Madhya Pradesh | ನಿಯಂತ್ರಣ ತಪ್ಪಿ ಭಕ್ತರ ಮೇಲೆ ಹರಿದ ಲಾರಿ – 13 ಮಂದಿ ದುರ್ಮರಣ
ಭೋಪಾಲ್: ನಿಯಂತ್ರಣ ತಪ್ಪಿದ ಭತ್ತ ತುಂಬಿದ ಲಾರಿಯೊಂದು (Lorry) ದೇವಸ್ಥಾನದ ಬಳಿ ಸೇರಿದ್ದ ಭಕ್ತರ ಮೇಲೆ ಹರಿದ ಪರಿಣಾಮ 13 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ನಲ್ಲಿರುವ ಶೀತಲಾ ಮಾತಾ ದೇವಸ್ಥಾನದ (Sheetla Mata Temple) ಬಳಿ ನಡೆದಿದೆ. ಲಾರಿ ಪೊಲೀಸ್ ಬ್ಯಾರಿಕೇಡ್ಗಳಿಗೆ ಡಿಕ್ಕಿ ಹೊಡೆದು ದೇವಸ್ಥಾನದ

ಭೋಪಾಲ್: ನಿಯಂತ್ರಣ ತಪ್ಪಿದ ಭತ್ತ ತುಂಬಿದ ಲಾರಿಯೊಂದು (Lorry) ದೇವಸ್ಥಾನದ ಬಳಿ ಸೇರಿದ್ದ ಭಕ್ತರ ಮೇಲೆ ಹರಿದ ಪರಿಣಾಮ 13 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ನಲ್ಲಿರುವ ಶೀತಲಾ ಮಾತಾ ದೇವಸ್ಥಾನದ (Sheetla Mata Temple) ಬಳಿ ನಡೆದಿದೆ. ಲಾರಿ ಪೊಲೀಸ್ ಬ್ಯಾರಿಕೇಡ್ಗಳಿಗೆ ಡಿಕ್ಕಿ ಹೊಡೆದು ದೇವಸ್ಥಾನದ ಹೊರಗೋಡೆ ಹಾಗೂ ಗೇಟ್ಗೆ ಡಿಕ್ಕಿ ಹೊಡೆದಿದೆ. ಈ ಕುರಿತು ಗ್ವಾಲಿಯರ್ನ (Gwalior) ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಧರ್ಮವೀರ್ ಸಿಂಗ್ ಮಾತನಾಡಿ, ಶನಿವಾರ ತಡರಾತ್ರಿ ಸುಮಾರು 1:30ರ ವೇಳೆಗೆ ಛಿನೋರ್ ಕಡೆಯಿಂದ ಬರುತ್ತಿದ್ದ ಲಾರಿ ಇಳಿಜಾರಿನ ರಸ್ತೆಯಲ್ಲಿ ನಿಯಂತ್ರಣ ತಪ್ಪಿದೆ. ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದರೂ, ಲಾರಿ ಪೊಲೀಸ್ ತಡೆಗೋಡೆಗಳಿಗೆ ಡಿಕ್ಕಿ ಹೊಡೆದು ಭಕ್ತರ ಮೇಲೆ ಹರಿದಿದೆ ಎಂದರು. ಅಪಘಾತದ ಬಳಿಕ ಗಾಯಗೊಂಡ 39 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಐದರಿಂದ ಆರು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಎಸ್ಎಸ್ಪಿ ತಿಳಿಸಿದ್ದಾರೆ. ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗ್ವಾಲಿಯರ್ ಜಿಲ್ಲಾಧಿಕಾರಿ ರುಚಿಕಾ ಚೌಹಾಣ್ ಮಾತನಾಡಿ, ಅಪಘಾತದ ಮಾಹಿತಿ ಸಿಕ್ಕ ತಕ್ಷಣ ಅಂಬುಲೆನ್ಸ್ ಹಾಗೂ ಇತರ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಿಟಿ ಸ್ಕ್ಯಾನ್ ಹಾಗೂ ಎಕ್ಸ್ರೇ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಲಾರಿಯ ತಾಂತ್ರಿಕ ದೋಷದ ಕುರಿತು ಪರಿಶೀಲಿಸಲು ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ) ತಂಡವನ್ನೂ ಕಳುಹಿಸಲಾಗಿದೆ. ಅಪಘಾತವನ್ನು ಕಣ್ಣಾರೆ ಕಂಡ ಗಾಯಾಳುವಿನ ಸಹೋದರನೊಬ್ಬ ಮಾತನಾಡಿ, ಲಾರಿಯಲ್ಲಿ ಅತಿಯಾಗಿ ಭತ್ತ ತುಂಬಲಾಗಿತ್ತು. ಏಕಾಏಕಿ ನಿಯಂತ್ರಣ ತಪ್ಪಿದ ಲಾರಿ ಅಂಗಡಿಗಳು ಹಾಗೂ ಜನರ ಮೇಲೆ ಹರಿದಿದೆ. ಘಟನೆಯಲ್ಲಿ ಕೆಲವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತನ್ನ ಸಹೋದರನಿಗೂ ಗಾಯಗಳಾಗಿದ್ದು, ಸ್ಥಳದಲ್ಲಿ ಇನ್ನೂ ಗೊಂದಲದ ವಾತಾವರಣವಿದೆ ಎಂದು ತಿಳಿಸಿದ್ದಾರೆ.