PUBLiC TV Explainer| ಭಾರತ ಇನ್ನೂ ಸ್ಟಾರ್ಲಿಂಕ್ಗೆ ಅನುಮತಿ ನೀಡಿಲ್ಲ ಯಾಕೆ? ಆತಂಕ ಏನು?
ಕೇಬಲ್ಗಳಿಲ್ಲ, ಮೊಬೈಲ್ ಟವರ್ಗಳ ಹಂಗಿಲ್ಲ; ನೇರವಾಗಿ ಬಾಹ್ಯಾಕಾಶದ ಉಪಗ್ರಹಗಳಿಂದಲೇ ಅತಿ ವೇಗದ ಇಂಟರ್ನೆಟ್! ವಿಶ್ವದ 160ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸದ್ದು ಮಾಡುತ್ತಿರುವ ಎಲಾನ್ ಮಸ್ಕ್ ಒಡೆತನದ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ‘ಸ್ಟಾರ್ಲಿಂಕ್’ (Starlink) ಭಾರತದ ಮಾರುಕಟ್ಟೆ ಪ್ರವೇಶಿಸಲು ಕಾದು ಕುಳಿತಿದೆ. “ಭಾರತದ ಪ್ರತಿಯೊಂದು ಹಳ್ಳಿಗೂ ಹೈ-ಸ್ಪೀಡ್ ಇಂಟ

ಕೇಬಲ್ಗಳಿಲ್ಲ, ಮೊಬೈಲ್ ಟವರ್ಗಳ ಹಂಗಿಲ್ಲ; ನೇರವಾಗಿ ಬಾಹ್ಯಾಕಾಶದ ಉಪಗ್ರಹಗಳಿಂದಲೇ ಅತಿ ವೇಗದ ಇಂಟರ್ನೆಟ್! ವಿಶ್ವದ 160ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸದ್ದು ಮಾಡುತ್ತಿರುವ ಎಲಾನ್ ಮಸ್ಕ್ ಒಡೆತನದ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ‘ಸ್ಟಾರ್ಲಿಂಕ್’ (Starlink) ಭಾರತದ ಮಾರುಕಟ್ಟೆ ಪ್ರವೇಶಿಸಲು ಕಾದು ಕುಳಿತಿದೆ. “ಭಾರತದ ಪ್ರತಿಯೊಂದು ಹಳ್ಳಿಗೂ ಹೈ-ಸ್ಪೀಡ್ ಇಂಟರ್ನೆಟ್ ತಲುಪಲು ಸ್ಟಾರ್ಲಿಂಕ್ಗೆ ಅನುಮತಿ ನೀಡಬೇಕು” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಧ್ವನಿ ಎತ್ತುತ್ತಿದ್ದರೆ, “ದೇಶದ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ” ಎಂದು ಮತ್ತೊಂದು ಬಣ ಪ್ರತಿಪಾದಿಸುತ್ತಿದೆ. ಒಂದೆಡೆ ಉದ್ಯಮಿ ಎಲಾನ್ ಮಸ್ಕ್ ಹಾಗೂ ಭಾರತ ಸರ್ಕಾರದ ನಡುವಿನ ಪರಸ್ಪರ ವಾಗ್ವಾದಗಳು, ಇನ್ನೊಂದೆಡೆ ರಾಜಕೀಯ ಜಟಾಪಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಅಷ್ಟಕ್ಕೂ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದರೂ ಕೇಂದ್ರ ಸರ್ಕಾರ ಸ್ಟಾರ್ಲಿಂಕ್ಗೆ ಇನ್ನೂ ಹಸಿರು ನಿಶಾನೆ ತೋರದಿರಲು ನಿಜವಾದ ಕಾರಣಗಳೇನು? ಭಾರತದ ಭದ್ರತಾ ಆತಂಕವೇನು? ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ. ಚರ್ಚೆ ಆರಂಭವಾಗಿದ್ದು ಹೇಗೆ? ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪನಿಯ ಮುಖ್ಯಸ್ಥ ಎಲೋನ್ ಮಸ್ಕ್ (Elon Musk) ಸ್ಟಾರ್ಲಿಂಕ್ ಜಗತ್ತಿನ 165 ಕ್ಕೂ ಹೆಚ್ಚು ದೇಶಗಳಲ್ಲಿ ಪರವಾನಗಿ ಪಡೆದಿದೆ ಮತ್ತು ಭಾರತ ಸರ್ಕಾರದ ಪ್ರತಿಯೊಂದು ಕಾನೂನು ಹಾಗೂ ನಿಯಮಾವಳಿಗಳನ್ನು ಪಾಲಿಸಲು ಕಳೆದ 5 ವರ್ಷಗಳನ್ನು ಕಳೆದಿದೆ. ಆದರೂ ನಮಗೆ ಇನ್ನು ಪರವಾನಗಿ ಸಿಕ್ಕಿಲ್ಲ ಯಾಕೆ? ಭಾರತದ(India) ನಿಜವಾದ ಬಾಸ್ ಅಂಬಾನಿಯೇ ಎಂದು ಪ್ರಶ್ನೆ ಮಾಡುವ ಮೂಲಕ ಚರ್ಚೆ ಹುಟ್ಟು ಹಾಕಿದರು. ಈ ಪೋಸ್ಟ್ಗೆ ರಾಹುಲ್ ಗಾಧಿ ಪ್ರತಿಕ್ರಿಯಿಸಿ “ಭಾರತಕ್ಕೆ ಸ್ವಾಗತ ಎಲಾನ್, ನೀವು ಇನ್ನೊಬ್ಬ ವ್ಯಕ್ತಿಯನ್ನು ಕಂಡುಕೊಳ್ಳುವವರೆಗೂ ಕಾಯಿರಿ” ಎಂದು ಪರೋಕ್ಷವಾಗಿ ಉದ್ಯಮಿ ಗೌತಮ್ ಅದಾನಿ ಅವರತ್ತ ಬೆರಳು ತೋರಿಸಿದ್ದಾರೆ. ರಾಹುಲ್ ಗಾಂಧಿ(Rahul Gandhi) ಅವರ ಈ ಪೋಸ್ಟ್ಗೆ ತಕ್ಷಣವೇ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್, “ಧನ್ಯವಾದಗಳು ರಾಹುಲ್. ಇದು ನಿಜಕ್ಕೂ ಆತಂಕಕಾರಿ ವಿಷಯ” ಎಂದು ಹೇಳಿದ್ದರಿಂದ ಈಗ ಜೋರಾಗಿ ಚರ್ಚೆ ನಡೆಯುತ್ತಿದೆ. Starlink is licensed in over 165 countries and has spent five years complying with every single law and requirement of the government of India, so why still no license? Is Ambani the real boss of India? — Elon Musk (@elonmusk) October 8, 2026 ಅನುಮತಿ ನೀಡಿಲ್ಲ ಯಾಕೆ? ಉಪಗ್ರಹ ಇಂಟರ್ನೆಟ್ ಸೇವೆಗಳ ಅಂತಿಮ ಭದ್ರತಾ ಅನುಮೋದನೆಯು ಭಾರತದ ಗೃಹ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ವಿದೇಶಿ ಉಪಗ್ರಹ ಆಪರೇಟರ್ಗಳು ಭಾರತೀಯ ಗೇಟ್ವೇಗಳನ್ನು ಬೈಪಾಸ್ ಮಾಡಿ ನೇರವಾಗಿ ಸೇವೆ ನೀಡದಂತೆ ಮತ್ತು ಭಾರತದ ಭದ್ರತೆಗೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳಲು ಕಟ್ಟುನಿಟ್ಟಾದ ತಪಾಸಣೆ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರದ ಪ್ರಕಾರ, ಭಾರತದಲ್ಲಿ ಯಾವುದೇ ಒಂದು ಕಂಪನಿಗೆ ತಾರತಮ್ಯ ಮಾಡುತ್ತಿಲ್ಲ ಅಥವಾ ಯಾರದೇ ಏಕಸ್ವಾಮ್ಯಕ್ಕೆ ಮಣಿಯುತ್ತಿಲ್ಲ. ಸದ್ಯ ಭಾರತದಲ್ಲಿ ಉಪಗ್ರಹ ಇಂಟರ್ನೆಟ್ ಪರವಾನಗಿ (GMPCS) ಹೊಂದಿರುವ ಮೂರೂ ಕಂಪನಿಗಳು ಒಂದೇ ಹಂತದಲ್ಲಿವೆ. ಭಾರ್ತಿ ಏರ್ಟೆಲ್ ಬೆಂಬಲಿತ ಒನ್ವೆಬ್ (OneWeb), ರಿಲಯನ್ಸ್ ಜಿಯೋ ಸ್ಯಾಟಲೈಟ್ ಕಮ್ಯುನಿಕೇಷನ್ಸ್, ಎಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ (Starlink) ಈ ಮೂರೂ ಕಂಪನಿಗಳು ಆರಂಭಿಕ ಪರವಾನಗಿ ಪಡೆದಿದ್ದರೂ, ವಾಣಿಜ್ಯ ಸೇವೆ ಆರಂಭಿಸಲು ಬೇಕಾದ ಅಂತಿಮ ಭದ್ರತಾ ಹಸಿರು ನಿಶಾನೆ ಯಾರಿಗೂ ಸಿಕ್ಕಿಲ್ಲ. ಎಲ್ಲರನ್ನೂ ಒಂದೇ ನಿಯಂತ್ರಣ ಚೌಕಟ್ಟಿನಲ್ಲಿ ತಪಾಸಣೆಗೊಳಪಡಿಸಲಾಗುತ್ತಿದೆ. Thank you, Rahul. This is indeed troubling. — Elon Musk (@elonmusk) October 8, 2026 ಉಪಗ್ರಹ ಇಂಟರ್ನೆಟ್ಗೆ ಸಂಬಂಧಿಸಿದ ತರಂಗಾಂತರಗಳನ್ನು (Spectrum) ಹಂಚಿಕೆ ಮಾಡುವುದು ಮತ್ತು ಅದಕ್ಕೆ ಅನ್ವಯಿಸುವ ಆದಾಯ ಆಧಾರಿತ ಶುಲ್ಕಗಳ ನಿಯಮಾವಳಿಗಳನ್ನು ಅಂತಿಮಗೊಳಿಸುವ ಕೆಲಸ ಇನ್ನು ದೂರಸಂಪರ್ಕ ಇಲಾಖೆಯಲ್ಲಿ ಪ್ರಕ್ರಿಯೆಯಲ್ಲಿದೆ. ಇದು ಪೂರ್ಣಗೊಂಡ ಬಳಿಕವಷ್ಟೇ ಸ್ಪೆಕ್ಟ್ರಮ್ ನಿಯೋಜನೆ ಸಾಧ್ಯವಾಗುತ್ತದೆ. ಭಾರತೀಯ ಬಳಕೆದಾರರ ಡೇಟಾ ದೇಶದ ಗಡಿಯೊಳಗೆಯೇ ಇರಬೇಕು ಎಂಬ ನಿಯಮಕ್ಕೆ ಸ್ಟಾರ್ಲಿಂಕ್ ಒಪ್ಪಿಕೊಂಡಿದ್ದು, ಅದಕ್ಕೆ ತಕ್ಕಂತೆ ವ್ಯವಸ್ಥೆ ರೂಪಿಸುತ್ತಿದೆ. ಈ ಎಲ್ಲಾ ತಾಂತ್ರಿಕ ಸಿದ್ಧತೆಗಳು ಮತ್ತು ಭದ್ರತಾ ಷರತ್ತುಗಳ ಅನುಸರಣೆಯನ್ನು ಭದ್ರತಾ ಸಂಸ್ಥೆಗಳು ಸಂಪೂರ್ಣವಾಗಿ ಪರಿಶೀಲಿಸಿ ತೃಪ್ತಿಪಡುವವರೆಗೂ ಸರ್ಕಾರ ಅಂತಿಮ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಭಾರತದಲ್ಲಿ ಸ್ಟಾರ್ಲಿಂಕ್ (Starlink) ಕಂಪನಿಗೆ ವಾಣಿಜ್ಯಿಕವಾಗಿ ಇಂಟರ್ನೆಟ್ ಸೇವೆಗಳನ್ನು ಆರಂಭಿಸಲು ಇನ್ನು ಸಂಪೂರ್ಣ ಅನುಮತಿ ಸಿಕ್ಕಿಲ್ಲ. ಇದಕ್ಕಾಗಿ ಕಂಪನಿಯು ಅಗತ್ಯವಿರುವ ಲೈಸೆನ್ಸ್ ಪಡೆದುಕೊಂಡಿದ್ದರೂ, ರಾಷ್ಟ್ರೀಯ ಭದ್ರತೆ, ಡೇಟಾ ಸುರಕ್ಷತೆ ಮತ್ತು ಸ್ಪೆಕ್ಟ್ರಮ್ ನಿಯಮಗಳ ಕಾರಣಗಳಿಂದಾಗಿ ಅಂತಿಮ ಅನುಮೋದನೆ ಪ್ರಕ್ರಿಯೆಯು ಸರ್ಕಾರದ ವಿವಿಧ ಹಂತಗಳಲ್ಲಿ ಬಾಕಿ ಉಳಿದಿದೆ. ಇದನ್ನೂ ಓದಿ: Public TV Explainer: ಭಾರತಕ್ಕೆ ಎಂಟ್ರಿ ಕೊಡಲಿದೆ ಸ್ಟಾರ್ಲಿಂಕ್: ಸಿಗುತ್ತಾ ಕೇಬಲ್, ಟವರ್ ರಹಿತ ಹೈಸ್ಪೀಡ್ ಇಂಟರ್ನೆಟ್? – ದರ ಎಷ್ಟು? ಭಾರತದ ಆತಂಕ ಏನು? ಇತ್ತೀಚಿನ ಜಾಗತಿಕ ವರದಿಗಳ ಪ್ರಕಾರ, ಇರಾನ್ನಲ್ಲಿ ಸ್ಟಾರ್ಲಿಂಕ್ಗೆ ಅಧಿಕೃತ ಪರವಾನಗಿ ಇಲ್ಲದಿದ್ದರೂ, ಅಲ್ಲಿನ ಯುದ್ಧದ ಸಮಯದಲ್ಲಿ ಜನರು ಮತ್ತು ಕೆಲವು ಸಂಘಟನೆಗಳು ಸ್ಟಾರ್ಲಿಂಕ್ ಟರ್ಮಿನಲ್ಗಳನ್ನು ಕಾನೂನುಬಾಹಿರವಾಗಿ ಬಳಸಿರುವುದು ಭಾರತೀಯ ಭದ್ರತಾ ಸಂಸ್ಥೆಗಳ ಗಮನಕ್ಕೆ ಬಂದಿದೆ. ಅಮೆರಿಕ ಮೂಲದ ಈ ಕಂಪನಿಯು ಭಾರತದಲ್ಲಿ ಸೇವೆ ನೀಡುವಾಗ ಬೇರೆ ದೇಶಗಳೊಂದಿಗೆ ಭೌಗೋಳಿಕ ಅಥವಾ ರಾಜಕೀಯ ಸಂಘರ್ಷ ಉಂಟಾದರೆ, ಭಾರತದ ಭದ್ರತಾ ನಿಯಮಗಳಿಗೆ ಬದ್ಧವಾಗಿರಲು ಅದಕ್ಕೆ ಸಾಧ್ಯವೇ ಎಂಬ ಗಂಭೀರ ಪ್ರಶ್ನೆ ಎದುರಾಗಿದೆ. ಭಾರತದ ಕಾನೂನುಗಳ ಪ್ರಕಾರ, ದೇಶದ ಭದ್ರತೆಗೆ ಯಾವುದೇ ಧಕ್ಕೆ ಬಂದಾಗ ಇಂಟರ್ನೆಟ್ ಸಂಪರ್ಕವನ್ನು ನಿಲ್ಲಿಸುವ ಅಥವಾ ಕಣ್ಗಾವಲು ನಡೆಸುವ (Blocking & Surveillance) ಸಂಪೂರ್ಣ ಅಧಿಕಾರ ಭಾರತೀಯ ತನಿಖಾ ಸಂಸ್ಥೆಗಳಿಗೆ ಇರಬೇಕು. ಆದರೆ, ಸ್ಟಾರ್ಲಿಂಕ್ನ ಸ್ಯಾಟಲೈಟ್ಗಳು ಪರಸ್ಪರ ಲೇಸರ್ ಲಿಂಕ್ಗಳ (Inter-satellite laser links) ಮೂಲಕ ಜಾಗತಿಕವಾಗಿ ಸಂಪರ್ಕ ಹೊಂದಿವೆ. ಇವು ಯಾವುದೇ ಭೌಗೋಳಿಕ ಗಡಿಗಳನ್ನು ಆಧರಿಸಿ ಕೆಲಸ ಮಾಡುವುದಿಲ್ಲ. ಈ ಜಾಗತಿಕ ವ್ಯವಸ್ಥೆಯನ್ನು ಭಾರತದ ಗಡಿಯೊಳಗೆ ಮಾತ್ರ ಹೇಗೆ ನಿಯಂತ್ರಿಸಬೇಕು ಮತ್ತು ತುರ್ತು ಸಂದರ್ಭದಲ್ಲಿ ಹೇಗೆ ಬ್ಲಾಕ್ ಮಾಡಬೇಕು ಎಂಬ ತಾಂತ್ರಿಕ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಮಣಿಪುರದ ಗಲಭೆ ಪೀಡಿತ ಪ್ರದೇಶಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದಾಗ, ಅಲ್ಲಿನ ಉಗ್ರಗಾಮಿ ಸಂಘಟನೆಗಳ (PLA) ಅಡಗುದಾಣಗಳಲ್ಲಿ ಸ್ಟಾರ್ಲಿಂಕ್ ಲೋಗೋ ಹೊಂದಿದ್ದ ಸ್ಯಾಟಲೈಟ್ ಡಿಶ್ ಮತ್ತು ರೂಟರ್ಗಳು ಪತ್ತೆಯಾಗಿದ್ದವು. ಮ್ಯಾನ್ಮಾರ್ ಗಡಿಯಿಂದ ಇವುಗಳನ್ನು ಅಕ್ರಮವಾಗಿ ತರಲಾಗಿತ್ತು ಎಂದು ವರದಿಯಾಗಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗುಜರಾತ್ ಹಾಗೂ ಪಂಜಾಬ್ ಗಡಿ ಭಾಗಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದಾಗ, ದಂಧೆಕೋರರು ಸಮುದ್ರದಲ್ಲಿ ಸ್ಟಾರ್ಲಿಂಕ್ ಮಿನಿ ಸಾಧನಗಳನ್ನು ಬಳಸುತ್ತಿದ್ದುದು ಬೆಳಕಿಗೆ ಬಂದಿದೆ. ಇದಕ್ಕೆ ಎಲಾನ್ ಮಸ್ಕ್ ಅವರು, “ಭಾರತದ ಮೇಲೆ ಸ್ಟಾರ್ಲಿಂಕ್ ಸಿಗ್ನಲ್ಗಳನ್ನು ಸಂಪೂರ್ಣವಾಗಿ ಆಫ್ ಮಾಡಲಾಗಿದೆ” ಎಂದು ಸ್ಪಷ್ಟನೆ ನೀಡಿದ್ದರೂ, ಗಡಿ ಭಾಗಗಳಲ್ಲಿ ಮ್ಯಾನ್ಮಾರ್ ಸಿಗ್ನಲ್ ಬಳಸಿ ಇವು ಕೆಲಸ ಮಾಡುತ್ತಿರುವುದು ಸಾಬೀತಾಗಿತ್ತು. ಭಾರತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ (ಉದಾಹರಣೆಗೆ ಕಾಶ್ಮೀರ ಅಥವಾ ಮಣಿಪುರದಲ್ಲಿ) ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಇಂಟರ್ನೆಟ್ ಸ್ಥಗಿತಗೊಳಿಸುತ್ತದೆ. ಆದರೆ ಸ್ಟಾರ್ಲಿಂಕ್ ನೇರವಾಗಿ ಬಾಹ್ಯಾಕಾಶದ ಉಪಗ್ರಹದಿಂದ ಇಂಟರ್ನೆಟ್ ನೀಡುವುದರಿಂದ, ಸರ್ಕಾರದ ಇಂಟರ್ನೆಟ್ ನಿಷೇಧವನ್ನು ಇದು ಸುಲಭವಾಗಿ ಬೈಪಾಸ್ ಮಾಡಬಲ್ಲದು. ಅಲ್ಲದೆ, ದೇಶದ್ರೋಹಿ ಚಟುವಟಿಕೆಗಳು ನಡೆದಾಗ ಅದನ್ನು ಪತ್ತೆಹಚ್ಚಲು ಭಾರತೀಯ ಏಜೆನ್ಸಿಗಳಿಗೆ ಇದರ ಮೇಲೆ ಯಾವುದೇ ಸ್ಥಳೀಯ ನೆಟ್ವರ್ಕ್ ನಿಯಂತ್ರಣ ಇರುವುದಿಲ್ಲ ಸ್ಟಾರ್ಲಿಂಕ್ 2021 ರಲ್ಲಿ ಭಾರತದಲ್ಲಿ ಅಧಿಕೃತ ಪರವಾನಗಿ ಪಡೆಯುವ ಮುನ್ನವೇ ಗ್ರಾಹಕರಿಂದ ಅಡ್ವಾನ್ಸ್ ಹಣ ಪಡೆದು ಪ್ರೀ-ಬುಕಿಂಗ್ ಆರಂಭಿಸಿತ್ತು. ಆಗ ಭಾರತ ಸರ್ಕಾರವು ಇದನ್ನು ತಡೆದು, ಗ್ರಾಹಕರಿಗೆ ಹಣ ಮರುಪಾವತಿಸುವಂತೆ ಸ್ಟಾರ್ಲಿಂಕ್ಗೆ ಕಡಕ್ ಎಚ್ಚರಿಕೆ ನೀಡಿತ್ತು. ಅಂದಿನಿಂದ ಸರ್ಕಾರವು ಮಸ್ಕ್ ಕಂಪನಿಯ ಪ್ರತಿಯೊಂದು ನಡೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತದ ದೂರಸಂಪರ್ಕ ಇಲಾಖೆಯ (DoT) ಹೊಸ ಮಾರ್ಗಸೂಚಿಗಳ ಪ್ರಕಾರ, ಸ್ಯಾಟಲೈಟ್ ಇಂಟರ್ನೆಟ್ ಕಂಪನಿಗಳು ಕೇವಲ ಇಂಟರ್ನೆಟ್ ಕೊಡುವುದಷ್ಟೇ ಅಲ್ಲ, ಅದಕ್ಕೆ ಬೇಕಾದ ಹಾರ್ಡ್ವೇರ್ ಮತ್ತು ಬಿಡಿಭಾಗಗಳನ್ನು ಭಾರತದಲ್ಲೇ ಉತ್ಪಾದಿಸುವ (Phased Manufacturing Plan) ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ. ಟೆಸ್ಲಾ ಕಾರುಗಳ ವಿಷಯದಲ್ಲೂ ಭಾರತ ಸರ್ಕಾರ ಇದೇ ರೀತಿಯ ‘ಮೇಕ್ ಇನ್ ಇಂಡಿಯಾ’ ಷರತ್ತನ್ನು ವಿಧಿಸಿತ್ತು. ಇಷ್ಟೊಂದು ಆತಂಕ ಯಾಕೆ? ಭಾರತೀಯ ಭದ್ರತಾ ಸಂಸ್ಥೆಗಳು ಉಪಗ್ರಹ ಸಂಪರ್ಕ ಸಾಧನಗಳ ಬಗ್ಗೆ ಅತಿಯಾದ ಜಾಗ್ರತೆ ವಹಿಸಲು 2008ರ ಮುಂಬೈ ಭಯೋತ್ಪಾದಕ ದಾಳಿಯೇ ಪ್ರಮುಖ ಕಾರಣ. ಅಂದು ಪಾಕಿಸ್ತಾನದಿಂದ ಬಂದಿದ್ದ ಉಗ್ರರು ಭಾರತದ ಯಾವುದೇ ಮೊಬೈಲ್ ನೆಟ್ವರ್ಕ್ ಬಳಸದೆ, ವಿದೇಶಿ ಮೂಲದ ಥುರಾಯಾ (Thuraya) ಸ್ಯಾಟಲೈಟ್ ಫೋನ್ಗಳ ಮೂಲಕವೇ ಪಾಕ್ ಹ್ಯಾಂಡ್ಲರ್ಗಳ ಜೊತೆ ಮಾತನಾಡುತ್ತಿದ್ದರು. ಇದನ್ನು ಟ್ರ್ಯಾಕ್ ಮಾಡುವುದು ಭಾರತಕ್ಕೆ ಅಸಾಧ್ಯವಾಗಿತ್ತು. ಸ್ಟಾರ್ಲಿಂಕ್ ಕೂಡ ಇದೇ ರೀತಿ ಭಾರತದ ವ್ಯವಸ್ಥೆಯ ಆಚೆ ನಿಂತು ಕೆಲಸ ಮಾಡುವುದರಿಂದ ಸರ್ಕಾರ ತೀವ್ರ ತಪಾಸಣೆ ನಡೆಸುತ್ತಿದೆ. ದೇಶಗಳ ವಿರುದ್ಧ ಮಸ್ಕ್ ನಿಲುವು ಇರಾನ್ ದೇಶದಲ್ಲಿ ಸ್ಟಾರ್ಲಿಂಕ್ಗೆ ಅನುಮತಿ ಇಲ್ಲದಿದ್ದರೂ, ಅಲ್ಲಿ ನಡೆದ ಆಂತರಿಕ ಪ್ರತಿಭಟನೆಗಳ ಸಮಯದಲ್ಲಿ ಅಲ್ಲಿನ ಸರ್ಕಾರವನ್ನು ಬೈಪಾಸ್ ಮಾಡಿ ಮಸ್ಕ್ ಉಚಿತವಾಗಿ ಇಂಟರ್ನೆಟ್ ಒದಗಿಸಿದ್ದರು. ಅದೇ ರೀತಿ ಉಕ್ರೇನ್ ಯುದ್ಧದಲ್ಲೂ ಸ್ಟಾರ್ಲಿಂಕ್ ಪ್ರಮುಖ ಪಾತ್ರ ವಹಿಸಿತ್ತು. ನಾಳೆ ಭಾರತಕ್ಕೂ ಚೀನಾ ಅಥವಾ ಪಾಕಿಸ್ತಾನದ ಜೊತೆ ಸಂಘರ್ಷ ಉಂಟಾದಾಗ, ಅಮೆರಿಕ ಸರ್ಕಾರದ ಒತ್ತಡಕ್ಕೆ ಮಣಿದೋ ಅಥವಾ ಸ್ವಂತ ನಿರ್ಧಾರದಿಂದಲೋ ಎಲಾನ್ ಮಸ್ಕ್ ಭಾರತದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದರೆ ದೇಶದ ಸಂವಹನ ವ್ಯವಸ್ಥೆಯೇ ಕುಸಿದುಬೀಳಬಹುದು ಎಂಬುದು ಭಾರತದ ಆತಂಕ. ಖಾಸಗಿ ವಿದೇಶಿ ಕಂಪನಿಯೊಂದು ದೇಶದ ಪ್ರಮುಖ ಮೂಲಸೌಕರ್ಯದ ಮೇಲೆ ಅತಿಯಾದ ಹಿಡಿತ ಸಾಧಿಸಿದರೆ, ಭವಿಷ್ಯದಲ್ಲಿ ಆ ಕಂಪನಿಯ ಮಾಲೀಕರು ಭಾರತ ಸರ್ಕಾರದ ವಿರುದ್ಧವೇ ಬೆದರಿಕೆ ಹಾಕುವ ತಂತ್ರ (Leverage) ಬಳಸಬಹುದು. ಇತ್ತೀಚೆಗೆ ಅಮೆರಿಕದಲ್ಲೇ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಭಿನ್ನಾಭಿಪ್ರಾಯ ಬಂದಾಗ ಮಸ್ಕ್ ನಾಸಾ ಒಪ್ಪಂದಗಳನ್ನು ರದ್ದುಮಾಡುವುದಾಗಿ ಬೆದರಿಸಿದ್ದ ಉದಾಹರಣೆ ಭಾರತದ ಮುಂದಿದೆ. ಇದನ್ನೂ ಓದಿ:ಸ್ಟಾರ್ಲಿಂಕ್ಗೆ ಯಾವುದೇ ತಾರತಮ್ಯವಿಲ್ಲ, ನಿಯಮ ಎಲ್ಲರಿಗೂ ಒಂದೇ – ಮಸ್ಕ್ ಆರೋಪಕ್ಕೆ ಕೇಂದ್ರ ತಿರುಗೇಟು ಭಾರತದ ಸರ್ಕಾರ ಹೇಳಿದ್ದೇನು? ಎಲಾನ್ ಮಸ್ಕ್ ಅವರ ಪ್ರಭಾವಿ ಉದ್ಯಮಿಗಳು (Oligarchs) ತಮ್ಮ ಏಕಸ್ವಾಮ್ಯಕ್ಕಾಗಿ ಸ್ಟಾರ್ಲಿಂಕ್ ಅನ್ನು ತಡೆಯುತ್ತಿದ್ದಾರೆ ಎಂಬ ಆರೋಪವನ್ನು ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿದೆ. ಭಾರತವು ಮುಕ್ತ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ಹೊಂದಿದ್ದು, ಗ್ರಾಹಕರಿಗೆ ವಿವಿಧ ರೀತಿಯ ಸೇವೆಗಳನ್ನು ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಯಾರೋ ಒಬ್ಬರ ಹಿತಾಸಕ್ತಿಗಾಗಿ ನಿಯಮಗಳನ್ನು ಬದಲಾಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಭಾರತದಲ್ಲಿ ವ್ಯವಹಾರ ನಡೆಸಲು ಇಚ್ಛಿಸುವ ಪ್ರತಿಯೊಂದು ಸ್ಯಾಟಲೈಟ್ ಕಂಪನಿಯೂ ದೇಶದ ಭದ್ರತಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ. “ಬಳಕೆದಾರರ ಸುರಕ್ಷತೆ ಮತ್ತು ಅವರ ಡೇಟಾ ರಕ್ಷಣೆ ನಮಗೆ ಅತ್ಯಂತ ಪ್ರಮುಖವಾಗಿದೆ” ಎಂದು ಸಚಿವಾಲಯ ತಿಳಿಸಿದೆ. ಗೃಹ ವ್ಯವಹಾರಗಳ ಸಚಿವಾಲಯದ ಭದ್ರತಾ ತಪಾಸಣೆ ಪೂರ್ಣಗೊಂಡು, ಕಂಪನಿಗಳು ಭದ್ರತಾ ಷರತ್ತುಗಳನ್ನು ಪೂರೈಸಿದ ತಕ್ಷಣವೇ ಮುಂದಿನ ಹಂತಕ್ಕೆ ಅನುಮತಿ ಸಿಗಲಿದೆ. ಭಾರತವು ಸ್ಟಾರ್ಲಿಂಕ್ಗೆ ಮುಕ್ತ ಜಾಗವನ್ನು ನೀಡಲು ಸಿದ್ಧವಿದೆ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗೆ ಉಪಗ್ರಹ ತಂತ್ರಜ್ಞಾನದ ಅಗತ್ಯವನ್ನು ಒಪ್ಪಿಕೊಳ್ಳುತ್ತದೆ. ಆದರೆ, ಎಷ್ಟೇ ದೊಡ್ಡ ಜಾಗತಿಕ ಕಂಪನಿಯಾಗಿದ್ದರೂ ಭಾರತದ ಕಾನೂನು ಮತ್ತು ರಾಷ್ಟ್ರೀಯ ಭದ್ರತೆಗೆ ತಲೆಬಾಗಲೇಬೇಕು, ಯಾವುದೇ ತರಾತುರಿಯ ಅಥವಾ ವಿಶೇಷ ವಿನಾಯಿತಿಯ ಅನುಮೋದನೆ ಸಾಧ್ಯವಿಲ್ಲ ಎಂಬುದು ಸರ್ಕಾರದ ಖಡಕ್ ನಿಲುವಾಗಿದೆ. ಸ್ಟಾರ್ಲಿಂಕ್ ಭಾರತಕ್ಕೆ ಬರುವುದು ಕೇವಲ ತಂತ್ರಜ್ಞಾನ ಅಥವಾ ಹೈ-ಸ್ಪೀಡ್ ಇಂಟರ್ನೆಟ್ನ ವಿಚಾರ ಮಾತ್ರವಲ್ಲ; ಅದು ರಾಷ್ಟ್ರೀಯ ಭದ್ರತೆ, ಡೇಟಾ ಸಾರ್ವಭೌಮತ್ವ ಮತ್ತು ದೇಶೀಯ ಮಾರುಕಟ್ಟೆಯ ಹಿತಾಸಕ್ತಿಗಳಿಗೆ ಸಂಬಂಧಿಸಿದ ಸಂಕೀರ್ಣ ವಿಷಯ. ದೂರದ ಬೆಟ್ಟ-ಗುಡ್ಡ, ಗಡಿ ಗ್ರಾಮಗಳಿಗೂ ಅತ್ಯಾಧುನಿಕ ಇಂಟರ್ನೆಟ್ ಸಂಪರ್ಕ ಒದಗಿಸುವ ಅಪಾರ ಸಾಮರ್ಥ್ಯ ಸ್ಟಾರ್ಲಿಂಕ್ಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಯಾವುದೇ ಜಾಗತಿಕ ಕಂಪನಿಗೂ ದೇಶದ ನಿಯಮಾವಳಿ ಮತ್ತು ನಾಗರಿಕರ ಸುರಕ್ಷತೆಗಿಂತ ಹೆಚ್ಚಿನ ರಿಯಾಯಿತಿ ನೀಡಲು ಸಾಧ್ಯವಿಲ್ಲ ಎಂಬುದು ಸರ್ಕಾರದ ಸ್ಪಷ್ಟ ನಿಲುವು. ಭಾರತದ ಕಠಿಣ ಭದ್ರತಾ ಷರತ್ತುಗಳನ್ನು ಎಲಾನ್ ಮಸ್ಕ್ ಒಪ್ಪಿ, ಸ್ಥಳೀಯ ಮಟ್ಟದಲ್ಲಿ ಡೇಟಾ ಸರ್ವರ್ಗಳನ್ನು ಸ್ಥಾಪಿಸಲು ಮುಂದಾದರೆ ಮಾತ್ರ ಸ್ಟಾರ್ಲಿಂಕ್ ಭಾರತದ ಡಿಜಿಟಲ್ ಕ್ರಾಂತಿಯ ಭಾಗವಾಗಲು ಸಾಧ್ಯ.