣಿಕೆ ಕಜ್ಜಾಯ, ನಾರು ಬಿಡಿಸದಿರುವ ಅಡಕೆ, ಎಲೆ, ಅರಿಸಿನ, ನೋಮು ದಾರ ಇಟ್ಟುಕೊಂಡು ಮಹಿಳೆಯರು ದೇಗುಲಗಳಿಗೆ ತೆರಳುತ್ತಾರೆ. ದೇವಸ್ಥಾನಗಳಲ್ಲಿ ಗೌರಿಯ ಕಳಸ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ಕೇದಾರೇಶ್ವರ ವ್ರತ ಆಚರಿಸಲಾಗುತ್ತದೆ. ಅರ್ಚಕರು ನೋಮು ದಾರಕ್ಕೆ ಪೂಜೆ ಮಾಡಿ ವಾಪಸ್ ನೀಡುತ್ತಾರೆ.ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನೋಮು ದಾರಗಳಿಗೆ ಮನೆಯಲ್ಲಿ ಮತ್ತೆ ಪೂಜೆ ಸಲ್ಲಿಸುತ್ತಾರೆ. ದೇವರಿಗೆ ಹಾಗೂ ಪೂರ್ವಿಕರಿಗೆ ಎಡೆ ಇಡುತ್ತಾರೆ. ಕುಟುಂಬದ ಹಿರಿಯ ಸದಸ್ಯರಿಂದ ಆರಂಭಿಸಿ ಎಲೆ, ಅಡಕೆ, ಬಾಳೆಹಣ್ಣು, ನೋಮು ದಾರವನ್ನು ಕಜ್ಜಾಯ ಸಮೇತ ನೀಡಲಾಗುತ್ತದೆ. ನೋಮು ದಾರ ಸ್ಪೀಕರಿಸಿದವರು ದಾರವನ್ನು ಬಲಗೈಗೆ ಕಟ್ಟಿಕೊಂಡು ಸಿಹಿ ತಿಂದು ಕಿರಿಯರನ್ನು ಆಶೀರ್ವದಿಸುತ್ತಾರೆ. ಹಬ್ಬದ ಬಳಿಕ ನೋಮು ದಾರವನ್ನು ಬಿಚ್ಚಿ ದೇವರ ಚಿತ್ರದ ಮುಂದೆ ಇಡುತ್ತಾರೆ. ಮುಂದಿನ ವರ್ಷದ ದೀಪಾವಳಿ ಸಂದರ್ಭದಲ್ಲಿ ದೇಗುಲಕ್ಕೆ ತೆಗೆದುಕೊಂಡು ಹೋಗಿ ನೀಡುತ್ತಾರೆ.ಕೋಲಾರದಲ್ಲಿ ದೀಪಾವಳಿ ಹಬ್ಬಕ್ಕೆ ಗ್ರಾಹಕರು ಶುಕ್ರವಾರ ಬಣ್ಣಬಣ್ಣದ ನೋಮುದಾರ ಖರೀದಿಸಿದರು -ಪ್ರಜಾವಾಣಿ ಚಿತ್ರವನಭೋಜನದ ಮೆರುಗುಯಾದಗಿರಿ ಜಿಲ್ಲೆಯ ಸುರಪುರದ ದೀಪಾವಳಿಗೆ ಐತಿಹಾಸಿಕ ಲೇಪನ, ಮೋಹಕ ಮೆರುಗು ಇದೆ. ಬಾಂಧ್ಯವದ ಸೆಳೆತವೂ ಇದೆ. ಮೂರು ಶತಮಾನಗಳ ಕಾಲ ಸುರಪುರವನ್ನು ಆಳಿದ ಗೋಸಲ ದೊರೆಗಳು ದೀಪಾವಳಿಗೆ ವೈಶಿಷ್ಟ್ಯ ತಂದುಕೊಂಡಲು ‘ಪಂಚದಿನದ’ ವನಭೋಜನ ಆಚರಣೆ ಆರಂಭಿಸಿದರು.ಪಾಡ್ಯ ಮತ್ತು ಬಿದಿಗೆಯ ದಿನಗಳಂದು ದೇವರ ಬಾವಿಯಲ್ಲಿ ಗಂಗಾ ಪೂಜೆ ಸಲ್ಲಿಸುತ್ತಾರೆ. ನಂತರ ಮನೆಯಿಂದ ತಂದ ಉಪಾಹಾರವನ್ನು ಇತರರೊಂದಿಗೆ ಹಂಚಿಕೊಂಡು ತಿನ್ನುತ್ತಾರೆ. ತೃತೀಯ ದಿನದಂದು ಕ್ಯಾದಿಗೆಗುಂಡ ಎಂಬ ತೋಟಕ್ಕೆ ವನಭೋಜನಕ್ಕೆ ತೆರಳುತ್ತಾರೆ. ತಮ್ಮ ಮನೆಗಳಲ್ಲಿ ವೈವಿಧ್ಯಮಯ ಅಡುಗೆ ತಯಾರಿಸಿ ಬುತ್ತಿ ಕಟ್ಟಿಕೊಂಡು ತೋಟದ ಪಕ್ಕದಲ್ಲಿ ಇರುವ ಬೆಟ್ಟ ಗುಡ್ಡಗಳಲ್ಲಿ ಕುಳಿತು ಸಾಮೂಹಿಕ ಭೋಜನ ಸವಿಯುತ್ತಾರೆ. ಚತುರ್ಥಿ ದಿನದಂದು ಸಿದ್ದಾಪುರ ರಸ್ತೆಯಲ್ಲಿ ಇರುವ ಸಿದ್ದನ ತೋಟದಲ್ಲಿ ವನಭೋಜನ ಮಾಡುತ್ತಾರೆ. ಪಂಚಮಿ ದಿನದಂದು ಕೊನೆಯ ದಿನದ ವನಭೋಜನ ಮೇರೆ ಮೀರಿರುತ್ತದೆ. ಕುದುರೆಗುಡ್ಡದ ತಪ್ಪಲು ಪ್ರದೇಶದಲ್ಲಿ ಜನಸಾಗರವೇ ಸೇರಿರುತ್ತದೆ. ನೆಂಟರಿಷ್ಟರ ಜತೆಗೆ ಬಂದು ಸಿಹಿ ಭಕ್ಷ್ಯಗಳು, ವೈವಿಧ್ಯಮಯ ಅಡುಗೆ ತಯಾರಿಸಿ ಬುತ್ತಿ ತರುತ್ತಾರೆ.ಹಟ್ಟಿ ಪೂಜೆ: ಕುರಿಗಾಹಿಗಳ ಸಂಭ್ರಮಕುರಿಗಳನ್ನೇ ದೇವರೆಂದು ನಂಬುವ ಕುರಿಗಾಹಿಗಳ ದೀಪಾವಳಿ ಆಚರಣೆ ಗದಗ ಜಿಲ್ಲೆಯ ವಿಶೇಷವಾಗಿದೆ. ಹಟ್ಟಿ ಪೂಜೆಯು ಈ ಭಾಗದಲ್ಲಿ ಅತ್ಯಂತ ಸಂಭ್ರಮದಿಂದ ಜರುಗುತ್ತದೆ.ದೀಪಾವಳಿ ಪಾಡ್ಯದ ಮುಂಜಾನೆಯಿಂದಲೇ ಪೂಜಾ ಕೈಂಕರ್ಯ ಆರಂಭವಾಗುತ್ತದೆ. ಹೂವು, ಬಾಳೆ ಕಂದು, ತಳಿರು ತೋರಣದಿಂದ ಮನೆಯನ್ನು ಅಲಂಕರಿಸುತ್ತಾರೆ. ಕುರಿಗಳ ಹಿಕ್ಕೆಯನ್ನು ಒಟ್ಟುಗೂಡಿಸಿ, ಅದಕ್ಕೆ ಸೀರೆ ಉಡಿಸಿ, ಲಕ್ಷ್ಮಿ ಸ್ವರೂಪದಲ್ಲಿ ಅಲಂಕರಿಸು ತ್ತಾರೆ. ಕುಟುಂಬದವರು, ನೆಂಟರೆಲ್ಲ ಸೇರಿ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸುತ್ತಾರೆ.ಪಾಡ್ಯದ ಹಿಂದಿನ ದಿನ ಕುರಿಗಳನ್ನು ಮರಿಗಳಿಂದ ಬೇರ್ಪಡಿಸಲಾಗುತ್ತದೆ. ಬೆಳಿಗ್ಗೆ ಕುರಿಯ ಹಾಲು ಕರೆದು, ಅದನ್ನು ಬಿಸಿ ಮಾಡಿ, ಉಕ್ಕಿಸುತ್ತಾರೆ. ಹಾಲು ಯಾವ ಕಡೆಗೆ ಉಕ್ಕುತ್ತದೋ ಆ ಕಡೆ ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂಬುದು ಕುರಿಗಾಹಿಗಳ ನಂಬಿಕೆ. ಹಬ್ಬ ಮುಗಿದ ಬಳಿಕ ಹಾಲು ಉಕ್ಕಿದ ದಿಕ್ಕಿನತ್ತ ಕುರಿಗಳನ್ನು ಮೇಯಿಸಲು ಕೊಂಡೊಯ್ಯುತ್ತಾರೆ.ಅಂಟಿಗೆ–ಪಂಟಿಗೆ, ಕೋಲಾಟ ಆಚರಣೆಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನಲ್ಲಿ ಅಂಟಿಗೆ–ಪಂಟಿಗೆ ಮತ್ತು ಕೋಲಾಟ ಆಚರಣೆಯಲ್ಲಿದ್ದರೆ, ಬಯಲು ಸೀಮೆಯ ಕಡೂರು ತಾಲ್ಲೂಕಿನ ಲಂಬಾಣಿ ತಾಂಡಾಗಳಲ್ಲಿ ಭೋಗ್ ಎಂಬ ಆಚರಣೆ ಇದೆ. ಅಂಟಿಗೆ–ಪಂಟಿಗೆ ಮತ್ತು ಕೋಲಾಟ ಕಲೆಯನ್ನು ಆಯ್ದ ಮನೆಗಳಿಗೆ ಮಾತ್ರ ತೆರಳಿ ಕಲಾವಿದರು ಪ್ರದರ್ಶನ ಮಾಡುತ್ತಾರೆ. ಶೃಂಗೇರಿ, ಕೊಪ್ಪ, ಕಳಸ ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ಇದು ಆಚರಣೆಯಲ್ಲಿದೆ. ದೀಪಾವಳಿ ಅಮಾವಾಸ್ಯೆಯಂದು ಆರಂಭವಾಗಿ ಮೂರು ಅಥವಾ ಐದು ದಿನ ನಡೆಸಲಾಗುತ್ತದೆ.ಕಲಾವಿದರು ದೀಪ ಹಚ್ಚಿಕೊಂಡು ರಾತ್ರಿ ವೇಳೆ ಮನೆಗಳಿಗೆ ತೆರಳಿ ದೀಪದ ಬೆಳಕನ್ನು ಶುಭ ಸಂಕೇತವಾಗಿ ವರ್ಗಾಯಿಸುತ್ತಾರೆ. ಅದನ್ನೇ ಅಂಟಿಗೆ ಪಂಟಿಗೆ ಎನ್ನಲಾಗುತ್ತದೆ. ಈ ವೇಳೆ ಬಾಗಿಲು ತೆಗೆಸುವ ಹಾಡು, ತುಳಸಿ ಹಾಡು, ಬಲೀಂದ್ರನ ಹಾಡುಗಳನ್ನು ಹಾಡುತ್ತಾರೆ. ಕಲಾವಿದರು ಹಚ್ಚಿ ಹೋದ ದೀಪ ಆರದಂತೆ ಎಚ್ಚರ ವಹಿಸುತ್ತಾರೆ. ಅದು ಆರಿದರೆ ಕೇಡು ಎಂಬ ನಂಬಿಕೆ ಇದೆ.ಕೋಲಾಟದ ಕಲಾವಿದರು ಬಲಿಂದ್ರನ ಆರಾಧನೆ ಮಾಡುತ್ತಾ ಅಮಾವಾಸ್ಯೆ ರಾತ್ರಿ ಪೂಜೆ ಮಾಡಿ ಕೋಲು ಕಡಿಯುತ್ತಾರೆ. ಹಗಲಿನಲ್ಲಿ ಮಾತ್ರ ಮನೆ–ಮನೆಗೆ ತೆರಳಿ ಕೋಲಾಟ ಪ್ರದರ್ಶಿಸುತ್ತಾರೆ. ಆಟ ಆಡುವಾಗ ಕೋಲು ಕೆಳಗೆ ಬೀಳದಂತೆ ಎಚ್ಚರ ವಹಿಸುತ್ತಾರೆ. ಬಿದ್ದರೆ ಅಶುಭ ಎಂದು ಹೇಳಲಾಗುತ್ತದೆ.ಕಡೂರು ತಾಲ್ಲೂಕಿನಲ್ಲಿ ಲಂಬಾಣಿ ತಾಂಡಾಗಳಲ್ಲಿ ಅಮಾವಾಸ್ಯೆಯ ದಿನ ಗ್ರಾಮದಲ್ಲಿ ಹಿರಿಯರ ಪೂಜೆ ನಡೆಯಲಿದೆ. ಹೆಣ್ಣುಮಕ್ಕಳು ಕಾಡು ಹೂಗಳನ್ನು ಸಂಗ್ರಹಿಸಿ ತಂದು ಮನೆಯ ಮುಂದೆ ಸಿಂಗರಿಸುತ್ತಾರೆ. ಕುರಿಯನ್ನು ಬಲಿ ನೀಡಿ ಒಂದು ಅಂಗವನ್ನು ಸುಟ್ಟು ನಾಲ್ಕು ದಿಕ್ಕುಗಳಲ್ಲಿ ಗಾಳಿಯಲ್ಲಿ ತೂರಿ ಬರುವುದು ವಾಡಿಕೆ. ಉಳಿದಿದ್ದನ್ನು ನೈವೇದ್ಯವಾಗಿ ಬಳಸುವುದು ಪದ್ಧತಿ. ಇದಕ್ಕೆ ‘ಸೊಳೈ’ ಎನ್ನುವ ಹೆಸರಿದೆ. ಗ್ರಾಮದ ಪ್ರತಿ ಮನೆಯ ಮುಂದೆ ಭೋಗ್ ಆಚರಣೆಯ ಅಂಗವಾಗಿ ಹಾಲು, ಅನ್ನ, ತುಪ್ಪ ಬೆರೆಸಿ ದೇವತೆಗಳು ಮತ್ತು ಹಿರಿಯರಿಗೆ ಹೋಮದ ರೀತಿಯಲ್ಲಿ ಆಹುತಿ ಸಲ್ಲಿಸುವ ಪದ್ಧತಿಯೂ ಇದೆ.