Neuroscience Research: ಮೂಗಿನಿಂದ ಮಿದುಳಿಗೆ ನರಸಂವಹನ ವೃತ್ತ!
ಖಿನ್ನತೆ, ಆತಂಕ, ಮಾನಸಿಕ ಉದ್ರೇಕ ಮುಂತಾದವು ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳು. ಧ್ಯಾನ, ಯೋಗ, ಪ್ರಾಣಾಯಾಮಗಳಂತಹ ವ್ಯಾಯಾಮಗಳಿಂದ ಉಸಿರಾಟದ ಕ್ರಿಯೆ ಸರಾಗವಾಗಿ ನಡೆಯುತ್ತಿದ್ದು ಅದರಿಂದ ಮನಸ್ಸಿಗೆ ಸಂಬಂಧಿಸಿದ ಇಂಥ ಕಾಯಿಲೆಗಳು ತಗುಲುವುದಿಲ್ಲ ಎಂದು ಹೇಳಲಾಗುತ್ತದೆ. ಅದು ಹೇಗೆ ಎಂಬ ಪ್ರಶ್ನೆಗೆ ಇದುವರೆಗೆ ಸರಿಯಾದ ಉತ್ತರವಿರಲಿಲ್ಲ. ಇತ್ತೀಚಿನ ನರವಿಜ್ಞಾನ ಕ್ಷೇತ್ರದ

ಖಿನ್ನತೆ, ಆತಂಕ, ಮಾನಸಿಕ ಉದ್ರೇಕ ಮುಂತಾದವು ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳು. ಧ್ಯಾನ, ಯೋಗ, ಪ್ರಾಣಾಯಾಮಗಳಂತಹ ವ್ಯಾಯಾಮಗಳಿಂದ ಉಸಿರಾಟದ ಕ್ರಿಯೆ ಸರಾಗವಾಗಿ ನಡೆಯುತ್ತಿದ್ದು ಅದರಿಂದ ಮನಸ್ಸಿಗೆ ಸಂಬಂಧಿಸಿದ ಇಂಥ ಕಾಯಿಲೆಗಳು ತಗುಲುವುದಿಲ್ಲ ಎಂದು ಹೇಳಲಾಗುತ್ತದೆ. ಅದು ಹೇಗೆ ಎಂಬ ಪ್ರಶ್ನೆಗೆ ಇದುವರೆಗೆ ಸರಿಯಾದ ಉತ್ತರವಿರಲಿಲ್ಲ. ಇತ್ತೀಚಿನ ನರವಿಜ್ಞಾನ ಕ್ಷೇತ್ರದ ಸಂಶೋಧನೆಗಳು ಈ ಸಂದೇಹಕ್ಕೆ ಉತ್ತರವನ್ನು ನೀಡಲು ಪ್ರಾರಂಭಿಸಿವೆ. ಜಿನ್ಸೊಂಗ್ ಗುಯಿ ಮತ್ತು ಸಂಗಡಿಗರು ಇಲಿಗಳಲ್ಲಿ ವಿಶಿಷ್ಟ ಅಧ್ಯಯನಗಳನ್ನು ನಡೆಸಿ, ‘ಮೂಗಿನಿಂದ ಮಿದುಳಿಗೆ’ ನರಸಂವಹನ ವೃತ್ತವೊಂದು ಇದೆ; ಅದು ಆತಂಕ, ಚಿಂತೆ ಅಥವಾ ವ್ಯಾಕುಲತೆಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ‘ನ್ಯೂಯಾರ್ಕ್ ಅಕಾಡೆಮಿ ಆಫ್ ಸೈನ್ಸಸ್ನ ನಡವಳಿಕೆಗಳು’ ಎಂಬ ನಿಯತಕಾಲಿಕೆಯ 2026ರ ಅಗಸ್ಟ್ 18ರ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ. ನಿಧಾನ ಮತ್ತು ನಿಯಂತ್ರಿತ ಉಸಿರಾಟವು ಮನಸ್ಸನ್ನು ಶಾಂತಗೊಳಿಸುವ ಪರಿಣಾಮಗಳನ್ನು ಹೊಂದಿದೆ ಎನ್ನುತ್ತಾರೆ, ಈ ಸಂಶೋಧಕರು.ಉಸಿರಾಟದ ಸಮಯದಲ್ಲಿ (ಉಚ್ಛ್ವಾಸ) ಗಾಳಿಯು ಮೂಗಿನ ಮೂಲಕ ಶ್ವಾಸಕೋಶಕ್ಕೆ ಪ್ರವೇಶಿಸುತ್ತದೆ; ನಿಃಶ್ವಾಸದ ಸಮಯದಲ್ಲಿ ಗಾಳಿ ಹೊರಕ್ಕೆ ಹೋಗುತ್ತದೆ. ಗಾಳಿಯು ಮೂಗು-ಶ್ವಾಸನಾಳಗಳ ಮೂಲಕ ಶ್ವಾಸಕೋಶವನ್ನು ಪ್ರವೇಶಿಸುವಾಗ ಮೂಗಿನ ಹೊಳ್ಳೆಗಳಲ್ಲಿರುವ ಕೂದಲುಗಳು ಹಾಗೂ ಲೋಳೆ ಸ್ವಲ್ಪಮಟ್ಟಿಗೆ ರೋಗಾಣುಗಳ ಪ್ರವೇಶವನ್ನು ತಡೆಯುತ್ತವೆ ಎಂದು ಕಂಡುಹಿಡಿಯಲಾಗಿತ್ತು. ಈಗ ಗುಯಿಯವರ ತಂಡವು, ಮೂಗು ಗಾಳಿಯು ಶರೀರವನ್ನು ಸೇರುವ ಮಾರ್ಗವಷ್ಟೇ ಅಲ್ಲ, ಅದು ನಮ್ಮ ಭಾವನೆಗಳನ್ನು ಒಳಗೊಂಡಿರುವ ಮಿದುಳಿನ ಜಾಲಗಳಿಗೆ ಲಯಬದ್ಧ ಮಾಹಿತಿಯನ್ನು ಕಳುಹಿಸುವ ಸಾಮರ್ಥ್ಯವಿರುವ ಸಂವೇದನಾ ಅಂಗ ಎಂದು ತೋರಿಸಿದೆ. ಮೂಗಿನ ಮೂಲಕ ಶರೀರವನ್ನು ಪ್ರವೇಶಿಸುವ ಗಾಳಿಯ ಹರಿವಿನ ಲಯವು ಭಯ, ಕಳವಳ ಅಥವಾ ಆತಂಕಕ್ಕೆ ಸಂಬಂಧಿಸಿದ ಮಿದುಳಿನ ಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಕಂಡುಹಿಡಿದಿದ್ದಾರೆ.ಮೂಗಿನ ಒಳಭಾಗದಲ್ಲಿ ಲಕ್ಷಾಂತರ ವಿಶೇಷ ಸಂವೇದನಾ ಜೀವಕೋಶಗಳಿರುತ್ತವೆ. ಇವುಗಳಲ್ಲಿ ಕೆಲವು ವಾಸನೆಯನ್ನು ಗ್ರಹಿಸುವ ಘ್ರಾಣ ಸಂವೇದನಾ ನರಕೋಶಗಳು. ಇವು ಪರಿಸರದಲ್ಲಿರುವ ವಾಸನೆಗೆ ಕಾರಣವಾದ ಅಣುಗಳನ್ನು ಪತ್ತೆ ಮಾಡುತ್ತವೆ. ಅಲ್ಲದೆ ಈ ಜೀವಕೋಶಗಳು ಮೂಗಿನಲ್ಲಿ ಗಾಳಿಯು ಹೇಗೆ ಚಲಿಸುತ್ತಿದೆ ಎಂಬುದನ್ನು ಕೂಡ ಕಂಡುಹಿಡಿದು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತದೆ. ಗಾಳಿಯ ಹರಿವಿಗೆ ತಕ್ಕಂತೆ ಮೂಗಿನ ಕುಳಿಯಲ್ಲಿರುವ ಸಂವೇದನಾ ನರಕೋಶಗಳಲ್ಲಿ ಲಯಬದ್ಧ ಮಾದರಿ ಸೃಷ್ಟಿಯಾಗುತ್ತವೆ. ಈ ಮಾದರಿಯು ನರಕೋಶಗಳ ತಂತುಗಳಲ್ಲಿ ರಾಸಾಯನಿಕ ಕ್ರಿಯೆಗಳ ಮೂಲಕ ವಿದ್ಯುತ್ಪ್ರವಾಹದಂತೆ (ನರಾವೇಗ) ಪರಿವರ್ತನೆಯಾಗುತ್ತದೆ. ಈ ನರಾವೇಗವು ನರತಂತುಗಳ ಮುಖಾಂತರ ಸಂಕೇತಗಳ ರೂಪದಲ್ಲಿ ಮಿದುಳಿನ ಘ್ರಾಣ ಬುರುಡೆಗೆ (Olfactory bulb) ರವಾನೆಯಾಗುತ್ತದೆ.ಘ್ರಾಣ ಬುರುಡೆಯು ವಾಸನೆಯನ್ನು ಸಂಸ್ಕರಿಸುವ ಮಿದುಳಿನ ಭಾಗ. ವಾಸನೆಯನ್ನು ಗುರುತಿಸುವುದರೊಂದಿಗೆ ಅದು ಭಾವನೆ ಮತ್ತು ಸ್ಮರಣೆಗಳ ನಿಯಂತ್ರಣಕೇಂದ್ರವನ್ನು ಒಳಗೊಂಡಿದ್ದು ಮಿದುಳಿನ ಅನೇಕ ಇತರ ಪ್ರದೇಶಗಳೊಂದಿಗೆ ಸಂಪರ್ಕ ಹೊಂದಿರುತ್ತದೆ. ಇದು ಉಸಿರಾಟವು ಭಾವನಾತ್ಮಕ ಸ್ಥಿತಿಗಳ ಮೇಲೆ ಪ್ರಭಾವ ಬೀರುವ ಮಾರ್ಗವನ್ನು ಒದಗಿಸುತ್ತದೆ.ಗುಯಿ ಸಂಗಡಿಗರ ವೃತ್ತದ ಮುಂದಿನ ಭಾಗ, ಮಿದುಳಿನ ಘ್ರಾಣಭಾಗದ ತೊಗಟೆ (ಪೆರಿರೈನಲ್ ಕಾರ್ಟೆಕ್ಸ್). ಇದು ಹೊಸದಾಗಿ ಗುರುತಿಸಲಾದ ವೃತ್ತದ ಒಂದು ಪ್ರಮುಖ ಭಾಗವಾಗಿದ್ದು ಸ್ಮರಣೆ, ಕಲಿಕೆ, ಮತ್ತು ಅನುಭವಗಳ ಬಗೆಗಿನ ಮಾಹಿತಿಯನ್ನು ಸಂಸ್ಕರಿಸುತ್ತದೆ. ಮೂಗಿನ ಸಂವೇದನಾ ಮಾಹಿತಿಯನ್ನು ಸ್ವೀಕರಿಸಿ, ಅದಕ್ಕೆ ಪ್ರತಿಕ್ರಿಯೆಯಾಗಿ ಆತಂಕವನ್ನು ನಿಯಂತ್ರಿಸುತ್ತದೆ ಎಂದು ಹೊಸ ಅಧ್ಯಯನಗಳು ತಿಳಿಸಿವೆ.ಆತಂಕವನ್ನು ಪೂರ್ತಿ ಹೋಗಲಾಡಿಸುವುದಕ್ಕೆ ಪ್ರಚೋದನೆಯು ಮಿದುಳಿನ ‘ಅಮಿಗ್ದಾಲ’ ಎಂಬ ಭಾಗಕ್ಕೆ ವರ್ಗಾವಣೆಯಾಗುತ್ತದೆ. ಅಮಿಗ್ಡಾಲದಲ್ಲಿ ವ್ಯಕ್ತಿಯ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೇಂದ್ರವಿರುತ್ತದೆ. ಈ ನರಮಾರ್ಗವು ಉಸಿರಾಟದ ಲಯ, ವೇಗ ಹಾಗೂ ಇತರ ಭಾವನಾತ್ಮಕ ವೃತ್ತಗಳ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿನ ನರಕೋಶಗಳು ನರಾವೇಗವನ್ನು ಗ್ರಹಿಸಿ ಆತಂಕವನ್ನು ಪೂರ್ಣ ಹೋಗಲಾಡಿಸಿ ಸಮತೋಲನವನ್ನು ಕಾಪಾಡುತ್ತವೆ.ಮೂಗಿನ ಪ್ರಚೋದನೆಯ ಆವರ್ತನದ ಪ್ರಾಮುಖ್ಯವನ್ನು ಅಧ್ಯಯನ ಮಾಡಲು ಈ ಸಂಶೋಧಕರು ಇಲಿಗಳನ್ನು ಬಳಸಿಕೊಂಡರು. ಏಕೆಂದರೆ ಇಂಥ ಪ್ರಯೋಗಗಳನ್ನು ನೇರವಾಗಿ ಮನುಷ್ಯರಲ್ಲಿ ಮಾಡುವಂತಿಲ್ಲ.ಒಂದು ಪ್ರಾಣಿ ಅಥವಾ ಮನುಷ್ಯ ಬೆದರಿಕೆ ಅಥವಾ ಆತಂಕಕ್ಕೆ ಒಳಗಾದಾಗ ಉಸಿರಾಟ ವೇಗವಾಗುತ್ತದೆ. ಈ ಉಸಿರಾಟದ ಬದಲಾವಣೆಯು ಮಿದುಳಿಗೆ ತಲುಪುತ್ತದೆ. ಮಾಹಿತಿ ಮಿದುಳಿನ ಪೆರಿರೈನಲ್ ತೊಗಟೆ ಹಾಗೂ ಅಮಿಗ್ದಾಲಗಳಲ್ಲಿ ಸಂಸ್ಕರಣೆಯಾಗುತ್ತದೆ. ಅಲ್ಲಿಂದ ಮಾಹಿತಿ ನರವೇಗದ ಮೂಲಕವೇ ಮೂಗಿಗೆ ತಲುಪುತ್ತದೆ. ಉಸಿರಾಟದ ಕ್ರಿಯೆ ನಿಧಾನವಾಗಿ ಸಮತೋಲನಕ್ಕೆ ಬರುತ್ತದೆ. ಅದರೊಂದಿಗೆ ವ್ಯಕ್ತಿಯ ಆತಂಕವೂ ನಿಧಾನವಾಗಿ ಕಡಿಮೆಯಾಗತೊಡಗುತ್ತದೆ.ಮೂಗಿನ ಮೂಲಕ ಗಾಳಿ ಹಾದುಹೋದಾಗ, ಅದು ಈ ನರಕೋಶಗಳ ಲಯಬದ್ಧ ಯಾಂತ್ರಿಕ ಪ್ರಚೋದನೆಯನ್ನು ಉಂಟುಮಾಡುತ್ತದೆ, ಸರಿ. ಆದರೆ ನಾವು ಬಾಯಿಯ ಮೂಲಕವೂ ಉಸಿರಾಡಬಹುದಲ್ಲ. ಹಾಗೆ ಬಾಯಿಯ ಮೂಲಕ ಉಸಿರಾಟ ಮಾಡಿದರೆ ಏನಾಗುತ್ತದೆ ಎಂಬ ಪ್ರಶ್ನೆ ಗುಯಿ ಸಂಗಡಿಗರಿಗೆ ಎದುರಾಯಿತು. ಬಾಯಿಯ ಮೂಲಕ ನಡೆಸುವ ಉಸಿರಾಟವು (ಮೌಖಿಕ) ಮೂಗಿನ ಸಂವೇದನಾ ಮಾರ್ಗದ ಬಹುಭಾಗವನ್ನು ತಪ್ಪಿಸಿಕೊಂಡು (ಬೈಪಾಸ್) ಹೋಗುತ್ತದೆ. ಬಾಯಿಯ ಮೂಲಕ ಉಸಿರಾಟದ ಪರಿಣಾಮವನ್ನು ಪರೀಕ್ಷಿಸಲಾಗಿ, ಮೂಗಿನ ಉಸಿರಾಟ ಮತ್ತು ಬಾಯಿಯ ಉಸಿರಾಟಗಳು ಮಿದುಳಿನ ಚಟುವಟಿಕೆಯ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ ಎಂದು ಕಂಡುಬಂತು. ಮೂಗಿನ ಮೂಲಕ ಉಸಿರಾಡುವುದನ್ನು ತಪ್ಪಿಸಿ ಉಸಿರಾಟವನ್ನು ಬಾಯಿಗೆ ತಿರುಗಿಸಿದಾಗ ಲಿಂಬಿಕ್ ಮಿದುಳಿನ (ಮನೋಭಾವ ಮತ್ತು ಪ್ರವ್ರತ್ತಿಯನ್ನು ನಿಯಂತ್ರಿಸುವ ಭಾಗ) ಚಟುವಟಿಕೆಯು ಉಸಿರಾಟದ ಸಮನ್ವಯತೆಯನ್ನು ಕಡಿಮೆ ಮಾಡುತ್ತದೆ ಎಂದು ಕಂಡುಬಂತು. ಇದು ಮೂಗಿನ ಮೂಲಕ ಗಾಳಿಯ ಹರಿವಿನ ಆವರ್ತನವು ಆತಂಕ-ಸಂಬಂಧಿತ ನರಮಂಡಲದ ಮೇಲೆ ಪ್ರಭಾವ ಬೀರುತ್ತದೆ ಎಂದು ದೃಢೀಕರಿಸಿತು. 261028-51-160703774