PV Web Exclusive: ಬೀದರ್–ಬೆಂಗಳೂರು ರಾತ್ರಿ ರೈಲು ಯಾವಾಗ ?
ಬೀದರ್: ಬೀದರ್–ಬೆಂಗಳೂರು ನಡುವೆ ವಾಯಾ ಕಲಬುರಗಿ ಮೂಲಕ ರಾತ್ರಿ ವೇಳೆ ರೈಲು ಓಡಿಸಬೇಕೆಂಬ ಬಹು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ.ಬೀದರ್–ಕಲಬುರಗಿ ನಡುವೆ ರೈಲು ಮಾರ್ಗ ನಿರ್ಮಿಸಲು 1996-97ರ ರೈಲ್ವೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ, ಯುಪಿಎ–2 ಅವಧಿಯ ಕೊನೆಯಲ್ಲಿ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಅದಕ್ಕೆ ಅನುದಾನ ಒದಗಿಸಿ, ವೇಗ ನೀಡಿ

ಬೀದರ್: ಬೀದರ್–ಬೆಂಗಳೂರು ನಡುವೆ ವಾಯಾ ಕಲಬುರಗಿ ಮೂಲಕ ರಾತ್ರಿ ವೇಳೆ ರೈಲು ಓಡಿಸಬೇಕೆಂಬ ಬಹು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ.ಬೀದರ್–ಕಲಬುರಗಿ ನಡುವೆ ರೈಲು ಮಾರ್ಗ ನಿರ್ಮಿಸಲು 1996-97ರ ರೈಲ್ವೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ, ಯುಪಿಎ–2 ಅವಧಿಯ ಕೊನೆಯಲ್ಲಿ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಅದಕ್ಕೆ ಅನುದಾನ ಒದಗಿಸಿ, ವೇಗ ನೀಡಿದ್ದರು. ಬಳಿಕ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲಸ ಕೊನೆಗೊಂಡಿತ್ತು. 2017ರ ಅಕ್ಟೋಬರ್ 29ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ, ಚಾಲನೆ ನೀಡಿದ್ದರು.ಈ ಮಾರ್ಗದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಡೆಮು ರೈಲು ಸಂಚರಿಸುತ್ತಿದೆ. ಕಳೆದ ಕೆಲವು ತಿಂಗಳಿಂದ ಎರಡು ರೈಲುಗಳನ್ನು ಓಡಿಸಲಾಗುತ್ತಿದೆ. ವಾರದಲ್ಲಿ ಎರಡು ದಿನ ಹಾಗೂ ವಾರದಲ್ಲಿ ಒಂದು ದಿನ ಸಂಚರಿಸುವ ಎರಡು ರೈಲುಗಳು ಬೆಂಗಳೂರಿಗೆ ಸಂಚರಿಸುತ್ತಿವೆ.ಆದರೆ, ಈ ಎರಡೂ ರೈಲುಗಳ ಸಮಯ ಜನರ ಬೇಡಿಕೆಗೆ ಅನುಗುಣವಾಗಿ ಇಲ್ಲ. ವಾರದಲ್ಲಿ ಎರಡು ದಿನ (ಸೋಮವಾರ, ಶನಿವಾರ) ಸಂಚರಿಸುವ ಬೀದರ್–ಬೆಂಗಳೂರು ರೈಲು ಮಧ್ಯಾಹ್ನ 2 ಗಂಟೆಗೆ ಬೀದರ್ನಿಂದ ಹೊರಟು ನಸುಕಿನ ಜಾವ ನಾಲ್ಕು ಗಂಟೆಗೆ ಬೆಂಗಳೂರು ತಲುಪುತ್ತದೆ.ವಾರದಲ್ಲಿ ಒಂದು ದಿನ (ಭಾನುವಾರ) ಸಂಚರಿಸುತ್ತಿರುವ ಬೀದರ್–ಎಸ್ಎಂವಿಟಿ ಬೆಂಗಳೂರು ರೈಲು ಮಧ್ಯಾಹ್ನ 2 ಗಂಟೆಗೆ ಬೀದರ್ನಿಂದ ಹೊರಟು ಮರುದಿನ ನಸುಕಿನ ಜಾವ ನಾಲ್ಕು ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣ ಸೇರುತ್ತದೆ. ಕಚೇರಿ ಸೇರಿದಂತೆ ಇತರ ಕೆಲಸ ಮಾಡುವವರಿಗೆ ಇವುಗಳೆರಡರ ಸಮಯ ಸರಿ ಹೊಂದುತ್ತಿಲ್ಲ.ಇನ್ನೆರಡು ರೈಲುಗಳು ವಾಯಾ ತೆಲಂಗಾಣದ ವಿಕಾರಾಬಾದ್ ಮೂಲಕ ಸಂಚರಿಸುತ್ತವೆ. ನಾಂದೇಡ್–ಬೀದರ್–ಬೆಂಗಳೂರು ರೈಲು ಪ್ರತಿದಿನ ಮಧ್ಯಾಹ್ನ 12.35ಕ್ಕೆ ಬೀದರ್ನಿಂದ ಹೊರಟು ನಸುಕಿನ ಜಾವ 4.10ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ತಲುಪುತ್ತದೆ. ಬೀದರ್–ಯಶವಂತಪುರ ಎಕ್ಸ್ಪ್ರೆಸ್ ರೈಲು ಪ್ರತಿದಿನ ಸಂಜೆ 6.15ಕ್ಕೆ ಬೀದರ್ನಿಂದ ಹೊರಟು ಮರುದಿನ ಬೆಳಿಗ್ಗೆ 7.40ಕ್ಕೆ ಯಶವಂತಪುರ ಸೇರುತ್ತದೆ. ಈ ಎರಡೂ ರೈಲುಗಳು ತೆಲಂಗಾಣದಲ್ಲಿ ಸುತ್ತಾಡಿ ಪುನಃ ಯಾದಗಿರಿ, ರಾಯಚೂರು, ಗುಂತಕಲ್ ಮೂಲಕ ಬೆಂಗಳೂರು ತಲುಪುತ್ತವೆ.ವಾಯಾ ಕಲಬುರಗಿ ಮೂಲಕ ಸಂಚರಿಸಿದರೆ ಸಾಕಷ್ಟು ಸಮಯ ಉಳಿಯುತ್ತದೆ. ಈ ಕಾರಣಕ್ಕಾಗಿಯೇ ಈ ಮಾರ್ಗ ನಿರ್ಮಿಸಲಾಗಿದೆ. ಆದರೆ, ಹತ್ತು ವರ್ಷಗಳಾಗುತ್ತ ಬಂದರೂ ರಾತ್ರಿ ವೇಳೆ ಬೆಂಗಳೂರಿಗೆ ರೈಲು ಬಿಟ್ಟಿಲ್ಲ.‘ಬೀದರ್, ಕಲಬುರಗಿಯಿಂದ ಬೆಂಗಳೂರಿಗೆ ಸಂಚರಿಸುವವರ ಸಂಖ್ಯೆ ಈಗ ಬಹಳ ಹೆಚ್ಚಾಗಿದೆ. ತುರ್ತಾಗಿ ಕನಿಷ್ಠ ಒಂದು ರೈಲು ಬೇಕಿದೆ. ಇದನ್ನು ವಾಯಾ ಕಲಬುರಗಿ ಮೂಲಕ ಓಡಿಸಬೇಕು. ರಾತ್ರಿ 8 ಗಂಟೆಯ ನಂತರ ಬೀದರ್ನಿಂದ ಹೊರಟು ಬೆಳಿಗ್ಗೆ 6 ಅಥವಾ 7 ಗಂಟೆಯ ತನಕ ಬೆಂಗಳೂರು ತಲುಪುವಂತಹ ಎಕ್ಸ್ಪ್ರೆಸ್ ರೈಲು ಓಡಿಸಬೇಕು. ಇದರಿಂದ ಸಾಕಷ್ಟು ಸಮಯ ಉಳಿಯುತ್ತದೆ. ವ್ಯಾಪಾರಿಗಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗುತ್ತದೆ. ಆದರೆ, ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹೀಗೆ ಮಾಡುವುದರಿಂದ ಕಲಬುರಗಿ, ಯಾದಗಿರಿ ಜಿಲ್ಲೆಯ ಜನರಿಗೂ ಅನುಕೂಲವಾಗುತ್ತದೆ’ ಎನ್ನುತ್ತಾರೆ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್.‘ಬೇರೆ ಮಾರ್ಗಗಳಲ್ಲಿ ಈಗಾಗಲೇ ಸೂಪರ್ ಫಾಸ್ಟ್, ವಂದೇ ಮಾತರಂ ನಂತರ ವೇಗದ ರೈಲುಗಳು ಸಂಚರಿಸುತ್ತಿವೆ. ಆದರೆ, ಬೀದರ್ ಜಿಲ್ಲೆಗೆ ಆ ಭಾಗ್ಯ ಇನ್ನೂ ಒಲಿದಿಲ್ಲ. ಕರ್ನಾಟಕದ ಕಿರೀಟವೆಂದು ಹೊಗಳಿದರಷ್ಟೇ ಸಾಲದು. ಇತರ ಭಾಗಗಳಂತೆ ಸಕಲ ಸೌಕರ್ಯ ಕೂಡ ಕಲ್ಪಿಸಲು ಸರ್ಕಾರ ಗಮನಹರಿಸಬೇಕು’ ಎಂದು ಆಗ್ರಹಿಸಿದ್ದಾರೆ.